ಧರ್ಮಸ್ಥಳ ಅರಣ್ಯದಲ್ಲಿ ಗುಂಡಿ ತೋಡಿದ ಬುರುಡೆ ಸುದ್ಧಿ, ಕನ್ನಡ ಭುವನೇಶ್ವರಿ ತಾಯಿಯ ಪರಮ ವಿರೋಧಿಯೊಬ್ಬರಿಂದ ಮೈಸೂರ್ ದಸರಾ ಉದ್ಘಾಟನೆ ಸುದ್ಧಿ, ಟುಸ್ ಅಂದ ಮತಗಳ್ಳತನದ ಹೈಡ್ರೋಜನ್ ಬಾಂಬ್ ಸುದ್ಧಿಗಳನ್ನೆಲ್ಲ ಬದಿಗೊತ್ತುವ ರೀತಿಯಲ್ಲಿ ಜಾತಿ ಸಮೀಕ್ಷೆ 2025 ಸುದ್ಧಿ ಈಗ ಮುನ್ನೆಲೆಗೆ ಬಂದಿದೆ.
'ಜಾತಿ ಸಮೀಕ್ಷೆ TRP ಯಲ್ಲಿ ಟಾಪ್ ಒನ್‌ನಲ್ಲಿದ್ರೂ, ಅನೇಕ ಚರ್ಚೆಗಳಾಗುತ್ತಿದ್ದರೂ ಅದರ ಬಗೆಗಿನ ಗೊಂದಲಗಳು, ಪ್ರಶ್ನೆಗಳು, ಅನುಮಾನಗಳು ಬಗೆಹರಿದಿಲ್ಲ!!
'ದಸರಾ ಉದ್ಘಾಟನೆ'ಯ ದಿನವೇ 'ಜಾತಿ ಸಮೀಕ್ಷೆ' ಕಾರ್ಯಾಚರಣೆಯೂ ಉದ್ಘಾಟನೆಗೊಳ್ಳಲಿದೆ!!
"ನಾನು ಎಲ್ಲಿ ನಿಲ್ಲಲಿ?, ನಾನು ಏನನ್ನು ನೋಡಲಿ? ನಾನು ಹೇಗೆ ಇನ್ವಾಲ್ವಾಗಲಿ(ಒಳಗೊಳ್ಳಲಿ)?" ಅನ್ನುವುದು ದಸರಾ ಉದ್ಘಾಟಕರ ಪ್ರಶ್ನೆಗಳಾದರೆ, ಜಾತಿ ಸಮೀಕ್ಷೆಯಲ್ಲಿ "ನಾನು ಜಾತಿಯ ಯಾವ ಕೋಡ್‌ನಲ್ಲಿ ನಿಲ್ಲಬೇಕು? ಮಾಹಿತಿ ಕೊಡುವಾಗ, ನಾನು ಯಾವ ಉಪಜಾತಿಯ ಕೋಡ್‌ನ್ನು ನೋಡಬೇಕು? ಸಮೀಕ್ಷೆಯಲ್ಲಿ ನಾನು ಹೇಗೆ ಇನ್ವಾಲ್ವಾಗಲಿ(ಒಳಗೊಳ್ಳಲಿ) ಅನ್ನುವುದು ಸಾಮಾನ್ಯ ಜನರ ಡಿಟ್ಟೋ ಡಿಟ್ಟೋ ಪ್ರಶ್ನೆಗಳು!!
ಗೊಂದಲ, ಪಾರದರ್ಶಕತೆಯ ಅನುಮಾನಗಳ ಬಗ್ಗೆ ಪಾರ್ಟಿ-ಪಕ್ಷಗಳು, ಟಿವಿ ಪ್ಯಾನಲ್‌ಗಳಲ್ಲಿ ಗರಂ ಮನರಂಜನೆ ಚರ್ಚೆ ನೆಡೆಯುತ್ತಿವೆ. ನಡೆಯಲಿ.
ಸಾರ್ವಜನಿಕರ ಮುಂದಿರುವ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ ಆಸಕ್ತರು ಓದಿಕೊಳ್ಳಬಹುದು:
1) ಏನಿದು ಜಾತಿ ಸಮೀಕ್ಷೆ?
ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪ್ರಕಾರ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶಗಳಿಗಾಗಿ ರಾಜ್ಯದ ಕುಟುಂಬಗಳ ಹಾಗೂ ನಾಗರಿಕರಿಗೆ ಸಂಬಂಧಿಸಿದಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಪ್ರಾತಿನಿಧಿಕ ಮಾನದಂಡಗಳಿಗೆ ಅನ್ವಯಿಸುವ ಮಾಹಿತಿ ಹಾಗೂ ದತ್ತಾಂಶಗಳ ಸಂಗ್ರಹಿಸುವ ಕಾರ್ಯಕ್ರಮವೇ ಜಾತಿ ಸಮೀಕ್ಷೆ 2025 ನ್ನು (ವಾಸ್ತವವಾಗಿ ಇದು ಕೇವಲ ಜಾತಿ ಸಮೀಕ್ಷೆ ಮಾತ್ರ ಅಲ್ಲ, ಸಾಮಾಜಿಕ ಮತ್ತು ಶೈಕ್ಷಣಿಕೆ ಸಮೀಕ್ಷೆ ಕೂಡ).
2) ಸಮೀಕ್ಷೆ ಎಲ್ಲೆಲ್ಲಿ ನೆಡೆಯುತ್ತಿದೆ?
ಕರ್ನಾಟಕ ರಾಜ್ಯಾದ್ಯಂತ ಸಮಗ್ರವಾಗಿ ಪ್ರತೀ ಮನೆಗೆ ಹೋಗಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
3) ಯಾವಾಗ ಸಮೀಕ್ಷೆ ನೆಡೆಯುತ್ತದೆ?
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 07, 2025ರ ಅವಧಿಯಲ್ಲಿ.
4) ಮನೆ ಬಾಗಿಲಿನಲ್ಲಿ ಈಗಾಗಲೆ ಅಂಟಿಸಿದ ಸ್ಟಿಕರ್ ಏನು?
ಜಾತಿ ಸಮೀಕ್ಷೆಯ ಪೂರ್ವಬಾವಿ ಸಿದ್ಧತೆಯಾಗಿ ಈಗಾಗಲೆ ಪ್ರತಿ ಮನೆಗೂ ESCOM ವಿದ್ಯುತ್ ಮೀಟರ್‌ಗಳನ್ನು ಆಧರಿಸಿ ಸಿದ್ಧಪಡಿಸಿದ ಮನೆ UHID ಸಂಖ್ಯೆಗಳನ್ನು ನಮೂದಿಸಿ ಸ್ಟಿಕರ್ ಅಂಟಿಸುವ ಕೆಲಸ ಪೂರ್ಣಗೊಂಡಿದೆ.
5) ಸಮೀಕ್ಷಾ ಪುಸ್ತಕದಲ್ಲಿ ಮಾಹಿತಿಯನ್ನು ಜನರೇ ಬರೆಯಬೇಕಾ?
ಇಲ್ಲ. ಸಮೀಕ್ಷಾ ವಿವರಗಳು ಭೌತಿಕ ಪುಸ್ತಕ ರೂಪದಲ್ಲಿ ಇರುವುದಿಲ್ಲ. ಅದು ಮೊಬೈಲ್ ಆ್ಯಪ್‌ನಲ್ಲಿ ಡಿಜಿಟಲ್ ಫಾರ್ಮೆಟ್‌ನಲ್ಲಿರುತ್ತದೆ. ಜಾತಿ ಸಮೀಕ್ಷೆಗೆ ಸಮೀಕ್ಷೇದಾರರ ಗುರುತಿಸುವಿಕೆ, ಸಮೀಕ್ಷೆದಾರರಿಗೆ ತರಬೇತಿ, ಸಮೀಕ್ಷಾ ಪರಿಕರಗಳು, ತಂತ್ರಜ್ಞಾನದ ಆ್ಯಪ್‌ಗಳ ಸಿದ್ಧತೆಯೂ ಬಹುತೇಕ ಪೂರ್ಣಗೊಂಡಿವೆ. ಮಾಹಿತಿಗಳನ್ನು ಸುಮಾರು 60+ ಪ್ರಶ್ನೆಗಳ ರೂಪದಲ್ಲಿ ಸಮೀಕ್ಷೆದಾರರು ಕೇಳುತ್ತಾರೆ. ಸಮೀಕ್ಷಾದಾರರೇ ಜನರಿಂದ ಪಡೆದ ಮಾಹಿತಿಗಳನ್ನು ಮೊಬೈಲ್ ಮೂಲಕ ಸಮೀಕ್ಷಾ ಆ್ಯಪ್‌ಗೆ ಎಂಟ್ರಿ ಮಾಡುತ್ತಾರೆ.
