ಉಜಿರೆ: ಕಥೆಗಳನ್ನೇ ಇತಿಹಾಸವೆಂದು ಪರಿಗಣಿಸುವ ಭಾರತೀಯರಲ್ಲಿ ಇತಿಹಾಸ ಪ್ರಜ್ಞೆಯ ಕೊರತೆಯಿದೆ. ಭಾರತದ ಸಮೃದ್ಧ ಐತಿಹಾಸಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಮೂಡಬೇಕು ಎಂದು ಮೂಡಬಿದಿರೆಯ ಶ್ರೀ ಧವಳ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕೈ ಗಣಪಯ್ಯ ಭಟ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ ಕಾಲೇಜಿನ ಇತಿಹಾಸ ವಿಭಾಗವು ಆಗಸ್ಟ್ 13 ರಂದು ಕಾಲೇಜಿನಲ್ಲಿ ಆಯೋಜಿಸಿದ್ದ "ಐತಿಹಾಸಿಕ ಪರಂಪರೆಯ ಸಂರಕ್ಷಣೆ : ಸಮಸ್ಯೆಗಳು ಮತ್ತು ಸಾಧ್ಯತೆಗಳು" ಎಂಬ ವಿಚಾರದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆದಿರುವ ಭಾರತ ಇತಿಹಾಸ ಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿರುವುದು ನಿಜಕ್ಕೂ ವಿಪರ್ಯಾಸ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ಐತಿಹಾಸಿಕ ಸ್ಮಾರಕ, ಕಟ್ಟಡಗಳು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿತ್ತಿವೆ. ಸರಿಯಾದ ಇತಿಹಾಸ ಜ್ಞಾನವನ್ನ ಮೈಗೂಡಿಸಿಕೊಂಡು ನಮ್ಮ ಐತಿಹಾಸಿಕ ಪರಂಪರೆಯನ್ನು ಉಳಿಸುವಲ್ಲಿ ನಾವುಗಳು ಶ್ರಮಿಸಬೇಕಿದೆ ಎಂದರು.
ನಮ್ಮಿಂದಲೇ ನಮ್ಮ ದೇಶದ ಭವ್ಯ ಪರಂಪರೆ ಅಳಿವಿನತ್ತ ಸಾಗುತ್ತಿದೆ. ಮನುಷ್ಯನ ಬೇಡಿಕೆಗಳು ಹೆಚ್ಚಾಗಿ, ನಗರ ಗ್ರಾಮಗಳು ವಿಸ್ತಾರಗೊಂಡು ನಮ್ಮ ಐತಿಹಾಸಿಕ ಸ್ಮಾರಕಗಳು ನಶಿಸಿಹೋಗುತ್ತಿವೆ. ಐತಿಹಾಸಿಕ ಜಾಗಗಳಿಗೆ ಪ್ರವಾಸ ಬೆಳೆಸಿದಾಗ ಮನೋರಂಜನೆಯೇ ನಮ್ಮ ಮೂಲ ಉದ್ದೇಶವಾಗದೆ, ಆ ಜಾಗದ ಇತಿಹಾಸ ತಿಳಿಯುವಲ್ಲಿ ನಾವುಗಳು ಉತ್ಸುಕರಾದರೆ ಮಾತ್ರ ಐತಿಹಾಸಿಕ ಪರಂಪರೆಯ ಉಳಿವು ಸಾಧ್ಯ ಎಂದು ಹೇಳಿದರು.
ಇತಿಹಾಸ ಅಭ್ಯಾಸಿಸುವ ವಿದ್ಯಾರ್ಥಿಗಳು ಮೊದಲು ಇತಿಹಾಸದ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಲಿನ ಪ್ರವಾಸಿ ತಾಣಗಳ ಭವ್ಯ ಪರಂಪರೆಯನ್ನು ಕೆದಕಿ ಹೊರಡುವ ಆಸಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಆಡಳಿತಾಂಗ ಕುಲಸಚಿವ ಪ್ರೊ. ಶ್ರೀಧರ ಎನ್. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾರಿಗೆ ಇತಿಹಾಸ ಪ್ರಜ್ಞೆ ಇರುವುದಿಲ್ಲವೋ ಅವರು ಎಂದಿಗೂ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ನಮ್ಮ ಭವ್ಯ ಪರಂಪರೆಯನ್ನು ಅರಿತು ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ನಮ್ಮ ಪರಂಪರೆಯ ಬಗೆಗೆ ಗೌರವ ಮನೋಭಾವ ಬೆಳಿಸಿಕೊಂಡು ಅದನ್ನು ರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್, ವಿದ್ಯಾರ್ಥಿ ಪ್ರತಿನಿಧಿ ಗೌರವಿ ಹಾಗೂ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತೃತೀಯ ಬಿಎ ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತ ಮತ್ತು ತಂಡದವರು ಪ್ರಾರ್ಥಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಕಿರಣ್ಮಯಿ ಸ್ವಾಗತಿಸಿ, ಪ್ರಥಮ ಬಿಎ ವಿದ್ಯಾರ್ಥಿ ಕುಶಾಲ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

 
 
 
 
 
 
 
 
 
 
 

 
