ಕನ್ನಡದ ಅಂತಃಸತ್ವ ಹೆಚ್ಚಿಸುವುದಕ್ಕೆ ವಿಶೇಷ ಕಾಳಜಿ ಅಗತ್ಯ: ಪ್ರೊ. ಕೃಷ್ಣೇಗೌಡ

Upayuktha
0


ಉಜಿರೆ: ವಿಶ್ವಮನ್ನಣೆ ಪಡೆದ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಮೂಲಕ ಮಹತ್ವದ ವಿಚಾರಗಳನ್ನು ತಿಳಿದುಕೊಂಡು ಕನ್ನಡದ ಅಂತಃಸತ್ವ ಹೆಚ್ಚಿಸುವುದಕ್ಕೆ ಕನ್ನಡಿಗರು ಆದ್ಯತೆ ನೀಡಬೇಕು ಎಂದು  ಕನ್ನಡದ ನಿವೃತ್ತ ಪ್ರಾಧ್ಯಾಪಕ, ವಾಗ್ಮಿ ಪ್ರೊ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.


ಉಜಿರೆಯ ಶ್ರೀ. ಧ. ಮಂ ಕಾಲೇಜಿನ ಕನ್ನಡ ವಿಭಾಗವು ಹೇಮಾವತಿ. ವಿ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಪ್ರಯೋಜಕತ್ವದಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಮಂಗಳವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ 'ಅರಿವಿನ ದೀವಿಗೆ' ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ 'ಕನ್ನಡವೆಂಬ ಭಾವಸಂಪತ್ತು' ಕುರಿತು ವಿಶೇಷ ಉಪನ್ಯಾಸ ನೀಡಿದರು. 


ಕನ್ನಡ ಎಂದರೆ ಕೇವಲ ಮನಸ್ಸಿನ ಭಾವನೆ ಹೊರಹಾಕುವ ಒಂದು ಭಾಷೆಯಷ್ಟೇ ಅಲ್ಲ. ಕನ್ನಡ ಮಾತನಾಡುವವರು ಈ ಭಾಷೆಯೊಂದಿಗೆ ರೂಪಿಸಿಕೊಳ್ಳುವ ಸಾಂಗತ್ಯ ವಿಶೇಷವಾದುದು. ಈ ಬಗೆಯ ಭಾಷಿಕ ಸಾಂಗತ್ಯವು ಬೇರೆ ಯಾವ ಭಾಷೆಗೂ ಇಲ್ಲ. ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳುವ ಸಂದರ್ಭದಲ್ಲಿ ಮಾತೃಭಾಷೆಯಾಗಿ ಕನ್ನಡವು ಪ್ರಮುಖ ಪಾತ್ರವಹಿಸುತ್ತದೆ. ಕನ್ನಡವೇ ಕಣ್ಣಾಗಿ ಕಿವಿಯಾಗಿ ಜಗತ್ತನ್ನು ವಿಭಿನ್ನವಾಗಿ ಗ್ರಹಿಸುವುದಕ್ಕೆ ನೆರವಾಗುತ್ತದೆ ಎಂದರು.


ಆಚಾರ್ಯ ವಿನೋಬಾ ಭಾವೆ ಅವರು ಕನ್ನಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದು ವರ್ಣಿಸಿದ್ದಾರೆ. ಇಂಗ್ಲಿಷ್ ಭಾಷೆ ಇಂದು ಜಾಗತಿಕ ಭಾಷೆಯಾಗಿದ್ದರೂ ಕೂಡ ಕನ್ನಡಿಗರೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳವರಿಗೆ ಅವರವರ ಮಾತೃಭಾಷೆಯೇ ಶ್ರೇಷ್ಠವಾಗಿರುತ್ತದೆ. ಮಾತೃಭಾಷೆಯೊಂದಿಗೆ ಸಾಧ್ಯವಾಗುವ ಆಪ್ತ ಸಾಂಗತ್ಯ ಇಂಗ್ಲೀಷ್ ಸೇರಿದಂತೆ ಅನ್ಯದೇಶಿ ಭಾಷೆಗಳೊಂದಿಗೆ ಸಾಧ್ಯವಾಗುವುದಿಲ್ಲ. ಜಗತ್ತಿನ ಹಲವಾರು ವಿಚಾರಗಳನ್ನು ಹೊತ್ತುತರುವ ಇಂಗ್ಲಿಷ್ ಭಾಷೆಗೆ ಹಿತಮಿತವಾಗಿ ಆದ್ಯತೆ ನೀಡಿ ಕನ್ನಡದ ಸತ್ವವನ್ನು ಹೆಚ್ಚಿಸಬಹುದು ಎಂದು ಹೇಳಿದರು.