6) ಸಮೀಕ್ಷೆಗೆ ಯಾರು ಬರುತ್ತಾರೆ?
ಅಧಿಕೃತವಾಗಿ ನಿಯೋಜಿತಗೊಂಡು, ತರಬೇತಿ ಪಡೆದ, ಗುರುತಿನ ಚೀಟಿ ಹೊಂದಿದ ಶಿಕ್ಷಕರು ಅಥವಾ ಸರಕಾರದ ಇತರೆ ಹುದ್ದೆಯಲ್ಲಿರುವವರು ಬರುತ್ತಾರೆ.
7) ಏನಿದು ಜಾತಿ ಕೋಡ್?
ಸಮೀಕ್ಷೆದಾರರು ಮನೆಗೆ ಬಂದು ಸಮೀಕ್ಷೆ ಮಾಡುವಾಗ ಜನರು ತಮ್ಮ ಧರ್ಮ, ಜಾತಿ, ಉಪಜಾತಿ, ಆದಾಯ, ಶೈಕ್ಷಣಿಕ ವಿದ್ಯಾರ್ಹತೆ, ಉದ್ಯೋಗ, ಆರೋಗ್ಯ, ಮನೆ, ಭೂಮಿ.... ಇತ್ಯಾದಿ ಎಲ್ಲ ಮಾಹಿತಿಗಳನ್ನು ಕೊಡಬೇಕು. ಜಾತಿಯ ವಿಚಾರದಲ್ಲಿ ಹತ್ತಾರು ಜಾತಿ, ಸಾವಿರಾರು ಉಪಜಾತಿಗಳು ಇರುವುದರಿಂದ, ಅವೆಲ್ಲವುಗಳನ್ನು ಅನುಕ್ರಮವಾಗಿ ಪಟ್ಟಿ ಮಾಡಲಾಗಿದೆ. ಜಾತಿಗಳ ಪಟ್ಟಿಯಲ್ಲಿನ ಜಾತಿಯ ಕ್ರಮ ಸಂಖ್ಯೆಯೇ ಜಾತಿ ಕೋಡ್
8) ಜಾತಿ ಕೋಡ್, ಉಪಜಾತಿ ಕೋಡ್ ಯಾವುದು ಎಂಟ್ರಿ ಮಾಡಿಸಬೇಕು?
ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಬಂಟರು.... ಅನ್ನುವ ಮುಖ್ಯ ಹೆಡ್ಡಿಂಗ್‌ನ್ನು ಮಾತ್ರ ನಮೂದಿಸುವುದು ಸೂಕ್ತ. ಒಳ ಪಂಗಡ, ಒಳ ಜಾತಿಗಳನ್ನು ನಮೂದಿಸಬಾರದು ಎಂದು ಆಯಾಯ ಪಂಗಡದ (ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ...) ನಾಯಕರು, ಮಠಾಧೀಶರು ಕರೆ ಕೊಡುತ್ತಿದ್ದಾರೆ. (ಆದರೆ, ಕೆಲವು ಹಿಂದುಳಿದ ಜಾತಿಗಳಲ್ಲಿ ಉಪಜಾತಿಗಳಿದ್ದು, ಉಪಜಾತಿಗಳಿಗೆ ವಿಶೇಷ ಮೀಸಲಾತಿ ಇದ್ದಲ್ಲಿ ಉಪಜಾತಿ ನಮೂದಿಸಬಹುದು)
ಉದಾಹರಣೆಗೆ: ಒಕ್ಕಲಿಗರು ಜಾತಿಯಲ್ಲಿ ಅನೇಕ ಉಪಜಾತಿಗಳಿದ್ದರೂ, ಎಲ್ಲ ಒಕ್ಕಲಿಗರು ಕೇವಲ ಒಕ್ಕಲಿಗರು ಎಂದು ಮಾತ್ರ ನಮೂದಿಸಬೇಕು ಎಂದು ಒಕ್ಕಲಿಗರ ನಾಯಕರು, ಒಕ್ಕಲಿಗ ಮಠದ ಗುರುಗಳು ಕರೆ ನೀಡಿದ್ದಾರೆ. ಅದೇ ರೀತಿ ಬ್ರಾಹ್ಮಣರು ಕೇವಲ ಬ್ರಾಹ್ಮಣ ಎಂದು ಮಾತ್ರ ನಮೂದಿಸಬೇಕೆಂದು ಬ್ರಾಹ್ಮಣ ನಾಯಕರು ಕರೆ ಕೊಟ್ಟಿದ್ದಾರೆ. ಲಿಂಗಾಯಿತರ ವರ್ಗದಲ್ಲಿ ಮಠಾಧಿಪತಿಗಳ ಮತ್ತು ಜನ ಪ್ರತಿನಿಧಿಗಳ ಚರ್ಚೆ ನೆಡೆಯುತ್ತಿದ್ದು, ಇನ್ನೂ ಒಮ್ಮತಕ್ಕೆ ಬರಲಾಗಿಲ್ಲ.
