ಆಗ ಫೋನ್ ರಿಂಗಾಯಿತು. ಅಪರಿಚಿತ ನಂ. ಅದು ಗಂಗಾಧರನ ಡ್ರೈವರ್ ನದ್ದಾಗಿತ್ತು. ಕಣ್ಣೆದುರು ಬಿಳಿ ಬಿಎಂಡಬ್ಲು ಕಾರು ನಿಂತಿತ್ತು. ಡ್ರೈವರ್ ಯಜ್ಞನಿಗೆ ಕಾರು ಡೋರು ತೆಗೆದು ರಾಷ್ಟ್ರಪತಿಗಳಿಗೆ ಸೆಲ್ಯುಟ್ ಹೊಡೆದಂತೆ ಸೆಲ್ಯುಟ್ ಹೊಡೆದು "ಆಯಿಯೇ ಸಾಬ್, ಆರಾಮ್ ಸೆ ಬೈಠಿಯೇ..." ಅಂದಾಗ ಅಚ್ಚರಿಯಾಯಿತು.
ಜೀವಮಾನದಲ್ಲಿ ಇಷ್ಟು ಐಷಾರಾಮಿ ಕಾರಿನಲ್ಲಿ ಯಜ್ಞ ಕೂತಿರಲಿಲ್ಲ. ಅರವತ್ತು ಎಪ್ಪತ್ತು ಲಕ್ಷದ ಕಾರನ್ನ ಇಂತಹ ಬಡ ಮಧ್ಯಮ ವರ್ಗದ ಜನರು ಕಣ್ಣೆತ್ತಿಯೂ ನೋಡರು. ಗಗನಕುಸುಮ ಕೈಗೆ ಸಿಗುವುದೇ?!
ಯಜ್ಞ ಕಾರಲ್ಲಿ ಕೂತವನು ತನ್ನ ಯಜಮಾನ ಅಡಿಗೆ ಕಂಟ್ರಾಕ್ಟರ್ ಗುರು ಭಟ್ಟರ "ಶೃಂಗೇರಿ ಭಾರತೀ ಕೇಟರರ್ಸ್"ನ ಪಿಕ್ ಅಪ್ ವ್ಯಾನ್‌ನಲ್ಲಿ ಅಡಿಗೆ ಮಾಡಲು ಪಾರ್ಟಿ ಮನೆಗೆ ಹೋಗುವ ಸಂದರ್ಭವನ್ನು ನೆನಪು ಮಾಡಿಕೊಂಡ. ದಿನಸಿ ಸಾಮಾನು, ಪಾತ್ರ ಪಡಗ, ಗ್ಯಾಸ್ ಸ್ಟೌಗಳ ನಡುವೆ ಚೀಲದ ಮೇಲೆ ಒಂದು ಮೂಟೆಯಂತೆ ಯಜ್ಞ ಸಂಗಡಿಗರೊಂದಿಗೆ ಕೂತು ಹೋಗಿದ್ದು ಜ್ಞಾಪಕ ಮಾಡಿಕೊಂಡ.
ಗುರು ಭಟ್ಟರು ಯಜ್ಞನ ನಿಯತ್ತಿಗೆ ಖುಷಿಗೊಂಡು ಕಮ್ಮಿ ರೇಟಿಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕ್ಯೂಟಿಯನ್ನು ಯಜ್ಞನಿಗೆ ಕೊಡಿಸಿದ್ದರು. ಅದೇ ಯಜ್ಞನ ಕುಟುಂಬದ ಪಾಲಿನ ಐಷಾರಾಮಿ ಬೆಂಜು ಬಿಎಂ ಡಬ್ಲು.
ಬೆಂಗಳೂರಿನ ಟ್ರಾಫಿಕ್ ಚಕ್ರವ್ಯೂಹ ದಾಟಿ ಸುಮಾರು ಒಂದೂವರೆ ಗಂಟೆ ಪಯಣದ ನಂತರ ದೊಡ್ಡ ಐಷಾರಾಮಿ ಪ್ಲಾಟ್‌ನ ಅಂಡರ್ ಗ್ರೌಂಡ್ ಪಾರ್ಕಿಂಗ್ ಗೆ ಕಾರು ಬಂದು ತಲುಪಿತು. ಮತ್ತೆ ಐದು ನಿಮಿಷಗಳಲ್ಲಿ ಕಾರ್ ಡ್ರೈವರ್ ಗಂಗಾಧರನ ಮನೆ ಎದುರು ಯಜ್ಞನಾರಾಯಣನನ್ನು ತಂದು ಬಿಟ್ಟಿದ್ದ.
ನಾಲ್ಕೂವರೆ ದಶಕಗಳ ನಂತರ ಬಾಲ್ಯ ಗೆಳೆಯನ ಭೇಟಿ. ಯಜ್ಞನ ಮನದಲ್ಲಿ ಸಂತೋಷದ ಜೊತೆಗೆ ಒಂದು ಬಗೆಯಲ್ಲಿ ಆತಂಕ ಭಯ. ಈಗ ಕಾಲ ಬದಲಾವಣೆ ಆಗಿದೆ. ಹಸಿವಿನ ಕಂಗಳಿಂದ ಏನಾದರೂ ತಿನ್ನಲು ಕೊಡ್ತಾರ ಎಂದು ನೋಡುತ್ತಿದ್ದ ಗಂಗಾಧರ ಊಹಿಸಲು ಸಾದ್ಯವಿಲ್ಲದಷ್ಟು ಶ್ರೀಮಂತ ನಾಗಿದ್ದಾನೆ. ತಾನು ದಟ್ಟ ದರಿದ್ರ...! ಯಜ್ಞ ಆ ವೈಭೋಗಕ್ಕೆ ಅಳುಕಿದ.
