ಇಂದು ಖಗ್ರಾಸ ಚಂದ್ರ ಗ್ರಹಣ: ಆಗಸದ ವಿಸ್ಮಯ ನೋಡಲು ಮರೆಯದಿರಿ

Upayuktha
0




ಈ ತಿಂಗಳು, ಸೆಪ್ಟೆಂಬರ್ 7ರ ಹುಣ್ಣಿಮೆಯ ರಾತ್ರಿಯಂದು, ಚಂದ್ರನು ಭೂಮಿಯ ಸುತ್ತಲೂ ತನ್ನ ಕಕ್ಷೆಯಲ್ಲಿ ಹೋಗುತ್ತಾ, ಸೂರ್ಯನಿಂದ ಭೂಮಿಯ ಹಿಂಬದಿ ಬಂದಾಗ ಚಂದ್ರ ಗ್ರಹಣವಾಗಲಿದೆ. ಚಂದ್ರನು ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ, ಇದು ಖಗ್ರಾಸ ಚಂದ್ರ ಗ್ರಹಣವಾಗಿರುತ್ತದೆ.


ಖಗ್ರಾಸ ಚಂದ್ರ ಗ್ರಹಣದ ವೇಳೆ, ಚಂದ್ರನು ತಾಮ್ರದಂತೆ ಕೆಂಪು ಬಣ್ಣ ಹೊಂದಿರುತ್ತಾನೆ. ಭೂಮಿಯು, ಚಂದ್ರನ ಮೇಲೆ ನೇರವಾಗಿ ಬೀಳುವ  ಸೂರ್ಯ ಕಿರಣಗಳನ್ನು ತಡೆಗಟ್ಟುತ್ತದೆ. ಈ ಕಾರಣ, ಭೂಮಿಯ ವಾತಾವರಣದಲ್ಲಿ ಚದುರಿಸುವ ಕೆಂಪು ಬಣ್ಣವು, ಚಂದ್ರನ ಮೈಮೇಲಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರನು ಕೆಂಬಣ್ಣದಲ್ಲಿ ಗೋಚರಿಸುತ್ತಾನೆ.


ಖಗೋಳಶಾಸ್ತ್ರಜ್ಞರು ಆಕಾಶಕಾಯಗಳ ಬೆಳಕನ್ನು ಪರಿಮಾಣ ಮಾಪನ ದಿಂದ ಗುರುತಿಸುತ್ತಾರೆ. (ಈ ಸಂಖ್ಯೆ ಕಡಿಮೆ ಇದ್ದಷ್ಟು ಆಕಾಶಕಾಯ ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಸಾಮಾನ್ಯವಾಗಿ ಹುಣ್ಣಿಮೆಯ ಚಂದ್ರನ ಪರಿಮಾಣ ಸುಮಾರು ಮೈನಸ್ 13ರಷ್ಟಾಗಿರುವುದು. ಆದರೆ, ಈ ಗ್ರಹಣದ ಸಮಯ ಮೈನಸ್ 1.35ರಷ್ಟು ಪರಿಮಾಣವಾಗಿರುತ್ತದೆ. ಅಂದರೆ, ಚಂದ್ರನು ಶೇ. 99.9ರಷ್ಟು ಮಂದವಾಗಿ ಕಾಣಿಸುತ್ತಾನೆ.