9) ಹಾಗಾದರೆ, ಬ್ರಾಹ್ಮಣರ ಜಾತಿ ಕೋಡ್ ಯಾವುದು?
ಬ್ರಾಹ್ಮಣರ ಜಾತಿ ಕೋಡ್ A-0218
10) ಸಮೀಕ್ಷೆಗೆ ಬಂದಾಗ ಜಾತಿ ಮಾಹಿತಿ ಕೊಡದಿದ್ದರೆ?
ಜಾತಿ ಗಣತಿಗೆ ಜಾತಿ ಮಾಹಿತಿ ಕೊಡಲಿಲ್ಲ ಅಂದ್ರೆ, ಮಾಹಿತಿ ಕೊಡದವರ ವಿವರವನ್ನು ಇತರೆ ಅನ್ನುವ ಕಾಲಂನಲ್ಲಿ ಹಾಕಿ ಗಣತಿಯನ್ನು ಪೂರೈಸುತ್ತಾರಂತೆ?. ಅದರಿಂದ ಯಾವುದೇ ಉಪಯೋಗ ಇಲ್ಲ. ಆಗಬಹುದಾದ ಯಾವುದಾದರು ಅನುಕೂಲಗಳಿದ್ದರೂ, ಅದಕ್ಕೂ ತೊಂದರೆ ಆಗಬಹುದು. ಯಾವುದಾದರು ಸರಕಾರಿ ಕಛೇರಿಗಳಲ್ಲಿ ಕುಟುಂಬದವರಲ್ಲಿ ಯಾರಿಗಾದರೂ ಉದ್ಯೋಗ, ಶಿಕ್ಷಣ, ಆರ್ಥಿಕ ಸಹಾಯ ಸಿಗುವಂತಹ ಸಂದರ್ಭ ಬಂದಲ್ಲಿ ಜಾತಿ ಕಾಲಂನಲ್ಲಿ ಇತರೆ ಅಂತ ಇರುವುದರಿಂದ ಸಮಸ್ಯೆ ಆಗಬಹುದು. ಆದುದರಿಂದ ಬಹಿಷ್ಕಾರ ಸರಿಯಲ್ಲ. ಸಮೀಕ್ಷೆದಾರರಿಗೆ ನೇರ ಮಾಹಿತಿ ಕೊಡುವುದೇ ಒಳ್ಳೆಯದು. ಆದರೆ, ಮೇಲ್ವರ್ಗದವರು (ಬ್ರಾಹ್ಮಣ, ಒಕ್ಕಲಿಗ...ಇತ್ಯಾದಿ) ಉಪಜಾತಿಯ ಕೋಡ್ ಎಂಟ್ರಿ ಮಾಡಿಸುವುದು ಬೇಡ, ಅದರಿಂದ ಯಾವುದೇ ಉಪಯೋಗ ಇಲ್ಲ.
11) ಧರ್ಮ (Religion) ಮಾಹಿತಿಗೂ ಕೋಡ್ ಇದೆಯಾ? ಯಾವುದು?
ಹೌದು. ಇದೆ.
ಹಿಂದು - 1
ಜೈನ್ - 4
12) ಹಾಗಾದರೆ, ಉಪಜಾತಿ ಕೋಡ್‌ಗಳನ್ನು ತಿಳಿಸುವುದು ಬೇಡ?
ಮೇಲ್ವರ್ಗದವರಿಗೆ ಖಂಡಿತವಾಗಿಯೂ ಬೇಡ.
13) ಸ್ಟಿಕರ್ ಅಂಟಿಸಿದ್ದು ಯಾಕೆ?
