ಹೃದಯದೊಳಗೆ ಹೃದಯ ದೀಪ (ಹಾರ್ಟ್ ಲ್ಯಾಂಪ್) ಪ್ರಜ್ವಲಿಸುತ್ತಿದೆ
ಅವತ್ತು ಏಪ್ರಿಲ್ 15, 2025 ರಂದು ಮೇಲುಕೊಪ್ಪದಲ್ಲೇ ಕುಳಿತುಕೊಂಡು, ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಹರ್ಷರವರು ಕೊಟ್ಟ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ಕೊಂಡಿ ಬಳಸಿಕೊಂಡು, ಅದರಲ್ಲಿ ನನ್ನ ಸ್ವಂತ ಜೈವಿಕ ಮಾಹಿತಿಯನ್ನು ನಮೂದಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಪಡೆದಿದ್ದೆ.
ಸದಸ್ಯತ್ವ ಸಂಖ್ಯೆ:
೨೦೨೫೦೪೩೯೮೦೦೧
ಇವತ್ತು, ಕನ್ನಡ ಬಾವುಟದ ಆಕರ್ಷಕ ಕೆಂಪು ಮತ್ತು ಹಳದಿ ಬಣ್ಣದ ಕೊರಳುದಾರದೊಂದಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವದ ಗುರುತಿನ ಚೀಟಿ ಬಂದಿದೆ. ಸಂಭ್ರಮದಿಂದ ಕಣ್ಣಿಗೆ ಒತ್ತಿ ಧರಿಸಿದೆ. ಹೃದಯದೊಳಗೆ ಹೃದಯ ದೀಪ (ಹಾರ್ಟ್ ಲ್ಯಾಂಪ್) ಮತ್ತಷ್ಟು ಪ್ರಜ್ವಲಿಸುತ್ತಿದೆ.
ಆಜೀವ ಸದಸ್ಯತ್ವದ ಗುರುತಿನ ಚೀಟಿಯನ್ನು ಎತ್ತಿ ಭದ್ರವಾಗಿ ಒಳಗಿಟ್ಟುಕೊಂಡಿದ್ದೇನೆ.
***
ಒಂದು ವೇಳೆ ಯಾವಾಗಲಾದರು, ಮೈಸೂರು ದಸರ ಉತ್ಸವಕ್ಕೆ ಹೋದಲ್ಲಿ ಈ ಕೆಂಪು ಮತ್ತು ಹಳದಿ ಬಣ್ಣದ ಕೊರಳುದಾರದೊಂದಿಗೆ ಇರುವ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವದ ಗುರುತಿನ ಚೀಟಿ ಧರಿಸಿ ಹೋಗುವ ಮನಸ್ಸಿದೆ.
"ಅದೇನು ದಸರಾದಲ್ಲಿ ಇದನ್ನು ಧರಿಸಿ ಬಂದಿದ್ದೀರಿ?" ಅಂತ ಅಲ್ಲಿ ಯಾರಾದರೂ ಕೇಳಿದರೆ, ಒಂದಿಷ್ಡು ಮಾತುಗಳನ್ನು ಹೇಳಿ ಬರಬೇಕು ಅಂತಿದೆ.
ಅದೂ ನಿರ್ಮತ್ಸರ, ಮನದುದಾರ, ಸೌಜನ್ಯದ ಭಾವದಲ್ಲೆ:
"ಕನ್ನಡ ಭಾಷೆಯ ಬಗ್ಗೆ ಒಬ್ಬ ಕನ್ನಡ ಭಾಷೆಯ ಭಕ್ತನಾಗಿ ನನ್ನ ಗ್ರಹಿಕೆ ಏನು ಅನ್ನುವುದನ್ನು ನಿಮ್ಮೆದುರಿಗೆ ಇಡ್ತೇನೆ. ನಿಮಗೆ ಇಷ್ಟಾಗುತ್ತೋ ಕಷ್ಟಾಗುತ್ತೋ ನನಗೆ ಗೊತ್ತಿಲ್ಲ.
