ಮೇರು ಸಾಹಿತಿಯ ಸಂದರ್ಶನದ ನೆನಪು ಹಂಚಿಕೊಂಡ ಹಿರಿಯ ಪತ್ರಕರ್ತ ಡಾ. ಈಶ್ವರ ದೈತೋಟ

ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, 'ಸರಸ್ವತೀ ಪುತ್ರ' ನೆಂಬ ಅಭಿದಾನಕ್ಕೆ ಪಾತ್ರರಾದ ಡಾ. ಎಸ್. ಎಲ್. ಭೈರಪ್ಪ ಅವರು ಇಂದು ನಮ್ಮೊಂದಿಗಿಲ್ಲ. ಆದರೆ 94 ವರ್ಷಗಳ ಸುದೀರ್ಘ ಬದುಕಿನಲ್ಲಿ ಅವರು ಕನ್ನಡದ ಸಾಹಿತ್ಯ ಸೇವೆಯಲ್ಲಿ ಮೂಡಿಸಿದ ಛಾಪು ಮತ್ತು ಸಾರಸ್ವತ ಲೋಕಕ್ಕೆ ಬಿಟ್ಟುಹೋದ ಜ್ಞಾನಭಂಡಾರ ಮಾತ್ರ ಅಪಾರವಾದದ್ದು.
ಅವರ ಕುರಿತಾಗಿ ಸ್ಮರಿಸಿಕೊಳ್ಳುವ ಸಂದರ್ಭದಲ್ಲಿ, ಸುಮಾರು 2 ದಶಕಗಳ ಹಿಂದೆ ಕನ್ನಡದ ಟಿವಿ ವಾಹಿನಿಯೊಂದರಲ್ಲಿ ಅವರ ಸಂದರ್ಶನ ಮೊದಲ ಬಾರಿಗೆ ಪ್ರಸಾರವಾದ ವಿಚಾರ ನೆನಪಿಗೆ ಬಂತು. ಅದು ಕನ್ನಡದ ಮೊದಲ ಖಾಸಗಿ ಉಪಗ್ರಹ ವಾಹಿನಿ ಉದಯ ಟಿವಿ. ಆ ಸಂದರ್ಶನವನ್ನು ನಡೆಸಿಕೊಟ್ಟವರು ಹೆಸರಾಂತ ಪತ್ರಕರ್ತ ಡಾ. ಈಶ್ವರ ದೈತೋಟ ಅವರು.
ಸಾಮಾನ್ಯವಾಗಿ ಭೈರಪ್ಪನವರು ಹಾಗೆಲ್ಲ ಮಾಧ್ಯಮಗಳಿಗೆ ಸಂದರ್ಶನ ನೀಡುವವರಲ್ಲ. ಅವರದೇ ಆದ ಘನತೆ, ಗಾಂಭೀರ್ಯವನ್ನು ಕಾಪಾಡಿಕೊಂಡಿದ್ದ ಅವರು, ಉದಯ ಟಿವಿಗೆ ಸಂದರ್ಶನ ನೀಡಲು ಒಪ್ಪಿಕೊಂಡಿದ್ದೇ ಒಂದು ಸ್ವಾರಸ್ಯ. ಭೈರಪ್ಪನವರ ಸಂದರ್ಶನ ನಡೆಸಲು ಬಯಸಿದ್ದ ದೈತೋಟರು, ಅವರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಿದ್ದು ಅವರ ಸೋದರಿಯ ಸಹಾಯದಿಂದ. ದೈತೋಟ ಅವರ ಸೋದರಿ ಮೈಸೂರಿನಲ್ಲಿ ಪ್ರಸಿದ್ಧ ವೈದ್ಯರಾಗಿದ್ದರು. ಭೈರಪ್ಪನವರಿಗೆ ಅವರ ಜತೆ ನಿಕಟ ಸಂಪರ್ಕವಿತ್ತು. ಆ ಸಂಪರ್ಕವೇ ದೈತೋಟರಿಗೂ ಭೈರಪ್ಪನವರ ಸಂದರ್ಶನ ನಡೆಸಲು ಅನುಕೂಲ ಮಾಡಿಕೊಟ್ಟಿತ್ತು.
ತಮ್ಮ ಬದುಕಿನ ಅತ್ಯಂತ ನೋವಿನ ಘಟನೆಯೊಂದನ್ನು ಕೆಲವು ವರ್ಷಗಳ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತೆರೆದಿಟ್ಟಿದ್ದರು. ವಾಸ್ತವದಲ್ಲಿ ಅವರು ಉದ್ದೇಶಪೂರ್ವಕವಾಗಿ ಆ ವಿಚಾರವನ್ನು ಪ್ರಸ್ತಾಪಿಸಿರಲಿಲ್ಲ. ಸಂದರ್ಶನದ ವೇಳೆ ಮಾತಿನ ಭರದಲ್ಲಿ ಅಚಾನಕ್ಕಾಗಿ ಆ ವಿಚಾರ ಹೊರ ಬಂದಿತ್ತು. ನಂತರ ಆ ಭಾಗವನ್ನು ಕತ್ತರಿಸಲು ಸಾಧ್ಯವೇ ಎಂದು ಕೇಳಿದ್ದರಂತೆ. ಆಗ, ಚಿತ್ರೀಕರಣಗೊಂಡ ಸಂದರ್ಶನದ ಎಡಿಟಿಂಗ್, ಮರು ಎಡಿಟಿಂಗ್ ಹಂತದಲ್ಲಿ ಸಂದರ್ಭಕ್ಕೆ ಅಗತ್ಯವಿಲ್ಲ ಅನಿಸಿದರೆ ಅದನ್ನು ತೆಗೆದುಹಾಕುವುದಾಗಿ ದೈತೋಟರೂ ಹೇಳಿದ್ದರು. ಅನಂತರ ಭೈರಪ್ಪನವರ ಅದೊಂದು ಹೇಳಿಕೆ ಕಾರ್ಯಕ್ರಮದಲ್ಲಿ ಇದ್ದರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದು ಹಾಗೆಯೇ ಉಳಿಸಿಕೊಂಡಿದ್ದರು.
