ಗಮಕ ಕಲೆ ಪ್ರಚಾರಕಿ, ಕನ್ನಡ ನಾಡಿನಲ್ಲೆಲ್ಲಾ ಸಂಗೀತ ಸುಧೆ ಹರಿಸಿದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರು ಹಾಸನದಲ್ಲಿ 12-4-2940 ರಂದು ಜನಿಸಿದರು. ಇವರ ತಂದೆ ವೆಂಕಟರಾಮಯ್ಯನವರು ಶಿಕ್ಷಕರಾಗಿ ತಾವು ಪಾಠ ಮಾಡುತ್ತಿದ್ದ ಅನೇಕ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವ ಕಲೆಯಲ್ಲಿ ಪರಿಣಿತರಾಗಿದ್ದುದು ವಿಶೇಷ. ಇವರು ಮಗಳು ಗಂಗಮ್ಮನವರು ತಮ್ಮ ತಂದೆಯಿಂದ ಸಂಗೀತವನ್ನು ಕಲಿತು, ಸೀನಿಯರ್ ಗ್ರೇಡ್ ಪರೀಕ್ಷೆ ಸಹ ಪಾಸ್ ಮಾಡಿದರು. ಗಂಗಮ್ಮನವರ ತಾಯಿ ಸೋಮನಾಯಕಮ್ಮನವರೂ ಸಾಂಪ್ರದಾಯಿಕ ಪದಗಳಾದ ಸೋಬಾನೆ ಪದ, ತುಳಸೀಪದ, ಮೊದಲಾದ ಪದಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡಿದ್ದರು. ಇವರು ತಮ್ಮ ಜ್ಞಾಪಕ ಶಕ್ತಿಯಿಂದ ಪುಸ್ತಕಗಳನ್ನು ನೋಡದೇ, 2000 ಪದ್ಯಗಳನ್ನು ಹಾಡುವಷ್ಟು ಸಮರ್ಥರಾಗಿದ್ದರು.
ಈ ವಾತಾವರಣದಲ್ಲಿ ಬೆಳೆದ ಗಂಗಮ್ಮನವರು ಸಹ ಸಹಜವಾಗಿ ಸಂಗೀತದ ಕಡೆಗೆ ಆಸಕ್ತಿ ಬೆಳೆಸಿದರು. ಆಗ ಪ್ರಸಿದ್ಧ ಸಂಗೀತ ವಿದ್ವಾಂಸರಾದ, ಸುಪ್ರಸಿದ್ಧ ಗಮಕ ಕಲಾವಿದರಾಗಿದ್ದ ಎಂ ರಾಘವೇಂದ್ರ ರಾವ್, ನಂ.ಅಶ್ವತ್ಥನಾರಾಯಣ, ಬಿ ಎಸ್ ಎಸ್ ಕೌಶಿಕ್, ಸತ್ಯವತಿ ಕೇಶವ ಮೂತಿ೯, ಮುಂತಾದವರ ಬಳಿ ಗಂಗಮ್ಮನವರು ಸಂಗೀತ ಕಲಿತರು. ಹಾಗೆ ಸಾಹಿತ್ಯದ ಅಭ್ಯಾಸವನ್ನು ಹರಿಹರಪೇಟೆ ರಾಮಚಂದ್ರಾಚಾರ್ ಅವರಲ್ಲಿ ಕಲಿತರು. ಗಂಗಮ್ಮನವರು ತಮ್ಮ ಹತ್ತನೆಯ ವಯಸ್ಸಿನಲ್ಲಿ ಹಾಡುಗಳನ್ನು ಹೇಳುತ್ತಾ, ಮುಂದೆ ಸಹಸ್ರಾರು ಕಾಯ೯ಕ್ರಮಗಳನ್ನು ರಾಜ್ಯದಲ್ಲಿ ನೀಡಿ ಪ್ರಸಿದ್ಧರಾದರು. ಕನ್ನಡ ನಾಡಿನ ರಾಜ್ಯದಲ್ಲಿ ಕಾರ್ಯಕ್ರಮ ನೀಡಿದುದಲ್ಲದೇ, ಹೊರ ರಾಜ್ಯದಲ್ಲೂ ನೀಡಿ ಪ್ರಖ್ಯಾತರಾದ ಗಮಕಿ. ಇವರು ವಿವಾಹವಾಗಿ ಹರಿಹರದಲ್ಲಿ ನೆಲೆಸಿದಾಗ, ಅಲ್ಲಿ ಗಮಕ ತರಗತಿಗಳನ್ನು ನಡೆಸಿ ಅನೇಕ ವಿದ್ಯಾಥಿ೯ಗಳನ್ನು ತಯಾರು ಮಾಡಿ, ಗಮಕ ಕ್ಷೇತ್ರಕ್ಕೆ ನೀಡಿದರು.
ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರು ಗಮಕ ವಾಚನ ಮತ್ತು ವ್ಯಾಖ್ಯಾನವನ್ನೂ ಮಾಡಿ ಪಾಂಡಿತ್ಯ ಗಳಿಸಿ, ಅನೇಕ ಶಿಷ್ಯರನ್ನು ತಯಾರು ಮಾಡಿ ಅವರೂ ಗಮಕ ಕಲೆಗೆ ನಿಷ್ಣಾತರಾದರು. ಆಕಾಶವಾಣಿಯಲ್ಲಿ ಕಾವ್ಯ ವಾಚನ, ದೇವರನಾಮ, ಭಾವಗೀತೆ ಕಾಯ೯ಕ್ರಮಗಳನ್ನು 1960 ರಿಂದಲೇ ನೀಡುತ್ತಾ ಬಂದಿರುವ ಸಾಧಕಿ. ಗಂಗಮ್ಮನವರು ಬೆಂಗಳೂರಿಗೆ ಬಂದು, ನೆಲೆಸಿದ ನಂತರ "ಲಕ್ಷ್ಮೀಶ ಗಮಕ ಪಾಠಶಾಲೆ" ಪ್ರಾರಂಭಿಸಿದರು. ನೂರಾರು ಗಮಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾಗ೯ದಶ೯ನ ನೀಡಿ, ಅವರೂ ಸಹ ಗಮಕ ಕಲೆಯಲ್ಲಿ ನಿಷ್ಣಾತರಾಗಿದ್ದುದು ವಿಶೇಷ. ಗಂಗಮ್ಮನವರು ಅನೇಕ ಕಾವ್ಯ ವಾಚನ, ವ್ಯಾಖ್ಯಾನ, ವಿವಿಧ ಗಮಕಿಗಳಿಂದ ನಡೆಸಿದ ಮಹನೀಯರು ಗಮಕ ಪರಿಷತ್ತು ನಡೆಸುವ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕಾರ್ಯವನ್ನು ನಿವ೯ಹಿಸಿದ ಗಮಕಿ. ಗಮಕ ಕಲಾ ಪರಿಷತ್ತಿನ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಸಂಚಾಲಕರಾಗಿ ಸಹ ಕೆಲಸವನ್ನು ಮಾಡಿದ್ದಾರೆ.
ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರಿಗೆ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ "ಕರ್ನಾಟಕ ಕಲಾಶ್ರೀ "ಪ್ರಶಸ್ತಿ ನೀಡಿ ಗೌರವಿಸಲಾಯಿತು. 2013 ರಲ್ಲಿ ಬೆಂಗಳೂರಿನ ಗಮಕ ಕಲಾ ಸಮ್ಮೇಳನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯಶಸ್ವಿಯಾಗಿ ಜರುಗಿಸಿದರು. ಆ ಸಂದರ್ಭದಲ್ಲಿ ಇವರಿಗೆ ಗಮಕ ಕಲಾರತ್ನ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಇವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷತೆ ಜವಾಬ್ದಾರಿಯನ್ನು ವಹಿಸಿ ಪ್ರಖ್ಯಾತರಾದರು. 2017 ರಿಂದ ಗಂಗಮ್ಮ ಕೇಶವಮೂರ್ತಿ ಅವರು, ನಾಡಿನ ಗಮಕ ಕಲಾ ಪರಿಷತ್ತಿನ ಅಧ್ಯಕ್ಷತೆ ವಹಿಸಿ, ಕಾಯ೯ ನಿವ೯ಹಿಸುತ್ತಿದ್ದಾರೆ.
ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿಷ್ಠಿತ ಕುಮಾರವ್ಯಾಸ ಪ್ರಶಸ್ತಿ ಸಹ ಲಭಿಸಿದೆ. ಮಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