ಪ್ರಕೃತಿಯು ಸರ್ವರನ್ನು ಸಮಾನ ರೀತಿಯಲ್ಲಿ ನೋಡುವ ದೇವರ ಸೃಷ್ಟಿಯಾಗಿದೆ. ವಾತಾವರಣದಲ್ಲಿ ಗಾಳಿ, ನೀರು, ಬೆಳಕು, ಆಕಾಶ, ಎಲ್ಲರಿಗೂ ಒಂದೇ ಆಗಿದೆ. ಅದರಲ್ಲಿ ಬಡವರಿಗೆ ಬೇರೆ, ಶ್ರೀಮಂತರಿಗೆ ಬೇರೆ, ಪ್ರಾಣಿ- ಪಕ್ಷಿಗಳಿಗೆ ಬೇರೆ ಇಲ್ಲ. ಈ ಅಗಾಧ ವಿಶ್ವಕ್ಕೆ ಅಂದರೆ ಆಕಾಶ, ನಕ್ಷತ್ರ, ಅಂತರಿಕ್ಷ ಈ ಎಲ್ಲವನ್ನೂ ಒಂದೆ ರೀತಿಯಿಂದ ತೆರೆದುಕೊಂಡಿದ್ದೇವೆ ಅಂದರೆ, ದೇವರು ನಮಗೆಲ್ಲ ಒಂದೇ ರೀತಿಯ ಅವಕಾಶವನ್ನು ನೀಡಿದ್ದಾನೆ. ಭೂಮಿಯ ಮೇಲೆ ಯಾರು ಯಾವ ಮೂಲೆಯಲ್ಲಿ ಇದ್ದರೂ ಭಗವಂತನಿಗೆ ನಾವೆಲ್ಲರೂ ಒಂದೆ ಸಮಾನ ರೀತಿಯಲ್ಲಿ ಕಾಣಿಸುತ್ತೇವೆ.
ಈ ಜಗತ್ತು "ಗಂಡು- ಹೆಣ್ಣು" ಅನ್ನುವ ಎರೆಡು ವಿಭಿನ್ನ ಲಿಂಗಗಳಿಂದ ನಿರ್ಮಿಸಲ್ಪಟ್ಟ ಅದ್ಭುತ ಸೃಷ್ಟಿ. ಅದುವೆ ಭಗವಂತನ ಸ್ವರೂಪಗಳು, "ಶಿವ- ಶಕ್ತಿ" ನಮ್ಮ ಸನಾತನ ಧರ್ಮದ ಪ್ರಕಾರ ಮೂಲ ಪುರುಷನಾದ ಶಿವ ಪುರುಷನಾದರೆ, ಅವನ ಹಿಂದಿರುವ ಅದಮ್ಯ ಚೇತನ ರೂಪವು ಶಕ್ತಿಯಾಗಿದೆ. ಇವರು ಒಬ್ಬರಿಗೊಬ್ಬರು ಹೊರತಾಗಿಲ್ಲ ಮತ್ತು ಒಬ್ಬರಿಗೊಬ್ಬರು ಪೂರಕವಾಗಿದ್ದಾರೆ. ಅದೇ ರೀತಿ ಈ ಪೂರ್ಣ ಜಗತ್ತು ಗಂಡು ಮತ್ತು ಹೆಣ್ಣಿನ ಸಮ್ಮಿಲನದ ಶಕ್ತಿಯ ಸಂಚಲನವಾಗಿದೆ. ಈ ಶಕ್ತಿಯ ಸಂಚಲನದಲ್ಲಿ ಪ್ರತಿಯೊಬ್ಬರೂ ಎಷ್ಟು ಬಾರಿ ಜನ್ಮ ಪುನರ್ಜನ್ಮವನ್ನು ಪಡೆದಿದ್ದೇವೋ ಆ ದೇವರೇ ಬಲ್ಲ.