ಗಂಗಾಧರನ ಮನೆ ಬಾಗಿಲ ಬುಡದಲ್ಲಿ ಉಂಗುಷ್ಟಕ್ಕೆ ನಾಲ್ಕು ನಾಲ್ಕು ಹೊಲಿಗೆ ಹಾಕಿದ ವಿಕೆಸಿ ಪ್ರೈಡ್ ಚಪ್ಪಲಿ ಬದಿಗಿಟ್ಟ. ಮಂದ ಬಣ್ಣದ ಪಂಚೆ ಉಟ್ಟ, ಯಾವುದೋ ಓಬಿರಾಯನ ಕಾಲದ ಚೌಕಳಿ ಚೌಕಳಿ ಫುಲ್ ಕೈ ತೋಳಿನ ಅಂಗಿ. ಹೆಗಲಲ್ಲಿ ಒಂದು ಮಾಸಿದ ಬಟ್ಟೆ ಚೀಲ! ಒಬ್ಬ ಬಡವ ಎಂದು ಸಲೀಸಾಗಿ ಗುರುತಾಗುವಂತಹ ಬಟ್ಟೆ ಬರೆ ನಿಲುವು.
ನಿಧಾನವಾಗಿ ಬಾಗಿಲು ತೆರದ ಗಂಗಾಧರ. ಬಾಲ್ಯ ಗೆಳೆಯ ಯಜ್ಞನಾರಾಯಣನ ನೋಡಿದ ತಕ್ಷಣ ಜೋರಾಗಿ ತಬ್ಬಿಕೊಂಡ. ಇಬ್ಬರೂ ಸ್ನೇಹಿತರ ಕಣ್ಣಿನಲ್ಲೂ ಧಾರಾಕಾರವಾಗಿ ಕಣ್ಣೀರು...!
ಗೆಳೆಯ ಗಂಗಾಧರ ತನ್ನ ಐಷಾರಾಮಿ ವಿಲ್ಲಾದ ದೊಡ್ಡ ಸಿಂಹಾಸನದ ನಮೂನೆಯ ಸೋಫಾದ ಮೇಲೆ ಒಂದು ಬಗೆಯಲ್ಲಿ ಒತ್ತಾಯದಿಂದಲೇ ಯಜ್ಞ ನನ್ನು ಕೂರಿಸಿದ. ಯಜ್ಞನಿಗೆ ಗೆಳೆಯನ ಶ್ರೀಮಂತಿಗೆ ಐಷಾರಾಮ ಐಭೋಗ ಮೊದಲೇ ಗೊತ್ತಿದ್ದರೆ ಖಂಡಿತವಾಗಿಯೂ ಇಲ್ಲಿಗೆ ಬರುತ್ತಿರಲಿಲ್ಲ. ಯಜ್ಞನಾರಾಯಣನಂತಹ ಬಡವ ಹತ್ತಿರ ಹೋಗಿ ಮುಟ್ಟಲಾರದ ಶ್ರೀಮಂತಿಕೆ ಅದು.
ಕಥೆ: ಬಂದೇ ಬರುತೈತೆ ಒಳ್ಳೆಯ ದಿನ.... (ಭಾಗ-1)
ಆ ಐಭೋಗದ ಲಕ್ಷಾಂತರ ಬೆಲೆ ಬಾಳುವ ಸೋಫಾದ ಮೇಲೆ ಒಂದು ಬಗೆಯಲ್ಲಿ ಮುದ್ದೆ ಮಾಡಿಕೊಂಡು ನಾಚಿಕೆಯಿಂದ ಕೂತ..! ಗಂಗಾಧರ ಯಜ್ಞ ನ ಉಭಯ ಕುಶಲೋಪರಿ ಅಮ್ಮ ಅಪ್ಪ ಮಕ್ಕಳು ಸಂಸಾರದ ಬಗ್ಗೆ ವಿಚಾರಿಸಿದ. ಹಾಗೆಯೇ ಯಜ್ಞನೂ ಗಂಗಾಧರನ ಬಗ್ಗೆ ತಿಳಿದುಕೊಂಡ. ಗಂಗಾಧರ "ಯಜ್ಞ ನೀನು ಮನೆಯಿಂದ ನಂಗೇನು ತಂದಿದ್ದಿ...?" ಎಂದು ಕೇಳಿದ.