ಸ್ಟಿಕರ್‌ನಲ್ಲಿರುವ ESCOM ವಿದ್ಯುತ್ ಮೀಟರ್‌ಗಳನ್ನು ಆಧರಿಸಿ ಸಿದ್ಧಪಡಿಸಿದ ಮನೆ UHID ಸಂಖ್ಯೆಗಳನ್ನು ನಮೂದಿಸಿ ಸಮೀಕ್ಷೆಯನ್ನು ಪ್ರಾರಂಭಿಸುತ್ತಾರೆ. ಸಮೀಕ್ಷೆಯ ನಂತರ ಸ್ಡಿಕರ್‌ನಲ್ಲಿ ಸಮೀಕ್ಷೆ ಐಡಿ ನಂಬರ್‌ನ್ನು ಸಮೀಕ್ಷೆದಾರರು ನಮೂದಿಸುತ್ತಾರೆ.
14) ಸ್ಟಿಕರ್‌ನ್ನು ಏನು ಮಾಡುವುದು?
ಹಿಂದುಳಿದ ವರ್ಗ ಆಯೋಗ ಈಗಾಗಲೆ ಮನೆಯಲ್ಲಿ ಅಂಟಿಸುವ ಗುರುತಿನ ಸ್ಪೀಕರ್
ಹರಿದು ಹಾಕಬೇಕಾಗಿಲ್ಲ ಅಥವಾ ಗಾಬರಿ ಪಡಬೇಕಾಗಿಲ್ಲ. ಅಂಟಿಸಿದಲ್ಲಿಯೇ ಇರಲಿ.
15) ಸಮೀಕ್ಷೆದಾರರಿಗೆ ಮಾಹಿತಿಗಳನ್ನು ನೀಡುವುದರಿಂದ ತೊಂದರೆ ಇದೆಯಾ?
ಸಮೀಕ್ಷೆದಾರರು ಕೇಳುವ 60+ ಪ್ರಶ್ನೆಗಳಿಗೆ ಮಾಹಿತಿ ಕೊಡುವುದರಿಂದ ಏನೂ ತೊಂದರೆ ಇಲ್ಲ, ಮಾಹಿತಿ ನೀಡುವುದರಲ್ಲಿ ತಪ್ಪಿಲ್ಲ, ಏನೂ ಸಮಸ್ಯೆ ಇಲ್ಲ. ಆದರೆ, ಮೇಲೆ ಹೇಳಿದಂತೆ ಮೇಲ್ವರ್ಗದವರು ಉಪಜಾತಿಗಳ ಮಾಹಿತಿಗಳನ್ನು ಕೊಡುವುದು ಬೇಡ.
16) ಸಮೀಕ್ಷೆ ಬಗ್ಗೆ ಯಾವುದೇ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು? ಸಹಾಯವಾಣಿ ನಂಬರ್ ಇದೆಯಾ?
ಸಮೀಕ್ಷೆ ಬಗ್ಗೆ ಯಾವುದೇ ಮಾಹಿತಿಗಾಗಿ ಮನೆಯಲ್ಲಿ ಅಂಟಿಸಿದ ಸ್ಟಿಕರ್‌ನಲ್ಲಿರುವ ಸಹಾಯವಾಣಿ ನಂಬರ್‌ಗೆ ಸಂಪರ್ಕಿಸಬಹುದು. ಸಹಾಯವಾಣಿ ನಂಬರ್: 8050770004
17) ಬ್ರಾಹ್ಮಣ ಪಂಗಡದವರು ಸಮೀಕ್ಷಾ ಸಮಯದಲ್ಲಿ ಬರಬಹುದಾದ ಅನುಮಾನಗಳಿಗೆ ಯಾರನ್ನು ಸಂಪರ್ಕಿಸಬೇಕು?
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಮಾಹಿತಿ ಕೇಂದ್ರದ ವ್ಯವಸ್ಥಾಪಕ ಶ್ರೀ ನಾಗರಾಜ್‌ರವರನ್ನು ಸಂಪರ್ಕಿಸಬಹುದು.
ದೂರವಾಣಿ : 9945840620
18) ಸಮೀಕ್ಷೆಯ ಪೂರ್ಣ ಮಾಹಿತಿ ಎಲ್ಲಿ ಸಿಗುತ್ತದೆ?
ಸಮೀಕ್ಷೆಯ ಪೂರ್ಣ ಮಾಹಿತಿಗೆ ಸಮಿಕ್ಷಾ ಕೈಪಿಡಿ- 2025 ಗಮನಿಸಬಹುದು.
