ಮೂರ್ನಾಲ್ಕು ದಿನಗಳಿಂದ ಭೈರಪ್ಪನವರು ನೆನಪಿಗೆ ಬಂದು ಲಿಂಕ್ ಆಗ್ತಾ ಇದ್ರು!!

Upayuktha
0

ಆಶ್ಚರ್ಯ ಆದರೂ ಸತ್ಯ 




ಮೂರು ದಿನಗಳ ಹಿಂದೆ ಕೊಪ್ಪದ ಕಾರ್ತಿಕ್ ಕಾಮತ್ ಅನ್ನುವವರು ಮೇಲುಕೊಪ್ಪಕ್ಕೆ ಬಂದು ಹೋಗಿದಾರೆ. ನಾವು ಮನೆಯಲ್ಲಿ ಇರಲಿಲ್ಲ, ಮನೆಯವರೆಲ್ಲ ಇಲ್ಲೆ ಹೊರಗಡೆ ಹೋಗಿದ್ವಿ. ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬಂದಾಗ, ಯಾರೋ ಬಂದು ಹೋಗಿದಾರೆ ಅನ್ನುವ ಸೂಕ್ಷ್ಮ ಗೊತ್ತಾಗಿ, CC ಕ್ಯಾಮರ ಫುಟೇಜ್ ನೋಡಬೇಕು ಅಂದುಕೊಳ್ಳುವಷ್ಟರಲ್ಲಿ ಕಾರ್ತಿಕ್ ಪೋನ್ ಮಾಡಿದ್ರು. "ನಾನು ನಿಮ್ಮ ಮನೆಗೆ ಬಂದಿದ್ದೆ, ಯಾರೂ ಇರಲಿಲ್ಲ...." ಅಂದ್ರು. ನಮ್ಮ ಮನೆ ಮತ್ತು ಹೋಮ್‌ಸ್ಟೇ‌ಗೆ CC ಕ್ಯಾಮರ ಹಾಕಿದ್ದು ಕಾರ್ತಿಕ್ ಕಾಮತ್‌ರವರೆ.  


ಕಾರ್ತಿಕ್ ಕಾಮತ್‌ರವರು ಮುಂಚೆ ಕೊಪ್ಪ ಬಸ್ಟ್ಯಾಂಡ್ ಸಮೀಪ ಎಲೆಕ್ಟ್ರಾನಿಕ್ಸ್ ಸೇಲ್ಸ್ & ಸರ್ವಿಸ್ ಅಂಗಡಿ ಇಟ್ಟುಕೊಂಡಿದ್ದರು. ನಂತರ ಎಲೆಕ್ಟ್ರಾನಿಕ್ ಸರ್ವಿಸ್ ಜೊತೆ, ಕೊಪ್ಪ ಸರಕಾರಿ ಆಸ್ಪತ್ರೆ ಎದುರು ಒಂದು ಚಾಟ್ಸ್ ಓಪನ್ ಮಾಡಿದ್ರು. ಈಗ ಹೋಮ್ ಪ್ರಾಡಕ್ಟ್‌ನ ದೊಡ್ಡ ಮಟ್ಟದ ಬಿಸನೆಸ್‌‌ಗೆ ಕೈ ಹಾಕ್ತಾ ಇದಾರೆ, ಜೊತೆಗೆ ಎಲೆಕ್ಟ್ರಾನಿಕ್ ಸೇಲ್ಸ್ ಸರ್ವಿಸ್‌ನ್ನು ಬಿಟ್ಟಿಲ್ಲ.     


