ನನ್ನ ಬದುಕಿನ ಮೊದಲನೆ ಆನಂದದ ನೆನಪು ಅಂದರೆ ಅಕ್ಕನ ನಗು ಮಾತ್ರ. ಅವಳು ಕೇವಲ ಹೆಸರಿಗಷ್ಟೆ ಸಹೋದರಿ ಅಲ್ಲಾ ನನ್ನ ಬದುಕಿನ ಮಧುರ ಗೀತೆ. ಅಮ್ಮನ ಬಿಸಿಯಾಗುವ ಮಡಿಲು, ಅಪ್ಪನ ಗಟ್ಟಿಯಾದ ಮಾತುಗಳ ನಡುವೆ ನನ್ನ ಅಕ್ಕನ ಪ್ರೀತಿಗೆ ನಾನೇನು ಹೇಳಲಿ..! ಅದು ಮೃದುವಾದ ಮಳೆಯ ಹನಿಯಂತೆ, ಸದಾ ಹೃದಯದ ಮೇಲೆ ಬೀಳುತ್ತಿರುತ್ತದೆ.
ಅಕ್ಕ-ಎಂಬ ಈ ಒಂದು ಪದದಲ್ಲೇ ಪ್ರೀತಿ, ಕಾಳಜಿ, ಮಮತೆ ಅಡಗಿದೆಯೋ ಹೇಳಲು ಸಾಧ್ಯವಿಲ್ಲ. ಅದು ನನ್ನ ಹೃದಯಕ್ಕೆ ಮಾತ್ರ ಗೊತ್ತು. ದೈವ ನನಗೆ ನೀಡಿದ ಬೆಲೆ ಕಟ್ಟಲಾಗದ ವರ ಇವಳು. ಅವಳ ಪ್ರೀತಿ ನನಗೆ ದಿನಪತ್ರಿಕೆಯಂತೆ ಪ್ರತಿ ದಿನ ಹೊಸ ಪ್ರೇರಣೆ ನೀಡುತ್ತದೆ. ಅವಳ ಪ್ರೀತಿಯನ್ನು ಕೇವಲ ಪದಗಳಲ್ಲಿ ಹೇಳಲು ಸಾದ್ಯವಿಲ್ಲದ ಅಪಾರ ಮೌಲ್ಯ.
ಆಕೆ ನನಗೆ ಕೇವಲ ಪ್ರೀತಿ ಕೊಡುವುದು ಮಾತ್ರವಲ್ಲದೆ, ನನ್ನ ಕನಸುಗಳಿಗೆ ಬಣ್ಣ ತುಂಬುವ ಕಲಾವಿದೆ. ನಾನು ಹೇಳಿದ ರಹಸ್ಯಗಳನ್ನು ಕಾಪಾಡುವ ಕೋಟೆ. ನಾನು ಎಡವಿದಾಗ ಕೈ ಹಿಡಿದು ಎಬ್ಬಿಸುವಳು, ಗೆದ್ದಾಗ ಕಣ್ಣೀರಿನಿಂದಲೇ ಸಂತೋಷ ಪಡುವಳು. ನಾ ಎಷ್ಟು ದೊಡ್ಡವಳಾದರೂ ಅವಳ ಕಣ್ಣಿನಲ್ಲಿ ಸದಾ ಚಿಕ್ಕ ತಂಗಿಯೇ.
ಅವಳ ಮಮತೆ ನನಗೆ ಮುದ್ರೆಯಂತಾಗಿದೆ. ನನಗೆ ಭಯದ ಗೋಡೆಯ ಹಿಂದೆ ನಿಂತ ಧೈರ್ಯ, ಅವಮಾನದಲ್ಲಿ ಹೊಮ್ಮುವ ಸಾಂತ್ವನ, ಆಟದಲ್ಲಿ ಹಾಸ್ಯದ ರಂಗು, ಕಷ್ಟದ ದಿನಗಳಲ್ಲಿ ಕೈ ಹಿಡಿದು ನಡೆಸಿದ ಬೆಂಬಲದ ಬಲ, ನಾನು ಅತ್ತಾಗ ಕಣ್ಣೀರು ಒರೆಸಿದ ಮುದ್ದಾದ ಮೊದಲ ಕೈ, ಇಷ್ಟು ಪ್ರೀತಿಯ ಬೆರಗಿನಲ್ಲಿ ನಾ ಬೆಳೆಯುತ್ತಿರುವುದೇ ದೊಡ್ಡ ಭಾಗ್ಯ.