ಕನ್ನಡವನ್ನ ಭಾಷೆಯಾಗಿ ಬೆಳೆಯುವುದಕ್ಕೆ ಕನ್ನಡವನ್ನ ಭಾಷೆಯಾಗಿ ನಾನು ಮಾತಾಡುವುದಕ್ಕೆ ನನ್ನ ಮನೆಯವರು ಮಾತಾಡುವುದಕ್ಕೆ ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ನಮಗೆ ಅವಕಾಶ ಸಿಕ್ಕಿದೆ. ಕನ್ನಡವನ್ನು ತಾಯಿಯೆಂದು, ತಾಯಿ ಭುವನೇಶ್ವರಿ ಎಂದು ನೋಡುವ 'ಹೆಮ್ಮೆಯ ಕನ್ನಡಿಗರು ನಾವು'. ಅರಿಶಿನ ಕುಂಕುಮ ಲೇಪಿತಳಾದ ಕನ್ನಡ ಭುವನೇಶ್ವರಿಯನ್ನು 'ಮಂದಾಸನ'ದ ಮೇಲೆ ಕೂರಿಸಿ ಉತ್ಸವ ಮಾಡಿ ಕಣ್ಣು ತುಂಬಿಕೊಳ್ಳುವ ನನ್ನನ್ನು, ನನ್ನಂತಹವರನ್ನು ಯಾರಿಂದಲೂ ಕನ್ನಡದಿಂದ ಹೊರತಾಗಿಸಲು ಸಾಧ್ಯವಿಲ್ಲ.
ಮಂದಾಸನದಲ್ಲಿ ಕುಳಿತಿರುವ ಕನ್ನಡ ಭುವನೇಶ್ವರಿಯ ಉತ್ಸವವನ್ನು ಎಲ್ಲಿ ನಿಂತು ನೋಡಬೇಕು ಅನ್ನುವುದನ್ನು ವಿಶಾಲ ಹೃದಯದ ಕವಿ ನಿಸಾರ್ ಅಹಮದ್‌ರವರು ಹೇಳಿಕೊಟ್ಟಿದ್ದಾರೆ. ಅದನ್ನು ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಿರುವ ನನ್ನ ಜನ್ಮ ಭೂಮಿ ಕರ್ನಾಟಕದ ಮಲೆನಾಡಿನಲ್ಲಿ ನಿತ್ಯ ನೋಡುತ್ತೇನೆ, ನಿತ್ಯೋತ್ಸವದೊಂದಿಗೆ ನೋಡುತ್ತೇನೆ.
ಕನ್ನಡ ಬಾವುಟದ ಕೆಂಪು ಹಳದಿ ಬಣ್ಣಗಳು ಕುಂಕುಮ ಮತ್ತು ಅರಿಶಿನದ ಬಣ್ಣಗಳಾಗಿದ್ದು ಕನ್ನಡ ಭಾಷೆಯ ಅಸ್ಮಿತೆಯ, ಸ್ವತ್ವದ ಬಣ್ಣಗಳು. ಕೆಂಪು ಮತ್ತು ಅರಿಶಿನ ಬಣ್ಣಗಳು ತಾಯಿ ಭುವನೇಶ್ವರಿಯ ಸದ್ವಿಕಾಸಶೀಲ ನುಡಿಯ, ಲೋಕಾವೃತ ಸೀಮೆಯ, ನಿರ್ಮತ್ಸರ ಮನದುದಾರ ಮಹಿಮೆಗಳಿರುವ ಮಡಿಲಿನ ಸೆರಗಿನ ಬಣ್ಣಗಳು.
