ವೆನ್‍ಲಾಕ್‍ ಕ್ಯಾಥ್‍ಲ್ಯಾಬ್ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿ ಸೂಚನೆ

Upayuktha
0


ಮಂಗಳೂರು: ಹೃದ್ರೋಗಕ್ಕೆ ಸಂಬಂಧಪಟ್ಟ ಉನ್ನತ ಚಿಕಿತ್ಸೆ ಒದಗಿಸಲು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿರುವ  ಕ್ಯಾಥ್‍ಲ್ಯಾಬ್ ಘಟಕವನ್ನು   ಶೀಘ್ರದಲ್ಲಿ ಕಾರ್ಯಾಚರಣೆ ಗೊಳಿಸುವಂತೆ ಜಿಲ್ಲಾಧಿಕಾರಿ ಹೆಚ್. ವಿ  ದರ್ಶನ್ ಸೂಚಿಸಿದ್ದಾರೆ. 


ಅವರು  ಗುರುವಾರ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವೆನ್‍ಲಾಕ್ ಹೊಸ ಸರ್ಜಿಕಲ್ ಕಟ್ಟಡದ ತಳ ಅಂತಸ್ತಿನಲ್ಲಿ ಸುಸಜ್ಜಿತ ಕ್ಯಾಥ್‍ಲ್ಯಾಬ್    ನಿರ್ಮಾಣಗೊಂಡಿದ್ದು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ತಜ್ಞ ವೈದ್ಯರು ಮತ್ತು ತಂತ್ರಜ್ಞಾನ ಸಿಬ್ಬಂದಿಗಳನ್ನು ಕೆಎಂಸಿ ವತಿಯಿಂದ ಒದಗಿಸಿ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಿದ್ಧಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಅತಿ ಶೀಘ್ರವೇ ಸಾರ್ವಜನಿಕರ ಸೇವೆಗೆ  ಕ್ಯಾಥ್‍ಲ್ಯಾಬ್   ದೊರಕಿಸಲು  ಕ್ರಮ ಕೈಗೊಳ್ಳಲು ಅವರು ವೆನ್‍ಲಾಕ್ ಅಧೀಕ್ಷಕರಿಗೆ ಸೂಚಿಸಿದರು.


ವೆನ್‍ಲಾಕ್‍ನಲ್ಲಿ 35 ಹಾಸಿಗೆ ಸಾಮರ್ಥ್ಯದ ಹೊಸ ಡಯಾಲಿಸಿಸ್ ವಾರ್ಡ್‍ನ ಕಾಮಗಾರಿ ಪೂರ್ಣಗೊಂಡಿರುತ್ತದೆ. ಇಲ್ಲಿ ಅಗತ್ಯವಿರುವ ಸಣ್ಣಪುಟ್ಟ  ಕೆಲಸಗಳನ್ನು ಪೂರ್ಣಗೊಳಿಸಬೇಕು. ವೆನ್‍ಲಾಕ್ ಕ್ರಿಟಿಕಲ್ ಕೇರ್ ಬ್ಲಾಕ್‍ನ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅವರು ಸೂಚಿಸಿದರು.


ವೆನ್‍ಲಾಕ್-ಮಿಲಾಗ್ರಿಸ್ ರಸ್ತೆಯ ಅಗಲೀಕರಣ ಕಾಮಗಾರಿ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು. ವೆನ್‍ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗುತ್ತಿರುವ ಬಗ್ಗೆ  ಆಗ್ಗಿಂದಾಗೆ  ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.


ವೆನ್‍ಲಾಕ್ ಹೊಸ ಒಪಿಡಿ ಬ್ಲಾಕ್ ನಿರ್ಮಾಣ ಮಾಡಲು ಸರ್ಕಾರದಿಂದ70 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ನಿಟ್ಟಿನಲ್ಲಿ ಒ.ಪಿ.ಡಿ ಬ್ಲಾಕ್‍ನಲ್ಲಿರುವ ಎಲ್ಲಾ ವಿಭಾಗಗಳನ್ನು ಟ್ರಾಮಾ ಬ್ಲಾಕ್‍ಗೆ ಸ್ಥಳಾಂತರಿಸಿ, ಈಗಿನ ಒಪಿಡಿ ಕಟ್ಟಡವನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು. 


ವೆನ್‍ಲಾಕ್ ಆಸ್ಪತ್ರೆ ಅಧೀನದಲ್ಲಿರುವ ಅತ್ತಾವರ ಗ್ರಾಮದ  2.71 ಎಕರೆ   ಖಾಲಿ  ಜಾಗದಲ್ಲಿ  ತಾತ್ಕಾಲಿಕವಾಗಿ ಪಾವತಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಭೆಯಲ್ಲಿ ಅನುಮತಿ ನೀಡಲಾಯಿತು. ಆಸ್ಪತ್ರೆಯ ವಿವಿಧ ವಿಭಾಗದ ಕಟ್ಟಡದಲ್ಲಿರುವ ರೋಗಿಗಳಿಗೆ  ಆಹಾರ ಸರಬರಾಜು ಮಾಡಲು ಎಲೆಕ್ಟ್ರಿಕ್ ಬಗ್ಗಿ ವಾಹನ ಖರೀದಿಸಲು ನಿರ್ಣಯಿಸಲಾಯಿತು. ಸಭೆಯಲ್ಲಿ  ವೆನ್‍ಲಾಕ್   ಹಾಗೂ ಲೇಡಿಗೋಷನ್ ಆಸ್ಪತ್ರೆಯ ವಿವಿಧ ಖರ್ಚು ವೆಚ್ಚಗಳಿಗೆ ಅನುಮೋದನೆ ನೀಡಲಾಯಿತು.


ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಹಾಗೂ ಲೇಡಿಗೋಶನ್ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಅವರು ಆಸ್ಪತ್ರೆ ಪ್ರಗತಿ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.

 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ನರ್ವಾಡೆ ವಿನಾಯಕ್ ಕಾರ್ಬಾರಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್,   ಡಿಸಿಪಿ ರವಿಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಕೆಎಂಸಿ ಡೀನ್  ಉಣ್ಣಿಕೃಷ್ಣನ್  ಮತ್ತಿತರರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top