ಸರ್ವಸ್ವವನ್ನೂ ಸಮಾಜಕ್ಕೆ ಮುಡುಪಾಗಿಟ್ಟವರು ನಾರಾಯಣಗುರು: ವಿಖ್ಯಾತಾನಂದ ಸ್ವಾಮೀಜಿ

Upayuktha
0



ಮಂಗಳೂರು: ದಲಿತರನ್ನು ಉದ್ಧಾರ ಮಾಡುವುದು ಮಾತ್ರವಲ್ಲದೇ, ಇಡೀ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣಕರ್ತರಾಗುವ ಮೂಲಕ ತಮ್ಮ ಇಡೀ ಬದುಕನ್ನೇ ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟ ಶ್ರೇಷ್ಠ ಸಂತ ನಾರಾಯಣಗುರು ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ನಾರಾಯಣಗುರು ಜಯಂತಿ-2025 ಅಂಗವಾಗಿ ವಿಶ್ವ ಸಂತಸತ್ವ ನಾರಾಯಾಣಗುರು ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 


ದಲಿತರನ್ನು ನೂರು ಮೈಲಿ ದೂರ ಇರಿಸುತ್ತಿದ್ದ ಕಾಲಘಟ್ಟದಲ್ಲಿ ಅಂತಹ ಮಕ್ಕಳನ್ನು ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಪ್ರಾರ್ಥನೆ ಹೇಳಿಕೊಡುತ್ತಿದ್ದರು. ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂದಾಗ ನದಿಗೆ ಹಾರಿ ಶಿವಲಿಂಗ ತಂದು ಕಣ್ಣೀರಿನಿಂದ ಅಭಿಷೇಕ ಮಾಡಿ ದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ದೇವರು ಎಲ್ಲರಿಗೂ ಲಭ್ಯ ಎಂಬುದನ್ನು ಸಾರುತ್ತಾರೆ. ಆ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದರು ಎಂದರು. 


ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿಕಟ ಪೂರ್ವ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ರಮ್ಮ ವಿಶೇಷ ಉಪನ್ಯಾಸದಲ್ಲಿ, ನಾರಾಯಣಗುರು ಕೇವಲ ದೇಶಕ್ಕೆ ಮಾತ್ರವೇ ಸೀಮಿತವಾದವರಲ್ಲ, ಬದಲಾಗಿ ವಿಶ್ವಧರ್ಮದ ಹರಿಕಾರ. ದಲಿತರ ಕಣ್ಣೀರನ್ನು ಒರೆಸುವುದು ಮಾತ್ರವಲ್ಲದೇ ಕಣ್ಣೀರೇ ಬಾರದಂತೆ ಮಾಡಿದ್ದಾರೆ. ಸಂವಿಧಾನದಲ್ಲಿ ದಲಿತರಿಗೆ ಸಿಕ್ಕ ಎಲ್ಲಾ ಸವಲತ್ತುಗಳಿಗೆ ನಾರಾಯಣಗುರು ಸೇರಿದಂತೆ ನಾನಾ ಸಮಾಜ ಸೇವಕರು ಪ್ರೇರಣೆಯಾಗಿದ್ದಾರೆ.


ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರವೇ ಸೀಮಿತವಾಗದೇ, ಇಂತಹ ಮಹಾನ್ ವ್ಯಕ್ತಿಗಳ ತತ್ತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರವೇ ಬದುಕು ಸಾರ್ಥಕವಾಗುತ್ತದೆ. ನಾರಾಯಣಗುರುಗಳ ತತ್ತ್ವಗಳನ್ನು ಕೇವಲ ಪ್ರಚಾರ ಮಾಡದೇ, ಬದುಕಿನಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ನಾರಾಯಣಗುರು ತತ್ತ್ವ ಪ್ರಚಾರ ಬಯಸದೇ ಅವುಗಳನ್ನು ನಿತ್ಯದ ಬದುಕಿನಲ್ಲಿ ಆಚರಣೆ ಮಾಡುವಂತೆ ಹೇಳಿದ್ದಾರೆ. ಗಾಂಧೀಜಿ ಹಾಗೂ ನಾರಾಯಣಗುರುಗಳಂತಹ ಮಹಾನ್ ನಾಯಕರು ಎಂದಿಗೂ ಹಿಂಬಾಲಕರನ್ನು ಬಯಸಲಿಲ್ಲ, ಅವರು ಹೇಳಿದ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅನುಸರಿಸುವವರಾಗಬೇಕು ಎಂದು ಬಯಸಿದ್ದರು ಎಂದರು. 


ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಬ್ರಹ್ಮಶ್ರೀ ನಾರಾಯಣಗುರು ಪೀಠದ ನಿರ್ದೇಶಕ ಡಾ. ಜಯರಾಜ್ ಎನ್. ಪೀಠದ ಸಲಹಾ ಸಮಿತಿ ಸದಸ್ಯ ಬಾಬು ಶಿವ ಪೂಜಾರಿ, ಪಿ. ವಿ. ಮೋಹನ್, ವಿಜಯ ಕುಮಾರ್ ಸೊರಕೆ, ಸತೀಶ್ ಎನ್. ಕರ್ಕೇರಾ, ನಮಿತಾ ಶ್ಯಾಮ್, ಮೋಹನ್ ರಾಜ್ ಕೆ. ಆರ್., ಮೋಹನ್ ಚಂದ್ರನ್ ನಂಬಿಯಾರ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top