ನಾನೆಲ್ಲಿ ನಿಲ್ಲಬೇಕು? ನಾನು ಏನನ್ನು ನೋಡಬೇಕು? ನಾನು ಹೇಗೆ ಒಳಗೊಳ್ಳಲಿ (ಇನ್ವಾಲ್ ಆಗಲಿ)? ಉಹೂಂ ಈ ಯಾವ ಪ್ರಶ್ನೆಗಳು ಸಮಸ್ಯೆಗಳು ನನಗಿಲ್ಲ. ಒಂದು ವೇಳೆ ಈ ಪ್ರಶ್ನೆಗಳು ಇದ್ದಿದ್ದರೆ.... ಭಾಷೆ, ಬಣ್ಣ, ಬಾವುಟ, ಭುವನೇಶ್ವರಿ ತಾಯಿಯೊಂದಿಗೆ ಒಳಗೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದು ಹೊರಗೆ ನಿಂತು ಮಾತಾಡದೆ, ಒಳಗೊಳ್ಳುವ ಮಾರ್ಗ ಹುಡುಕುತ್ತಿದ್ದೆ.
ಕನ್ನಡ ಭುವನೇಶ್ವರಿಯ ತಂಪಾದ ಮಡಿಲಿನ ನಿರ್ಮತ್ಸರ ಮನದುದಾರ ಮಹಿಮೆಗಳು ನನಗೆ ದಾರಿಯನ್ನು ಸ್ವಯಂ ಗೋಚರಗೊಳ್ಳುವಂತೆ ಕಣ್ಣು ತೆರೆಸುತ್ತಿದ್ದವು.
ಅರಿಶಿನ ಕುಂಕುಮ ಇಡುವುದು ಗೌರವದ ಸಂಕೇತ. ಮಹಿಳೆಯನ್ನು ಗೌರವಿಸುವುದು ಭಾರತೀಯರ ಶ್ರೇಷ್ಠ ಗುಣಧರ್ಮ, ಧರ್ಮ ಗುಣ. ಹಾಗೆ ಗೌರವಿಸುವಲ್ಲಿ ದೇವತೆಗಳು ಇರುತ್ತಾರೆ. 'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ' ಎನ್ನುವುದರ ಅರ್ಥವೂ ಇದೆ.
ಮಂದಾಸನದ ಮೇಲೆ ಭುವನೇಶ್ವರಿಯನ್ನು ಕೂರಿಸಿ "ತಾಯಿ, ನಿರ್ಮತ್ಸರ, ಮನದುದಾರ, ಸೃಜನಶೀಲ, ಸಹೃದಯದಲ್ಲಿ ಒಳಗೊಳ್ಳುವ ಮನಸ್ಸನ್ನು ಅನುಗ್ರಹಿಸು" ಅಂತ ಪ್ರಾರ್ಥಿಸಿ, ಬೇಡಿದರೆ... ಋಣಾತ್ಮಕ ವಿಚಾರಗಳು ಹೊರ ಹೋಗಿ, ಧನಾತ್ಮಕ ಚಿಂತನೆಯ ಭಾವಗಳು ಒಳಗೊಳ್ಳುವಿಕೆಯೊಂದಿಗೆ ಮನಸ್ಸಿನಲ್ಲಿ ಉದ್ಘಾಟನೆಗೊಳ್ಳುತ್ತವೆ!!.
ನಿಲ್ಲುವುದಕ್ಕೆ ಜಾಗ, ನೋಡುವುದಕ್ಕೆ ದೃಷ್ಟಿ ತೆರೆದುಕೊಳ್ಳುತ್ತದೆ. ಹೃದಯದೊಳಗೆ ಹೃದಯ ದೀಪ (ಹಾರ್ಟ್ ಲ್ಯಾಂಪ್) ಪ್ರಜ್ವಲಿಸುತ್ತದೆ."
ದಸರಾಕ್ಕೆ ನೀವು ಹೋಗ್ತಾ ಇದೀರಾ?
- ಅರವಿಂದ ಸಿಗದಾಳ್, ಮೇಲುಕೊಪ್ಪ
94496 31248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