ಇಷ್ಟು ಆಗರ್ಭ ಶ್ರೀಮಂತನಿಗೆ ತಾನು ಮನೆಯಿಂದ ತಂದ ಕೋಡಬಳೆ ಕೊಡಲು ಹೇಗೆ ಸಾಧ್ಯ...? ಯಜ್ಞ ಒಂಥರ ಮಕ ಸಣ್ಣ ಮಾಡಿದ. ಗಂಗಾಧರನೇ ಯಜ್ಞನ ಚೀಲದಲ್ಲಿ ಕೈ ಹಾಕಲು ಪ್ರಯತ್ನ ಮಾಡಿದ. ಕೋಟ್ಯಾಧೀಶ ಗಂಗಾಧರ ಬಡ ಗೆಳೆಯ ಯಜ್ಞನ ಚೀಲದಲ್ಲಿ ತನಗೆ ಏನೂ ತಂದಿದ್ದಾನೆಂದು ಹುಡುಕುವ ವಿಶೇಷ ಘಟನೆಯದು. ಯಜ್ಞ ನ ಚೀಲವನ್ನು ಗಂಗಾಧರ ಒಂದು ಬಗೆಯಲ್ಲಿ ಕಸಿದೇ ಬಿಟ್ಟ. ಚೀಲ ಓಪನ್ ಮಾಡಿ ಯಜ್ಞನ ಅಮ್ಮ ಗಂಗಾಧರನಿಗೆಂದು ಮಾಡಿಕೊಟ್ಟ ಕೋಡಬಳೆ ಪ್ಯಾಕೇಟ್ ಮತ್ತು ಯಜಲುಕೊಡಿಗೆಯ ಓಣಿ ಮಾವಿನ ಮರದ "ದಿಂಡಿನ ಕಾಯಿ ರಸ"ದ ಚಿಕ್ಕ ಬಾಟಲ್ ತೆಗೆದ.
ಮಲೆನಾಡಿನಲ್ಲಿ ದಿಂಡಿನ ಮಾವಿನ ಹುಳಿ ಮಾವಿನ ಗೊಜ್ಜು ಅದ್ಭುತ ರುಚಿ. ಮಲೆನಾಡಿನಲ್ಲಿ ಹಿಂದಿಲ್ಲಾ ಪೇಟೆಯಿಂದ ತರಕಾರಿ ತರದಿರುವ ಕಾಲದಲ್ಲಿ ಬೇಸಿಗೆಯಲ್ಲಿ ಮಾವಿನ ಹುಳಿ ಹಿಂಡಿಟ್ಟುಕೊಂಡ ದಿಂಡಿನ ರಸದಲ್ಲಿ ಅದ್ಭುತ ರುಚಿಕರ ಗೊಜ್ಜು ಮಾಡುತ್ತಿದ್ದರು. ಆ ಕಾಲದಲ್ಲಿ ಈ ದಿಂಡಿನಕಾಯಿ ಗೊಜ್ಜು ಗಂಗಾಧರನ ಫೇವರೇಟಾಗಿತ್ತು. ಇದು ಗೊತ್ತಿದ್ದ ಯಜ್ಞನ ಅಮ್ಮ ಗಂಗಾಧರನಿಗಾಗಿ ಒಂದು ಚಿಕ್ಕ ಬಾಟಲ್ ದಿಂಡಿನ ರಸವನ್ನೂ ಕೋಡಬಳೆ ಪ್ಯಾಕೆಟ್ ಜೊತೆಗೆ ಕಳಿಸಿದ್ದರು.
ಈ ದಿಂಡಿನ ರಸ ನೋಡಿ ಗಂಗಾಧರ ಕುಣಿದಾಡಿ ಬಿಟ್ಟ...!! ಕೋಡುಬಳೆ ಪ್ಯಾಕೇಟ್ ಓಪನ್ ಮಾಡಿ ನಿಧಾನವಾಗಿ ಒಂದೊಂದೇ ಕೋಡಬಳೆಯನ್ನು ಶಬ್ಧ ಮಾಡುತ್ತಾ ಆಸ್ವಾದಿಸುತ್ತಾ ತಿನ್ನತೊಡಗಿದ ಗಂಗಾಧರ. ಈ ತಿನ್ನುವ ಪರಿ ನೋಡಿ ಯಜ್ಞನಿಗೆ ಬಾಲ್ಯದ ಹಸಿವಿನ ಗಂಗಾಧರ ಜ್ಞಾಪಕವಾದ. ಗಂಗಾಧರ ತನ್ನ ಅಡಿಗೆ ಭಟ್ಟರ ಕರೆದು ದಿಂಡಿನ ಗೊಜ್ಜು ಮಾಡಿ ಎಂದ. ಗಂಗಾಧರನ ಅಡಿಗೆ ಭಟ್ಟರು ಮಲೆನಾಡು ಮೂಲದವರು. ಅಡಿಗೆ ಭಟ್ಟರು ಅದ್ಭುತ ವಾಗಿ ದಿಂಡಿನ ಕಾಯಿ ಗೊಜ್ಜು ಮಾಡಿದರು.
ಸ್ವತಃ ಗಂಗಾಧರನೇ ಡೈನಿಂಗ್ ಟೇಬಲ್ ಮುಂದೆ ಯಜ್ಞನ ಕೂರಿಸಿ ಯಜ್ಞನಿಗೆ ಸುಗ್ರಾಸ ಭೋಜನ ಮಾಡಿಸಿದ. ಕೇವಲ ಎರಡು ಗಂಟೆ ಮೊದಲು ಊಟಕ್ಕೆ ದುಡ್ಡಿಲ್ಲ...!! ಊಟಕ್ಕೆ ಏನು ಮಾಡೋದು...?? ಎಂಬ ಚಿಂತೆಯಲ್ಲಿದ್ದ ಯಜ್ಞನಿಗೆ ಭಗವಂತ ಭೂರಿ ಭೋಜನ ಮಾಡಿಸಿದ. ಇದಕ್ಕೆ ಅನ್ನದ ಋಣ ಎನ್ನೋದು.