ಮೂರು ದಿನಗಳ ಹಿಂದೆ ಅವರು ನಾವಿಲ್ಲದಾಗ ನಮ್ಮ ಮನೆಗೆ ಬಂದು, ಹಿಂದಿರುಗಿ ಹೋಗಿದ್ದಕ್ಕೆ ಕಾರಣ ಅವರು ನಮ್ಮ ತಂಗುಮನೆ ಹೋಮ್‌ಸ್ಟೇ ಲೈಬ್ರೇರಿ ಯಿಂದ ಎರವಲು ಕೊಂಡು ಹೋಗಿದ್ದ ಎರಡು ಪುಸ್ತಕಗಳನ್ನು ಹಿಂದಿರುಗಿಸಲು. ಮೊನ್ನೆ ಅವರು ರಾತ್ರಿ ಫೋನ್ ಮಾಡಿದಾಗ ಹೇಳಿದ್ದು ಮೊನ್ನೆ ಸಹಜವಾಗಿಯೇ ಇತ್ತು!! ಆದರೆ ಆ ಮಾತು ನಿನ್ನೆ 'ವಿಚಿತ್ರ' ಅನಿಸಿತು!! "ನಾನು ನಿಮ್ಮ ಮನೆಗೆ ಬಂದಿದ್ದೆ, ಯಾರೂ ಇರಲಿಲ್ಲ... ನಿಮ್ಮ ಎರಡು ಪುಸ್ತಕಗಳನ್ನು ಹಿಂದಿರುಗಿಸಿ, ಭೈರಪ್ಪನವರ ದೂರ ಸರಿದರು ಪುಸ್ತಕವನ್ನು ಕೊಂಡು ಹೋಗೋಣ ಅಂತ ಬಂದಿದ್ದೆ" ಅಂದಿದ್ದರು.  ನಾನೂ ಸಹಜವಾಗೇ "ಬನ್ನಿ, ಒಂದು CC ಕ್ಯಾಮರ ಸರಿ ವರ್ಕ್‌ ಆಗ್ತಾ ಇಲ್ಲ, ಪುಸ್ತಕವನ್ನು ತೆಗೆದುಕೊಂಡು ಹೋಗಿ" ಅಂದಿದ್ದೆ. ತಿಂಗಳಿಗೆ ಎರಡು ಮೂರು ಕಾದಂಬರಿ ಓದುವ ಹವ್ಯಾಸವನ್ನು ಈಗಲೂ ಇಟ್ಟುಕೊಂಡಿರುವ ಪುಣ್ಯಾತ್ಮ ಕಾರ್ತಿಕ್ ಕಾಮತ್‌ರವರು.  


ಮೊನ್ನೆ ಏನೂ ಅನಿಸದ ಕಾರ್ತಿಕ್ ಕಾಮತ್‌ರವರ ದೂರ ಸರಿದರು ಪುಸ್ತಕದ ಬೇಡಿಕೆ, ನಿನ್ನೆ ಭೈರಪ್ಪನವರು 'ದೂರ ಸರಿದ' ಸುದ್ಧಿ ಕೇಳಿದಾಗ ವಿಚಿತ್ರ ಅನಿಸಿದ್ದು. ಕಾರ್ತಿಕ್‌ರವರು ಬೇರೆ ಯಾವುದೇ ಕಾದಂಬರಿಯ ಹೆಸರು ಹೇಳದೆ ದೂರ ಸರಿದರು ವನ್ನೇ ಕೇಳಿದ್ಯಾಕೆ?!!! 


ಇದು ವಿಚಿತ್ರ ಅಂತ ಅನಿಸುವಾಗ, ಇದೇ ಸಮಯದಲ್ಲಿ ಇನ್ನೆರಡು ವಿಚಿತ್ರಗಳೂ ನೆಡೆದಿವೆ.


