ಸಮಾಜದ ಉನ್ನತಿಗೆ ಗುರುಪರಂಪರೆಯ ಆಶೀರ್ವಾದ ಅಗತ್ಯ

Upayuktha
0



ಗೋಕರ್ಣ: ಗುರು ಪರಂಪರೆಯ ಆಶೀರ್ವಾದ ಸಮಾಜದ ಉನ್ನತಿಗೆ ಅಗತ್ಯ; ಶಂಕರಾಚಾರ್ಯರ ಆದಿಯಾಗಿ ಎಲ್ಲ ಗುರುಗಳ ಕೃಪೆಯಿಂದ ಸಮಾಜ ಪಾಪಮುಕ್ತವಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹಾರೈಸಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 57ನೇ ದಿನವಾದ ಗುರುವಾರ ಮುಂಬೈನ ರಮಣ ಭಟ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.


ಗುರುಪರಂಪರೆಯ ಪ್ರೀತ್ಯರ್ಥವಾಗಿ ಎಂಟು ಗುರುವಾರಗಳಂದು ಲಕ್ಷ ತುಳಸಿ ಅರ್ಚನೆ ನಡೆದಿದೆ. ಸದುದ್ದೇಶಕ್ಕೆ ತುಳಸಿ ಕುಡಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದಂತೆ ಸಂಘಟನೆಗಾಗಿ ಲಕ್ಷ ಲಕ್ಷ ಮನಸ್ಸುಗಳು ಒಗ್ಗೂಡಲಿ ಎಂದು ಆಶಿಸಿದರು.


ಚಾತುರ್ಮಾಸ್ಯದ ಪ್ರತಿ ಗುರುವಾರ ಶ್ರೀಮಠಕ್ಕೆ ಭಕ್ತರ ಪ್ರವಾಹ, ಭಕ್ತಿ ಸುಧೆ, ರಾಶಿ ರಾಶಿ ತುಳಸಿ ಹರಿದು ಬಂದಿದೆ. ನಾವು ಉತ್ತಮರಾದರೆ ಸಾಲದು; ಸತ್ಕಾರ್ಯಕ್ಕೆ ಅದು ಒದಗಿ ಬರಬೇಕು. ಅಂತೆಯೇ ತುಳಸಿಯೂ ಎಷ್ಟೇ ಪವಿತ್ರವಾದರೂ, ಗುರುಸಾನ್ನಿಧ್ಯಕ್ಕೆ ಅರ್ಪಣೆಯಾಗಲು ಅದಕ್ಕೆ ಯೋಗಬೇಕು. ನಾರಾಯಣಸ್ವರೂಪ ಗುರುವಿಗೆ ಎಂಟು  ಗುರುವಾರಗಳಂದು ವಿಷ್ಣು ಸಹಸ್ರನಾಮದಿಂದ ಲಕ್ಷ ಅರ್ಚನೆ ನಡೆದಿದೆ. ಇದು ಅಪರೂಪದ, ಸಂಕಲ್ಪ ಸಿದ್ಧಿಯ ಕ್ಷಣ ಎಂದು ಬಣ್ಣಿಸಿದರು.


ಯಾವೆಲ್ಲ ಗುರುಗಳು ಸಮಾಜಕ್ಕಾಗಿ ಈ ನೆಲದಲ್ಲಿ ತಪಸ್ಸು ಮಾಡಿ ಸಮಾಜವನ್ನು ಆಶೀರ್ವದಿಸಿದ್ದಾರೆಯೋ, ಅವಿಚ್ಛಿನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಎಲ್ಲ ಗುರುಗಳು ಇಡೀ ಸಮಾಜವನ್ನು ಹರಸಲಿ. ಇಡೀ ಸಮಾಜ ಪಾಪಮುಕ್ತ, ಶಾಪಮುಕ್ತವಾಗಲಿ ಎಂದು ಹಾರೈಸಿದರು.


ಸ್ವಭಾಷಾ ಅಭಿಯಾನದ ಅಂಗವಾಗಿ ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನದಲ್ಲಿ ಲ್ಯಾಪ್‍ಟಾಪ್ ಪದ ಕೈಬಿಡುವಂತೆ ಸಲಹೆ ಮಾಡಿದರು. ಲ್ಯಾಪ್‍ಟಾಪ್ ಎನ್ನುವುದು ಆಂಗ್ಲರ ಎಂಜಲು. ಕೃತಕ ಬುದ್ಧಿಮತ್ತೆ ಕೂಡಾ ಇದಕ್ಕೆ ಸೂಕ್ತ ಕನ್ನಡ ಪದ ನೀಡುವುದಿಲ್ಲ. ಕನ್ನಡದಲ್ಲಿ ಅಂಕ ಗಣಕ ಎಂಬ ಪದ ಬಳಸಬಹುದು ಎಂದರು. ಸಂಸ್ಕೃತದಲ್ಲಿ ಅಂಕ ಎನ್ನುವುದಕ್ಕೆ ಮಡಿಲು ಎಂಬ ಅರ್ಥ. ಮಡಿಲ ಗಣಕ, ಚರ ಗಣಕದಂಥ ಸುಲಭವಾಗಿ ಬಳಸಬಹುದು ಎಂದರು.


ಪರಾವಲಂಬನೆ ಸಮಸ್ಯೆಗೆ ಮೂಲ. ಇದು ಭಾಷೆಯ ವಿಷಯದಲ್ಲೂ ಅನ್ವಯವಾಗುತ್ತದೆ. ಪಾಶ್ಚಾತ್ಯರು ನಮ್ಮ ಸಂಸ್ಕೃತಿ ಪಸರಿಸಲು ಬರಲಿ; ಅವರ ವಿಕೃತಿ ಬಿಡುವ ಸಲುವಾಗಿ ಬಾರದಿರಲಿ. ಭಾಷಾ ಶುದ್ಧಿಯ ಪಣತೊಡೋಣ ಎಂದು ಹೇಳಿದರು.


ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು. 121ಕ್ಕೂ ಹೆಚ್ಚು ದಂಪತಿಗಳಿಂದ ಗುರು ಪರಂಪರಾ ಪ್ರೀತ್ಯರ್ಥವಾಗಿ ಲಕ್ಷ ತುಳಸಿ ಅರ್ಚನೆ ಮತ್ತು 110 ಭಕ್ಷ್ಯಗಳ ನೈವೇದ್ಯ ನೆರವೇರಿತು.


ಶಾಸನತಂತ್ರ ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಮಹಾಮಂಡಲ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿವಿಧ ಮಂಡಲಗಳ ಅಧ್ಯಕ್ಷರಾದ ಎಸ್.ವಿ.ಹೆಗಡೆ ಭದ್ರನ್, ಅರವಿಂದ ಧರ್ಬೆ, ಪರಮೇಶ್ವರ ನಾರಾಯಣ ಭಟ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ ಭಟ್ಟ, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣಗದ್ದೆ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ನಾಮಧಾರಿ ಸಮಾಜದವರಿಂದ ಸುವರ್ಣ ಪಾದುಕಾಪೂಜೆ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top