ಯಲಹಂಕ, ಬೆಂಗಳೂರು: ‘ಆಳವಾದ ತಂತ್ರಜ್ಞಾನ (ಸಂಕೀರ್ಣ ತಂತ್ರಜ್ಞಾನ)ವನ್ನಾಧರಿಸಿದ ಅನ್ವೇಷಣೆಗಳನ್ನು ಮಾರುಕಟ್ಟೆಯಲ್ಲಿ ಉತ್ಪಾದಿತ ವಸ್ತುಗಳನ್ನಾಗಿಸಿ ಬಳಕೆಗೆ ಅಳವಡಿಸದಿದ್ದರೆ ಭಾರತ ದೇಶ ಅಭಿವೃದ್ಧಿಯನ್ನು ಕಾಣುವುದು ಸಾಧ್ಯವಿಲ್ಲ. ನಮ್ಮಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಅನ್ವೇಷಣೆ ಮಾಡಲು ಸಾವಿರಕ್ಕೂ ಅಧಿಕ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ಕೃಷ್ಟ ಪ್ರಯೋಗಾಲಯಗಳಿವೆ. ಆದರೆ ಈ ತನಕ ಬಹುತೇಕ ಸಂಶೋಧನೆಗಳು ಅನ್ವೇಷಣೆಯ ಹಂತವನ್ನು ದಾಟಿಲ್ಲ. ಒಂದೋ ಎರಡೋ ಅಲ್ಪ ಸಾಧನೆ ಮಾಡಿದ್ದರೂ ಅದು ತೃಪ್ತಿಕರವಾಗಿಲ್ಲ. ಹೆಸರಿಗೆ ಮಾತ್ರ ಅನ್ನುವಂತೆ ನಮ್ಮ ದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟ್ಅಪ್‌ಗಳಿವೆ. ಆದರೆ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ‘ಆಳವಾದ ತಂತ್ರಜ್ಞಾನ’ ವನ್ನವಲಂಬಿಸಿವೆ ಎಂದು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಅನ್ವೇಷಣಾ ಘಟಕ ಐ.ಎಚ್.ಎಫ್.ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶುತೋಷ್ ದತ್ತ ಶರ್ಮ ನುಡಿದರು.
ಅವರು ನಿಟ್ಟೆ ಪರಿಗಣಿತ ವಿಶವಿದ್ಯಾಲಯದ ಅಂಗಸಂಸ್ಥೆಯಾದ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಕೊ-ಇನ್ನೋವೇಶನ್ ಸೆಂಟರ್ ಹಾಗೂ ರೊಬೊಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗ ಆಯೋಜಿಸಿದ್ದ ಎರಡು ದಿನಗಳ ‘ಡೀಪ್ ಟೆಕ್ ಸ್ಟಾರ್ಟ್ಅಪ್-2025’ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದರಿಂದಲೇ ನಮ್ಮ ಸರ್ಕಾರ ‘ಸಂಕೀರ್ಣ ತಂತ್ರಜ್ಞಾನಾಧರಿತ’ ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೃಷಿ, ಆರೋಗ್ಯ, ರಕ್ಷಣಾವಲಯ, ವಿಪತ್ತು ನಿರ್ವಹಣೆ ಇತ್ಯಾದಿ ಕ್ಷೇತ್ರಗಳಲ್ಲಿ ನಮ್ಮ ಕೆಲಸ ಕಾರ್ಯಗಳನ್ನು ಹಗುರಗೊಳಿಸುವ ರೊಬೊಟಿಕ್ ತಂತ್ರಜ್ಞಾನದ ಸದ್ಬಳಕೆ ಆಗಲಿ ಎಂಬುದು ಇದರ ಹಿಂದಣ ಉದ್ದೇಶ. ಈ ನಿಟ್ಟಿನಲ್ಲಿ ಯಶಸ್ಸು ಕಾಣಬೇಕಾದರೆ, ತಂತ್ರಜ್ಞಾನ ಬೋಧಿಸುವ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ನೀತಿ ನಿರೂಪಕರು ಒಗ್ಗೂಡಿ ಮುಂದೆ ಸಾಗಬೇಕು’ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ದೇಶದಾದ್ಯಂತ ಆಗಮಿಸಿದ್ದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ತಂತ್ರಜ್ಞರು ‘ಆಳವಾದ ತಂತ್ರಜ್ಞಾನ’ವನ್ನಾದರಿಸಿದ ಅನ್ವೇಷಣೆಗಳನ್ನು ಉತ್ಪಾದಿತ ವಸ್ತುಗಳಾಗಿಸುವ ಗುರಿ ಹೊಂದಿದ ನೂತನ ಸ್ಟಾರ್ಟ್ಅಪ್ ಆಕಾಂಕ್ಷಿಗಳು ಉಪಸ್ಥಿತರಿದ್ದರು. ಅನ್ವೇಷಣೆಯಲ್ಲಿ ಅತೀವ ಆಸಕ್ತಿ ತಳೆದಿರುವ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಹಾಜರಿದ್ದ ಈ ಶೃಂಗಸಭೆಯಲ್ಲಿ ಕೈಗಾರಿಕಾ ಕ್ಷೇತ್ರ, ವಿವಿಧ ತಂತ್ರಜ್ಞಾನ ಬೋಧಿಸುವ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ನೀತಿನಿರೂಪಕರು ಪಾಲ್ಗೊಂಡಿದ್ದರು.