ನಿನ್ನೆ ನಾನು ಮತ್ತು ನನ್ನ ತಮ್ಮ ಅಶೋಕ, ಇಬ್ಬರು ಒಟ್ಟಿಗೆ ಚಿಕ್ಕಮಗಳೂರಿಗೆ ಹೋಗಿದ್ದೆವು. ಚಿಕ್ಕಮಗಳೂರಿನ ಬಸ್ಟ್ಯಾಂಡ್ ಸಮೀಪದ ಕುವೆಂಪು ರಂಗ ಮಂದಿರದಲ್ಲಿ ಲೋಕಾಯುಕ್ತರನ್ನು ಭೇಟಿ ಮಾಡುವುದಕ್ಕಾಗಿ (ನಮ್ಮ ಮನೆಗೆ ಬನ್ನಿ, ರೈಡ್ ಮಾಡಿ ಅಂತ ಕರೆಯಲು ಅಲ್ಲ!! ಸಾಮಾಜಿಕವಾದ ಒಂದು ಸಮಸ್ಯೆಗೆ ನ್ಯಾಯ ಕೊಡಿಸಲು ಕೇಳಲು ಹೋಗಿದ್ದೆವು) ಬೆಳಗ್ಗೆ 11.00 ಗಂಟಗೆ ಹೋಗಿದ್ದೆವು. ಚಿಕ್ಕಮಗಳೂರು ಕುವೆಂಪು ಕಲಾ ಮಂದಿರಕ್ಕೆ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದು. ಒಳಗೆ ಹೋಗುವಾಗ ನೆನಪಾಗಿದ್ದು ಕಳೆದ ವರ್ಷ ಈ ರಂಗ ಮಂದಿರದಲ್ಲಿ ಇಡೀ ದಿನದ ಒಂದು ನಾಟಕ ನಡೆದಿತ್ತು. ಆ ನಾಟಕಕ್ಕೆ ಕಲ್ಕಟ್ಟೆ ನಾಗರಾಜ್‌ರಾವ್, ಚಿಕ್ಕಮಗಳೂರಿನಲ್ಲಿರುವ ದೊಡ್ಡಪ್ಪನ ಮಗ ಸತ್ಯನಾರಾಯಣ, ಮತ್ತೊಂದಿಬ್ಬರು ಆಹ್ವಾನಿಸಿದ್ದರು. ಹೋಗಲಾಗಿರಲಿಲ್ಲ, "ಛೇ ಬರಬೇಕಾಗಿತ್ತು" ಅಂತ ನಿನ್ನೆ ಬೆಳಗ್ಗೆ ರಂಗ ಮಂದಿರದ ಒಳಗೆ ಹೋಗಿ ಕುಳಿತಾಗ ಅಚಾನಕ್‌ ಆಗಿ ಒಂದು ಭಾವ ಬಂದಿತ್ತು. ಆ ಕ್ಷಣದಲ್ಲಿ ಆ ಸಹಜ ಭಾವ ಬಂದಾಗಲೂ ಏನೂ ವಿಶೇಷ ಅಂತ ಅನ್ನಿಸಲಿಲ್ಲ. ಆದರೆ ಮಧ್ಯಾಹ್ನ ಮೇಲೆ ಬಂದ ಭೈರಪ್ಪನವರು 'ದೂರ ಸರಿದ' ಸುದ್ಧಿಯ ಮೆಸೇಜ್ ಕ್ಷಣ ಕಾಲ ವಿಚಲಿತನನ್ನಾಗಿಸಿತು. ಕಳೆದ ವರ್ಷ ಆಹ್ವಾನ ಬಂದಿದ್ದು ಭೈರಪ್ಪನವರ ಪರ್ವ ಕಾದಂಬರಿಯ ಅದೇ ಹೆಸರಿನ ನಾಟಕಕ್ಕೆ! ನಿನ್ನೆ ಬೆಳಗ್ಗೆ ಅಲ್ಲಿ ಕುಳಿತಿದ್ದಾಗ ಬಂದ ಭಾವ ಭೈರಪ್ಪನವರ ನಾಟಕಕ್ಕೆ ಬರಬೇಕಿತ್ತು ಅಂತ.   


ವಿಧಿಯ ವ್ಯಂಗ್ಯವೋ, ವಿಚಿತ್ರವೋ ಅರ್ಥವಾಗದೇ ಇರುವುದು.... ನಿನ್ನೆ ಬೆಳಗ್ಗೆಯೇ ಕಲಾ ಮಂದಿರದೊಳಗೆ ಪ್ರವೇಶ ಮಾಡಿ, ಸಂಜೆ 5.40 ರವರೆಗೆ ಕುಳಿತರೂ ಹೋದ ಕೆಲಸ ಆಗಲಿಲ್ಲ! (ಇವತ್ತು ಆ ಕೆಲಸ ಆಗಿದೆ) ಆ ಕಲಾ ಮಂದಿರದಲ್ಲಿ ಕಳೆದ ವರ್ಷ ಪರ್ವ ನಾಟಕ ನೋಡಲು ಬಂದು, ಇಡೀ ದಿನ ಕುಳಿತು ನಾಟಕ ನೋಡಿದ್ದರೆ... ಇವತ್ತು ಇಡೀ ದಿನ ರಂಗ ಮಂದಿರದಲ್ಲಿ ಸುಮ್ಮನೆ ಕುಳಿತುಕೊಳ್ಳುವ ಕಾಯಕ ಬರುತ್ತಿರಲಿಲ್ಲವೇನೋ!!?  