ತುಂಬಾ ಸಮಯದಿಂದ ಕಾಡುತ್ತಿದ್ದ ಮನಸ್ಸಿನ ನೋವನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟದ್ದರಿಂದ ಈಗ ಮನಸ್ಸು ನಿರಾಳವಾಗಿದೆ ಎಂದು ಮರುದಿನ ಆ ಸಂದರ್ಶನವನ್ನು ನೋಡಿದ ಭೈರಪ್ಪನವರು ಪ್ರತಿಕ್ರಿಯಿಸಿದ್ದರು.
ಆ ಕಾರ್ಯಕ್ರಮ ಸರಣಿಯನ್ನು ತಪ್ಪದೇ ಪ್ರತಿದಿನವೂ ವೀಕ್ಷಿಸುತ್ತಿದ್ದ ಅಭಿಮಾನಿಗಳು ಅಪಾರ. ಇದೀಗ ಭೈರಪ್ಪ ಅವರ ದೇಹಾಂತ್ಯವಾದ ಸಂದರ್ಭದಲ್ಲಿ, ಅಂದು ಪ್ರಸಾರವಾಗಿದ್ದ ಅವರ ಸಂದರ್ಶನ ಕಾರ್ಯಕ್ರಮವನ್ನು ನೆನಪಿಸಿಕೊಂಡು ಉಪಯುಕ್ತ ನ್ಯೂಸ್ ಜತೆ ಕೆಲವು ಓದುಗರು ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಹಿರಿಯ ಪತ್ರಕರ್ತ ಡಾ. ಈಶ್ವರ ದೈತೋಟ ಅವರ ಜತೆಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲಾಯಿತು. ಅವರು ತಮ್ಮ ನೆನಪಿನ ಬುತ್ತಿಯಿಂದ ಹಂಚಿಕೊಂಡ ಒಂದಿಷ್ಟು ಕುತೂಹಲಕರ ಮಾಹಿತಿಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಿದ್ದೇವೆ.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ- ಇದು ಎಸ್.ಎಲ್ ಭೈರಪ್ಪ ಅವರ ಪೂರ್ಣ ಹೆಸರು. ಅಂದು ಉದಯ ಟಿವಿಗಾಗಿ ನೀಡಿದ ಸಂದರ್ಶನದಲ್ಲಿ, ತಮ್ಮ ಬಾಲ್ಯದ ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತ, ತಮ್ಮ ಸೋದರ ಮಾವನಿಂದ ತಮಗಾಗುತ್ತಿದ್ದ ಕಿರುಕುಳ, ಹಿಂಸೆಯನ್ನು ಅಚಾನಕ್ಕಾಗಿ ತೆರೆದಿಟ್ಟಿದ್ದರು ಭೈರಪ್ಪನವರು. ಒಟ್ಟು ಮೂರು ಕಂತುಗಳಲ್ಲಿ ಭೈರಪ್ಪನವರ ಸಂದರ್ಶನ ಪ್ರಸಾರವಾಗಿತ್ತು.
ಉದಯ ಟಿವಿಯಲ್ಲಿ ಪ್ರಸಾರವಾದ ಆ ಸಂದರ್ಶನದ ತುಣುಕು ಎಲ್ಲಾದರೂ ಸಿಗುವುದೇ ಎಂದು ಹುಡುಕ ಲಾಯಿತು. ಆ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಟಿವಿ ಚಾನೆಲ್ ಗಳು ಡಿಜಿಟೈಸ್ ಆಗಿರಲಿಲ್ಲ. ಅನಲಾಗ್ ತಂತ್ರಜ್ಞಾನದಲ್ಲಿ ಚಿತ್ರೀಕರಣ ಹಾಗೂ ಪ್ರಸಾರ ಆಗುತ್ತಿದ್ದುದರಿಂದ ಅದು ಸದ್ಯದ ಸಂದರ್ಭದಲ್ಲಿ ಸಿಗಲಾರದು ಎಂದು ಉದಯ ಟಿವಿ ಮೂಲದಿಂದಲೇ ಸ್ಪಷ್ಟನೆ ಬಂತು. ಕ್ಯಾಸೆಟ್ ರೂಪದಲ್ಲಿ ದಾಖಲೀಕರಣಗೊಂಡ ಆ ಸಂದರ್ಶನ ಡಿಜಿಟಲೈಸ್ ಆಗಿಲ್ಲ. ಹಾಗಾಗಿ ಸಿಗುವ ಸಾಧ್ಯತೆ ಇಲ್ಲ ಎಂಬ ಉತ್ತರ ಬಂತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