ನಮ್ಮ ಸಂಸ್ಕ್ರತಿಯಲ್ಲಿ ಅತಿಥಿಗೆ ತನ್ನದೇ ಆದ ಗೌರವ ಇದೆ. ನಮ್ಮ ಮನೆಗೆ ನಮ್ಮ ಶತ್ರು ಬಂದರೂ ನಾವು ಮನುಷ್ಯತ್ವದಡಿಯಲ್ಲಿ ನಾವು ಅತಿಥಿಯ ಬಗ್ಗೆ ಗೌರವ ತಾಳುತ್ತೇವೆ. ಈ ಪರಿಕಲ್ಪನೆ ಇಟ್ಟುಕೊಂಡು ನಾವು ಪ್ರತಿ ವರ್ಷ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತೇವೆ.
ನಮ್ಮಲ್ಲಿ ಪ್ರವಾಸೋದ್ಯಮಕ್ಕೆ ನಿಸರ್ಗ ರೂಪಿತವಾದ ವ್ಯವಸ್ಥೆ ಇದೆ. ನಮ್ಮಲ್ಲಿ ವಿಶ್ವ ಪ್ರಸಿದ್ಧ ಸ್ಮಾರಕಗಳು, ಕೋಟೆಗಳು, ದೇವಾಲಯಗಳು ಪ್ರವಾಸಿಕರನ್ನು. ಕೈ ಬೀಸಿ ಕರೆಯುತ್ತವೆ. ವಿಶ್ವ ಪ್ರಸಿದ್ಧ ಗೋಲ ಗುಮ್ಮಟ ದಿಂದ ಹಿಡಿದು ಅನೇಕ ಕೋಟೆಗಳು, ಗುಹಾಂತರ ದೇವಾಲಯಗಳು ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತವೆ.
ನಮ್ಮ ದೇಶಕ್ಕೆ , ನಮ್ಮ ರಾಜ್ಯಕ್ಕೆ ಭೇಟಿ ಕೊಡುವ ಪ್ರವಾಸಿಗರು ನಮ್ಮ ದೇಶದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ರೂಪಿಸುತ್ತಾರೆ. ಅದನ್ನು ಒಂದು ರೀತಿಯಲ್ಲಿ ಫೀಡ್ಬ್ಯಾಕ್ ಅನ್ನಬಹುದು.
ನಮ್ಮ ದೇಶದ ಬಗ್ಗೆ, ನಮ್ಮ ಉತ್ಪನ್ನಗಳ ಬಗ್ಗೆ ಅವರು ಮೌತ್ ಪಬ್ಲಿಸಿಟಿಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಒಮ್ಮೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡಬಲ್ಲದು.
ಇಲ್ಲಿ ಒಂದು ಕಥೆ ನೆನಪಾಗುತ್ತದೆ. ಒಮ್ಮೆ ಸ್ವಾಮಿ ವಿವೇಕಾನಂದರು ಜಪಾನಿಗೆ ಹೋದಾಗ ರಾತ್ರಿ ಫಲಹಾರಕ್ಕೆ ಬಾಳೆಹಣ್ಣು ಸಿಗದೆ ಇಲ್ಲಿ ಬಾಳೆಹಣ್ಣು ಸಿಗುವುದಿಲ್ಲ ಎಂದು ಜೋರಾಗಿ ಬಯ್ದುಕೊಳ್ಳಲು ಶುರು ಮಾಡಿದರು. ಆಗ ಅಲ್ಲಿಯೇ ಇದ್ದ ಬಾಲಕನೊಬ್ಬ ಇದನ್ನು ಕೇಳಿಸಿಕೊಂಡು ಎಲ್ಲ ಕಡೆಗೆ ಹುಡುಕಾಡಿ ಬಾಳೆ ಹಣ್ಣು ತಂದು ಕೊಟ್ಟನು. ಏಕೆ ಹೀಗೆ ಮಾಡಿದೆ ಎಂದು ಕೇಳಿದಾಗ ನೀವು ನಿಮ್ಮ ದೇಶಕ್ಕೆ ಹೋದಾಗ ಜಪಾನಿನಲ್ಲಿ ಬಾಳೆ ಹಣ್ಣು ಸಿಗುವುದಿಲ್ಲ ಎಂದು ಹೇಳುತ್ತಿದ್ದೀರಿ. ಇದರಿಂದ ನಮ್ಮ ದೇಶದ ಬಗ್ಗೆ ಅಪಪ್ರಚಾರ ಆಗುತ್ತಿತ್ತು. ಅದನ್ನು ತಪ್ಪಿಸಲು ಹೀಗೆ ಮಾಡಿದೆ ಎಂದ ಬಾಲಕ ಪ್ರವಾಸಿಗರ ಬಗ್ಗೆ ಗೌರವದ ಪಾಠ ಕಲಿಸಿದ್ದಾನೆ.
ನಮ್ಮಲ್ಲಿ ಪ್ರವಾಸೋದ್ಯಮ ಬೆಳೆಸಲೆಂದು ಪ್ರವಾಸೋದ್ಯಮ ಇಲಾಖೆ ಇದೆ. ಅನೇಕ ಹೋಟೆಲ್ಗಳು ಇದರ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಅನೇಕ ಜನ ಗೈಡ್ ಆಗಿ ಜೀವನೋಪಾಯ ಕಂಡುಕೊಂಡಿದ್ದಾರೆ.
ಪ್ರವಾಸೋದ್ಯಮ ಕೇವಲ ವ್ಯವಹಾರದ ದೃಷ್ಟಿಯಿಂದ ಅಷ್ಟೇ ಅಲ್ಲ, ಬಾಂಧವ್ಯ ಕೂಡ ಬೆಳೆಸುತ್ತದೆ. ಎಷ್ಟೋ ಪ್ರವಾಸಿಗರು ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಇಲ್ಲಿನ ಯುವಕರನ್ನು ಮದುವೆ ಆಗಿ ಇಲ್ಲಿ ನೆಲಸಿದ್ದನ್ನು ಕಾಣುತ್ತೇವೆ.
ಬನ್ನಿ, ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿ ನಮ್ಮ ದೇಶದ ಹಿರಿಮೆಯನ್ನು ಬೆಳೆಸೋಣ. ಅಲ್ಲವೇ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