ಋಣಾನುಬಂಧ ರೂಪೇಣ ಪಶು- ಪತ್ನಿ ಸುತಾಲಯ
ಋಣ ಇಲ್ಲದೇ ಯಾವ ಬಂಧಗಳೂ ಬೆಸೆಯಲಾರವು. ಮನುಷ್ಯ ಜನ್ಮ- ಜನ್ಮಗಳು ಮಾಡಿದ ಕರ್ಮ ಫಲದ ಅನುಸಾರ ಈ ಜನ್ಮದಲ್ಲಿ ಜನ್ಮ ಪಡೆಯುತ್ತದೆ ಮತ್ತು ಅದನ್ನೇ ಅನುಭವಿಸುತ್ತಾರೆ. ಅದರ ಪ್ರಕಾರವಾಗಿ ಸಿರಿ-ಸಂಪತ್ತು, ಆಯುಷ್ಯ- ಆರೋಗ್ಯ, ಅದೃಷ್ಟ, ತಂದೆ- ತಾಯಿ, ಮನೆ- ಮಡದಿ, ಮಕ್ಕಳು ಹೀಗೇ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ. ತಂದೆ ತಾಯಿ ಅಂದರೆ ಬಾಲ್ಯಾವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಹಂತವಾದರೆ, ನಂತರ ವಯಸ್ಕ, ಅಂದರೆ ಮದುವೆಯ ನಂತರ ಜೀವನ ಇನ್ನೊಂದು ಹಂತಕ್ಕೆ ತೆರೆದುಕೊಳ್ಳುತ್ತದೆ. ಈ ಹಂತವು ವ್ಯಕ್ತಿಯ ಜೀವನದ ಮುಖ್ಯ ಘಟ್ಟವಾಗಿರುತ್ತದೆ. ಇಲ್ಲಿ ವ್ಯಕ್ತಿಯ ವ್ಯಕ್ತಿತ್ವ, ಸಾಧನೆ, ಸಂತೋಷ, ನೆಮ್ಮದಿ ಎಲ್ಲವನ್ನು ಒಳಗೊಂಡಿರುತ್ತದೆ. ತಂದೆ ತಾಯಿ ಮಕ್ಕಳಿಗೆ ಒಂದು ಒಳ್ಳೆಯ ಸಂಸ್ಕಾರವನ್ನು ನೀಡಿದ್ದರೆ, ಆ ಸಂಸ್ಕಾರಕ್ಕೆ ಸಾಕಾರ ಬರುವುದು ಒಬ್ಬ ಒಳ್ಳೆಯ ಮಡದಿಯನ್ನು ಕೈ ಹಿಡಿದಾಗ.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ತನ್ನ ತಂದೆ-ತಾಯಿ, ಅಕ್ಕ-ತಮ್ಮ, ಬಂಧು-ಬಳಗವನ್ನು ತೊರೆದು, ಕಟ್ಟಿದ ತಾಳಿ ಮೂರು ಗಂಟೆಗೆ, ಗಂಡನ ಪ್ರೀತಿಗೆ ತನ್ನೆಲ್ಲರನ್ನು ತೋರೆದು, ಬೇರೊಂದು ಮನೆಯಲ್ಲಿ ತನ್ನವರಲ್ಲದವರನ್ನು ತನ್ನವರಂತೆ ತಿಳಿದು. ಪ್ರತಿಯೊಂದಕ್ಕೂ ಹೊಂದಿಕೊಂಡು ಹೋಗುವ ಹೆಣ್ಣಿನ ಶಕ್ತಿ ಆಗಮ್ಯಾವದು. ಯಾಕೆಂದರೇ ಈ ಹೊಂದಾಣಿಕೆಯ ಗುಣ ನಾವು ಪುರುಷರಲ್ಲಿ ನೋಡಲು ಸಾಧ್ಯವಿಲ್ಲ. ಹೆಣ್ಣಿನ ಈ ಗುಣಕ್ಕೆ ಶಿವ ತನ್ನ ಪತ್ನಿಗೆ "ಶಕ್ತಿ" ಎಂದು ಕರೆದಿರುವುದು.