ಆದರೆ, ಕುಳಿತಿದ್ದಕ್ಕೆ ಬೇಸರವಿಲ್ಲ... ರಂಗ ಮಂದಿರದ ಇಡೀ ಹಾಲ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಇಲಾಖೆಗಳ, ಎಲ್ಲಾ ಪಂಚಾಯತಿಗಳ,  ಮೊದಲ ಸ್ಥರದ ಅಧಿಕಾರಿಗಳು ಕುಳಿತಿದ್ದಾರೆ. ನಿನ್ನೆ 'ನೊಂದಾ'ವಣೆಯಾದ ಸುಮಾರು 68 ಪ್ರಕರಣಗಳ ಲೋಕಾಯುಕ್ತರಿಂದ ಆದ ವಿಚಾರಣೆಗಳನ್ನು ನೋಡುವ ಅವಕಾಶ ಸಿಕ್ಕಿದ್ದು ಒಂದು ವಿಶೇಷ. ಪ್ರತಿಯೊಂದೂ ವಿಭಿನ್ನ ರೀತಿಯ ಕೇಸ್‌ಗಳು. ಅವುಗಳ ನ್ಯಾಯ ವಿಚಾರಣೆ, ಪರಿಹಾರ, ವಿಲೇವಾರಿ. ಅನೇಕ ಕೇಸ್‌ಗಳ ವಿಚಾರಣೆಯನ್ನು ಮುಂದಿನ ಸಾಲಿನಲ್ಲಿ ಕುಳಿತು ವೀಕ್ಷಣೆ ಮಾಡ್ತಾ ಇದ್ದೆವು. ವಿಷಯ ಅದಲ್ಲ, ನಿನ್ನೆ ಸಂಜೆ, ನಮ್ಮ ಕೇಸ್‌ನ ವಿಚಾರಣೆ ಆಗಲಿಲ್ಲ ಎನ್ನುವ ಬೇಸರ, ಭೈರಪ್ಪನವರು ದೂರ ಸರಿದ ಬೇಸರ, ಮತ್ತೆ ಈ ಭಯಾನಕ ಗುಂಡಿ ರಸ್ತೆಯಲ್ಲಿ ಊರು ತಲುಪಬೇಕಲ್ಲ ಎಂಬ ಬೇಸರಗಳೊಂದಿಗೆ ಬಸ್‌ನಲ್ಲಿ ಕುಳಿತಾಗ ಅನಿಸಿಸಿದ್ದು: ಒಂದು ವೇಳೆ ಸಾಮಾಜಿಕ ಸಂಶೋಧಕ ಮನಸ್ಸಿನ ಭೈರಪ್ಪನವರು ಇವತ್ತು ಈ ಕಲಾ ಮಂದಿರದಲ್ಲಿ ಕುಳಿತು, ಲೋಕಾಯುಕ್ತರ ವಿಚಾರಣೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಗಮನಿಸುವಂತಾಗಿದ್ದರೆ, ಬಹುಷಃ ರಾಜಕೀಯ 'ನೆಲೆ'ಯ 'ಮತದಾನ' ಬರೆದಂತೆ, ಸಾಮಾಜಿಕವಾಗಿ ಸರಕಾರಿ ಇಲಾಖೆಗಳಿಂದಾಗುವ ಸಮಸ್ಯೆಗಳಿಗೆ ಒಂದು ಕಾದಂಬರಿ ಬರೆಯುತ್ತಿದ್ದರೇನೋ? ಅಂತ. ಆದರೆ,  ಭೈರಪ್ಪನವರು ತಮ್ಮ ಬದುಕಿನ ನಿಜ ನಾಟಕದ 'ಪರ್ವ' ಮುಗಿಸಿಯಾಗಿದೆ.


