ಹಾಸನ: ಚಿದಾನಂದ ಕೆ.ಎನ್ ರವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Chandrashekhara Kulamarva
0


ಹಾಸನ: ಜ್ಞಾನದೇಗುಲವೆಂಬ ಶಾಲೆಯಲ್ಲಿ ಮಕ್ಕಳು ದೇವರಾದರೆ ಅವರನ್ನು ಆರಾಧಿಸುವವರು ಶಿಕ್ಷಕರಾಗಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ವಿಕಾಸವೇ ಶಿಕ್ಷಣವೆನ್ನುವ ಜನಜನಿತವಾದ ಮಾತನ್ನು ಮೈಗೂಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಶಿಕ್ಷಕರಾದ ಚಿದಾನಂದ. ಕೆ.ಎನ್. ರವರಿಗೆ  *"ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ "*ಯು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

     

ನಗರದ ಗಂಧದ ಕೋಠಿಯಲ್ಲಿರುವ ಜಿ.ಜಿ.ಜೆ.ಸಿ. (ಪ್ರಧಾನ) ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಚಿದಾನಂದ ಕೆ.ಎನ್. ರವರು ಚನ್ನರಾಯಪಟ್ಟಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಬಿ.ಆರ್.ಪಿ. ಮತ್ತು ನಿಯೋಜಿತ ಇ.ಸಿ. ಓ ಆಗಿ ಕರ್ತವ್ಯ ನಿರ್ವಹಿಸುವಾಗ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮನಾಥ್ (ಈಗ ನಿವೃತ್ತ) ರವರ ಮಾರ್ಗದರ್ಶನದಲ್ಲಿ "ಎ ಸಕ್ಸಸ್ ಫುಲ್ ವೇ ಟು ಲರ್ನ್ ಇಂಗ್ಲಿಷ್ " [A Successful Way to Learn English] ಎಂಬ ಗ್ರ್ಯಾಮರ್ ಪುಸ್ತಕವನ್ನು ಹೊರತರುವಲ್ಲಿ ಶ್ರಮಿಸಿರುತ್ತಾರೆ. ಅದಲ್ಲದೇ ಈ ಪುಸ್ತಕವು ತಾಲ್ಲೂಕಿನಲ್ಲಿ ಏಳು ಸಾವಿರ ಮಕ್ಕಳು ಹಾಗೂ ನೂರಾರು ಶಿಕ್ಷಕರ ಕೈಸೇರಿದ್ದು ಕಲಿಕೆಗೆ ಪೂರಕವೆನಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. 


ಬೇಸಿಗೆ ರಜಾಕಾಲದಲ್ಲಿ ಆನ್ ಲೈನ್ ಮೂಲಕ ಇಂಗ್ಲಿಷ್ ಗ್ರ್ಯಾಮರ್ ನ್ನು ಬೋಧಿಸಿ ಕಲಿಸುವ ಇವರು ಸಮಾಜಮುಖಿ ನಿಸ್ವಾರ್ಥ ಸೇವೆಯನ್ನು ನೀಡುತ್ತಾ, ಮಕ್ಕಳಿಗೆ ವಿಶೇಷ ಉಪನ್ಯಾಸ, ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಭಾಗವಹಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯಾಗಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ, ಸಾಹಿತ್ಯ ಶಿಬಿರಗಳಲ್ಲಿ, ವಿಶೇಷ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ನೀಡುವುದರ ಜೊತೆಗೆ ತಮ್ಮ ಚಿಂತನೆಗಳನ್ನು ಪ್ರತಿ ಮುಂಜಾವಿಗೊಂದು ಶುಭನುಡಿ ಎನಿಸಿದ "ಸಿರಿನುಡಿ" ಎಂಬ ಶಿರೋನಾಮೆಯಡಿ ನೂರಾರು ಲೇಖನಗಳನ್ನು ಬರೆದಿದ್ದಾರೆ. ಅಲ್ಲದೇ, ಈ ಲೇಖನಗಳನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ಬೆಳಗಿನ ಸಂದೇಶಗಳಾಗಿ ಕಳುಹಿಸುವ ಹವ್ಯಾಸವಂತೂ ಸಾಧನೆಗೆ ಹಿಡಿದ ಕೈಗನ್ನಡಿ. ಹಾಗೆಯೇ ಶಿಕ್ಷಣ ಇಲಾಖೆಯಿಂದ ಪ್ರಶಸ್ತಿಗಳನ್ನು, ಗೌರವಗಳನ್ನು, ಪುರಸ್ಕಾರಗಳನ್ನು ಪಡೆದು ವಿದ್ಯಾರ್ಥಿ ನೆಚ್ಚಿನ ಆದರ್ಶ ಶಿಕ್ಷಕರಾಗಿ ಹೆಸರು ಮಾಡಿದ್ದಾರೆ.


