ಭಾರತದ ಎಲ್ಲೆಡೆ ಪ್ರಸ್ತುತ ನವರಾತ್ರಿಯ ಸಂಭ್ರಮ. ಈ ನವರಾತ್ರಿಯ ಸಂಭ್ರಮವನ್ನು ಹೆಚ್ಚಿಸಲು ಬರುತ್ತಿದೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನ 13ನೇ ಆವೃತ್ತಿ ಈ ಬಾರಿ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿದೆ. 2013 ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ನಡೆದಿತ್ತು. ಪುರುಷರ ವಿಶ್ವ ಕಪ್ ನಂತೆ ಮಹಿಳಾ ವಿಶ್ವಕಪ್‌ಗೂ ಸುಧೀರ್ಘ ಇತಿಹಾಸವಿದೆ.
1973 ರಲ್ಲಿ ಚೊಚ್ಚಲ ಆವೃತ್ತಿಯು ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಆಗ ಆತಿಥೇಯ ತಂಡವಾದ ಇಂಗ್ಲೆಂಡ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು.
ಮಹಿಳಾ ಕ್ರಿಕೆಟ್ ನ ಅತ್ಯಂತ ಯಶಸ್ವಿ ತಂಡವೆಂದರೆ ಅದು ಆಸ್ಟ್ರೇಲಿಯಾ. 7 ಬಾರಿ ವಿಶ್ವಕಪ್ ಗೆದ್ದ ಸಾಧನೆ ಆ ತಂಡದ್ದಾಗಿದೆ. ಇಂಗ್ಲೆಂಡ್ 4 ಬಾರಿ ಹಾಗೂ ನ್ಯೂಜಿಲ್ಯಾಂಡ್ 1 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾರತ ಎರಡು ಬಾರಿ 2005 ಹಾಗೂ 2017 ರಲ್ಲಿ ಫೈನಲ್ ಗೇರಿದ್ದು, ಚಾಂಪಿಯನ್ ಪಟ್ಟವನ್ನು ಇದುವರೆಗೆ ಅಲಂಕರಿಸಲಾಗಲಿಲ್ಲ.
ಈ ಬಾರಿ 8 ತಂಡಗಳು ವಿಶ್ವ ಕಪ್‌ಗಾಗಿ ಸೆಣಸಾಡಲಿವೆ. ಅವುಗಳೆಂದರೆ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ.
ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿದ ಸಾಧನೆ, ಭಾರತದ ಜುಲನ್ ಗೋಸ್ವಾಮಿ (43) ಅವರದಾಗಿದೆ. ಹಾಗೂ ಅತಿ ಹೆಚ್ಚು ರನ್ ಗಳನ್ನು ಗಳಿಸಿದ ಸಾಧನೆ ನ್ಯೂಜಿಲೆಂಡ್‌ನ ಡೆಬಿ ಹಾಕ್ಲೆ (1501) ಅವರದಾಗಿದೆ.
ಈ ಬಾರಿಯ ವಿಶ್ವಕಪ್ ಕೆಲವು ಕಾರಣಗಳಿಂದಾಗಿ ವಿಶೇಷವಾಗಿದೆ. ಅದರಲ್ಲಿ ಪ್ರಮುಖವಾದದ್ದು ಪ್ರಶಸ್ತಿ ಮೊತ್ತದ ಏರಿಕೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡ 39.5 ಕೋಟಿ ಹಾಗೂ ರನ್ನರ್ ಅಪ್ ತಂಡ 19.7 ಕೋಟಿ ಹಣವನ್ನು ಪಡೆಯಲಿದೆ. ಇದು ಕಳೆದ ವಿಶ್ವಕಪ್‌ಗೆ ಹೋಲಿಸಿದರೆ ತುಂಬಾ ಅಧಿಕವಾಗಿದೆ. ಇನ್ನೊಂದು ವಿಶೇಷವೇನೆಂದರೆ ಈ ಬಾರಿ ಪಂದ್ಯದ ತೀರ್ಪನ್ನು ನೀಡುವ ಅಂಪಯರ್ ಗಳೆಲ್ಲರೂ ಮಹಿಳೆಯರೇ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ನಲ್ಲೂ ಅತ್ಯಂತ ಜಿದ್ದಾ ಜಿದ್ದಿನ ರೋಚಕ ಪಂದ್ಯಗಳು ನಡೆಯುತ್ತಿರುವುದರಿಂದ ಪ್ರೇಕ್ಷಕರ ಬೆಂಬಲವು ಹೆಚ್ಚಿದೆ. ಮಹಿಳಾ ಕ್ರಿಕೆಟ್ ಅನ್ನು ಕೂಡ ಅನುಸರಿಸುವ ಹಾಗೂ ಸ್ಟೇಡಿಯಂಗೆ ಬಂದು ನೋಡುವ ಕ್ರೇಜ್ ಹೆಚ್ಚಾಗಿರುವುದರಿಂದ ಮಹಿಳಾ ಆಟಗಾರ್ತಿಯರಿಗೂ ಕೂಡ ಅತಿ ದೊಡ್ಡ ಅಭಿಮಾನಿ ಬಳಗಗಳಿವೆ.
ಭಾರತ ತಂಡವನ್ನು ಒಮ್ಮೆ ಅವಲೋಕಿಸುವುದಾದರೆ, ಅನುಭವಿ ಹಾಗೂ ತಂಡದ ಹಿರಿಯ ಆಟಗಾರ್ತಿಯಾದ ಹರ್ಮನ್ ಪ್ರೀತ್ ಕೌರ್ ಅವರ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಪ್ರಸ್ತುತ ಅತ್ಯುತ್ತಮ ಫಾರ್ಮ್ ನಲ್ಲಿರುವ ಉಪನಾಯಕಿ ಸ್ಮೃತಿ ಮಂದಾನ, ಜೆಮೀಮಾ ರೋಡ್ರಿಗಸ್, ಸ್ಪೋಟಕ ಬ್ಯಾಟರ್, ವಿಕೆಟ್ ಕೀಪರ್ ರಿಚಾ ಘೋಷ್, ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ ಮುಂತಾದ ಬಲಿಷ್ಠ 15 ಆಟಗಾರ್ತಿಯರು ತಂಡದಲ್ಲಿದ್ದಾರೆ.
ಭಾರತದ ತಂಡ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿ ವಿಶ್ವ ಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳಲಿ ಹಾಗೂ ಅದು ಮುಂದಿನ ಮಹಿಳಾ ಆಟಗಾರ್ತಿಯರಿಗೆ ಪ್ರೇರಣೆಯಾಗಲಿ ಎಂದು ಆಶಿಸೋಣ.
- ವರುಣ ಕೃಷ್ಣ.ಬಿ.
ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


