ಉಜಿರೆ: ಆಪ್ತ ಸಮಾಲೋಚನೆಯ ಕುರಿತು ತಪ್ಪು ಕಲ್ಪನೆಗಳನ್ನು ನಿವಾರಿಸಿ ಜನಸಮೂಹದಲ್ಲಿ ಸಕಾರಾತ್ಮಕ ಅಭಿಪ್ರಾಯಗಳನ್ನು ರೂಪಿಸಬೇಕಿದೆ ಎಂದು ಎಮೋಕೇರ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ, ಮನಃಶಾಸ್ತ್ರಜ್ಞ, ಕಾರ್ಪೋರೇಟ್ ಟ್ರೇನರ್ ಸೀತಾಲಕ್ಷ್ಮಿಕುಮಾರ್ ಅಭಿಪ್ರಾಯಪಟ್ಟರು.
ಸೋಮವಾರ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಪೀಸ್ ಅಸೋಸಿಯೇಷನ್ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಪ್ತ ಸಮಾಲೋಚನೆ ಅಥವಾ ಕೌನ್ಸಲಿಂಗ್ ಎಂದ ತಕ್ಷಣ ಜನರಲ್ಲಿ ಭಯ ಉಂಟಾಗುತ್ತದೆ. ಈ ಕಾರಣಕ್ಕಾಗಿಯೇ ಆಪ್ತ ಸಮಾಲೋಚನೆಯನ್ನು ಜನರು ಇನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ. ಕೌನ್ಸಲಿಂಗ್ ಮಹತ್ವ ತಿಳಿಸಿ ಈ ಭಯವನ್ನು ಹೋಗಲಾಡಿಸಬೇಕು. ಆಪ್ತ ಸಮಾಲೋಚನೆಯ ಪರವಾದ ಮನಃಸ್ಥಿತಿಯನ್ನು ಮನಃಶಾಸ್ತ್ರ ವಿದ್ಯಾರ್ಥಿಗಳು ಸೃಷ್ಟಿಸಬೇಕು ಎಂದರು.
ಮಾನಸಿಕ ಅಸ್ವಸ್ಥತೆಯಿಂದ ಬಳಲುವವರಿಗೆ ಭಾವನಾತ್ಮಕ ಸ್ಪಂದನೆಯ ಅಗತ್ಯವಿರುತ್ತದೆ. ಅವರ ಭಾವನೆಗಳಿಗೆ ಆದ್ಯತೆ ನೀಡಬೇಕು. ಭಾವನಾತ್ಮಕವಾಗಿ ಸ್ಪಂದಿಸಿ ಅವರನ್ನು ಮಾನಸಿಕ ಸಂದಿಗ್ಧತೆಯಿಂದ ಹೊರತರಬೇಕು. ಈ ಬಗೆಯ ಸ್ಪಂದನೆಯೊಂದಿಗೆ ಉತ್ತಮ ಕೇಳುಗರಾಗಿ ಅವರ ಸಮಸ್ಯೆ ಆಲಿಸಬೇಕು. ಹಾಗಾದಾಗ ಮಾತ್ರ ಅವರು ಆಂತರ್ಯದಲ್ಲಿ ಎದುರಿಸುತ್ತಿರುವ ಮಾನಸಿಕ ತೊಳಲಾಟಗಳಿಂದ ಮುಕ್ತವಾಗುವುದಕ್ಕೆ ಪರಿಹಾರ ಸೂಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಪ್ತ ಸಮಾಲೋಚನೆಯಿಂದ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗುತ್ತದೆ. ವ್ಯಕ್ತಿ ತನ್ನ ಆಲೋಚನೆ ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆತಂಕ, ಖಿನ್ನತೆ ಮತ್ತು ಒತ್ತಡಗಳಿಂದ ಮುಕ್ತಿ ನೀಡುತ್ತದೆ. ಆಪ್ತ ಸಮಾಲೋಚಕರ ಮಾರ್ಗದರ್ಶನದ ಮೂಲಕ ವೈಯಕ್ತಿಕ ಅಭಿವೃದ್ಧಿ ಮತ್ತು ಸ್ವಜಾಗೃತಿ ಉಂಟಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪೀಸ್ ಅಸೋಸಿಯೇಷನ್‍ನ ಕಾರ್ಯದರ್ಶಿ ಡಾ.ಮಹೇಶ್ ಬಾಬು ಎನ್ ಉಪಸ್ಥಿತರಿದ್ದರು. ಜಿನಾ ಸ್ವಾಗತಿಸಿದರು. ನಿಶಾನ್ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಕೀರ್ತನಾ ಆನಂದ್ ಸಂಘದ ವಾರ್ಷಿಕ ವರದಿ ವಾಚಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