ಊಟ ಮುಗಿದ ಮೇಲೆ ಗಂಗಾಧರ ಯಜ್ಞನನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯ ಮಲಗಿ ರೆಸ್ಟ್ ಮಾಡಲು ವಿನಂತಿಸಿದ. ಮಲಗೆದ್ದ ಮೇಲೆ ಯಜ್ಞನಿಗೆ ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆಂದ.
ವಿಶಾಲವಾದ ಹವಾನಿಯಂತ್ರಿತ ಕೊಠಡಿಯದು. ಮೆತ್ತನೆಯ ಹಂಸತೂಲಿಕ ಹಾಸಿಗೆಯ ಮೇಲೆ ಯಜ್ಞ ಮಲಗಿದ. ತನ್ನ ಪರಿಸ್ಥಿತಿ ಯನ್ನು ಮತ್ತೆ ಮತ್ತೆ ಗಂಗಾಧರ ನ ಶ್ರೀಮಂತಿಗೆಯ ಜೊತೆಗೆ ಹೋಲಿಕೆ ಮಾಡಿಕೊಂಡ. ಒಂದೊಂದು ದಿನ ತನ್ನ ಮನೆಯಲ್ಲಿ ಅರ್ಧ ಲೀಟರ್ ಹಾಲು ತರಲು ಮೂವತ್ತು ರೂಪಾಯಿ ಒಟ್ಟು ಮಾಡುವಾಗ ಸಾಕುಬೇಕಾಗುತ್ತದೆ.
ಕೃಷಿ ಜೀವನ ಅಡಿಕೆ ಹಳದಿಎಲೆ ರೋಗ ಬಂದ ಮೇಲೆ ಯಜ್ಞನ ಜೀವನ ಅಯೋಮಯವಾಯಿತು. ಬದುಕು ಭವಿಷ್ಯದ ಗ್ರಾಫ್ ಕೆಳಕ್ಕೆ ಮುಗ್ಗರಿಸಿತು. ಪದವಿ ಮುಗಿಸಿದ ಮೇಲೆ ತಣ್ಣಗೆ ಕೃಷಿ ಜೀವನ ಮಾಡಿಕೊಂಡು ತೃಪ್ತ ಬದುಕು ಬಾಳುವ ಆಸೆಗೆ ಅನಿರೀಕ್ಷಿತ ಅಡಿಕೆ ಹಳದಿಎಲೆ ರೋಗ ತಣ್ಣೀರೆರೆಚಿತ್ತು.
ಕ್ವಿಂಟಾಲ್ ಗಟ್ಟಲೆ ಅಡಿಕೆ ಆಗುತ್ತಿದ್ದದ್ದು ಈಗ ಕೆಜಿ ಗೆ ಬಂದಿದೆ. ಈಗ ಉಳಿದಿದ್ದು ದೊಡ್ಡ ಮನೆ ದೊಡ್ಡ ಅಂಗಳ. ಉತ್ಪತ್ತಿ ಲೆಕ್ಕವಿಲ್ಲದ ಖಾಲಿ ಡೈರಿ!
ಬದುಕಿಗಾಗಿ ದೊಡ್ಡ ಜಮೀನ್ದಾರ ಅಡಿಗೆ ವೃತ್ತಿ ಮಾಡಬೇಕಿದೆ. ಯಜ್ಞನಿಗೆ ಆ ಬಗ್ಗೆ ಕೀಳಿರಿಮೆಯೇನಿಲ್ಲ. ಆದರೆ ತನ್ನ ಬಡತನ ಅಭದ್ರತೆಗೆ ಎಂದು ಕೊನೆ ಎಂದು ಚಿಂತಿಸಿದ. ಅಮ್ಮನಿಗೊಂದು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳಿಗೊಂದು ಉತ್ತಮ ಭವಿಷ್ಯ ಕಲ್ಪಿಸಬೇಕು. ಒಂದೊಂದು ಸರ್ತಿ ಯೋಚನೆ ಮಾಡಿದಾಗ ಯಜ್ಞನಿಗೆ ತನ್ನ ಬದುಕಿನ್ನೂ ಯಾವತ್ತೂ ಬದಲಾವಣೆ ಆಗವುದೇ ಇಲ್ಲವೆಂದು ಯೋಚಿಸಿದ.
