ಲೇಖಾ ಲೋಕ-52: ಕನ್ನಡ ಕವಿಗಳ ಸೊಗಡಿನ ಸಾಹಿತಿ ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟರು

Upayuktha
0




ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಾಗವಾಗಿ ಕೇಳಬೇಕೆಂದರೆ ನಾಡಿನ ಪ್ರಸಿದ್ಧ ಕವಿ ಎಚ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರ ಮುಖವಾಣಿ ಅತ್ಯಂತ ಆಪ್ಯಾಯಮಾನವಾಗಿದೆ ಎಂದರೆ ತಪ್ಪಾಗಲಾರದು. ಕನ್ನಡ ಕವಿಗಳ ಸೊಗಡನ್ನು, ಸುಶ್ರಾವ್ಯವಾಗಿ, ರಾಗ ಯೋಜನೆಯೊಂದಿಗೆ, ವೈವಿಧ್ಯಮಯ ಕವಿಗಳ ಸಾಹಿತ್ಯವನ್ನು ಹಂಚಿ, ತನ್ಮಯ ಮಾಡುವ ಕಲೆಗಾರಿಕೆ ಇವರ ಸೃಜನ ಶೀಲತೆಯ ವೈಶಿಷ್ಟ್ಯತೆ. ಈ ಕಲೆಗಾರಿಕೆಯಿಂದ ಅನೇಕರು ಪ್ರೇರಣೆ ಪಡೆದು ಪ್ರಾವೀಣ್ಯತೆಯಿಂದ ಪ್ರಸಿದ್ಧರಾದರು.


ಇವರು ಹೊಸಕೆರೆ ಶೇಷಭಟ್ಟರು ಮತ್ತು ಚಿನ್ನಮ್ಮ ಅವರ ಪುತ್ರನಾಗಿ ಬೆಂಗಳೂರಿನಲ್ಲಿ 12-4-1946 ರಂದು ಜನಿಸಿದರು. ಇವರ ವಿದ್ಯಾಭ್ಯಾಸ ಚಿಕ್ಕಮಗಳೂರು ಜಿಲ್ಲೆಯಲ್ಲಿ, ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಜರುಗಿತು. ಭೌತಶಾಸ್ತ್ರದ ಎಂ ಎಸ್ಸಿ ಪದವಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1966 ಇಸವಿಯಲ್ಲಿ ಪಡೆದರು. ಬೆಂಗಳೂರಿನ ವಿಶ್ವೇಶ್ವರಪುರ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕ, ಪ್ರಾಧ್ಯಾಪಕರಾಗಿ, ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.


ಎಚ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರು, ಪಠ್ಯೇತರ ಚಟುವಟಿಕೆಗಳಾದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಯಸ್ಕರ ಶಿಕ್ಷಣ ಕಾಯ೯ಕ್ರಮದ ಸಂಯೋಜಕರಾಗಿ ಸಹ ಸಕ್ರಿಯವಾಗಿ ಕೆಲಸ ಮಾಡಿದರು. ಭೌತಶಾಸ್ತ್ರದ ಉತ್ತಮ ಉಪನ್ಯಾಸಕ ಎಂಬ ಮೆಚ್ಚುಗೆ ಎಲ್ಲರಿಂದ ಪಡೆದು ಜೊತೆ ಜೊತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿ ಸಹ ಹೆಸರು ಪಡೆದು, ಕನ್ನಡ ನಾಡಿನ ಜನತೆಗೆ ಆಪ್ತರಾಗಿದ್ದುದು ವಿಶೇಷ. ಪ್ರಸಿದ್ದ ಕವಿಗಳಾಗಿದ್ದ ಜಿ ಪಿ ರಾಜರತ್ನಂ ಅವರು ತೋರಿದ ಆದರ್ಶದಂತೆ, ಇವರೂ ಸಹ ಕನ್ನಡ ಸಾಹಿತಿಗಳ ಶ್ರೇಷ್ಠ ಕೃತಿಗಳ ಬಗ್ಗೆ ನಾಡಿನಾದ್ಯಂತ ಭಾಷಣವನ್ನು ಮಾಡಿ, ಹೆಸರು ಪಡೆದರು.ಮಂಕುತಿಮ್ಮನ ಬಗ್ಗೆ ವಿಶೇಷ ಒಲವು ಪಡೆದ ಲಕ್ಷ್ಮೀ ನಾರಾಯಣ ಭಟ್ಟರು, ನಾಲ್ಕು ದಶಕಗಳಲ್ಲಿ ಸಹಸ್ರಾರು ಭಾಷಣವನ್ನು ಮಾಡಿ "ಕಗ್ಗದ ಭಟ್ಟರು" ಎಂದು ಕನ್ನಡ ನಾಡಿನಲ್ಲಿ ಪ್ರಖ್ಯಾತರಾದರು.

