ಹರಿದಾಸಸಾಹಿತ್ಯದ ಕಳಚಿದ ಹಿರಿಯಕೊಂಡಿ- ಶ್ರೀ ಕಟಗೇರಿ ದಾಸರು

Upayuktha
0


 

ನಮ್ಮ ನಾಡಿನ ಸಂಗೀತಾಸಕ್ತರಿಗೆ, ಅದರಲ್ಲೂ ವಿಶೇಷವಾಗಿ ದಾಸಸಾಹಿತ್ಯದ ಅಭಿಮಾನಿಗಳಿಗೆ ಶ್ರೀ ಕಟಗೇರಿ ದಾಸರ ಹೆಸರು ಅತ್ಯಂತ ಪರಿಚಿತ,ತಮ್ಮ ವಿಶಿಷ್ಟವಾದ ಗಾಯನ ಶೈಲಿಯಿಂದ ಎಲ್ಲರ ಮನಸೂರಿಗೊಂಡ ಹಿರಿಯ ಸಾಧಕರು. ಕಳೆದ ಮಂಗಳವಾರ, ಆ.26ರಂದು ನಮ್ಮನ್ನಗಲಿದ ಈ ಮಹಾಚೇತನರಾದ ಕಟಗೇರಿ ದಾಸರ ಪೂರ್ಣ ಹೆಸರು ಪಂ. ಅನಂತಾಚಾರ ಬಾಳಾಚಾರ್ಯ ಕಟಗೇರಿ, ಧಾರವಾಡದ ಮಾಳಮಡ್ಡಿಯ ನಿವಾಸಿಗಳಾಗಿದ್ದರು. ಹರಿದಾಸ ಸಾಹಿತ್ಯವನ್ನು ಮತ್ತು ದಾಸರ ಪದಗಳನ್ನು ಕರ್ನಾಟಕದಾದ್ಯಂತ ಪ್ರಚಾರ ಮಾಡಿದ ಮಹಾನ್ ಸಂಗೀತ ವಿದ್ವಾಂಸರು, ಗಮಕಿಗಳು ಮತ್ತು ಸಾವಿರಾರು ದಾಸರ ಪದಗಳ ಅಪೂರ್ವ ಭಂಡಾರ, ಶ್ರೋತೃಗಳ ಮನ ಮುದಗೊಳಿಸಿದ ಹರಿದಾಸ ಕೀರ್ತನಾ ಶಿರೋಮಣಿಗಳಾಗಿದ್ದರು.


ಸಂಗೀತ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದು 'ಸಂಗೀತ ಆಚಾರ್ಯ'ರೆಂದೇ ಜನಪ್ರಿಯವಾಗಿದ್ದ ಕಟಗೇರಿ ಆಚಾರ್ಯರು ದಾಸರ ಪದ ಗಾಯನದ ಜೊತೆ ಜೊತೆಗೆ ಅವುಗಳ ಅರ್ಥ, ಸಂದಂರ್ಭ, ಔಚಿತ್ಯ, ಪೌರಾಣಿಕ ಮತ್ತು ಪಾರಮಾರ್ಥಿಕ ಹಿನ್ನಲೆ, ಕಥೆ- ಉಪಕಥೆ ಎಲ್ಲವನ್ನೂ ವಿವರಿಸಬಲ್ಲಷ್ಟು ಜ್ಞಾನಭಂಡಾರವಾಗಿದ್ದರು. ಅವರದು ವಿಶಿಷ್ಟವಾದ ಕಂಚಿನ ಕಂಠ, ಸುಶ್ರಾವ್ಯ ಗಾಯನ, ಸ್ವರಗಳ ಮೇಲಿನ ಕರಾರುವಕ್ಕಾದ ಹಿಡಿತ, ಸ್ವರಶುದ್ಧಿ ಮತ್ತು ಭಾವಶುದ್ಧಿಯ ಪಂಡಿತೋತ್ತಮರು, ದಾಸಸಾಹಿತ್ಯದ ಅನನ್ಯ ಪ್ರಚಾರಕರಾಗಿದ್ದರು.