ನಾವೆಲ್ಲಾ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ ತಮ್ಮ, ಹೀಗೆ ಎಲ್ಲರೊಂದಿಗೂ ಹುಟ್ಟಿ ಬೆಳೆದಿದ್ದರೂ, ಯಾರೊಂದಿಗೂ ಜೀವನ ಪೂರ್ತಿ ಕಳೆಯು ಬೇಕೆಂಬ ಷರತ್ತಿಲ್ಲ. ಯಾರೊಂದಿಗೆ ಜೀವನವಿಡಿ ಜೊತೆಯಾಗಿ ಬಾಳಬೇಕೆಂಬ ಗಂಟನ್ನು ದೇವರು ಹಾಕಿಲ್ಲ. ಜೀವನ ಯಾರು ಕೂಡ ಶಾಶ್ವತವಾಗಿ ಜೊತೆಯಾಗಿ ಈ ಪ್ರಪಂಚದಲ್ಲಿ ಬದುಕಬೇಕಂದರು ಸಾಧ್ಯವಿಲ್ಲ. ತಂದೆ ತಾಯಿ ಸ್ನೇಹಿತರು, ಒಡಹುಟ್ಟಿದವರು, ಮಕ್ಕಳು ಓದು ಉದ್ಯೋಗ, ಜವಾಬ್ದಾರಿ ಹೀಗೆ ನಾನಾ ಕಾರಣಗಳಿಂದ ಒಂದಲ್ಲ ಒಂದು ರೀತಿಯಿಂದ ಒಂದು ದಿನ ದೂರ ಹೋಗಲೇ ಬೇಕು ಅದರ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬಂದ ಸ್ತ್ರೀಗೆ ಋಣನುಬಂದವನ್ನು ಬೆಸೆದು ಉಸಿರ ಕೊನೆಗೆವರೆಗು ಜೋಡಿಯಾಗಿರಲೆಂದು ಗಂಡು ಹೆಣ್ಣಿಗೆ ಗಂಟಿನ ನೆಂಟನ್ನು ಬೆಸೆದಿದ್ದಾನೆ. ಜೊತೆಯಾಗಿ ಹುಟ್ಟಿದವರು ಜೊತೆಯಾಗಿ ಇಲ್ಲ, ಆದರೆ ಬ್ರಹ್ಮ ಬೆಸೆದಿರುವ ಬ್ರಹ್ಮ ಗಂಟು ಎಲ್ಲೋ ಹುಟ್ಟಿರುವ ಇನ್ನೊಂದು ಜೀವವನ್ನು ಶಾಶ್ವತವಾಗಿ ಈ ಪ್ರಪಂಚದಲ್ಲಿ ನಮ್ಮ ಜೊತೆಯಲ್ಲಿ ಇರಿಸುವನು ಒಂದು ಜೀವವನ್ನು ಸದಾ ಜೊತೆಯಾಗಿ ಮಾಡಿರುವನು. ಒಂದು ಗಂಡಿಗೆ ಹೆಣ್ಣು. ಒಂದು ಹೆಣ್ಣಿಗೆ ಗಂಡು ಎಂಬ ಭಾವನೆಯೇ ಶ್ರೇಷ್ಠ. ಈ ಶ್ರೇಷ್ಠತೆಯನ್ನೂ ಅರಿತಾಗಲೆ ನಿಜವಾದ ಪ್ರೀತಿ ಸಾದ್ಯ.
ನಿಜವಾದ ಪ್ರೀತಿ ಪರಿಶುದ್ಧತೆ ಮತ್ತು ಪವಿತ್ರತೆಯನ್ನು ಹೊಂದಿದ್ದು ಇದು ಕೇವಲ ಜೀವನ ಹಂಚಿಕೆ, ದೇಹ ಹಂಚಿಕೆಯ ಕಾರ್ಯವಲ್ಲ. ಹಂಚಿಕೆಯ ಅರಿವನ್ನು ಅರಿತಿರುವಂತದ್ದು ನೆಪ ಮಾತ್ರಕ್ಕೆ ಗಂಡ ಹೆಂಡತಿ ಆಗಿ ಅದರ ಸಾರ ಸಂಯಮ ತಿಳಿದಿಲ್ಲವೆಂದರೆ ಆ ನಂಟಿಗೆ ಅರ್ಥವೆಬಾರದು. ತಮ್ಮ ತನು ಮನವನ್ನು ಅರ್ಪಿಸಿ ಮದುವೆಯಾಗಿ ಜೀವನ ನೆಡೆಸುತ್ತಿದ್ದರೂ ಗಂಡನ ಫೋನ್ ಪಾಸ್ ವರ್ಡ್ ಗೊತ್ತಿರಲಿಲ್ಲ ಹೇಗೇ? ಹೆಂಡತಿಯ ವ್ಯಕ್ತಿತ್ವ ಗೊತ್ತಲ್ಲದಿದ್ದರೇ ಹೇಗೆ..!?
ಶಿವ ಪಾರ್ವತಿಯರು, ಲಕ್ಷ್ಮೀ ನಾರಾಯಣರು ಇದ್ದಕೆ ತಕ್ಕ ಸೂಕ್ಷ್ಮತೆಯನ್ನು ತಿಳಿದರೆ. ತ್ರಿಶೂಲಧಾರಿಯಾದ ಶಿವನ ತ್ರಿಶೂಲವನ್ನು ಮಾತೆ ಪಾರ್ವತಿಯನ್ನು ಹೊರೆತು ಪಡೆಸಿದರೆ ಬೇರೆ ಯಾರು ಎತ್ತಲು ಅಲ್ಲ ಮುಟ್ಟಲು ಸಾಧ್ಯವಿಲ್ಲ. ಇದೆ ಅರ್ಧನಾರೀಶ್ವರ ತತ್ವ. ಅವರಿಬ್ಬರು ಇಬ್ಬರಲ್ಲ ಒಬ್ಬರೆ ಆಗಿದ್ದಾರೆ. ಗಂಡನಿಗೆ ಹೆಂಡತಿ ಸ್ವಂತ, ಹೆಂಡತಿಗೆ ಗಂಡ ಸ್ವಂತ ಅಂದ ಮೇಲೆ ವಸ್ತುಗಳ ಮೇಲೆ ಯಾಕೆ ವೈಯಕ್ತಿಕತೆ. ಅವರಿಬ್ಬರಿಗೂ ಸೇರುವ ಹಾಗೆ ಮುಕ್ತವಾಗಿರಬೇಕು ಪ್ರೀತಿ. ನಾರಾಯಣನ ಶಂಖ ಚಕ್ರ ಲಕ್ಷ್ಮೀಯ ಆವಾಸ ಸ್ಥಾನದಲ್ಲಿ ನೋಡಬಹುದಾಗಿದೆ.
