ನಂಜನಗೂಡು: ವಿಶ್ವ ಪ್ರಸಿದ್ಧ ದಸರಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಸೋಮವಾರ (ಸೆ.29) ರಾತ್ರಿ ಗಂಗಾಧರ್ ಗಾಂಧಿ ಮತ್ತು ತಂಡದ ಕನ್ನಡ ಗೀತೆಗಳು ಸೇರಿದ ಜನಮನ ರಂಜಿಸಿ ನೆರೆದ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮಾಡಿತು.
ಸುಮಾರು ಒಂದೂವರೆ ಗಂಟೆ ಕಾಲ ಕನ್ನಡ ಗೀತಾ ಗಾಯನ ಕಾರ್ಯಕ್ರಮದಲ್ಲಿ ಬೆಳ್ಳಿ ತೆರೆಯ ಬಂಗಾರದ ಗೀತೆಗಳನ್ನು ಸಾದರ ಪಡಿಸಿದರು. ಲಕ್ಷ ಕೋಟಿ ನೀಡಿ ಸೆಲೆಬ್ರಿಟಿಗಳನ್ನು ಕರೆತಂದು ಕಾರ್ಯಕ್ರಮಗಳನ್ನು ಆಯೋಜಿಸುವ ಸರಕಾರ, ಗಂಗಾಧರ್ ಗಾಂಧೀಯಂತಹ ಅಪ್ಪಟ ದೇಸಿ ಪ್ರತಿಭೆಗಳಿಗೆ ಮನೆ ಹಾಕಿದರೆ ನಿಜವಾದ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಟ್ಟಂತೆ ಆದೀತು ಎಂಬ ಮಾತುಗಳು ಕೇಳಿಬಂದವು.
"ಈ ದೇಶ ಚೆನ್ನಾ ಈ ಮಣ್ಣು ಚಿನ್ನಾ" ಎಂಬ ಗೀತೆಯೊಂದಿಗೆ ಆರಂಭಗೊಂಡ ಕನ್ನಡ ಗೀತಾ ಗಾಯನ ಕನ್ನಡ ಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತೆ "ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ ನಾವಿರುವ ತಾಣವೇ ಗಂಧದ ಗುಡಿ" ಗೀತೆಯೊಂದಿಗೆ ವಿರಮಿಸಿದ ಗೀತಾಗಾಯನದಲ್ಲಿ ಮೈಸೂರಿನ ಸುಜಾತ ಜಯಕುಮಾರ, ಧೃತಿ ಪಿ.ಶೆಟ್ಟಿ, ಸುಶೇಷ ಬಾಲಾಜಿ ಕನ್ನಡ ಚಿತ್ರ ರಂಗದ ಮಾಧುರ್ಯ ಪ್ರಧಾನ ಗೀತೆಗಳಿಗೆ ಧ್ವನಿಯಾದರು. ರೇಷ್ಮಾ ಶೆಟ್ಟಿ ಗೊರೂರು ನಿರೂಪಣೆಯಲ್ಲಿ ಸುಂದರವಾಗಿ ಮೂಡಿಬಂದ ಈ ಕಾರ್ಯಕ್ರಮಕ್ಕೆ ಮೈಸೂರಿನ ಯುವ ದಸರಾ ವೇದಿಕೆ ನೀಡಬೇಕಾಗಿತ್ತು ಎಂಬ ಮಾತುಗಳು ಕೇಳಿ ಬಂದವು.
ಗಂಗಾಧರ್ ಗಾಂಧಿ ತಂಡ ನಿರಂತರ 12 ಗಂಟೆಗಳ ಹಾಡುವ ಮೂಲಕ ಎರಡು ವಿಶ್ವ ದಾಖಲೆ ಮಾಡಿರುವ ವಿಷಯ ಅರಿತಿದ್ದ ರಾಷ್ಟ್ರೀಯ ಬಸವ ದಳ ಮಂಡ್ಯ, ಅಧ್ಯಕ್ಷ, ನ್ಯಾಯವಾದಿ ಎಂ ಗುರುಪ್ರಸಾದ ಮಂಡ್ಯ ಮತ್ತು ಅವರ ಬಳಗ ಗಂಗಾಧರ್ ಗಾಂಧಿ ಮತ್ತು ತಂಡವರಾದ ಗಾಯಕಿ ಸುಜಾತಾ ಜಯಕುಮಾರ, ಗಾಯಕಿ ಧೃತಿ ಪಿ. ಶೆಟ್ಟಿ ಹಾಗೂ ನಿರೂಪಕಿ ರೇಷ್ಮಾ ಶೆಟ್ಟಿ ಗೊರರುರನ್ನು ರೇಷ್ಮೆ ಶಾಲು, ಮೈಸೂರು ಪೇಟೆ, ಹಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಿತು.
ಉಪನ್ಯಾಸಕಿ ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರೂಪಕಿ ಸವಿತಾ ಮತ್ತು ವೇದಿಕೆ ಉಸ್ತುವಾರಿ ಆದರ್ಶ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