19) ಯಾವ ಯಾವ ಮಾಹಿತಿಗಳನ್ನು ಕೊಡಬೇಕು?
ಕುಟುಂಬದ ಮುಖ್ಯಸ್ಥರ ಮತ್ತು
ಕುಟುಂಬದ ಎಲ್ಲ ಸದಸ್ಯರ ಹೆಸರು,
ವಯಸ್ಸು,
ಶೈಕ್ಷಣಿಕ ವಿವರ,
ಆಧಾರ್ ನಂಬರ್ಸ್,
ಎಲಕ್ಷನ್ ಕಾರ್ಡ್ ನಂಬರ್ಸ್,
ಧರ್ಮ,
ಜಾತಿ, (ಮೇಲ್ವರ್ಗದವರು ಉಪಜಾತಿ ವಿವರ ಕೊಡುವುದು ಬೇಡ),
ಉದ್ಯೋಗ,
ವಾರ್ಷಿಕ ಆದಾಯ,
ಆದಾಯ ತೆರಿಗೆ ಪಾವತಿದಾರರೆ?,
ಬ್ಯಾಂಕ್ ಹೊಂದಿರುವ ವಿಚಾರ (ಅಕೌಂಟ್ ನಂಬರ್ ಕೊಡಬೇಕಿಲ್ಲ),
ಆರೋಗ್ಯ ವಿಮೆ (ಇದ್ದರೆ),
ಕೃಷಿ ಭೂಮಿ ವಿವರ,
ಜಾನುವಾರುಗಳ ವಿವರ,
ಕುಟುಂಬದ ಚರಾಸ್ತಿ,
ಸ್ಥಿರಾಸ್ತಿ,
ವಾಸದ ಮನೆಯ ವಿವರ,
ಕುಡಿಯುವ ನೀರಿನ ಮೂಲ,
ಅಡುಗೆಗೆ ಬಳಸುವ ಇಂಧನ,
ನಿವೇಶನ,
ದೀಪದ ಮೂಲ,
ಶೌಚಾಲಯ ಇರುವಿಕೆ,
ಇತ್ಯಾದಿ ವಿವರಗಳನ್ನು ಕೊಡಬೇಕಾಗುತ್ತದೆ.
20) ಸಮೀಕ್ಷೆಯವರಿಗೆ ಯಾವ ದಾಖಲಾತಿಗಳನ್ನು ಕೊಡಬೇಕು?
ಸಮೀಕ್ಷೆಯವರಿಗೆ ಯಾವ ದಾಖಲಾತಿಗಳನ್ನು, ಫೋಟೋ ಪ್ರತಿ/ಜೆರಾಕ್ಸ್‌ನ್ನು ಕೊಡಬೇಕಿಲ್ಲ. ಆದರೆ, ಮೇಲಿನ ಮಾಹಿತಿಗಳನ್ನು ಮೌಖಿಕವಾಗಿ ಕೊಡಲು ಬೇಕಾದ ದಾಖಲಾತಿಗಳನ್ನು ಸಿದ್ಧವಾಗಿ ಅಥವಾ ಬರೆದು ರೆಡಿ ಇಟ್ಟುಕೊಳ್ಳುವುದು ಒಳ್ಳೆಯದು.
***
ಶಾಲೆಯಲ್ಲಿ "ಜಾತಿ ವ್ಯವಸ್ಥೆ ಇರಬಾರದು, ಜಾತಿ ಭೇದಭಾವ ಇರಬಾರದು, ನಾವು ಮನುಷ್ಯರೆಲ್ಲ ಒಂದೇ ಜಾತಿ, ನಮ್ಮದು ಜಾತ್ಯತೀತ ರಾಷ್ಟ್ರ" ಎಂದು ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೇ ಜಾತಿ ಸಮೀಕ್ಷೆಗೆ ಬರವುದು!. ಬಂದು ದಸರಾ ರಜಯಲ್ಲಿ ಮನೆಯಲ್ಲಿರುವ ಅದೇ ಮಕ್ಕಳ ಮುಂದೆ, ಪೋಷಕರಿಗೆ "ನಿಮ್ಮ ಜಾತಿ ಯಾವುದು? ಉಪಜಾತಿ ಯಾವುದು? ಧರ್ಮ ಯಾವುದು? ನೀವು ಒಕ್ಕಲಿಗ ಕ್ರಿಶ್ಚಿಯನ್ನಾ? ನೀವು ಬ್ರಾಹ್ಮಣ ಕ್ರಿಶ್ಚಿಯನ್ನಾ? ನೀವು ಮಾದಿಗ ಕ್ರಿಶ್ಚಿಯನ್ನಾ? ಬಣಜಿಗ ಕ್ರಿಶ್ಚಿಯನ್ನಾ?" ಅಂತೆಲ್ಲ ಮಾಹಿತಿ ಪಡೆಯುವ ಪರಿಸ್ಥಿತಿಯನ್ನು ಶಿಕ್ಷಕರು ಹೇಗೆ ಹಿತವಾದ ಭಾವದಲ್ಲಿ ಮಾಡುತ್ತಾರೆ? ಎದುರಿಸುತ್ತಾರೆ? ಪ್ರತಿಕ್ರಯಿಸುತ್ತಾರೆ!? ಅನ್ನುವುದು ಒಂದು ಕುತೂಹಲ!!.