ಅಕ್ಕ ನನ್ನ ಗದರಿಸಿದ ಸಂದರ್ಭಗಳು ಇದ್ದಾವೆ, ಆದರೆ ಆ ಗದರಿಕೆಯ ಹಿಂದಿನ ಕಾಳಜಿಯನ್ನು ನಾನು ಇಂದು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಅವಳ ಪ್ರೀತಿಯ ಮಾತು, ಮೃದುವಾದ ನಗು ನನ್ನ ಎಲ್ಲಾ ಕಷ್ಟಗಳನ್ನು ಮರೆಮಾಚಿಸುವ ಶಕ್ತಿ ಹೊಂದಿದೆ.
ಇಂದು ಈ ಜೀವನದ ಹಾದಿಯಲ್ಲಿ ಹಿಂತಿರುಗಿ ನೋಡಿದಾಗ, ಅಕ್ಕನ ಮೌಲ್ಯ ಇನ್ನಷ್ಟು ಗಟ್ಟಿಯಾಗಿ ಗೋಚರಿಸುತ್ತದೆ. ಅವಳು ನನ್ನ ಹೃದಯದ ಮೊದಲ ಸ್ನೇಹಿತೆ, ನನ್ನ ಆತ್ಮವಿಶ್ವಾಸದ ಮೊದಲ ಶಕ್ತಿ. ಅಕ್ಕ ಎನ್ನುವ ಈ ಸಂಬಂಧವೆ ಜೀವನವನ್ನು ಮೃದುವಾಗಿಸುವ ಮಧುರ ಸಂಗೀತದಂತಿದೆ.
ಅವಳು ಕೋಪಗೊಂಡರೆ ಇಡೀ ಭೂಮಿಯೆ ಕಂಪಿಸುವಂತೆ ತೋರುತ್ತದೆ, ಆದರೆ ಆಕೆಯ ಕಣ್ಣೀರು ಕಂಡರೆ ಹೃದಯವೇ ಒಡೆದುಹೋಗುವ ಹಾಗೆ ಅನಿಸುತ್ತದೆ. ನಾ ಸಣ್ಣ ಗಾಯಮಾಡಿಕೊಂಡರೂ, "ಅಯ್ಯೋ ನೋವಾಯ್ತ?" ಅಂತ ತಕ್ಷಣ ಕಾಳಜಿ ಮಾಡುವವಳು, ಆಕೆಯ ಆ ಮಮತೆ ತುಂಬಿದ ಮಾತುಗಳಲ್ಲಿ ಅಮ್ಮನ ಸ್ಪರ್ಶವೇ ಅಡಗಿರುತ್ತದೆ.
ಯಾಕೋ ಗೊತ್ತಿಲ್ಲ ತಂದೆ ತಾಯಿ ಮಾತಿಗಿಂತ ಅವಳ ಬುದ್ಧಿವಾದಕ್ಕೆ ಕ್ಷಣಮಾತ್ರದಲ್ಲಿ ಮಣಿಯುತ್ತೇನೆ. ನನಗೆ ಯಾವುದೇ ರೀತಿಯ ಕಷ್ಟಗಳು ಬಂದಾಗ ಅವಳು ನೀಡುವ ಪ್ರತ್ಯುತ್ತರವೇ ನನಗೆ ಧೈರ್ಯದ ಸಂಕೇತ. ಅವಳು ಪ್ರತಿ ಕ್ಷಣವು ನನ್ನೊಂದಿಗಿದ್ದರೆ ಇಡೀ ಜಗತ್ತನ್ನೇ ಗೆಲ್ಲುವೆನೆಂಬ ನಂಬಿಕೆ ನನ್ನದು. ಹೆತ್ತವಳೊಂದಿಗೆ ಹೇಳಲಾಗದ ವಿಷಯವನ್ನು ಇವಳೊಂದಿಗೆ ಹೇಳಿದಾಗ ಮನಸಿನಲ್ಲಿ ಒಂದು ನಿರಾಳ ಭಾವನೆ ಉಂಟಾಗುತ್ತದೆ. ಬಹುಶಃ ಅವಳು ನನ್ನ ಎರಡನೇ ತಾಯಿ ಎಂದು ಹೇಳಿದರೂ ತಪ್ಪಾಗಲಾರದು. ಬರಿ ಕಲಿಕೆಗೆ ಮಾತ್ರವಲ್ಲದೆ ಎಲ್ಲಾ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯು ತೊಡಗಿಸಬೇಕೆಂದು ಪ್ರೋತ್ಸಾಹಿಸುವಳು.
