ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಕೊಂಡ ಜಿಎಸ್ಟಿ ಸುಧಾರಣೆಯ ನಿರ್ಣಯ ವಿಶ್ವದಲ್ಲೇ ಅತ್ಯಂತ ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಪ್ರಗತಿಗೆ ಇನ್ನಷ್ಟು ವೇಗ ನೀಡುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಭಾರತದ ಅಭಿವೃದ್ಧಿಯ ನಾಗಾಲೋಟವನ್ನು ಸಹಿಸದೆ ಭಾರತಕ್ಜೆ ಗರಿಷ್ಠ 50% ತೆರಿಗೆಯನ್ನು ವಿಧಿಸುವ ಮೂಲಕ ದೇಶದ ಅಭಿವೃದ್ಧಿಯ ವೇಗವನ್ನು ತಡೆಯಲು ಯತ್ನಿಸಿದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅದಕ್ಕೆ ತಕ್ಕುದಾದ ಸಕಾಲಿಕ ನಿರ್ಣಯವನ್ನು ತೆಗೆದುಕೊಂಡಿದೆ. ಆ ಮುಖೇನ ದೇಶದ ರೈತರ, ಯುವ ಜನರ ಮತ್ತು ಸಣ್ಣ ಉದ್ದಿಮೆದಾರರ ಹಿತ ರಕ್ಷಣೆಗೆ ಮುಂದಾಗಿದೆ. ಜಿಎಸ್ಟಿ ದರ ಕಡಿತ ಗೊಳಿಸುವ ಮೂಲಕ ಸಾಮಾನ್ಯ ಜನರ, ಬಡವರ ಮತ್ತು ಮಧ್ಯಮ ವರ್ಗದವರ ಕೈಯಲ್ಲಿ ಹಣ ಉಳಿಯುವಂತೆ ಮಾಡಿ ಹೆಚ್ಚಿನ ಖರೀದಿಗೆ ಪ್ರೋತ್ಸಾಹಿಸಿ, ವಿಕಸಿತ ಭಾರತಕ್ಕೆ ಮುನ್ನುಡಿ ಬರೆದಿದೆ.
ಸುಮಾರು 390ಕ್ಕಿಂತಲೂ ಹೆಚ್ಚಿನ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿ ಗರಿಷ್ಠ ವಿನಾಯಿತಿಯನ್ನು ನೀಡಿರುವ ಕೇಂದ್ರ ಸರಕಾರದ ಈ ಐತಿಹಾಸಿಕ ನಿರ್ಣಯವನ್ನು ಉಡುಪಿ ಜಿಲ್ಲಾ ಬಿಜೆಪಿ ಸಂಭ್ರಮದಿಂದ ಸ್ವಾಗತಿಸುತ್ತದೆ.
ಜಿಎಸ್ಟಿ ದರ ಕಡಿತ ದೇಶವಾಸಿಗಳಿಗೆ ನವರಾತ್ರಿ, ದೀಪಾವಳಿ ಸಹಿತ ಇತರ ಹಬ್ಬಗಳನ್ನು ಸಂಭ್ರಮಿಸಲು ದೊರೆತ ಬೋನಸ್ ನಂತಿದೆ ಎಂದು ಕುತ್ಯಾರು ತಿಳಿಸಿದ್ದಾರೆ.
ಈ ಪ್ರಕ್ರಿಯೆ ಯಶಸ್ವಿಯಾಗಲು ಜನತೆ ಈ ರೀತಿ ಸಹಕಾರ ನೀಡಬೇಕಾಗಿದೆ:
1. ತಯಾರಕರು ಜಿಎಸ್ಟಿ ದರ ಕಡಿತಗೊಳಿಸಿದ ವಸ್ತುವಿಗೆ ಹೊಸ ಕಡಿತ ದರ ಪ್ರಿಂಟ್ ಮಾಡುವುದು. ಈಗಾಗಲೇ ತಯಾರಾದ ವಸ್ತುವಿಗೆ ಹೊಸ ದರ ಸ್ಟಿಕ್ಕರ್ ಅಂಟಿಸುವುದು.
2. ವ್ಯಾಪಾರಿಗಳು ಕಡಿತಗೊಂಡ ಬೆಲೆಯಲ್ಲಿಯೇ ಮಾರುವುದು. ಮೊದಲೇ ಖರೀದಿಸಿದ MRP ಬೆಲೆ ಇದ್ದರೂ ಕಡಿತ ದರದ ಹೊಸ ಸ್ಟಿಕ್ಕರ್ ಅಂಟಿಸುವುದು.
3. ಗ್ರಾಹಕರು ನಿಗದಿತ ವಸ್ತುಗಳನ್ನು ಖರೀದಿಸುವಾಗ ಕಡಿತಗೊಳಿಸಿದ ಬೆಲೆಯಲ್ಲಿಯೇ ಕೇಳಿ ಪಡೆಯುವುದು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ದೇಶೀಯ ವಸ್ತುಗಳನ್ನು ಖರೀದಿಸಿ ಆತ್ಮ ನಿರ್ಭರತೆಗೆ ಪ್ರೋತ್ಸಾಹ ನೀಡಬೇಕು.
ಉಡುಪಿ ಜಿಲ್ಲಾ ಬಿಜೆಪಿ ಈ ಬಗ್ಗೆ ಜನತೆಗೆ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಕಾರ್ಯಾಗಾರ, ಅಲ್ಲಲ್ಲಿ ಜಾಹೀರಾತುಗಳು ಮತ್ತು ಗ್ರಾಹಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸಂಭ್ರಮಾಚರಣೆಯನ್ನು ನಡೆಸಿ ಜಿಎಸ್ಟಿ ಸುಧಾರಣೆಯ ಲಾಭ ಜನರಿಗೆ ತಲುಪುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