ಈಗೊಂದು ಹತ್ತು ವರ್ಷಗಳ ಹಿಂದೆ ಒಬ್ಬ ಐನೋರ ಸಂನ್ಯಾಸಿಯೊಬ್ಬ ಊರ ಮೇಲೆ ಬಂದಿದ್ದ. ಯಜಲಕೊಡಿಗೆಯಲ್ಲಿ ದಾರಿ ತಪ್ಪಿ ಯಾರದ್ದೋ ಮನೆಯ ಹಿಂದುಗಡೆ ಹೋದಾಗ ಆ ಮನೆಯ ಹೆಂಗಸರು ಗಾಬರಿಯಾಗಿ ಕೂಗಿದಾಗ ಅಕ್ಕಪಕ್ಕದ ಮನೆಯವರೆಲ್ಲ ಆ ಐನೋರ ಸಂನ್ಯಾಸಿಯನ್ನು ಹಿಡಿದು ಹೊಡೆದು ಮರಕ್ಕೆ ಕಟ್ಟಿದ್ದಾಗ ಯಜ್ಞ ಅಲ್ಲಿಗೆ ಧಾವಿಸಿ ವಿಚಾರ ಮಾಡಿ ಆ ಐನೋರನ್ನ ಬಿಡಿಸಿಕೊಂಡು ತನ್ನ ಮನೆಗೆ ತಂದು ಎರಡು ದಿನ ಆ ಐನೋರನ್ನ ಶುಶ್ರೂಷೆ ಮಾಡಿದ್ದ. ಆ ಐನೋರ ಸಂನ್ಯಾಸಿ ಯಜ್ಞನ ಮನೆಯಿಂದ ಮರಳುವಾಗ ಒಂದು ರುದ್ರಾಕ್ಷಿ ಬೀಜ ಕೊಟ್ಟು ನಿನ್ನ ಬದುಕಿನಲ್ಲಿ ಇನ್ನೊಂದು ದಶಕದ ನಂತರ ನೀನು ಎಂದೂ ನಿರೀಕ್ಷೆ ಮಾಡದ ಒಳ್ಳೆಯ ಶ್ರೀಮಂತಿಕೆ ಅನುಕೂಲ ತಾನಾಗೇ ನಿನ್ನ ಹುಡುಕಿಕೊಂಡು ಒಲಿದು ಬರುತ್ತದೆ. ಆ ಶಿವನಲ್ಲಿ ನಂಬಿಕೆ ಇರಲಿ. ನನ್ನ ನಾಲಿಗೆಯಲ್ಲಿ ಮಚ್ಚೆ ಇದೆ. ನಾನು ಇದೂವರೆಗೂ ನುಡಿದದ್ದು ಯಾವತ್ತೂ ಸುಳ್ಳಾಗಿಲ್ಲ. ತಾಳ್ಮೆ ಯಿಂದ ಶಿವನ ಆರಾಧಿಸು. ಬಂದೇ ಬರುತೈತೆ ಒಳ್ಳೆಯ ಕಾಲ. ನಿನಗೆ ಬಂದೇ ಬರುತೈತೆ ಒಳ್ಳೆಯ ಕಾಲ..." ಎಂದು ಆಶಿರ್ವದಿಸಿ ಹೋಗಿದ್ದ.
ಯಾಕೋ ಆ ಸಂನ್ಯಾಸಿ ಯೂ ಜ್ಞಾಪಕ ಆದ. ಏನೇ ಪ್ರಯತ್ನ ಮಾಡಿದರೂ ತನಗೆ ಆವತ್ತಿನವತ್ತು ಕಳೆಯೋದು ಕಷ್ಟ. ಇನ್ನು ಶ್ರೀಮಂತಿಕೆ ಎಲ್ಲಿಂದ ಬರುತ್ತದೆ..? ಅಡಿಗೆ ಕೃಷ್ಣಣ್ಣನ ಬಳಿ ಯಾವತ್ತೋ ಹೀಗೆ ಈ ಐನೋರ ಜ್ಯೋತಿಷ್ಯದ ಬಗ್ಗೆ ಹೇಳಿದಾಗ ಅವರು ನಕ್ಕು "ಅಯ್ಯೋ ಯಜ್ಞ ನೀ ಇದನ್ನೆಲ್ಲಾ ನಂಬ್ತಿಯಾ..? ದಿಡೀರಾಗಿ ಶ್ರೀಮಂತಿಗೆ ಬರೋದು ಹ್ಯಾಗೋ..? ಲಾಟರಿ ಟಿಕೆಟ್ ತಗೋ..?" ಎಂದಿದ್ದರು. ಎಲ್ಲಾ ಯಾಕೋ ಮನಸಿನ ಮೂಲೆಗೆ ಆ ಘಟನೆ ನೆನಪಿಗೆ ಬಂತು.
ನಿಧಾನವಾಗಿ ನಿದ್ರೆ ಬಂತು. ಸುಖದ ಸುಪ್ಪತ್ತಿಗೆಯ ಮೇಲೆ ಮಲಗಿದ್ದಕ್ಕೆ ಗಾಢವಾದ ನಿದ್ರೆ ಮಾಡಿದ ಯಜ್ಞ. ಎದ್ದು ನೋಡಿದಾಗ ಆರು ಗಂಟೆಯಾಗಿತ್ತು. ತಕ್ಷಣ ಮನೆ ಅಮ್ಮ ಹೆಂಡತಿ ಮಕ್ಕಳು ಎಲ್ಲಾ ಜ್ಞಾಪಕವಾಗಿ ಎದ್ದು ಕೂತ. ಮೂತ್ರ ಬಂದಂತಾಗಿ ಅಟ್ಯಾಚಡ್ ಬಾತ್ ರೂಮ್ ಗೆ ಒಳ ಹೊಕ್ಕ. ಆ ಐಷಾರಾಮಿ ಆಧುನಿಕ ಕಮೋಡ್ ನೋಡಿದರೆ ಮೂತ್ರ ಮಾಡಲೇ ಮನಸು ಬಾರದಾಯಿತು ಯಜ್ಞನಿಗೆ. ಆದರೂ ಅಲ್ಲಿ ಮೂತ್ರ ಮಾಡಿ ಕೈ ಕಾಲು ತೊಳದು ಕೋಣೆಯಿಂದ ಹೊರ ಬಂದಾಗ ಗಂಗಾಧರ ಒಂದು ಫೈಲು ಒಂದಷ್ಟು ಕೀ ಹಿಡಿದುಕೊಂಡು ಯಜ್ಞನ ಕಾಯುತ್ತಿದ್ದ.
