ಕವಿರಾಜ ಮಾರ್ಗ ರಾಜಕೀಯ-ಸಾಹಿತ್ಯಕ ಪ್ರಜ್ಞೆಯ ಕೃತಿ: ಡಾ. ಎ. ಸುಬ್ಬಣ್ಣ ರೈ

Upayuktha
0


ಕಾಸರಗೋಡು: ಕವಿ ಮತ್ತು ರಾಜ ಇಬ್ಬರೂ ಸೇರಿ ಬರೆದ ಕೃತಿಯಾಗಿರುವುದರಿಂದ ʼಕವಿರಾಜಮಾರ್ಗʼದಲ್ಲಿ ರಾಜಕೀಯ ಪ್ರಜ್ಞೆ ಮತ್ತು ಸಾಹಿತ್ಯಕ ಪ್ರಜ್ಞೆ ಎರಡೂ ಮೇಳೈಸಿದೆ. ಕವಿರಾಜ ಮಾರ್ಗವು ಭೌತಪ್ರತಿಮೆಯಾಗಿಯೂ, ಭಾವಪ್ರತಿಮೆಯಾಗಿಯೂ ಕಂಡುಬರುತ್ತದೆ. ಶೆಲ್ಡನ್ ಪೊಲಾಕ್‌ರಂಥ ಜಾಗತಿಕ ವಿದ್ವಾಂಸರ ಗಮನಸೆಳೆದ ಕೃತಿ ಕವಿರಾಜಮಾರ್ಗ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರು ಹೇಳಿದರು.


ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗು  ಕಾಸರಗೋಡು ಕನ್ನಡ ಬಳಗ ವಿದ್ಯಾನಗರ ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಸ್ಮೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ʼಹಳಗನ್ನಡ ಕಾವ್ಯದ ರಸಗ್ರಹಣʼ ಕುರಿತ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು. 


ಆದಿಪುರಾಣದಲ್ಲಿ ಬರುವ ಭವಾವಳಿ ಮನುಷ್ಯ ವಿಕಾಸದ ವಿವಿಧ ಹಂತಗಳನ್ನು ದಾಖಲಿಸುತ್ತದೆ. ಭರತ-ಬಾಹುಬಲಿ ಪ್ರಸಂಗ ಪ್ರಭುತ್ವ ಮತ್ತು ವೈರಾಗ್ಯದ ಮುಖಾಮುಖಿಯಾಗಿದೆ. ಆದಿಪುರಾಣ ಧರ್ಮ ಮತ್ತು ಕಾವ್ಯಧರ್ಮಗಳನ್ನು ಒಳಗೊಂಡ ಕೃತಿ ಎಂದು ವಿವರಿಸಿದ ಸುಬ್ಬಣ್ಣ ರೈ ಅವರು ಕವಿರಾಜಮಾರ್ಗ, ಆದಿಪುರಾಣ, ವಿಕ್ರಮಾರ್ಜುನ ವಿಜಯ, ಸಾಹಸಭೀಮ ವಿಜಯ ಕೃತಿಗಳ ಆಯ್ದ ಭಾಗಗಳನ್ನು ತಮ್ಮ ಸುಶ್ರಾವ್ಯ ಕಂಚಿನ ಕಂಠದಿಂದ ಹಾಡಿ ವ್ಯಾಖ್ಯಾನಿಸಿದರು.


ಕನ್ನಡ ವಿಭಾಗದಲ್ಲಿ ಹಿಂದೆ ಸೇವೆ ಸಲ್ಲಿಸಿ ಅಗಲಿದ ಪ್ರಾಧ್ಯಾಪಕರಾದ ಪ್ರೊ. ಪಿ.ಸುಬ್ರಾಯ ಭಟ್, ಪ್ರೊ. ಬಿ.ಕೆ. ತಿಮ್ಮಪ್ಪ, ಪ್ರೊ. ಬಿ. ಪದ್ಮನಾಭ, ಪ್ರೊ. ವೇಣುಗೋಪಾಲ ಕಾಸರಗೋಡು ಮತ್ತು ಪ್ರೊ. ದಿನೇಶ್ ಕುಮಾರ್ ಅವರ ನೆನಪುಗಳನ್ನು ಸ್ಮೃತಿ ಉಪನ್ಯಾಸದಲ್ಲಿ ಪ್ರೊ. ಶ್ರೀನಾಥ ಎ. ಅವರು ನಿರೂಪಿಸಿದರು. 


