ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಶಿಕ್ಷೆಯಾಗಿದೆ: ಶ್ರೀನಿವಾಸ್ ರಾವ್

Upayuktha
0



ಧರ್ಮಸ್ಥಳ: ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಮತ್ತು ಷಡ್ಯಂತ್ರ ಮಾಡಿದವರಿಗೆ  ಅಣ್ಣಪ್ಪ ಸ್ವಾಮಿ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಉಲ್ಲಾಳ್ತಿ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಸೆ. 26 ರಂದು ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಭಕ್ತಾದಿಗಳು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 


ಮಂಜುನಾಥನ ಸನ್ನಿಧಿ ಮುಂದೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ ಭಕ್ತರು ಮೆರವಣಿಗೆ ಮೂಲಕ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಸಾಗಿ ಅಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಸೇರಿದ್ದರು. ನಂತರ ಮೆರವಣಿಗೆ ಅಮೃತವರ್ಷಿಣಿಗೆ ಸಾಗಿ ಸಹಸ್ರ ಲಲಿತಾ ಪಂಚಾಕ್ಷರಿ ನಾಮ ಪಠಣ ಸಲ್ಲಿಸಲಾಯಿತು.


ಮಹಿಳಾ ಭಕ್ತಾದಿಗಳಿಗೆ ಬಾಗಿನ ನೀಡಿ ವಿಶೇಷವಾಗಿ ಗೌರವಿಸಲಾಯಿತು. ಹಿತರಕ್ಷಣಾ ಸಮಿತಿಯು ಕಳೆದ ಮಾ. 27 ರಂದು ನಡೆಸಿದ ಸಮಾವೇಶದಲ್ಲಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆ ಆಗಬೇಕೆಂದು ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕ್ಷೇತ್ರದ ವಿರುದ್ಧ ನಡೆದ ಎಲ್ಲಾ ಅಪಪ್ರಚಾರಗಳು  ಒಂದೊಂದಾಗಿ ಹೊರಬರುತ್ತಿತ್ತು, ಎಲ್ಲಾ ಅಪಪ್ರಚಾರಗಳಿಗೂ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.


ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳದ ಉಗ್ರಾಣದ ಹಿರಿಯ ಮುತ್ಸದ್ಧಿ ಭುಜಬಲಿ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಡಾ. ಡಿ ವೀರೇಂದ್ರ ಹೆಗ್ಗಡೆಯವರು “ಊರವರ, ಕ್ಷೇತ್ರದ ಭಕ್ತರೆಲ್ಲರ ಪ್ರೀತಿ ವಿಶ್ವಾಸಗಳು ನಮ್ಮನ್ನು ಜೀವಂತವಾಗಿರಿಸಿದೆ. ಇದರಿಂದಾಗಿ ಇನ್ನೂ ಹೆಚ್ಚು-ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಮಾಡಬೇಕೆಂಬ ಚೈತನ್ಯ ಮೂಡುತ್ತಿದೆ. 


ಕೆಲವು ಸಮಯಗಳಿಂದ ಕ್ಷೇತ್ರದ ಮೇಲೆ ಸತತವಾಗಿ ಆರೋಪಗಳು, ದ್ವೇಷಗಳು ಬರತೊಡಗಿತು. ಅದಕ್ಕೆ ಕಾರಣವೇನು ಎಂದು ನನಗೆ ಇದುವರೆಗೂ ತಿಳಿದಿಲ್ಲ. ಈಗ ಸರಕಾರ ನಡೆಸುತ್ತಿರುವ ತನಿಖೆಯಲ್ಲಿ ಸತ್ಯಗಳು ಹೊರ ಬರುತ್ತಿವೆ. ನಮ್ಮಿಂದ ಯಾವ ತಪ್ಪುಗಳು ನಡೆದಿಲ್ಲ ಎಂದು ತಿಳಿಯುತ್ತಿದೆ ಎಂದು ಹೇಳಿದರು.


ಇದುವರೆಗೂ ಅನೇಕರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕ್ಷೇತ್ರದ ಜೊತೆಗೆ ಇದ್ದೇವೆ ಎಂದು ಹೇಳಿದ್ದಾರೆ. ಊರವರೂ ಕೂಡ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಕ್ಷೇತ್ರದ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರೀತಿ, ವಿಶ್ವಾಸಗಳು ಹೀಗೆಯೇ ಇರಲಿ ಎಂದರು.


ಸಿದ್ಧಗಂಗಾ ಮಠದ ಸ್ವಾಮಿಯವರ ಕೃತಿಯನ್ನು ಓದುತ್ತಿದ್ದೆ. ಒಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ಹಾಗೂ ಅನೇಕ ಯೋಜನೆಗಳ ಬಗೆ ಮೆಚ್ಚುಗೆ ಮಾತುಗಳನ್ನು ಆಡಿರುವುದನ್ನು ನೋಡಿದೆ. ತುಂಬಾ ಸಂತೋಷವಾಯಿತು. ಶ್ರೀ ಕ್ಷೇತ್ರದ ಮೂಲಕ ಇಂತಹ ಸೇವಾ ಕಾರ್ಯ ನೆರವೇರಲು ನಾನು ನಿಮಿತ್ತ ಮಾತ್ರ ಆಗಿದ್ದೇನೆ.  ಶ್ರೀ ಸ್ವಾಮಿಯ ಅನುಗ್ರಹ, ನಿಮ್ಮೆಲ್ಲರ ಹಾರೈಕೆ ಹಾಗೂ ಕುಟುಂಬಸ್ಥರ ಸಹಕಾರದಿಂದ ಗ್ರಾಮೀಣಾಭಿವೃದ್ದಿ, ವಿದ್ಯಾಸಂಸ್ಥೆ, ಆಸ್ಪತ್ರೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.


ಹೇಮಾವತಿ ವೀ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ನಂದೀಶ್ ಹಾಗೂ ಮೈತ್ರಿ ನಂದೀಶ್ ಉಪಸ್ಥಿತರಿದ್ದರು. ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಕೋಶಾಧಿಕಾರಿ ಶ್ರೀನಿವಾಸ್ ರಾವ್ ಧರ್ಮಸ್ಥಳ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಹರಿದಾಸ್ ಗಾಂಭೀರ, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಕೀಲರಾದ ಕೇಶವ ಪಿ. ಗೌಡ , ಸುಬ್ರಮಣ್ಯ ಪ್ರಸಾದ್, ಎ.ವಿ. ಶೆಟ್ಟಿ, ಪ್ರೀತಂ ಡಿ ಪೂಜಾರಿ ಧರ್ಮಸ್ಥಳ, ಶಾಂಭವಿ ರೈ ಧರ್ಮಸ್ಥಳ, ಧನಕೀರ್ತಿ ಅರಿಗ ಧರ್ಮಸ್ಥಳ, ಅಖಿಲ್ ಶೆಟ್ಟಿ ನೇತ್ರಾವತಿ, ಪ್ರಭಾಕರ್ ಪೂಜಾರಿ ಕನ್ಯಾಡಿ ಉಪಸ್ಥಿತರಿದ್ದರು. ಗ್ರಾಮಸ್ಥರು, ಧರ್ಮಸ್ಥಳದ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top