ಇನ್ನೂ ಒಂದು ಅಚಾನಕ್ ಆಗಿ ಲಿಂಕ್ ಆದ ವಿಚಾರ ಇದೆ!. ಮೂರ್ನಾಲ್ಕು ದಿನಗಳ ಹಿಂದೆ ಯಾವುದೋ ಮಾಹಿತಿಯೊಂದನ್ನು ತುಂಬಿದ ಫೈಲ್‌ನಿಂದ ತೆಗೆಯುವಾಗ 1998ರ (27 ವರ್ಷಗಳ ಹಿಂದಿನ) ನನ್ನದೇ ಒಂದು ವರದಿ ಸಿಕ್ಕಿತು! ತೀರ್ಥಹಳ್ಳಿಯಿಂದ ಪ್ರಕಟವಾಗುತ್ತಿದ್ದ ತುಂಗಾವಾರ್ತೆ ಪತ್ರಿಕೆಯ ಕಟ್ಟಿಂಗ್. ಭೈರಪ್ಪನವರನ್ನು ಕರೆಸಿ, ಹರಿಹರಪುರ ಛತ್ರದಲ್ಲಿ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಾಹಿತಿ ತಿಳಿದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಅಂತಲೇ ಬೆಂಗಳೂರಿಂದ ಬಂದಿದ್ದೆ! ಬಂದು ಭೈರಪ್ಪನವರ ಸನಿಹದಲ್ಲೇ ಕುಳಿತು, ಒಂದು ಪುಟ್ಟ ವರದಿ ಮಾಡಿದ್ದೆ. ಮೊನ್ನೆ ಅದನ್ನು ವಾಟ್ಸಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳಬೇಕು ಅಂತ ಅನಿಸಿತ್ತು. ಅಸಂಬದ್ಧ ಜಾತಿ ಗಣತಿ, ಲೋಕಾಯುಕ್ತರ ಭೇಟಿ, ದಸರಾ ಉದ್ಘಾಟನೆ ಎಲ್ಲ ಮುಗಿಯಲಿ ಅಂತ ಪೆಂಡಿಂಗ್ ಇಟ್ಟಿದ್ದೆ. ಅದ್ಯಾಕೆ ಮೊನ್ನೆ ಅಚಾನಕ್ ಆಗಿ ಪೇಪರ್ ಕಟ್ಟಿಂಗ್ ಕಣ್ಣಿಗೆ ಕಾಣಿಸಿಕೊಂಡಿತು ಅನ್ನುವುದು ವಿಸ್ಮಯ.


**


ಭೈರಪ್ಪನವರು ಅಧ್ಯಕ್ಷತೆ ವಹಿಸಿದ್ದ ಕನಕಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರೂ ದಿನ ಕನಕಪುರದ ಸಮ್ಮೇಳನ ಜಾಗದಲ್ಲಿ ಆಫೀಸ್‌ಗೆ ರಜೆ ಹಾಕಿ ಬಂಡೆಯಂತೆ ಕುಳಿತುಕೊಂಡಿದ್ದು, ಅಲ್ಲಿ ಚಂಪಾರವರ (ಸರಿ ನೆನಪಿಲ್ಲ, ಬಹುಷಃ ಚಂಪಾರವರೇ ಇರಬೇಕು!?) ಬೆಂಕಿ ಭಾಷಣ, ಅದಕ್ಕೆ ಸಮಾರೋಪ ಭಾಷಣದಲ್ಲಿ ಭೈರಪ್ಪನವರು ಏನು ಉತ್ತರ ಕೊಡುತ್ತಾರೆ? ಎಂಬ ಕುತೂಹಲದಲ್ಲಿ ಅಲ್ಲಿ ಕುಳಿತ ಕ್ಷಣ, ಆ ಸಮ್ಮೇಳನದಲ್ಲೇ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಕೊಂಡುಕೊಂಡಿದ್ದು, ಅದೆಲ್ಲವನ್ನೂ ಓದಿದ್ದು (ಪ್ರಬಂಧ ಪುಸ್ತಕಗಳನ್ನು ಇನ್ನೂ ಓದಿಲ್ಲ).... ನಿನ್ನೆ ಚಿಕ್ಕಮಗಳೂರಿಂದ ಮನೆಗೆ ಬರುವವರೆಗೂ ನೆನಪಾಗುತ್ತಲೇ ಇತ್ತು.

(ಭೈರಪ್ಪನವರ ಎಲ್ಲ ಪುಸ್ತಕಗಳು ಮೇಲುಕೊಪ್ಪದ ತಂಗುಮನೆ ಹೋಮ್‌ಸ್ಟೇ ಲೈಬ್ರೇರಿಯಲ್ಲಿ ಉಚಿತವಾಗಿ ಓದಲು ಇವೆ.)  