ಅಲ್ಲದೇ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ವಿಶೇಷ ಪಾತ್ರವಹಿಸಿದ್ದಾರೆ. ಮಕ್ಕಳ ಅಭಿಮಾನ, ಪ್ರೀತಿ, ಮೆಚ್ಚುಗೆಗಳು, ಗೌರವಗಳು ಅಪಾರ. ಸರಳ ಸಜ್ಜನಿಕೆಗೆ ಹೆಸರಾದ ಶಿಕ್ಷಕ ಚಿದಾನಂದ ಕೆ.ಎನ್. ರವರ ವಿಶಿಷ್ಟ ಸೇವೆಯನ್ನು ಗುರುತಿಸಿ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಇವರಿಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ವತಿಯಿಂದ 2018-19 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಚನ್ನರಾಯಪಟ್ಟಣದ ರೋಟರಿ ಕ್ಲಬ್ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡನ್ನು ಪಡೆದಿರುತ್ತಾರೆ. ಚನ್ನರಾಯಪಟ್ಟಣ ತಾಲ್ಲೂಕು ಆಡಳಿತದ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕೃತರಾಗಿದ್ದಾರೆ.


ಹಾಸನ ಜಿಲ್ಲಾಡಳಿತದ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 2024 ನೇ ವರ್ಷದ 75 ನೇ ಗಣರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕೃತರಾಗಿದ್ದಾರೆ. 2023- 24 ನೇ ಸಾಲಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. 2024- 25 ನೇ ಸಾಲಿನಲ್ಲಿ ಹಾಸನ ರೋಟರಿ ಸಂಸ್ಥೆಯು ಬೆಸ್ಟ್ ಟೀಚರ್ ಅವಾರ್ಡ್ ಗೆ ಗುರುತಿಸಿ ನೀಡಿ ಸನ್ಮಾನಿಸಿದೆ. ಹೀಗೆ ಬಹಳಷ್ಟು ಶಾಲೆಗಳಿಂದ, ಸಮೂಹ ಸಂಪನ್ಮೂಲ ಕೇಂದ್ರದಿಂದ ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಭೂಗೋಳಶಾಸ್ತ್ರದ ಪಾಠಗಳೆಂದರೆ ಇವರಿಗೆ ಅಚ್ಚುಮೆಚ್ಚು. ಪರಿಣಾಮಕಾರಿಯಾಗಿ ಪಾಠಗಳನ್ನು ಅನುಕೂಲಿಸುವ ಇವರು ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದಾರೆ. ಪ್ರಸ್ತುತ 2025- 26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಇವರ ಈ ಸಾಧನೆಗೆ ಶಾಲೆಯ ಉಪ ಪ್ರಾಂಶುಪಾಲ ಮಂಜುನಾಥ್ ಹಾಗೂ ಎಲ್ಲಾ ಸಹ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗ, ಆತ್ಮೀಯರು, ಅಭಿಮಾನಿಗಳು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಕುಟುಂಬ ವರ್ಗದವರು ಶುಭ - ಹಾರೈಕೆಗಳನ್ನು ನೀಡಿ, ಹೃದಯ ತುಂಬಿ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top