ಕನ್ನಡದ ಓಜ ಪೆರಡಾಲ ಕೃಷ್ಣಯ್ಯ ಅವರ ಶಿಷ್ಯರಾಗಿದ್ದ ಪ್ರೊ. ಪಳ್ಳತ್ತಡ್ಕ ಸುಬ್ರಾಯ ಭಟ್ಟರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮೊದಲ ಮುಖ್ಯಸ್ಥರಾಗಿ ವಿದ್ವತ್ ಪರಂಪರೆಯ ಭದ್ರಬುನಾದಿ ಹಾಕಿದ್ದರು. ರನ್ನನ ಸಾಹಸ ಭೀಮ ವಿಜಯ ಕಾವ್ಯಕೃತಿಗೆ ಅವರು ಬರೆದ ವ್ಯಾಖ್ಯಾನ ಅತ್ಯಪೂರ್ವಾದುದು ಅವರ ಆಕರ್ಷಕ ಪಾಠಪ್ರವಚನಕ್ಕೆ ಮಲಯಾಳ ವಿದ್ಯಾರ್ಥಿಗಳೂ ತರಗತಿಯ ಹೊರಗಿನಿಂದ ಕಿವಿಗೊಡುತ್ತಿದ್ದರು. ಕನ್ನಡಿಗರ ಮತ್ತು ಮಲೆಯಾಳಿಗಳಿಂದ ಸಮಾನ ಗೌರವಕ್ಕೆ ಪಾತ್ರರಾದವರು ಸುಬ್ರಾಯ ಭಟ್. ಅವರು ಅನೇಕ ವಿದ್ಯಾರ್ಥಿಗಳನ್ನು ಮನೆಯಲ್ಲೇ ಇರಿಸಿ ಶಿಕ್ಷಣ ಕೊಡಿಸಿದ ವಿದ್ಯಾದಾನಿ ಎಂದರು.


ಸುಬ್ರಾಯ ಭಟ್ಟರ ನಂತರ ಕನ್ನಡ ವಿಭಾಗಕ್ಕೆ ಬಂದ ಮೈಸೂರಿನವರಾದ ಪ್ರೊ. ಬಿ.ಕೆ. ತಿಮ್ಮಪ್ಪ ಅವರು ಮಲಯಾಳ ಭಾಷೆ ಕಲಿತು ಅನುವಾದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದರು. ಅವರು ಎಲ್ಲ ಮಕ್ಕಳನ್ನು ಬಹುವಚನದಿಂದಲೇ ಸಂಬೋಧಿಸುತ್ತಿದ್ದರು. ಎಲ್ಲರ ಜತೆಗೂ ಆತ್ಮೀಯ ಭಾವದಿಂದ ಇರುತ್ತಿದ್ದರು. ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದರು ಮತ್ತು ಮೊತ್ತಮೊದಲ ಬಾರಿಗೆ ಕರ್ನಾಟಕ ಸರಕಾರದಿಂದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಿಸಿದರು. ಪ್ರೊ.  ಬಿ. ಪದ್ಮನಾಭ ಅವರು ನವ್ಯಸಾಹಿತ್ಯ ಮತ್ತು ಶಾಸನ ಸಾಹಿತ್ಯದ ಕಡೆಗೆ ವಿಶೇಷ ಆಸಕ್ತಿ ಹೊಂದಿದ್ದರು. ಪ್ರೊ. ವೇಣುಗೋಪಾಲ ಕಾಸರಗೋಡು ಅವರು ನಾಟಕ, ಕಾವ್ಯ, ಕಾದಂಬರಿ ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು. ಕಾಸರಗೋಡಿನ ಕನ್ನಡ ರಂಗಭೂಮಿಗೆ ಅವರ ಕೊಡುಗೆ ಹಿರಿದಾಗಿದೆ. ಕರ್ನಾಟಕ ಮತ್ತು ಕಾಸರಗೋಡಿನ ನಡುವಿನ ಕೊಂಡಿಯಾಗಿದ್ದ ವೇಣುಗೋಪಾಲರು ಹೋರಾಟದ ಮನೋಭಾವದವರಾಗಿದ್ದರು. ಪ್ರೊ. ದಿನೇಶ್ ಕುಮಾರ್ ಅವರು ಅತ್ಯಂತ ಪ್ರತಿಭಾವಂತರಾಗಿದ್ದವರು, ಅತ್ಯುತ್ತಮ ಕಬಡ್ಡಿ ಪಟು, ಕುಸ್ತಿಪಟು ಆಗಿದ್ದವರು ಎಂದು ಪ್ರೊ. ಶ್ರೀನಾಥರು ನುಡಿದರು.


ಸ್ಮೃತಿ ದಿನದ ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ವಿ ಎಸ್ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಜಾತ ಎಸ್. ಅಧ್ಯಕ್ಷತೆ ವಹಿಸಿದ್ದರು. ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಡಾ. ರಾಧಾಕೃಷ್ಣ ಎನ್. ಬೆಳ್ಳೂರು ವಂದಿಸಿದರು. ಡಾ. ಬಾಲಕೃಷ್ಣ ಬಿ ಎಂ. ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರೊ. ಬಿ. ಪದ್ಮನಾಭ ಸ್ಮಾರಕ ವಿದ್ಯಾರ್ಥಿವೇತನವನ್ನು ತೃತೀಯ ಪದವಿ ವಿದ್ಯಾರ್ಥಿನಿ ಕುಮಾರಿ ಇಷಾ ಅವರಿಗೆ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top