ಅಗಲಿದ ಗಣ್ಯರಿಗೆ ನುಡಿನಮನ

Upayuktha
0


ಮಂಗಳೂರು: ತುಳುನಾಡಿನ ಪ್ರಮುಖ ಇತಿಹಾಸ ಸಂಶೋಧಕರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದ ಡಾ. ಕೆ.ಜಿ. ವಸಂತ ಮಾಧವ ಹಾಗೂ ಕನ್ನಡ ಕಾದಂಬರಿ ಪರಂಪರೆಗೆ ನೂತನ ಆಯಾಮ ನೀಡಿದ ಎಸ್. ಎಲ್. ಭೈರಪ್ಪರ ಕೊಡುಗೆ ಅನನ್ಯವಾದುದು. ಹಿರಿಯರ ಅಗಲಿಕೆ ಯ ನೋವಿನೊಂದಿಗೆ ಅವರ ಕೊಡುಗೆಗಳನ್ನು ಸ್ಮರಣೆ ಮಾಡಿಕೊಳ್ಳುವುದು ಅತಿ ಅಗತ್ಯ ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. ನುಡಿದರು.


ಅವರು ತುಳು ಪರಿಷತ್ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ನುಡಿ ನಮನ ಸಮಾರಂಭದಲ್ಲಿ ಮಾತನಾಡಿದರು.


ಕೆ.ಜಿ. ವಸಂತ ಮಾಧವರು ಕರಾವಳಿ ಕರ್ನಾಟಕದ ಇತಿಹಾಸದ ಕಟ್ಟುವಿಕೆಯನ್ನು ಪ್ರಧಾನವಾಗಿಸಿ ಕೊಂಡು ಸಾಂಸ್ಕೃತಿಕ ಇತಿಹಾಸದ ರಚನೆಗೆ ಮೂಲ ಆಕರಗಳನ್ನು ಶೋಧಿಸಿ ಭವಿಷ್ಯದ ಸಂಶೋಧಕರಿಗೆ ಮಾರ್ಗದರ್ಶನ ನೀಡಿರುತ್ತಾರೆ. ಅವರ ನೂತನ ಶೋಧಗಳ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದರು.


ಕಾದಂಬರಿಯನ್ನೇ ತನ್ನ ಅಭಿವ್ಯಕ್ತಿ ಮಾಧ್ಯಮವೆಂದು ಪರಿಭಾವಿಸಿದ ಬೈರಪ್ಪರು ಸಂಕೀರ್ಣವಾದ ಜೀವನದ ಸತ್ಯಗಳನ್ನು ಕಾದಂಬರಿಗಳ ಮೂಲಕ ನಿರ್ವಹಿಸಿದ್ದಾರೆ. ಜೀವನದ ಅರ್ಥವನ್ನು ಹುಡುಕ ಬಯಸುವ ಅವರ ಸಾಹಿತ್ಯ ಸೃಷ್ಟಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.


ತುಳು ಪರಿಷತ್ತಿನ ಅಧ್ಯಕ್ಷ ಶುಭೋದಯ ಆಳ್ವ ಮಾತನಾಡಿ, ನಮ್ಮ ಅರಿವಿನ ವಿಸ್ತರಣೆಗೆ ಕಾರಣರಾಗುವ ಶ್ರೇಷ್ಠರ ಸ್ಮರಣೆ ಮತ್ತು ಕೃತಿಗಳ ಓದು ನಿರಂತರವಾಗಿ ನಡೆಸಬೇಕು ಎಂದರು.


ತುಳು ಪರಿಷತ್ ನ ಗೌರವ ಅಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ ಮಾತನಾಡಿ, ಅಗಲಿದ ಹಿರಿಯ ಆದರ್ಶಗಳನ್ನು ಅರಿತು ಕಾರ್ಯತತ್ಪರರಾಗಬೇಕು ಎಂದರು.


ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸದಸ್ಯರುಗಳಾದ ಸುಧಾ ನಾಗೇಶ್, ಮಾಲತಿ ಶೆಟ್ಟಿ ಮಾಣೂರು, ಬಿ. ಶ್ರೀನಿವಾಸ್, ಶಾರದ ಬಾರ್ಕುರು, ಶಾಲಿನಿ ರೈ, ಸುಮತಿ ಹೆಗ್ಡೆ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top