ಇವರ ಉಪನ್ಯಾಸ ಕೇಳುವುದೇ ಸೊಗಸು. ಅನೇಕ ಇವರ ಉಪನ್ಯಾಸಗಳು ಧ್ವನಿ ಮಾಧ್ಯಮದಲ್ಲಿ ಮೂಡಿ ಬಂದಿವೆ. ಭಟ್ಟರು ಡಿವಿಜಿ ಅವರ ಅಭಿಮಾನಿಗಳು ಎಂದೇ ಹೆಸರು ಪಡೆದು, 2002 ರಲ್ಲಿ "ಘಮ ಘಮಘಮಿಸುವ ವನಸುಮ ಡಿವಿಜಿ" ಎಂಬ ಕೃತಿ ರಚನೆ ಮಾಡಿ, ನಾಡಿಗೆ ನೀಡಿದ ಮಹನೀಯರು.


2007ರಲ್ಲಿ "ತಿಮ್ಮ ಗುರುವಿನ ದಶ೯ನ -ಗುಂಡೋಪನಿಷತ್ "ಎಂಬ ಕೃತಿ ಬಿಡುಗಡೆಗೊಳಿಸಿದರು. ಮಂಕುತಿಮ್ಮ ಕಗ್ಗ ಅಲ್ಲದೇ, ಪ್ರಸಿದ್ದ ಕವಿಗಳಾದ ಜಿ ಪಿ ರಾಜರತ್ನಂ, ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳನ್ನು ಸಹ ಗಾನ ರೂಪದಲ್ಲಿ ಅಥ೯ ಸಹಿತ ವಿವರಣೆಗಳೊಂದಿಗೆ ತಿಳಿಸಿ, ಪ್ರೇಕ್ಷಕರನ್ನು ಮುದಗೊಳಿಸುವ ಪ್ರೇರಕ ಶಕ್ತಿಯಾಗಿದ್ದಾರೆ. ಭಟ್ಟರು ಹಾಸ್ಯ ರೂಪದಲ್ಲಿ ಕವಿಗಳ ಕವಿತೆಗಳನ್ನು ಗಾಯನ ಮತ್ತು ವ್ಯಾಖ್ಯಾನವನ್ನೂ ಮಾಡುವ ಕಲೆಗಾರಿಕೆ ಇವರ ಹೆಗ್ಗಳಿಕೆ. ಇವರ ಉಪನ್ಯಾಸಗಳು ನಾಡಿನಲ್ಲಿ ಮತ್ತು ದೇಶಾದ್ಯಂತ ರಸಭರಿತವಾಗಿ ಜರುಗಿ, ದಾಖಲೆಯಾಗಿ ಜನ ಮೆಚ್ಚುಗೆಗೆ ಪಾತ್ರರಾದವರು.


ಪ್ರಸಿದ್ದ ಚಲನಚಿತ್ರ ನಿರ್ದೇಶಕ, ನಟರಾಗಿದ್ದ ಜಿ ವಿ ಅಯ್ಯರ್ ತಯಾರಿಸಿದ "ಆದಿ ಶಂಕರಾಚಾರ್ಯ" ಚಿತ್ರದ ಸಂಸೃತ ಸಂಭಾಷಣೆಗೆ ಕನ್ನಡ ವ್ಯಾಖ್ಯಾನ ಚಿತ್ರ ಪ್ರದಶ೯ನದಲ್ಲಿ ನಡೆದಿತ್ತು. ಶತಾವಧಾನಿ ಆರ್ ಗಣೇಶ್ ಅವರ ಅನೇಕ ಕಾರ್ಯಕ್ರಮದಲ್ಲಿ ಭಟ್ಟರು ರಸವತ್ತಾದ ಪ್ರಶ್ನೆಗಳನ್ನು ಕೇಳಿ, ಪೃಚ್ಛಕರಾಗಿ ಕಾಯ೯ಕ್ರಮಗಳಿಗೆ ಕಳೆತಂದಿದ್ದರು. ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟರು 2002 ರಲ್ಲಿ ಡಿವಿಜಿ ಪ್ರಶಸ್ತಿ, ಹಂಸ ಸಂಸ್ಥೆಯ ಕಗ್ಗದ ಪ್ರಚಾರಕ್ಕಾಗಿ "ಹಂಸ ಸನ್ಮಾನ್, ಎಸ್ ಬಿ ಐ ವತಿಯಿಂದ ಕಗ್ಗ ವ್ಯಾಖ್ಯಾನ ಪ್ರವೀಣ ಬಿರುದು ಸಹ ಪಡೆದ ಮಹಾನುಭಾವರು. ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಗೌರವ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾದ ಮಹನೀಯರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top