ಸರ್ವ ಜನ್ಮಂ ಪಾತಿವ್ರತ್ಯಂ ಪ್ರಾಪ್ತಾರ್ಥಮ್ |
ದಾಂಪತ್ಯವೆಂದರೆ, ಸರ್ವ ಸಕಲ ಜನ್ಮಕ್ಕೂ ಅದೇ ವ್ಯಕ್ತಿ ಸಾಂಗತ್ಯವೇ ಬೇಕೆಂದು ಸಂಕಲ್ಪಿಸುವುದಾಗಿದೆ. ಕೇವಲ ಈ ಜನ್ಮದಲ್ಲಿ, ಅಲ್ಲದೆ ಜನ್ಮ ಜನ್ಮಕ್ಕೂ ಜೊತೆಯಾಗಿರಬೇಕೆಂದು ಕೇಳಿಕೊಳ್ಳುವಷ್ಟು ಹಿತವಾಗಿರಬೇಕು ಪ್ರೀತಿ ಹಾಗೂ ನಂಬಿಕೆ. ಆದರೆ ಇಂದಿನ ಸಮಾಜದ ವೈವಾಹಿಕ ದಂಪತಿಗಳ ಪರಿಸ್ಥಿತಿ ನೆನಸಿಕೊಂಡರೆ ಭಯವೆನ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗತಿಗಳು, ಗಂಡನನ್ನು ನೀರಿಗೆ ತಳ್ಳಿದ ಹೆಂಡತಿ, ಹನಿಮೂನ್ ಅಲ್ಲಿ ಪ್ರಿಯಕರನೊಂದಿಗೆ ಗಂಡನನ್ನು ಕೊಲೆ ಮಾಡಿದ ಹೆಂಡತಿ, ಮನೇಲಿ ಮಡದಿ ಇದ್ದರೂ ಪರ ಹೆಂಗಸರ ಮೋಹಕೆ ಬಲಿ ಆಗುವ ಗಂಡಂದಿರ ಎಣಿಕೆಗೆ ಏನು ಕಡಿಮೆ ಇಲ್ಲ.
ಹೀಗೆ ಅನೈತಿಕ ಸಂಬಂಧಕ್ಕೆ ಬಲಿಯಾಗಿ ತಮ್ಮ ಬಂಗಾರದಂತಹ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸರಿಯಾದ ಜ್ಞಾನ, ತಿಳುವಳಿಕೆ, ಇಲ್ಲದೇ ಕೇವಲ ಕುರುಡು ಪ್ರೀತಿ, ಬಾಹ್ಯ ಸೌಂಧರ್ಯಕ್ಕೆ ಮರುಳಾಗಿ ತಮ್ಮಗೆ ತಾವೇ ಕೊಳ್ಳಿ ಇಟ್ಟುಕೊಳ್ಳುತ್ತಾರೆ. ಇದಕ್ಕೆಲ್ಲ ಕಾರಣ ಮಕ್ಕಳಲ್ಲಿ ಸರಿಯಾದ ಮೌಲ್ಯಗಳು ಬೆಳಸದಿರುವುದು. ನೈತಿಕತೆ, ಉದ್ದಾತ ಮನೋಭಾವ ಹೊಂದಾಣಿಕೆ ವಿಶ್ವಾಸದಂತಹ ಮಾನವೀಯ ಮೌಲ್ಯಗಳಿಗೆ ಪಠ್ಯಗಳಲ್ಲಿ ಹೆಚ್ಚು ಒತ್ತು ನೀಡದಿರುವುದು ಹಾಗೂ ಪಾಲಕರು ಅವುಗಳನ್ನು ಮಕ್ಕಳಿಗೆ ತಿಳಿಸದಿರುವುದು. ಅಲ್ಲದೆ ತಂದೆ ತಾಯಿಗಳು ಮಕ್ಕಳ ಇಷ್ಟಾನುಸಾರ ಮದುವೆ ಮಾಡದೆ ತಮ್ಮ ಆಸ್ತಿ ಅಂತಸ್ತು, ಜಾತಿ ಹೀಗೆ ತಮಗೆ ಹೊಂದಿಕೆ ಆಗುವುದು ನೋಡುವುದಕ್ಕಿಂತ ಅವರ ಆಯ್ಕೆಗೆ ಪ್ರಾಮುಕ್ಯತೆ ನೀಡಿದರೆ ತಕ್ಕ ಮಟ್ಟಿಗೆ ಇಂತಾ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವುದನ್ನೂ ತಡೆಯಬಹುದು.