ಗಂಗಾಧರ ಯಜ್ಞನಿಗೆ ಬಿಸಿ ಬಿಸಿ ಕಾಫಿ, ಒಂದಷ್ಟು ಸ್ನ್ಯಾಕ್ಸ್ ನೀಡಿ ಉಪಚರಿಸಿದ. ಗಂಗಾಧರ ಮಾತು ಶುರುಮಾಡಿದ. "ಯಜ್ಞ... ನಿನ್ನಿಂದ ನನಗೆ ಒಂದು ಉಪಕಾರ ಆಗಬೇಕಿದೆ..." ಎಂದ. ಯಜ್ಞನಿಗೆ ತನ್ನಿಂದ ಉಪಕಾರ ನಿರೀಕ್ಷೆ ಮಾಡುತ್ತಿರುವ ಕೋಟ್ಯಾಧೀಶ ಗೆಳೆಯನ ಬಗ್ಗೆ ದಿಗಿಲಾಯಿತು..!!
ಗಂಗಾಧರ ಮುಂದುವರಿದು- ''ಯಜ್ಞ... ನನ್ನ ಅಪ್ಪ ಸತ್ತ ಕೆಲ ದಿನ ನಾನು ನಿಮ್ಮ ಮನೇಲಿ ಇದ್ದೆ. ಅದೊಂದು ದಿನ ಅಜ್ಜಿ ನಿಮ್ಮ ಮನೆಗೆ ಬಂದು ಊರಿಗೆ ಕರೆದುಕೊಂಡು ಹೋದರು. ಅಪ್ಪ ಸತ್ತ ಮೇಲೆ ಅನಾಥನಾಗಿದ್ದ ನನಗೆ ನಿಮ್ಮ ಅಮ್ಮ ಅಪ್ಪನೇ ಭವಿಷ್ಯದ ಆಧಾರವಾಗಿದ್ದರು. ನನ್ನ ಅಮ್ಮ ಅದಾವ ಋಣಕ್ಕೆ ನಿಮ್ಮ ಮನೆಗೆ ಆ ದಿವಸ ಬಂದು ಸೇರಿಸಿದರೋ ಗೊತ್ತಿಲ್ಲ...! ನನಗೆ ಮಾತ್ರವಲ್ಲದೆ ನನ್ನಮ್ಮನಿಗೂ ನಿಮ್ಮ ಮನೆ ಹೊಟ್ಟೆ ತುಂಬ ಊಟ ನೀಡಿತು.
ನಾನು ನನ್ನ ಅಮ್ಮ ಅದೆಷ್ಟು ಸರ್ತಿ ಅಪ್ಪನ ಕುಡಿತ ಬೇಜವಾಬ್ದಾರಿಗೆ ಬೇಸತ್ತು ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸಿತ್ತೋ ಗೊತ್ತಿಲ್ಲ. ಆದರೆ ಅಮ್ಮ ನನಗಾಗಿ ನಾನು ಅಮ್ಮನಿಗಾಗಿ ಪ್ರತಿ ಸರ್ತಿಯೂ ಈ ನಿರ್ಧಾರದಿಂದ ಹಿಂದೆ ಸರಿತಿದ್ವಿ. ಆದರೆ ಕಡೆ ಕಡೆಗೆ ಹಸಿವು ನಮ್ಮ ಒಂದು ದಿನ ಕೊಂದೇ ಬಿಡ್ತಿತ್ತು.
ಆಗ ನಿಮ್ಮ ಮನೆ ನಾವು ತಾಯಿ ಮಕ್ಕಳಿಗೆ ಅನ್ನ ನೀಡುವುದರ ಜೊತೆಗೆ ನಿಮ್ಮ ಅಮ್ಮನ ಪ್ರೀತಿಯ ಅಭಯ ನಮ್ಮ ಉಳಿಸಿತು... ನಾನು ಇವತ್ತು ನಿನ್ನ ಕಣ್ಣೆದುರು ಬೆಳೆದು ಉಳಿದಿರುವುದಕ್ಕೆ ನಿಮ್ಮ ಅಮ್ಮ ನನಗೆ ನೀಡಿದ ಜೀವನ ಪ್ರೀತಿ ವಿಶ್ವಾಸ. ನಾನು ಮುಂಬಯಿ ಸೇರಿದಾಗ ಅಲ್ಲಿ ತೀವ್ರ ವಾಗಿ ಕಾಡಿದ್ದ ಅನಾಥ ಪ್ರಜ್ಞೆ. ನನ್ನ ಖಿನ್ನತೆಯತ್ತ ದೂಡದೇ ಜೀವನ ಪ್ರೀತಿ ನೀಡಿದ್ದು ನಿನ್ನ ಅಮ್ಮ ನನ್ನ ತಲೆ ಮೇಲೆ ಕೈಯಿಟ್ಟು ನೀನು ಒಂದಲ್ಲ ಒಂದು ದಿನ ದೊಡ್ಡ ವ್ಯಕ್ತಿಯಾಗಿ ನನ್ನ ಆಶಿರ್ವಾದ ಪಡೆಯೋಕೆ ನೀನು ನಮ್ಮ ಮನೆಗೆ ಬಂದೇ ಬರ್ತೀಯ ಮಗನೇ.. ಎನ್ನುವ ಆಶಿರ್ವಾದದ ಮಾತು."
