ಭರತನಾಟ್ಯ ದಾಖಲೆ ಮಾಡಿದ ರೆಮೋನಾ ಎವೆಟ್ ಪಿರೇರಾಗೆ ಸನ್ಮಾನ

Upayuktha
0


ಮಂಗಳೂರು: “170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಮಾಡಿ ಮ್ಯಾರಥಾನ್ ಗೋಲ್ಡನ್ ಬುಕ್ ದಾಖಲೆ ನಿರ್ಮಿಸಿದ ರೆಮೋನಾ ಎವೆಟ್ ಪಿರೇರಾ ಅವರ ಅಭಿನಂದನಾ ಕಾರ್ಯಕ್ರಮ” ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾಮಂಟಪದಲ್ಲಿ ಜರಗಿತು.


ಅತ್ತಾವರ ಕಟ್ಟೆಯಿಂದ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ತನಕ ಭವ್ಯ ಮೆರವಣಿಗೆಯ ಸ್ವಾಗತದೊಂದಿಗೆ “170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಮಾಡಿ ಮ್ಯಾರಥಾನ್ ಗೋಲ್ಡನ್ ಬುಕ್ ದಾಖಲೆ ನಿರ್ಮಿಸಿದ” ರೆಮೋನಾ ಎವೆಟ್ ಪಿರೇರಾ ಅವರ ಅಭಿನಂದನಾ ಕಾರ್ಯಕ್ರಮವು ವೈಭವದಿಂದ ಜರುಗಿತು. ‘ಶಾಂತಲಾ’ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ದೇವತಾಜ್ಯೋತಿ ಪ್ರಜ್ವಲನಗೈದು, “ರೆಮೋನಾರ ಸಾಧನೆ ಪೋಷಕರು, ಗುರುಗಳು, ವಿದ್ಯಾಕೇಂದ್ರ, ಊರು, ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.


ಸನ್ಮಾನಿತ ನುಡಿಯಲ್ಲಿ ರೆಮೋನಾ ಪಿರೇರಾ ತಮ್ಮ ಭಾವನೆ ಹಂಚಿಕೊಂಡು “ಚಕ್ರಪಾಣಿ ನೃತ್ಯ ಕಲಾಮಂದಿರವೇ ನನ್ನ ಭರತನಾಟ್ಯದ ಮೊದಲ ಹೆಜ್ಜೆ. ಗುರು ಹಾಗೂ ಕಲೆಗೆ ಸಮರ್ಪಣೆಯಿಂದ ಮಾಡಿದ ಸಾಧನೆಯ ಫಲವೇ ಇಂದಿನ ಈ ಗೌರವ. ಭರತನಾಟ್ಯ ಆರಾಧಕರ ಉಸಿರಾಗಲಿ; ಭರತನಾಟ್ಯಕ್ಕೆ ಧರ್ಮ ಎಂದೂ ಅಡ್ಡಿಯಾಗಬಾರದು” ಎಂದು ಧನ್ಯತೆಯಿಂದ ಹೇಳಿದರು.


ರೆಮೋನಾರ ಆರಂಭಿಕ ಗುರು ವಿದ್ವಾನ್ ಸುರೇಶ್ ಅತ್ತಾವರ್ ಅವರು ತಮ್ಮ ಆಶೀರ್ವಚನದಲ್ಲಿ, “ರೆಮೋನಾರ ಶ್ರದ್ಧೆ ಮತ್ತು ಪರಿಶ್ರಮವೇ ಈ ಸಾಧನೆಯ ಮೂಲ” ಎಂದು ಹಾರೈಸಿದರು. ಈ ಕಾರ್ಯಕ್ರಮಕ್ಕೆ ವಿದ್ವಾನ್ ಸುರೇಶ್ ಅತ್ತಾವರ್ ಅವರ ಧರ್ಮಪತ್ನಿ ಶ್ರೀಮತಿ ಮಲ್ಲಿಕಾ ಹಾಗೂ ಪುತ್ರಿ ವಿದುಷಿ ಶ್ರುತಿ ಚಂದ್ರು ಸಂಪೂರ್ಣ ಬೆಂಬಲ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, “ಚಕ್ರಪಾಣಿ ನೃತ್ಯ ಕಲಾಕೇಂದ್ರದ ಸಂಘಟನಾ ಶಕ್ತಿ ಹಾಗೂ ರೆಮೋನಾರ ಸಾಧನೆ ಶ್ಲಾಘನೀಯ” ಎಂದರು.


ಅತಿಥಿಗಳಾದ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮಣ್ಣ ನಾಯ್ಕ್, ತಮ್ಮ ನುಡಿಯಲ್ಲಿ “ಬೆಳೆಯುವ ಸಿರಿ ಮೊಳಕೆಯಲ್ಲಿಯೇ” ಎಂಬ ನುಡಿಗಟ್ಟು ರೆಮೋನಾರ ಸಾಧನೆಗೆ ಪೂರಕವಾಗಿದೆ ಎಂದು ಹೇಳಿದರು.


ಎಚ್. ರತೀಂದ್ರನಾಥ, ಗೌರವಾಧ್ಯಕ್ಷರು – ಚಕ್ರಪಾಣಿ ಸೇವಾ ಸಮಿತಿ, ಅವರು “ಶ್ರದ್ಧೆ, ಪರಿಶ್ರಮ ಹಾಗೂ ನಾಟ್ಯದ ಭಕ್ತಿಗೆ ದೊರೆತ ಯಶಸ್ಸು” ಎಂದು ಹಾರೈಸಿದರು. ಶ್ರೀ ಗೋಪಾಲಕೃಷ್ಣ ಕೋಟ್ಯಾನ್, ಅಧ್ಯಕ್ಷರು– ಚಕ್ರಪಾಣಿ ಸೇವಾ ಸಮಿತಿ ಹಾಗೂ ಗೋಪಾಲಕೃಷ್ಣ ಭಟ್, ಪ್ರಧಾನ ಅರ್ಚಕರು– ಚಕ್ರಪಾಣಿ ಗೋಪಿನಾಥ ದೇವಸ್ಥಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಶ್ರೀಮತಿ ಬಬಿತಾ ನಿರೂಪಿಸಿದರು. ಶ್ರೀಮತಿ ಕೀರ್ತಿ ಪ್ರಾರ್ಥನೆ ಹಾಗೂ ಅಭಿನಂದನಾ ಪತ್ರ ವಾಚಿಸಿದರು. ಶ್ರೀಮತಿ ಪುಷ್ಪಲತಾ ಧನ್ಯವಾದಗಳನ್ನು ಸಲ್ಲಿಸಿದರು.


ಕೊನೆಯಲ್ಲಿ ಚಕ್ರಪಾಣಿ ಕಲಾಕೇಂದ್ರದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಭವ್ಯವಾಗಿ ಸಂಪನ್ನವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top