ಈ ಜಾತಿ ಸರ್ವೆ ಈಗ ರಾಜ್ಯ ಸರಕಾರ ಮಾಡುತ್ತಿರುವುದು. ಮುಂದಿನ ವರ್ಷ ಇಡೀ ದೇಶಕ್ಕೆ ಅನ್ವಯಿಸಿ, ಕೇಂದ್ರ ಸರಕಾರ ಮತ್ತೆ ಜಾತಿ ಗಣತಿಯೊಂದಿಗೆ ಜನ ಗಣತಿ ಮಾಡಲಿದೆಯಂತೆ.
***
ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಷ್ಟೇ ಶ್ರದ್ಧಾಭಕ್ತಿಯೊಂದಿಗೆ ಈ ಎಲ್ಲ ಜಾತಿಗಣತಿ, ಜನಗಣತಿ, ಧರ್ಮಗಣತಿಗಳಲ್ಲಿ ಭಾಗವಹಿಸೋಣ. ಭಾಗವಹಿಸಲು ಸಿದ್ಧರಾಗೋಣ.
ಮತ್ತೊಮ್ಮೆ ನೆನಪಿಡಬೇಕಾದ್ದು ಮೇಲ್ವರ್ಗದವರು (ಒಕ್ಕಲಿಗ, ಬ್ರಾಹ್ಮಣ,....) ಮುಖ್ಯಜಾತಿ ವಿವರ ಮಾತ್ರ ಕೊಡಬೇಕು ಉಪಜಾತಿ ವಿವರ ಕೊಡುವುದು ಬೇಡ.
ಉದಾಹರಣೆಗೆ: ಬ್ರಾಹ್ಮಣರ ಜಾತಿ ಕೋಡ್ A-0218
ಉಪಜಾತಿ ಮಾಹಿತಿ ಕೇಳಿದರೂ "ಕೊಡುವುದಿಲ್ಲ" ಎಂದೇ ಹೇಳಬೇಕು.
ಪ್ರಮುಖ ಜಾತಿಗಳ ಒಳಗೇ ಒಗ್ಗಟ್ಟು ಉಂಟಾಗುವಂತೆ ಮಾಡೋಣ. ಪ್ರಮುಖ ಜಾತಿಗಳ ಒಳಗೇ ಒಡಕು ಉಂಟಾಗುವುದು ಬೇಡ.
ಒಕ್ಕಲಿಗರೆಲ್ಲಾ ಒಂದು, ಲಿಂಗಾಯತರೆಲ್ಲ ಒಂದು, ಬ್ರಾಹ್ಮಣರೆಲ್ಲ ಒಂದು ಎಂಬಷ್ಟಾದರೂ ಒಳ ಜಾತಿಗಳಿಲ್ಲದೆ ಒಗ್ಗಟ್ಟಾಗೋಣ.
ಕೊನೇ ಹನಿ: ಜಾತಿ ಗಣತಿ ಮಾಡುವಾಗ ಕರ್ನಾಟಕದ ರಸ್ತೆಗಳ ಗುಂಡಿ ಗಣತಿಯನ್ನೂ ಮಾಡಬಹುದಿತ್ತು. ಎಷ್ಟು ಕೋಟಿ ಗುಂಡಿಗಳಿವೆ? ಯಾವ ಯಾವ ಜಾತಿಯ ಗುಂಡಿಗಳಿವೆ? ಇತ್ಯಾದಿ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