ಆ ಮಾತು ನನ್ನ ಮುಂಬಯಿ ದಿನಗಳಲ್ಲಿ ಉಳಿಸಿ ಬಾಳಿಸಿತು. ಅಲ್ಲಿ ಸುಮಾರು ಹದಿನಾರು ವರ್ಷಗಳ ಕಾಲ ಸೊಂಟದಿಂದ ಕೆಳಗೆ ಬಲ ಇಲ್ಲದ ಆ ಮನೆಯ ಹಿರಿಯರ ನೋಡಿಕೊಳ್ಳುವ ಕೆಲಸ ಮಾಡಿದೆ. ಆ ಮನೆಯವರು ಶಾಲಾ ವಂಚಿತನಾದ ನನಗೆ ಒಬ್ಬ ಶಿಕ್ಷಕರ ಮೂಲಕ ಇಂಗ್ಲಿಷ್ ಗಣಿತ ವಿಜ್ಞಾನ ಶಿಕ್ಷಣವನ್ನು ಮನೆಯಲ್ಲೇ ನೀಡಿದರು.
ಆ ಮನೆಯವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಆ ಹಿರಿಯ ವ್ಯಕ್ತಿ ತೀರಿಕೊಂಡ ಮೇಲೆ ನನಗೂ ಅವರು ನಡೆಸುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಒಂದು ಪಾಲುದಾರಿಕೆ ನೀಡಿ ನನ್ನ ಆರ್ಥಿಕವಾಗಿಯೂ ಬೆಳೆಸಿದರು. ಸತತ ನಲವತ್ತು ವರ್ಷಗಳ ಕಾಲ ಉದ್ಯೋಗ ಮದುವೆ ಮಕ್ಕಳು ಎಲ್ಲದರ ನಡುವೆ ಯಜಲುಕೊಡಿಗೆಯ ಸೆಳೆತ ನನ್ನ ಎಳೆಯುತ್ತಲೇ ಇತ್ತು. ಆದರೆ ಯಜಲುಕೊಡಿಗೆಯಲ್ಲಿ ನನಗೆ ನಿಮ್ಮ ಮನೆ ಬಿಟ್ಟು ಬೇರಾರು ಇಲ್ಲ.
ಕಾಲ ಬದಲಾವಣೆ ಆಗಿತ್ತು. ನೀವೆಲ್ಲ ನನ್ನ ಹೇಗೆ ಸ್ವೀಕರಿಸಬಹುದೇನೋ ಎಂಬ ಅಳಕೂ ನನ್ನ ಕಾಡಿ ಬರಲು ಯಜಲುಕೊಡಿಗೆಗೆ ಬರಲು ಧೈರ್ಯ ಮಾಡಲಿಲ್ಲ. ಜೊತೆಗೆ ಅಲ್ಲಿಗೆ ಬರಲಾರದಷ್ಟು ಔದ್ಯೋಗಿಕ ಬ್ಯಿಸಿಯಾದೆ.
ಆದಾಗ್ಯೂ ಈಗೊಂದು ಏಳೆಂಟು ವರ್ಷಗಳ ಹಿಂದೆ ನಾನು ಯಜಲುಕೊಡಿಗೆ ತನಕ ಬಂದೆ. ಆದರೆ ಯಜಲುಕೊಡಿಗೆಯ ನನ್ನ ಕ್ರೂರ ದರಿದ್ರ ಬಾಲ್ಯ. ಅಮ್ಮ ಅಪೌಷ್ಟಿಕತೆಯಿಂದ ಬಳಲಿ ಸತ್ತು ಹೋಗಿದ್ದೂ ನನ್ನ ತೀವ್ರವಾಗಿ ಮನಸಿಗೆ ನಾಟಿ ನನಗೆ ತಲೆ ತಿರುಗಿ ಪ್ರಜ್ಞೆ ತಪ್ಪಿ ಹೋದಂತಾಗಿ ನನ್ನ ಕರೆ ತಂದವರು ವಾಪಾಸು ಮುಂಬಯಿಗೆ ಕರೆ ತಂದರು.
ಆದರೂ ನಿಮ್ಮನ್ನೆಲ್ಲಾ ನೋಡುವ ಆಸೆ ನನ್ನ ಮನದಲ್ಲಿ ಇದ್ದೇ ಇತ್ತು. ಮಧ್ಯೆ ಮಧ್ಯೆ ನಿಮ್ಮಲ್ಲಿಗೆ ಬರುವ ಆಸೆ ಕಾರಣಾಂತರಗಳಿಂದ ಮುಂದೆ ಮುಂದೆ ಹೋಗ್ತಿತ್ತು. ಫೇಸ್ ಬುಕ್ ಬಂದ್ ಮೇಲೆ ಸಂಪರ್ಕ ಸೇತುವೆ ಸಿಕ್ಕಿ ಇಲ್ಲಿ ತನಕ ಬಂತು. ಆರೇಳು ವರ್ಷಗಳ ಹಿಂದೆ ಶೃಂಗೇರಿ ಸಮೀಪದಲ್ಲೇ ಒಂದು ಹದಿನೆಂಟು ಎಕರೆ ಜಮೀನು ಕೊಂಡು ಅದರಲ್ಲಿ ಕಾಫಿ ಕಾಳುಮೆಣಸು ಬೆಳೆ ಎಸ್ಟೇಟ್ ಮಾಡಿದೆ.