ನನಗೆ ಯಾವುದೇ ಒಂದು ಪ್ರಶಸ್ತಿ ಬಂದಾಗಲು, ಸನ್ಮಾನಿಸಲ್ಪಟ್ಟಾಗಲೂ ಬಹುಶಃ ನನಗಿಂತ ಹೆಚ್ಚಾಗಿ ಸಂತಸ ಪಟ್ಟ ಜೀವವದು. ಅದೆಷ್ಟೋ ಸಲ ಅಗತ್ಯವಿಲ್ಲದ ವಿಷಯಕ್ಕಾಗಿ ಎದುರು ವಾದಿಸಿದ್ದೇನೆ ಆದರೂ ಅವಳಿಗೆ ನನ್ನ ಮೇಲಿನ ಮಮತೆ ಕಮ್ಮಿಯಾಗಿಲ್ಲ. ಅವಳೊಂದಿಗೆ ಮಾತನಾಡದೆ, ಜಗಳವಾಡದೇ ಇದ್ದರೆ ನನಗೆ ದಿನಗಳು ಕಳೆಯದು. ಅವಳೆಂದರೆ ನನ್ನ ಜೀವ, ನನ್ನುಸಿರು. ಅವಳಿಗೆ ಏಟಾದಾಗ ನನಗೆ ಅರಿವಿಲ್ಲದೆ ನನ್ನ ಕಣ್ಣಲ್ಲಿ ಕಣ್ಣೀರು ಜಾರುತ್ತದೆ. ಇಂತಹ ಸಂಬಂಧ ಯಾವುದೇ ವ್ಯಕ್ತಿಯಿಂದ ಕಳಚಿ ಹೋಗಬಾರದು ಎಂದು ಪ್ರೀತಿ ತೋರಿಸುತ್ತಾ ಬರುತಿದ್ದಾಳೆ.
ನಾನು ಯಾವಾಗಲೂ ದೇವರಲ್ಲಿ ಬೇಡುವುದು ಒಂದೇ ನನ್ನ ಅಕ್ಕ ಸದಾ ಆರೋಗ್ಯವಾಗಿರಲಿ, ಸಂತೋಷವಾಗಿರಲಿ.
ಅವಳ ಮುಖದಲ್ಲಿ ಸದಾ ನಗು ಅರಳಲಿ, ಏಕೆಂದರೆ ಅವಳು ನನ್ನ ಕನಸಿನ ದಾರಿದೀಪ, ನನ್ನ ಹೃದಯದ ಆನಂದ. ಹೀಗಾಗಿ ನನ್ನ ಮನದಲ್ಲಿ ಬರೆದ ಶಾಶ್ವತ ಸಾಲು ಹೀಗೆ "ಅಕ್ಕ, ನೀನು ನನ್ನ ಬದುಕಿನ ಮೊದಲ ಸ್ನೇಹಿತೆ, ಮಮತೆಯ ಕವಚ, ಪ್ರೀತಿಯ ಶಾಶ್ವತ ಬೆಳಕು. ನೀನಿಲ್ಲದ ನಾನು ನಾನಾಗಲಾರೆ"......!
-ಧನ್ಯ ದಾಮೋದರ ಕೋಲ್ಚಾರು
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