**


ನನ್ನ ಹೆಂಡತಿಯ ಅಕ್ಕನ ಮನೆ ಇರುವುದು ಆಗುಂಬೆ ಸಮೀಪದ ಗುಡ್ಡೇಕೇರಿ ಹತ್ತಿರದ ಕಲ್ಕೋಡ್ ಎಂಬಲ್ಲಿ. ಭೈರಪ್ಪನವರು ದಾಟು ಬರೆಯುವಾಗ (ಆಗ ನಾನಿನ್ನು ಹುಟ್ಟಿರಲಿಲ್ಲ ಅನಿಸುತ್ತೆ ಅಥವಾ ಹೊಸಿಲು 'ದಾಟು'ವ ವಯಸ್ಸೂ ಆಗಿರಲಿಲ್ಲವೇನೋ?)) ಅದನ್ನು ಬರೆಯುವುದಕ್ಕಾಗಿಯೇ ಈ ಕಲ್ಕೋಡ್ ಮನೆಯಲ್ಲಿ ಅನೇಕ ದಿನಗಳು ತಂಗಿದ್ದರಂತೆ. ಆ ಹಳೆಯ ಮನೆ ಈಗಲೂ ಹಾಗೇ ಇದೆ.  



ಅದೇ ತೊಂಬತ್ತರ ದಶಕದಲ್ಲಿ, ದಸರಾಕ್ಕೆಂದು ಮೈಸೂರಿಗೆ ಹೋದಾಗ, ಭೈರಪ್ಪನವರ ಮನೆಯ ಗೇಟ್‌ ವರೆಗೆ ಹೋಗಿದ್ದು, ಒಳಗಡೆ ಹೋಗಿ ಮಾತಾಡಿಸುವ ಧೈರ್ಯ ಇಲ್ಲದೆ ಬಂದಿದ್ದೂ ನೆನಪಿನಲ್ಲಿದೆ. ಇದು ಹರಿಹರಪುರದಲ್ಲಿನ ಭೈರಪ್ಪನವರ ಜೊತೆಗಿನ ಸಂವಾದ ಕಾರ್ಯಕ್ರಮಕ್ಕಿಂತ ಮೊದಲು. ನಂತರ ಆಗಿದ್ದಿದ್ದರೆ, ಬಹುಶಃ ಗೇಟ್ ದಾಟಿ, ಒಳ ಹೋಗಿ, ಮಾತಾಡಿಸುವ ಧೈರ್ಯ ಮತ್ತು ಪುಣ್ಯ ಹೊಂದುವ ಸಾಧ್ಯತೆ ಇತ್ತು.  



ಇವತ್ತು ವಾಟ್ಸಪ್‌ನಲ್ಲಿ ನಾಲ್ಕಾರು ಅಕ್ಷರ ಗೀಚುವ ಚಟ/ಹವ್ಯಾಸಗಳು ಇದ್ದರೆ, ಅದರ ಹಿಂದೆ ಭೈರಪ್ಪ, ಯಂಡಮೂರಿ, ಎನ್. ನರಸಿಂಹಯ್ಯ, ಮಾಭಿಷೆ, ರವಿ ಬೆಳೆಗೆರೆ... ಎಲ್ಲ ಇದ್ದಾರೆ. ಭೈರಪ್ಪನವರು ಮೊದಲು ಇದ್ದಾರೆ.



ಇವತ್ತಿನಿಂದ ಭೈರಪ್ಪನವರ 'ಪರ್ವ'ವನ್ನು ಓದುತ್ತ...., ಅವರು ಜೀವಂತವಾಗಿಟ್ಟ ದ್ವಾಪರದ ಅಕ್ಷರಗಳೊಂದಿಗೆ, ಕಳೆದ ಮೂರು-ನಾಲ್ಕು ದಿನಗಳಿಂದ ಅಚಾನಕ್ ಆಗಿ ವಿಸ್ಮಯವಾಗಿ, ನೆನಪಿಗೆ ಬಂದು ಲಿಂಕ್ ಆಗ್ತಾ ಇದ್ದ ಭೈರಪ್ಪನವರೊಂದಿಗಿನ ಭಾವ 'ಯಾನ' 'ತಂತು'ವನ್ನು ಕೆಲವು ದಿನಗಳವರೆಗೆ ಮುಂದುವರಿಸುವುದು ಈಗಿನ ಸಂಕಲ್ಪ.  


ಭಗವಂತ ಭೈರಪ್ಪನವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top