‘ನಮ್ಮ ದೇಶದ ವಿಶೇಷತೆಯೆಂದರೆ ನಮ್ಮಲ್ಲಿಯೇ ಇರುವ ವಿಶಾಲ ಮಾರುಕಟ್ಟೆ. ನಮ್ಮ ಸ್ಟಾರ್ಟ್ಅಪ್‌ಗಳು ಉತ್ಪಾದಿಸಿದ ವಸ್ತುಗಳು ಸಮಾಜಕ್ಕೆ ಹೇಗೆ ಉಪಯೋಗಕ್ಕೆ ಬರುತ್ತವೆ? ಮಾರುಕಟ್ಟೆಯಲ್ಲಿ ಬೇಡಿಕೆ ಹೇಗಿದೆ? ಇದು ಪರಿಸರ ಸ್ನೇಹಿಯೆ ಅಥವ ಪರಿಸರಕ್ಕೆ ಹಾನಿಕಾರಕವೊ? ಇತ್ಯಾದಿ ಪ್ರಶ್ನೆಗಳಿಗೆ ಅಲ್ಪಾವಧಿಯಲ್ಲಿ ಉತ್ತರ ಕಂಡುಕೊಳ್ಳಬಹುದು. ತದನಂತರ ವಿಶ್ವಮಾರುಕಟ್ಟೆಗೆ ಆತ್ಮವಿಶ್ವಾಸದಿಂದ ಪ್ರವೇಶಿಸಬಹುದು’ ಎಂದು ವಿಶ್ಲೇಷಿಸಿದರು.
ಮದ್ರಾಸಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಅಶೋಕನ್ ಟಿ ಅವರು ಮಾತನಾಡಿ, ‘ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಶಿಕ್ಷಣ ಸಂಸ್ಥೆ ಹಾಗೂ ಕೈಕಾರಿಕೋದ್ಯಮಿಗಳ ಸಹಯೋಗದಲ್ಲಿ ಜರುಗಬೇಕು. ಸಂಶೋಧನಾ ವಿದ್ಯಾರ್ಥಿಗಳೇ ಸ್ಟಾರ್ಟ್ಅಪ್‌ಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹಿಸಬೇಕು. ಕೈಗಾರಿಕೆಗಳು ರೊಬೋಟಿಕ್ ತಂತ್ರಜ್ಞಾನವನ್ನು ಅಧಿಕ ಪ್ರಮಾಣದಲ್ಲಿ ಅಳವಡಿಸಲು ಸಹಕಾರಿಯಾಗುವ ಉತ್ತೇಜನಕಾರಿ ಪರಿಸರ ಇರಬೇಕು’ ಎಂದು ಆಶಿಸಿದರು.
ಇದೇ ವೇಳೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಪೋಷಿಸಿದ ಸ್ಟಾರ್ಟ್ಅಪ್ ಉತ್ಪಾದಿಸಿದ ‘ಅರ್ಜುನ’ ಹೆಸರಿನ ನ್ಯೂರೋ ರೋಬೋಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಈ ರೋಬೋಟ್ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹಾಗೂ ನಿವಾರಿಸುವ ಸಾಮರ್ಥ್ಯ ಪಡೆದಿದೆ.
ಈ ಮೊದಲು ‘ಡೀಪ್ ಟೆಕ್’ ಶೃಂಗಸಭೆಯ ಮಹತ್ವ ಹಾಗೂ ಅಗತ್ಯ ಕುರಿತಂತೆ ಸವಿವರ ವರದಿಯನ್ನು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ರೊಬೊಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಎನ್ ಸಭೆಗೆ ಮಂಡಿಸಿದರು.
ಪ್ರಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎರಡು ದಿನಗಳ ಅವಧಿಯ ಶೃಂಗಸಭೆಯಲ್ಲಿ ಅತ್ಯುತ್ತಮ ಎಂದು ತಜ್ಞರು ನಿರ್ಧರಿಸುವ ಸ್ಟಾರ್ಟ್ಅಪ್‌ಗಳಿಗೆ ನಗದು ಬಹುಮಾನಗಳನ್ನು ಹಾಗೂ ಪಾರಿತೋಷಕಗಳನ್ನು ನೀಡಲಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