ಸೇವಾ ಸಂಭ್ರಮ; ಸಿಯೋನ್ ಆಶ್ರಮದಲ್ಲಿ ಏಕದಿನ ಶಿಬಿರ

Upayuktha
0



ಉಜಿರೆ: ರಾಷ್ಟ್ರೀಯ ಸೇವಾ ಯೋಜನೆ ದಿನ ಪ್ರಯುಕ್ತ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ‘ಸೇವಾ ಸಂಭ್ರಮ’ ಸಾಪ್ತಾಹಿಕ ಕಾರ್ಯಕ್ರಮ ಸರಣಿಯ ಅಂಗವಾಗಿ ಒಂದು ದಿನದ ಶಿಬಿರ ಸೆ.24ರಂದು ಗಂಡಿಬಾಗಿಲು ಗ್ರಾಮದ ಸಿಯೋನ್ ಆಶ್ರಮದಲ್ಲಿ ನಡೆಯಿತು. 


ಉದ್ಘಾಟನೆ ನೆರವೇರಿಸಿ ಮಾತನಾಡಿದ ಆಶ್ರಮದ ಸಂಸ್ಥಾಪಕ ಫಾದರ್ ಪೌಲ್, ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಬಹುದೊಡ್ಡ ಕನಸಾಗಿತ್ತು. ಅವರ ರಾಮರಾಜ್ಯದ ಕನಸನ್ನು ನನಸು ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.


ಜಾತಿ, ಧರ್ಮ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಂದೇ ಎಂದು ಸೌಹಾರ್ದದಿಂದ ಬದುಕುತ್ತಿರುವುದು ನಮ್ಮ ದೇಶದ ವಿಶೇಷತೆಯಾಗಿದೆ ಎಂದ ಅವರು, ಸೇವಾ ಮನೋಭಾವ ಎಲ್ಲರಲ್ಲಿಯೂ ಕೊನೆತನಕ ಉಳಿದಿರಲಿ ಎಂದು ಆಶಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸೇವೆ, ಸಮಾಜದ ಒಳಿತಿಗಾಗಿ ಅವರ ಕಾರ್ಯಗಳು ಮತ್ತು ಸಿಯೋನ್ ಆಶ್ರಮದ ಏಳಿಗೆಗೆ ಅವರ ಕೊಡುಗೆಗಳು ಅಪಾರ ಎಂದು ಅವರು ಸ್ಮರಿಸಿದರು. 


ಸಂಸ್ಥೆಯ ಟ್ರಸ್ಟಿ ಮಾತೃಶ್ರೀ ಮೇರಿ ಯು., ವೈದ್ಯಾಧಿಕಾರಿ ಶಿವಾನಂದ ಸ್ವಾಮಿ, ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಹಿಂದಿ ಉಪನ್ಯಾಸಕಿ ಶೃತಿ ಮಣಿಕೀಕರ್, ಆಶ್ರಮದ ಸಿಬ್ಬಂದಿ, ಆಶ್ರಮವಾಸಿಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಉಪಸ್ಥಿತರಿದ್ದರು.


ಸ್ವಯಂಸೇವಕಿಯರಾದ ಶಿಲ್ಪ ಸ್ವಾಗತಿಸಿ, ವರ್ಣಿಕ ವಂದಿಸಿ, ರಕ್ಷಾ ಆರ್. ದೇವಾಡಿಗ ನಿರೂಪಿಸಿದರು. 


ಸಮಾರೋಪ 

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶ್ರಮದ ಟ್ರಸ್ಟಿ ಮಾತೃಶ್ರೀ ಮೇರಿ ಯು., ಈ ಎನ್ ಎಸ್ ಎಸ್ ನ ವಿಶೇಷ ದಿನದಂದು ಸ್ವಯಂಸೇವಕರು ನಮ್ಮ ಆಶ್ರಮದಲ್ಲಿ ಪೂರ್ತಿ ದಿನವನ್ನು ಅರ್ಥಪೂರ್ಣವಾಗಿ ಕಳೆದಿರುವುದು ಸಂತಸದ ಸಂಗತಿ ಎಂದರು. ಈ ನಿಮ್ಮ ಸೇವೆ ಕೇವಲ ಇಂದಿಗೆ ಮೀಸಲಾಗದೆ ರಾಷ್ಟ್ರಮಟ್ಟಕ್ಕೆ ನಿಮ್ಮ ಸೇವಾ ಕಾರ್ಯಗಳು ತಲುಪಲಿ ಎಂದು ಶುಭ ಹಾರೈಸಿದರು. 


ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮಾತನಾಡಿ, ಎಷ್ಟೋ ಯುವಜನರು ಬದುಕಿನಲ್ಲಿ ಜೀವನ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಆದರೆ ಇಲ್ಲಿನ ಆಶ್ರಮವಾಸಿಗಳಿಂದ ನಾವು ಕಲಿಯುವುದು ಸಾಕಷ್ಟು ಇದೆ. ಹಾಗೆಯೇ ಆಶ್ರಮವಾಸಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಗೆ ಈ ಪ್ರಪಂಚದ ಎಲ್ಲಾ ತಾಳ್ಮೆಯನ್ನು ದೇವರು ಕೊಟ್ಟಿದ್ದಾರೆ ಎಂದು ಹೇಳಿದರು.  


ಹಿಂದಿ ಉಪನ್ಯಾಸಕಿ ಶೃತಿ ಮಣಕೀಕರ್, ಆಶ್ರಮದ ಎಚ್ಆರ್ ರಿತೇಶ್ ಡಿ’ಸೋಜಾ, ಆಶ್ರಮದ ಸಿಬ್ಬಂದಿ, ಆಶ್ರಮವಾಸಿಗಳು, ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿಯರಾದ ಪ್ರೀತಿ ಸ್ವಾಗತಿಸಿ, ಮಾನ್ಯ ಕೆ ಆರ್ ನಿರೂಪಿಸಿದರು. ಆಶ್ರಮದ ವೈದ್ಯಾಧಿಕಾರಿ ಶಿವಾನಂದ ಸ್ವಾಮಿ ವಂದಿಸಿದರು.


ಶಿಬಿರದಲ್ಲಿ ಆಶ್ರಮದ ಆವರಣದಲ್ಲಿ ಸುಮಾರು 16 ಸಸಿಗಳನ್ನು ನೆಡಲಾಯಿತು. ಸ್ವಚ್ಛತಾ ಕಾರ್ಯ ನಡೆಯಿತು. ಸ್ವಯಂಸೇವಕರು ಹಾಗೂ ಆಶ್ರಮವಾಸಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top