ಪುತ್ತೂರು: ಭಾರತೀಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಯನ್ನು ಮಾಡುತ್ತಿದ್ದಾರೆ. ಅದರಂತೆ 2027 ನೇ ಇಸವಿಯಲ್ಲಿ ಚಂದ್ರನ ಮೇಲೆ ಭಾರತೀಯರು ಕಾಲಿಡುವತ್ತ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮುನ್ನಡೆಯುತ್ತಿದೆ ಎಂದು ಎಂಐಟಿ ಮಣಿಪಾಲ ಪ್ರಾಧ್ಯಾಪಕ ಡಾ. ಮಹೇಶ್. ಎಂ. ಜಿ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ, ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಇವರು ಡಾ. ವಿಕ್ರಂ ಸಾರಾಭಾಯಿಯವರ ದೂರದರ್ಶಿತ್ವದಲ್ಲಿ, ಭಾರತದಲ್ಲಿ ಆರಂಭಗೊಂಡ ಬಾಹ್ಯಾಕಾಶ ಸಂಬಂಧಿಸಿದ ಕಾರ್ಯಕ್ರಮಗಳು ಈಗ ಜಗತ್ತಿನ ಅತ್ಯಂತ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದ ಮೂಲಕ ಮುಂದುವರಿಯುತ್ತಿದೆ. ಚಂದ್ರಯಾನ, ಮಂಗಳಯಾನ ಹಾಗೂ ಆದಿತ್ಯ ಯೋಜನೆಗಳು ಇಸ್ರೋದ ಪ್ರಮುಖ ಯೋಜನೆಗಳಾಗಿವೆ ಎಂದು ವಿವರಿಸಿದರು.
ಹಾಗೆಯೇ ಇಸ್ರೋ ನಡೆದು ಬಂದ ದಾರಿ, ವಿವಿಧ ಮೈಲುಗಲ್ಲುಗಳು ಮತ್ತು ಮುಂದಿನ ಯೋಜನೆಗಳಾದ, ಬಾಹ್ಯಾಕಾಶ ನಿಲ್ದಾಣದ ಸ್ಥಾಪನೆ, ಭಾರತೀಯರು ಚಂದ್ರನ ಮೇಲೆ ಇಳಿಯುವ ಯೋಜನೆಗಳು ಹಾಗೂ ಸೂರ್ಯನ ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್, ಐಕ್ಯೂಎಸಿ ಸಂಯೋಜಕಿ ಡಾ. ರವಿಕಲಾ, ವಿದ್ಯಾರ್ಥಿ ಸೃಜೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿಎಸ್ಸಿ ವಿದ್ಯಾರ್ಥಿಗಳಾದ, ಅಶ್ವಥಿ ಸ್ವಾಗತಿಸಿ, ಸೃಜೇಶ್ ಕುಮಾರ್ ವಂದಿಸಿ, ಅಂಕಿತಾ ಮತ್ತು ಚೈತ್ರ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