ವಿಸಿಇಟಿ ಪುತ್ತೂರು: ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಪುನಶ್ಚೇತನ ಕಾರ್ಯಕ್ರಮ

Chandrashekhara Kulamarva
0


ಪುತ್ತೂರು: ರೂಢಿಯಲ್ಲಿ ಒಂದು ಮಾತಿದೆ, ಪಂಚಾಂಗ ಗಟ್ಟಿ ಇದ್ದರೆ ಮಾತ್ರ ಮನೆ ಉಳಿಯುತ್ತದೆ. ಅದೇ ರೀತಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಬಂದಿರುವ ನೀವು ಅದರ ಮೂಲ ವಿಷಯಗಳನ್ನು ಕಲಿತುಕೊಳ್ಳುವುದು ಬಹಳ ಆವಶ್ಯಕ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಾವರ್ಕರ್ ಸಭಾ ಭವನದಲ್ಲಿ ನಡೆದ 2025ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪುನಶ್ಚೇತನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದರು. ನಿಮ್ಮ ಕಲಿಕೆ ಇಂದಿನಿಂದಲೇ ಪ್ರಾರಂಭವಾಗುತ್ತವೆ ಮತ್ತು ಇಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳೂ ಅಗತ್ಯವಾದದ್ದು ಮತ್ತು ಜೀವನಾನುಭವವನ್ನು ನೀಡುವಂಥದ್ದು ಎಂದು ಹೇಳಿದರು.


ಉತ್ತಮ ಇಂಜಿನಿಯರ್ ಅನಿಸಿಕೊಳ್ಳಬೇಕಾದರೆ ತರಗತಿಗಳಿಗೆ ತಪ್ಪದೆ ಹಾಜರಾಗುವ ಜತೆಯಲ್ಲಿ ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನೂ ಓದಬೇಕು, ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಹಾಗೂ ಜವಾಬ್ಧಾರಿಗಳನ್ನು ಅರಿತುಕೊಂಡು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್ ಮಾತನಾಡಿ, ಇಂಜಿನಿಯರಿಂಗ್ ಶಿಕ್ಷಣ ಎನ್ನುವುದು ಒಂದು ನಿರಂತರ ಕಲಿಕೆ. ಇಲ್ಲಿ ತರಗತಿ ಶಿಕ್ಷಣದ ಜತೆಯಲ್ಲಿ ಸ್ವಯಂ ಕಲಿಕೆಯ ವಿಷಯಗಳು ಸಾಕಷ್ಟಿವೆ. ಇಲ್ಲಿ ವಿಷಯದ ತಿಳುವಳಿಕೆ ಮಾತ್ರ ಸಾಕಾಗುವುದಿಲ್ಲ ಬದಲಿಗೆ ನಿರ್ದಿಷ್ಟ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ತಿಳುವಳಿಕೆಯೂ ಅಗತ್ಯವಾಗಿದೆ ಎಂದರು.


ಪಠ್ಯಕ್ರಮವನ್ನು ಕಲಿಯುವುದರ ಜತೆಯಲ್ಲಿ ಕಂಪೆನಿಗಳು ಬಯಸುವ ಪೂರಕ ವಿಷಯಗಳನ್ನು ಕಲಿತುಕೊಂಡಾಗ ಉತ್ತಮ ಇಂಜಿನಿಯರ್ ಎನಿಸಿಕೊಳ್ಳಬಹುದು. ಕೇವಲ ಉದ್ಯೋಗ ಗಳಿಸುವುದಷ್ಟೇ ಕಲಿಕೆಯ ಗುರಿಯಾಗಿರಬಾರದು, ತಾನು ಗಳಿಸಿದುದರಲ್ಲಿ ಕೆಲವಂಶವನ್ನು ಸಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಾ ದೇಶದ ಉನ್ನತಿಗೂ ಕೊಡುಗೆಯನ್ನು ನೀಡಬೇಕು ಎಂದರು. 


ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್‌ ಪ್ರಸನ್ನ.ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಧಾನಗಳು, ಆಂತರಿಕ ಮೌಲ್ಯಮಾಪನ, ಹಾಜರಾತಿ ಹಾಗೂ ಕಾಲೇಜಿನ ನಿಯಮ ಮತ್ತು ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದರು.


ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ನಿರ್ದೇಶಕಿ ಶ್ರೀಮತಿ ವಿದ್ಯಾ ಆರ್. ಗೌರಿ, ಪ್ರವೇಶ, ಉದ್ಯೋಗ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥೆ ಪ್ರೊ. ವಂದನಾ ಶಂಕರ್, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ. ರಮಾನಂದ ಕಾಮತ್ ಸ್ವಾಗತಿಸಿ ಡಾ. ಶ್ವೇತಾಂಬಿಕಾ. ಪಿ ವಂದಿಸಿದರು. ಪ್ರೊ. ಶ್ರೀಶರಣ್ಯ ಯು.ಆರ್ ಮತ್ತು ಪ್ರೊ. ಸೌಜನ್ಯ ಎಂ.ಎಂ ಕಾರ್ಯಕ್ರಮ ನಿರ್ವಹಿಸಿದರು.


ಪ್ರೊ. ತೇಜಸ್ವಿನಿ ಎಲ್.ಪಿ, ಪ್ರೊ. ರವಿಶಂಕರ್, ಪ್ರೊ. ಮಾಧವಿ ಪೈ, ಪ್ರೊ. ರೇಶ್ಮಾ, ಪ್ರೊ. ರವೀಶ್ ಪಿ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು.



إرسال تعليق

0 تعليقات
إرسال تعليق (0)
To Top