ಜೀವಂತಿಕೆಯೊಂದಿಗಿನ ವ್ಯಕ್ತಿತ್ವಗಳು ಬದುಕಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಾರೆ. ಆ ವ್ಯಕ್ತಿತ್ವಗಳು ಇಲ್ಲವಾದಾಗ ಅವರ ವೈಶಿಷ್ಟ್ಯತೆಯು ಸ್ಮøತಿಪಟಲದಲ್ಲಿ ಶಾಶ್ವತವಾಗಿ ಉಳಿದಿರುತ್ತದೆ. 'ಅರಿವಿನ ದೀವಿಗೆ' ಕಾರ್ಯಕ್ರಮದ ಪ್ರೇರಕ ಶಕ್ತಿ ಡಾ.ಬಿ.ಯಶೋವರ್ಮ ಅಂಥ ವ್ಯಕ್ತಿತ್ವ. ಅವರೀಗ ಇಲ್ಲದಿದ್ದರೂ ಅವರ ವ್ಯಕ್ತಿತ್ವಕ್ಕಿದ್ದ ಆಕರ್ಷಣೀಯ ಅಸ್ಮಿತೆ ಶಾಶ್ವತವಾಗಿ ನೆಲೆಯೂರಿದೆ ಎಂದು ನೆನಪಿಸಿಕೊಂಡರು.


ಆದರ್ಶದೊಂದಿಗೆ ಬದುಕಬೇಕು. ಇಲ್ಲದೇ ಹೋದರೆ ಹೇಗೆ ಬದುಕಿದ್ದೇವೆ ಎನ್ನುವುದಕ್ಕೆ ಸಮರ್ಥನೆಯ ಪುರಾವೆಯೇ ಸಿಗುವುದಿಲ್ಲ. ಸಮರ್ಥನೀಯ ಪುರಾವೆ ಹುಡುಕಾಡುವುದಕ್ಕೆ ಕಷ್ಟಪಡಬೇಕಾಗುತ್ತದೆ. ಆದರ್ಶ ಮೌಲ್ಯಗಳೊಂದಿಗಿನ ಬದುಕು ಸಮರ್ಥನೀಯ ಎನ್ನಿಸುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸೋನಿಯಾ ಯಶೋವರ್ಮ ಮಾತನಾಡಿದರು. ಯಶೋವರ್ಮರು ಕೃಷ್ಣೇಗೌಡರ ದೊಡ್ಡ ಅಭಿಮಾನಿಯಾಗಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಅವರ ಹರಟೆ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದರು. ಇದರ ಜೊತೆಗೆ ಅವರು ತುಂಬಾ ಪುಸ್ತಕ ಪ್ರಿಯರಾಗಿದ್ದರು. ಧರ್ಮ, ಚರಿತ್ರೆ ಸೇರಿದಂತೆ ವಿವಿಧ ವಲಯಗಳ ಕುರಿತ ಮಹತ್ವದ ಪುಸ್ತಕಗಳನ್ನು ಓದುತ್ತಿದ್ದರು ಎಂದರು. 


ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ಮಾತನಾಡಿದರು. ಕಾಲೇಜಿನ ಸಮಗ್ರ ಬೆಳವಣಿಗೆಗೆ ಬೇಕಾದ ಶಿಸ್ತುಬದ್ಧ ಆಡಳಿತ ಕ್ರಮ, ಹಸಿರು ಚಿಂತನೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಬಂಧಿತ ಹೆಜ್ಜೆಗಳೊಂದಿಗೆ ಡಾ.ಬಿ.ಯಶೋವರ್ಮ ಹೆಗ್ಗುರುತು ಮೂಡಿಸಿದ್ದರು ಎಂದು ತಿಳಿಸಿದರು.


ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಭವ್ಯಶ್ರೀ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ನಾಗಣ್ಣ ಡಿ.ಎ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top