ಕಟಗೇರಿ ದಾಸರು ಹತ್ತೊಂಬತ್ತು ಪ್ರಕಾರಗಳ ದಾಸಸಾಹಿತ್ಯದ ನಾಲ್ಕು ಸಾವಿರಕ್ಕೂ ಅಧಿಕ ದಾಸರ ಪದಗಳ ಅಪರೂಪದ ಭಂಡಾರವಾಗಿದ್ದರು. ಮನೆಮನೆಗೆ ಹೋಗಿ ಮಕ್ಕಳಿಗೆ ದಾಸರ ಪದಗಳನ್ನು ಕಲಿಸಿದ ದಾಸಸಾಹಿತ್ಯವನ್ನು ಸಮೃದ್ಧಗೊಳಿಸಿದ ಮಹಾನುಭಾವರು. ಸಹಸ್ರಾರು ಸಂಗೀತಾಸಕ್ತರಿಗೆ ಸ್ವರಜ್ಞಾನ ಧಾರೆಯೆರೆದ ಮಹಾಗುರುಗಳು, ಅವರ ಅಪಾರ ಶಿಷ್ಯ ಬಳಗದಲ್ಲಿ, ಮೊದಲಪಂಕ್ತಿಯಲ್ಲಿ ಬರುವ ಹೆಸರು ಶ್ರೀಮತಿ ಸಂಗೀತಾ ಕಟ್ಟಿಯವರು ನಾಡಿನ ಹೆಸರಾಂತ ಗಾಯಕಿಯಾಗಿ, ತಮ್ಮ ಗುರುಗಳ ಹೆಸರನ್ನು ಇನ್ನಷ್ಟು ಬೆಳಗಿಸಿದ್ದಾರೆ.


ಶ್ರೀ ಕಟಗೇರಿ ದಾಸರು ತಮ್ಮ ಇಡೀ ಜೀವನವನ್ನು ಹರಿದಾಸ ಸೇವೆಗಾಗಿ ಮೀಸಲಿಟ್ಟು, ಬದುಕಿನ ಸಾರ್ಥಕತೆಯನ್ನು ಕಂಡುಕೊಂಡ ಜ್ಞಾನವೃದ್ಧರಾಗಿದ್ದರು. ನಮ್ಮ ನಾಡಿನ ಪ್ರಮುಖ ಪ್ರಶಸ್ತಿಯಾದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಯೊಂದಿಗೆ ನೂರಾರು ಸನ್ಮಾನ- ಗೌರವಗಳಾಚೆಗೆ ಬಹಳ ಸರಳವಾದ, ನಿರ್ಲಿಪ್ತ ಜೀವನಪ್ರೀತಿ- ನಾದಪ್ರೇಮದಲ್ಲಿ ತಮ್ಮ ಕೊನೆಯ ಉಸಿರಿರುವರೆಗೂ, 97ರ ಇಳಿವಯಸ್ಸಿನಲ್ಲೂ ಶಾರದೆಯ ವಿಶೇಷ ಸೇವೆಯಲ್ಲಿ ತನ್ಮಯತೆಯನ್ನು ಸಾಧಿಸಿದ ವಿರಳಾತಿವಿರಳ ಸಾಧಕರಾಗಿದ್ದರು.


ಆಂಧ್ರಪ್ರದೇಶದ ಚಿಪ್ಪಗಿರಿಯ ವಿಜಯದಾಸರ ಶಿಷ್ಯರಾಗಿದ್ದ ಕಟಗೇರಿ ದಾಸರದು, ವಿಜಯದಾಸರು ಹೆಣೆದ 'ಪದಗಳ', ಸುಳುವಿನ ಹಾದಿ ನೀಡುವ 'ಸುಳಾದಿಗಳ', ಬದುಕಿನಲ್ಲಿ ತಪ್ತವಾದಂತಹ ಸಂದಂರ್ಭದಲ್ಲಿ ಮಾರ್ಗದರ್ಶಿಯಾಗಿ ನೀಡಿದ 'ಉಗಾಭೋಗಗಳ' ಸೂತ್ರಗಳು ಹಾಗೂ ಸ್ವತಃ ತಮ್ಮನ್ನು ವಿಮರ್ಶೆಗೆ ಒಡ್ಡಿಕೊಳ್ಳುವ 'ನಿಂದಾಸ್ತುತಿ'ಗಳಲ್ಲಿ ಎತ್ತಿದ ಕೈಯಾಗಿತ್ತು. ತಮ್ಮ 96 ವರ್ಷಗಳ ತುಂಬು ಜೀವನವನ್ನು ಬಡತನದಲ್ಲಿಯೇ ಕಳೆದರೂ, ದಾಸಸಾಹಿತ್ಯದ ಪ್ರಚಾರ ಕಾರ್ಯದಲ್ಲಿ ಎಂದಿಗೂ ಉತ್ಸಾಹವನ್ನು ಕಳೆದುಕೊಳ್ಳದ ಆಧುನಿಕ ದಾಸಶ್ರೇಷ್ಠರಾಗಿದ್ದರು.