ಅಲ್ಲಿ ಮನೆ ಕಟ್ಟಿಸಿದ್ದೇನೆ. ಯಾವುದೇ ಕಾಡು ಪ್ರಾಣಿಗಳ ಹಾವಳಿಯಾಗದಂತೆ ಬೇಲಿ ಮಾಡಿದ್ದೇನೆ. ಅದು ಅಮ್ಮನ ಜ್ಞಾಪಕಾರ್ಥವಾಗಿ ಆ ತೋಟ ಮಾಡಿದ್ದು. ಒಂದು ಕಾಲದ ಬಾಲ್ಯದ ದರಿದ್ರವನ್ನು ಮೆಟ್ಟಿ ನಿಂತು ಎದುರಿಸಿ ಗಟ್ಟಿಯಾದ ಸಂಕೇತವಾಗಿ ಈ ಜಮೀನು ಮಾಡಿದ್ದು. ಆ ಹದಿನೆಂಟು ಎಕರೆ ತೋಟದಲ್ಲಿ ಈಗ ಮೂವತ್ತು ನಲವತ್ತು ಲಕ್ಷ ಉತ್ಪತ್ತಿ ಬರ್ತಿದೆ. ನನಗೆ ನನ್ನ ಮಲೆನಾಡು ಮೂಲದ ಕಾರಣ ತೋಟ ಮಾಡುವ ಆಸೆ ಕಾಡುತ್ತಿತ್ತು. ಆದರೆ ಮುಂಬಯಿನ ಉದ್ಯಮದ ಕಾರಣಕ್ಕೆ ಇಲ್ಲಿ ಬಂದು ಇರಲಾರೆ. ಹಾಗಂತ ಯಾರಿಗೂ ಮಾರಲೂ ಇಷ್ಟವಿಲ್ಲ.
ಯಜ್ಞ ನನಗೊಂದು ಉಪಕಾರ ಮಾಡಬೇಕು. ನನ್ನ ಈ ಜಮೀನನ್ನು ನೀನು ನೋಡಿಕೊಳ್ಳಬೇಕು. ಆ ಜಮೀನಿನ ಉತ್ಪತ್ತಿ ನೀನೇ ಇಟ್ಟುಕೊಬೇಕು. ಅಲ್ಲಿ ಒಂದು "ಬೆಲೆನೋ" ಕಾರು ಇದೆ, ಒಂದು ಟ್ರಾಕ್ಟರ್, ಒಂದು ಪಿಕ್ ಅಪ್ ಜೀಪು ಇದೆ. ಒಬ್ಬ ರೈಟರ್ ಕುಟುಂಬ ಆ ಜಮೀನಿನಲ್ಲಿ ಇದೆ. ಸದ್ಯದಲ್ಲೇ ನೀವು ಕುಟುಂಬದವರು ನನ್ನ ಫಾರ್ಮ್ ನ ಮನೆಗೆ ಶಿಫ್ಟ್ ಆಗಿ ನನ್ನ ಕನಸಿನ ತೋಟವನ್ನು ನನಗಾಗಿ ನೀನು ನಿರ್ವಹಣೆ ಮಾಡಿ ನನಗೊಂದು ಉಪಕಾರ ಮಾಡು ಎಂದು ಬೇಡುತ್ತಿದ್ದೇನೆ" ಎಂದು ಯಜ್ಞನ ಕೈ ಹಿಡಿದು ಕಣ್ಣೀರು ಹಾಕಿದ.
ಅತ್ಯಂತ ಸ್ವಾಭಿಮಾನಿ ಯಜಲುಕೊಡಿಗೆ ಯಜ್ಞನಾರಾಯಣನನ್ನು ಭಾವನಾತ್ಮಕವಾಗಿ ಗಂಗಾಧರ ಕಟ್ಟಿಹಾಕಿದ್ದ. ಕೇವಲ ಆರು ಗಂಟೆಯ ಮೊದಲು ಬಸ್ ಚಾರ್ಜ್ ಗೆ ಮಿಕ್ಕಿ ಹತ್ತು ರೂ ಉಳಿದ ಪಾಪರ್ ಯಜಲುಕೊಡಿಗೆ ಯಜ್ಞನಾರಾಯಣನ ಜೀವನ ದಿಢೀರಾಗಿ ಕೋಟ್ಯಾಧೀಶನಾಗಿ ಬದಲಾವಣೆ ಆಗಿತ್ತು!! ಯಜಲುಕೊಡಿಗೆ ಯಜ್ಞನಾರಾಯಣ ಗೆಳೆಯನ ಈ ಪ್ರೀತಿಯ ಆಗ್ರಹಕ್ಕೆ ಮಣಿದಿದ್ದ.
ರಾತ್ರಿ ಊಟ ಮುಗಿಸಿದ ಮೇಲೆ ಗಂಗಾಧರ ಯಜ್ಞನಾರಾಯಣನನ್ನು ತನ್ನ ಕಾರಿನಲ್ಲೇ ಯಜಲುಕೊಡಿಗೆಗೆ ಕಳಿಸಿಕೊಟ್ಟ. ಐನೋರ ಸಂನ್ಯಾಸಿಯ ಆಶೀರ್ವಾದ ಜ್ಯೋತಿಷ್ಯ ಫಲ ನೀಡಿತ್ತು.
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