ಯಾವುದೇ ವಸ್ತುವಿನ ನೆರಳಲ್ಲಿ 2 ಭಾಗವನ್ನು ನೋಡಬಹುದು- ನೆರಳು (ಅಂಬ್ರಾ) ಮತ್ತು ಅರೆನೆರಳು (ಪೆನಂಬ್ರಾ). ಬೆಳಕಿನಿಂದ ದೂರ ಇದ್ದಷ್ಟು ಈ ನೆರಳಿನ 2 ಭಾಗಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ನೆರಳಿನ ಮಸುಕಾಗಿರುವ ಹೊರ ಅಂಚನ್ನು ಅರೆನೆರಳನ್ನುತ್ತಾರೆ. ಸೆಪ್ಟೆಂಬರ್ 7ರಂದು, ರಾತ್ರಿ  8:50ಕ್ಕೆ ಗ್ರಹಣವು ಪ್ರಾರಂಭವಾಗುವಾಗ ಭೂಮಿಯ ಅರೆನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭವಾಗುತ್ತದೆ. ಭೂಮಿಯ ಅರೆನೆರಳು ಚಂದ್ರನ ಮೇಲೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಸುಮಾರು 9:57ರಿಂದ  ಭೂಮಿಯ ನೆರಳು ಚಂದ್ರನ ಮೇಲೆ ಹರಿದಾಡುತ್ತದೆ. ಗ್ರಹಣವು  ಮುಂದುವರಿಯುತ್ತಾ 11:00ಕ್ಕೆ ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಬಂದಿರುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12:22ರ ವರೆಗೆ (ಸುಮಾರು 1 ಗಂಟೆ 22 ನಿಮಿಷಗಳ ಕಾಲ) ಖಗ್ರಾಸ  ಚಂದ್ರ ಗ್ರಹಣವನ್ನು ವೀಕ್ಷಿಸಬಹುದು. 11:41ಕ್ಕೆ ಗರಿಷ್ಠ ಗ್ರಹಣದ ಕಾಲದಲ್ಲಿ ಕೆಂಪು ಚಂದ್ರನನ್ನು ವೀಕ್ಷಿಸಬಹುದು. 1:26ಕ್ಕೆ ಚಂದ್ರನು, ಭೂಮಿಯ ನೆರಳಿನಿಂದ, ತದನಂತರ 2:25ಕ್ಕೆ ಭೂಮಿಯ ಅರೆನೆರಳಿನಿಂದ ಹೊರಬರುತ್ತಾನೆ. ಈ ಗ್ರಹಣದ ವಿವಿಧ ಹಂತಗಳು ಸುಮಾರು 5 ಗಂಟೆ 27 ನಿಮಿಷಗಳ ಕಾಲ ನಡೆಯುತ್ತದೆ.


ಈ ಗ್ರಹಣವು ಭಾರತದ, ಹಾಗೂ ಚೀನಾ, ಮಂಗೋಲಿಯಾ, ರಶಿಯಾದ ಕೇಂದ್ರ ಭಾಗ, ಮಲೇಷ್ಯಾ, ಸಿಂಗಪೋರ್, ಇಂಡೋನೇಷ್ಯಾ, ಶ್ರೀಲಂಕಾ, ಇತರ ಏಷ್ಯಾ ಖಂಡದ ವಿವಿಧ ದೇಶಗಳಿಂದ ಹಾಗೂ, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್ ದೇಶಗಳು ಮತ್ತು ಆಸ್ಟ್ರೇಲಿಯಾ ದಿಂದ ಗೋಚರಿಸುತ್ತದೆ.


ಭಾರತದ ಎಲ್ಲಾ ಭಾಗಗಳಿಂದ ಎಲ್ಲರೂ ಕೂಡ ಈ ಖಗೋಳ ವಿದ್ಯಮಾನವನ್ನು, ಬರಿಗಣ್ಣಿನಿಂದಲೇ, ಯಾವುದೇ ಹಾನಿಯಿಲ್ಲದೆ ವೀಕ್ಷಿಸಬಹುದು. ಗ್ರಹಣದ ಎಲ್ಲಾ ಹಂತಗಳನ್ನು ವೀಕ್ಷಿಸಲು ಶುಭ್ರಾಕಾಶ ಪ್ರಾಪ್ತಿಯಾಗಲಿ ಎಂದು ಸಮಸ್ತ ಖಗೋಳ ವೀಕ್ಷಕರ ಇಚ್ಛೆ.


- ಅತುಲ್ ಭಟ್, ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top