ದಾಸಸಾಹಿತ್ಯದಲ್ಲಿ ವಿಶೇಷ ಆಸಕ್ತಿಯಿಂದ ಅಧ್ಯಯನ ಮಾಡುತ್ತಿರುವ ನನಗೆ ಹುಬ್ಬಳ್ಳಿಯ 'ಸಂಯುತಾ ಪ್ರತಿಷ್ಠಾನ'ದ ವತಿಯಿಂದ ಶ್ರೀ ಕಟಗೇರಿದಾಸರಿಗೆ ' ಸಂಯುತಾ ಪುರಂದರ ಪ್ರಶಸ್ತಿ'ಯಿಂದ ಸನ್ಮಾನ ಮಾಡುವ ಸಂದಂರ್ಭದಲ್ಲಿ, ಅವರನ್ನು ಅತ್ಯಂತ ಹತ್ತಿರದಿಂದ ನೋಡುವ ಅವಕಾಶ ಒದಗಿ ಬಂದಿತ್ತು. ಅಂದು ದಾಸರು ಮತ್ತು ಅವರ ಧರ್ಮಪತ್ನಿಯವರೊಂದಿಗೆ ಕೆಲಸಮಯ ಕಳೆದಾಗ ಪುರಂದರದಾಸರ, ವಿಜಯದಾಸರ ಜೀವನಕಥೆಯನ್ನು ತಿಳಿದ ನಮಗೆ ದಾಸರೆಂದರೆ ಹೇಗಿರಬಹುದು ಎಂಬುದಕ್ಕೆ ಪ್ರತ್ಯಕ್ಷದರ್ಶನವಾಗಿ ಧನ್ಯತಾಭಾವ, ಇಂದು ಅವರಿಬ್ಬರನ್ನೂ ಕಳೆದುಕೊಂಡ ಅನಾಥಭಾವ ಕಾಡುತ್ತಿದೆ.ನಾಡಿನ ದಾಸಸಾಹಿತ್ಯದ ಹಿರಿಯ ಕೊಂಡಿಯೊಂದು ಕಳಚಿ ದೊಡ್ಡ ಶೂನ್ಯತೆಯನ್ನು ಉಂಟುಮಾಡಿದ್ದರೂ, ಅವರ ಜೀವನ, ಅಸಾಮಾನ್ಯ ಸಾಧನೆ ನಮಗೆಲ್ಲ ಮಾರ್ಗದರ್ಶನ ನೀಡುತ್ತದೆ. ದೇಹದಿಂದ ನಮ್ಮಿಂದ ದೂರವಾದರೂ ತಮ್ಮ ಸಾಧನೆಯ ಮೂಲಕ ಅಜರಾಮರರಾದ, ತಮ್ಮ ಇಡೀ ಬದುಕನ್ನು ಸಂಗೀತಕ್ಕಾಗಿ ಮತ್ತು ಹರಿದಾಸ ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದ ದಿವ್ಯ ಚೇತನಕ್ಕೆ ಈ  ಮೂಲಕ ನುಡಿನಮನಗಳನ್ನು ಸಲ್ಲಿಸುತ್ತಿದ್ದೇವೆ.


- ಶ್ರೀಮತಿ ವೀಣಾ ಬರಗಿ ಹುಬ್ಬಳ್ಳಿ 

 (ಅಭಾಸಾಪ ದ ಧಾರವಾಡ ಘಟಕದ 'ದಾಸಸಾಹಿತ್ಯ' ಪ್ರಾಕಾರ ಪ್ರಮುಖರು)



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top