ಅಷ್ಟೆ ಅಲ್ಲ, ಇನ್ನು ಕೆಲವು ಸಂಗತಿಗಳಲ್ಲಿ ಪ್ರೇಮ ವಿವಾಹವಾದರೂ ಗಂಡ-ಹೆಂಡತಿ ಹೊಂದಿಕೊಳ್ಳದೆ ವಿಚ್ಛೇದನದವರೆಗೆ ಹೋಗುತ್ತಾರೆ. ಯಾಕೆ? ಪ್ರೀತಿಸುವಾಗ ಇದ್ದ ನಂಬಿಕೆ ಮದುವೆಯಾದ ನಂತರ ಇರುವದಿಲ್ಲ ಅಂದರೆ ಅಲ್ಲಿ ನಿಜವಾದ ಪ್ರೀತಿ ಇಲ್ಲದೇ ಕೇವಲ ವ್ಯಾಮೋಹಕ್ಕೆ ಬಲಿಯಾಗಿ, ಮದುವೆ ಆಗಿ ತಾಳ್ಮೆ ಇಲ್ಲದೇ ತಮ್ಮ ಪ್ರೀತಿಯನ್ನು ಅಂತ್ಯಗೊಳಿಸುತ್ತಾರೆ. ಮತ್ತು ನಿಶ್ಚಯಿಸಿದ ಮದುವೆಯಲ್ಲಿ ಕೆಲವು ಜೋಡಿಗಳು ಗೆದ್ದರೆ, ಇನ್ನು ಕೆಲವು ಜೋಡಿಗಳು ನೆಲಕಚ್ಚುತ್ತವೆ.
ಮದುವೆಯ ರೀತಿ ಯಾವುದಾದರೂ, ದಂಪತಿಗಳಿಗೆ ಒಬ್ಬರಿಗೊಬ್ಬರು ಹೊಂದಿಕೊಳ್ಳುವ ಗುಣವಿರಬೇಕು. ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರಿಗೆ ಗೌರವವಿರಬೇಕು. ಸಹನೆ, ತಾಳ್ಮೆ ಶಕ್ತಿಯಾಗಿರುತ್ತದೆ. ನಾನು ಎಂಬ ಅಹಂ ಇಬ್ಬರಲ್ಲೂ ಅಂತ್ಯವಾದಾಗಲೇ ಪ್ರೀತಿಯಂಬುದು ಆರಂಭವಾಗುತ್ತದೆ. ಪ್ರೀತಿಯ ಮುಂದೆ ಇಬ್ಬರು ಮಂಡಿಯೂರಿದಾಗಲೇ ಆ ಪ್ರೀತಿ ಶಾಶ್ವತ. ಅದು ಒಬ್ಬರಿಂದ ಸಾಧ್ಯವಿಲ್ಲ. ಎರಡು ಮನಸುಗಳ ಸಮ್ಮಿಲನ ಪರಸ್ಪರ ಕಾಳಜಿ ಹಾಗೂ ಇಬ್ಬರು ಗಂಡ-ಹೆಂಡತಿ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರಾದಾಗಲೇ ದಾಂಪತ್ಯ ಶಾಶ್ವತ ಮತ್ತು ಸುಖಕರ.
ಇರುವುದೊಂದು ಜೀವನ ಅದನ್ನು ಕೈಹಿಡಿದವರೊಂದಿಗೆ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಹೊಂದಿಕೊಂಡು ಬದುಕಿದರೆ, ಬ್ರಹ್ಮ ಬೆಸೆದಿರುವ ಈ ಗಂಟಿನ ನಂಟು ಅರ್ಥಪೂರ್ಣವೆನಿಸಿಕೊಳ್ಳುತ್ತದೆ.
- ಸಂಗೀತಾ ಸಂತೋಷ ಜವಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