ಪಿ.ವಿ. ಪರಮೇಶ್ ಸಂಸ್ಮರಣೆ; ಪ್ರಶಸ್ತಿ ಪ್ರದಾನ

Upayuktha
0


ಮಂಗಳೂರು: "ಯಕ್ಷಗಾನ ಕಲಾವಿದರು ಬೆಳಗುತ್ತಾರೆ, ಕಾಲಾನಂತರ ಚರಿತ್ರೆಯಲ್ಲಿ ಮರೆಯಾಗಿ ಹೋಗುತ್ತಾರೆ. ಕಲಾಜಗತ್ತಿನಲ್ಲಿ ಪ್ರಜ್ವಲಿಸಿದ ಸತ್ತೂ ಜೀವಂತವಾಗಿರುವವರ ನೆನಪು ಸದಾ ಅಗತ್ಯ. ಸ್ವಯಂ ಸಾಧಕರಾದ ಪರಮೇಶ್ ರವರ ಅಕಾಲಿಕ ಮರಣ ಯಕ್ಷಗಾನ ರಂಗಭೂಮಿಗೆ ಒಂದು ಕೊರತೆಯಾಗಿ ಕಾಡುತ್ತದೆ. ಸರ್ವವಿಧದಲ್ಲೂ ಸಹಕಾರಿಯಾದ ಅವರ ನೆನಪನ್ನು ಹಸಿರಾಗಿಸುವ ಸರಯೂನ ಪ್ರಯತ್ನ ಶ್ಲಾಘನೀಯ" ಎಂದು ಡಾ. ಹರಿಕೃಷ್ಣ ಪುನರೂರು ರವರು ಹೇಳಿದರು.


ಅವರು ಕದ್ರಿ ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿ (ರಿ) ಯ ನಂದಗೋಕಲ ವೇದಿಕೆಯಲ್ಲಿ ಸರಯೂನ ಪುಸ್ತಕ ಬಿಡುಗಡೆ ಹಾಗೂ ಪಿ. ವಿ ಪರಮೇಶ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.


ಯಕ್ಷಕಲಾವಿದ, ಕಲಾಪೋಷಕ ಪಣಂಬೂರು ವಾಸುದೇವ ಐತಾಳರು "ಪರಮೇಶ್ ರಂತಹ ಕಲಾವಿದರ ಅಗತ್ಯ ಯಕ್ಷಗಾನಕ್ಕೆ ಇದೆ. ಯಕ್ಷಗಾನದ ಹಿತದೃಷ್ಠಿಯಿಂದ ಹೊಸ ಹೊಸ ಪರಿಕಲ್ಪನೆಯ ಮೂಲಕ ಅದನ್ನು ಸಾಕಾರಗೊಳಿಸಿದ ಸ್ವಯಂ ಪರಿಕರ್ಮಿ. ಒಳ್ಳೊಳ್ಳೆಯ ಸಂಗತಿಗಳನ್ನು ಸರಳೀಕೃತಗೊಳಿಸಿ ರಂಗಕ್ಕೆ ಕೊಟ್ಟ ಸ್ವಯಂಭೂ ಸಾಧಕ. ರಾಜ್ಯ ಪ್ರಶಸ್ತಿ ಪುರಸ್ಕೃತರಾದರೂ (ಪದ್ದಣ್ಣ ಪ್ರಶಸ್ತಿ) ನಿರ್ಗರ್ವಿ. ಅಮೇರಿಕಾ, ಜರ್ಮನಿ ಬಹರೈನ್, ಲಂಡನ್‌ಗಳಿಗೆ ಯಕ್ಷಗಾನದ ಉದ್ದೇಶಕ್ಕಾಗಿಯೇ ಸಂಚರಿಸಿದ ಅಂತಾರಾಷ್ಟ್ರೀಯ ಕಲಾವಿದ. ಇಂತಹ ಅಪ್ಪಟ ಕಲಾವಿದನನ್ನು ಸ್ಮರಿಸಿಕೊಂಡು ಅವರ ಹೆಸರಿನಲ್ಲಿ ರಾಜಬಣ್ಣದ ವೇಷಧಾರಿ ಪಿ.ನಾಗೇಶ್ ಕಾರಂತರಿಗೆ ಪ್ರಶಸ್ತಿ ಪ್ರದಾನವಾಗುತ್ತಿರುವುದು ಸೂಕ್ತ" ಎಂದು ದಿ. ಪಿ.ವಿ ಪರಮೇಶರ ಸಂಸ್ಮರಣೆ ಮಾಡಿದರು.


ಪಿ. ನಾಗೇಶ್ ಕಾರಂತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ನೇಹಾ ಚಂದ್ರಶೇಖರ್ ಸನ್ಮಾನ ಪತ್ರ ವಾಚಿಸಿದರು. ಪ್ರದೀಪ ಕಲ್ಕೂರರು ಮಾತನಾಡಿ ತಮ್ಮ ಹಾಗೂ ಪರಮೇಶರ ಒಡನಾಟವನ್ನು ಸ್ಮರಿಸಿಕೊಂಡರು.


ಶ್ರೀಕೃಷ್ಣಜನ್ಮಮಹೋತ್ಸವ ಸಮಿತ್ರಿ (ರಿ)ಯ ಅಧ್ಯಕ್ಷ ಗೋಕುಲ್ ಕದ್ರಿ ಉಪಾಧ್ಯಕ್ಷ ಕಿರಣ್ ಜೋಗಿ, ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ| ಪ್ರಭಾಕರ ಅಡಿಗ ಸುಧಾಕರ ರಾವ್ ಪೇಜಾವರ್ ಶ್ರೀಮತಿ ಸುಭದ್ರಾ ದೇವಿ, ಜಿ.ಕೆ.ಭಟ್ ಸೆರಾಜೆ, ಡಾ. ವಸಂತಕುಮಾರ್ ಶೆಟ್ಟಿ, ಪುನೀತ್ ಬೆಂಗಳೂರು ಅತಿಥಿಗಳಾಗಿದ್ದರು. ಜನಾರ್ಧನ ಹಂದೆ ಪ್ರಾರ್ಥನೆಗೈದರು. ವರ್ಕಾಡಿ ರವಿ ಅಲೆವೂರಾಯರು "ಯಕ್ಷರಜತ" ಪುಸ್ತಕದ ಪರಿಚಯ ಮಾಡಿ, ಸ್ವಾಗತಿಸಿದರು. ನಾಗೇಶ್ ದೇವಾಡಿಗ ಸಹಕರಿಸಿ, ಧನ್ಯವಾದವಿತ್ತರು.


ಸಭಾಕಾರ್ಯಕ್ರಮದ ಬಳಿಕ ಸರಯೂ ತಂಡದಿಂದ ಲಕ್ಮೀನಾರಾಯಣ ಹೊಳ್ಳ ಸ್ಕಂದ ಕೊನ್ನಾರ್, ಮಧುಸೂದನ ಅಲೆವೂರಾಯರ ಹಿಮ್ಮೇಳದೊಂದಿಗೆ "ಶ್ರೀಕೃಷ್ಣ ಪಾರಮ್ಯ" ಎಂಬ ಪ್ರಸಂಗದ ಬಯಲಾಟ ನೆರವೇರಿತು. ಅತಿಥಿಯಾಗಿ ಪ್ರೇಮ್ ರಾಜ್, ಕೊಯ್ಲ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top