ನೃತ್ಯ– ಭೂಲೋಕವನ್ನು ದೇವಲೋಕದೊಂದಿಗೆ ಜೋಡಿಸುವ ಸೇತುವೆ: ಡಾ. ವೀಣಾ ಬನ್ನಂಜೆ

Upayuktha
0


ಮಂಗಳೂರು: ವಿವಿಧ ಜಾತಿ, ಪ್ರಕಾರಗಳ ಸ್ವರಗಳು, ಪರಿಕರಗಳು ಏಕ ಕಾಲದಲ್ಲಿ ಕೂಡಿ ಪ್ರಸ್ತುತ ಪಡಿಸಿದಾಗ ಭಾರತೀಯ ಪರಂಪರೆ, ನಾಟ್ಯ ಪರಂಪರೆಯ ಅನಾವರಣವಾಗುತ್ತದೆ. ನಮ್ಮ ನೃತ್ಯ ಪರಂಪರೆಯು ಪವಿತ್ರ ಪರಂಪರೆಯಾಗಿದೆ. ಯಾಕೆಂದರೆ ಸ್ವತಃ ಶ್ರೀಕೃಷ್ಣ ಪರಮಾತ್ಮ ಹಾಗೂ ರುದ್ರ ದೇವರು ಕುಣಿದ ಪ್ರಕಾರ. ಇದು ದೇವರು ನಮಗೆ ನೀಡಿದ ಪರಂಪರೆಯಾಗಿದೆ ಎಂದು ವೀಣಾ ಬನ್ನಂಜ್ಜೆ ಅವರು ಹೇಳಿದರು.


ಭರತಾಂಜಲಿಯ ವಿದ್ವಾನ್ ಶ್ರೀಧರ ಹೊಳ್ಳ ಹಾಗೂ ವಿದ್ವಾನ್ ಪ್ರತಿಮಾ ಶ್ರೀಧರ ಹೊಳ್ಳ ಅವರ ಶಿಷ್ಯೆ ಕುಮಾರಿ ಅಪೂರ್ವ ಬಿ. ರಾವ್  ಅವರ ರಂಗಪ್ರವೇಶ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.


ದೇವಲೋಕದಲ್ಲಿ ಜನಿಸಿದ ಈ ಕಲೆಯ ಪರಂಪರೆಯನ್ನು ಭೂಲೋಕಕ್ಕೆ ಇಳಿಸಿ, ಮನುಷ್ಯರನ್ನು ಗಂಧರ್ವರ ಸಮಾನರನ್ನಾಗಿ ಮಾಡುವ ಶಕ್ತಿ ನೃತ್ಯಕಲೆಗೆ ಇದೆ. ಈ ನೃತ್ಯಮಾರ್ಗವು ಭಾವಲೋಕವನ್ನು ದೇವಲೋಕದೊಂದಿಗೆ ಜೋಡಿಸುವ ಸೇತುವೆಯಂತಿದೆ. ಈ ಮಾರ್ಗದಲ್ಲಿ ಅನೇಕ ಶ್ರೇಷ್ಠ ಕಲಾವಿದರು ನೃತ್ಯಸಾಧನೆಯ ಮೂಲಕ ದೇವರನ್ನೇ ಒಲಿಸಿಕೊಂಡಿದ್ದಾರೆ. ಆ ಪವಿತ್ರ ಪರಂಪರೆಯ ಮುಂದುವರಿಕೆಯಾಗಿ ಇಂದು ಅಪೂರ್ವ ಅವರ ರಂಗಪ್ರವೇಶ ಆಕೆಯ ಜೀವನದ ಪಾಂಥಲೋಕದ ಹೊಸ ಅಧ್ಯಾಯಕ್ಕೆ ಸೋಪಾನವಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಪ್ರಾರ್ಥಿಸಿದರು.


ನೃತ್ಯ, ಸಂಗೀತ, ನಾಟಕ– ಯಾವ ಕಲೆಯನ್ನೇ ನೋಡಿದರೂ ಅದು ಭಾರತೀಯ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ. ವಿಶ್ವದ ಯಾವುದೇ ಕಲಾಪ್ರಕಾರವು ಇಷ್ಟೊಂದು ದೀರ್ಘ ಪಾರಂಪರ್ಯವನ್ನು ಕಟ್ಟಿಕೊಟ್ಟಿಲ್ಲ. ಭಾರತೀಯ ಪುರಾಣ ಪ್ರಪಂಚ ಎಷ್ಟೋ ವಿಶಾಲ. ಪುರಾಣವನ್ನು ಆಧಾರ ಮಾಡಿಕೊಂಡರೆ ಅನಂತ ಹಾಡು-ಕಥೆಗಳನ್ನು ರಚಿಸಬಹುದು. ಇಂತಹ ಶ್ರೀಮಂತ ಕಥಾಲೋಕವೇ ಭಾರತೀಯ ಪರಂಪರೆಯನ್ನು ಕಟ್ಟಿಕೊಡುವ ಬಲವಾದ ಆಧಾರ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


ರಂಗಪ್ರವೇಶ ಎಂದರೆ ಕೇವಲ ನಾಟ್ಯ ರಂಗ ಪ್ರವೇಶವಲ್ಲ. ಇದೊಂದು ಭಕ್ತಿ ಭಾವದ ಮೂರ್ತ ರೂಪ. ಭೂಮಿಯಲ್ಲಿರುವ ಎಲ್ಲರೂ ದೇವಲೋಕದಲ್ಲಿರುವ ಆ ರಂಗನ ಬಳಿಗೆ ಹೋಗಬೇಕಾದರೆ ಈ ರಂಗ ಪ್ರವೇಶಿಸಬೇಕು. ಇಲ್ಲಿ ಯಾವುದೇ ವಂಚನೆ, ತಾಳ-ಲಯದ ತಪ್ಪುಗಳಿಗೂ ಸ್ಥಳವಿಲ್ಲ. ಕಠಿಣ ಪರಿಶ್ರಮ, ತೀವ್ರ ಸಮರ್ಪಣೆ ಹಾಗೂ ಆಸ್ಥೆಯಿಂದ ಮಾಡಿದ ಸಾಧನೆಯೇ ಕಲಾವಿದನನ್ನು ದೇವಲೋಕದ ಆ ರಂಗದತ್ತ ಕೊಂಡೊಯ್ಯುತ್ತದೆ ಎಂದರು.


ರಂಗ ಪ್ರವೇಶಕ್ಕೆ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ದೀಪಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಗುರು ಶ್ರೀಧರ ಹೊಳ್ಳ, ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ಪ್ರಕ್ಷಿಲಾ ಜೈನ್, ಕಲಾವಿದೆಯ ಮಾತಾಪಿತೃಗಳಾದ ಭಾಸ್ಕರ ರಾವ್, ದೇವಿಪ್ರಿಯ ದಂಪತಿಗಳು, ಉಪಸ್ಥಿತರಿದ್ದರು ಉದಯಶಂಕರ್ ರಾವ್ ಬಾಳ ಕಾರ್ಯಕ್ರಮ ನಿರೂಪಿಸಿದರು. ಕಲಾವಿದೆ ಅಪೂರ್ವ ಗುರುಗಳಾದ ಗುರು ಶ್ರೀಧರ ಹೊಳ್ಳ, ವಿದುಷಿ ಪ್ರತಿಮಾ ಶ್ರೀಧರ್, ಮತ್ತು ವಿದುಷಿ ಪ್ರಕ್ಷೀಲ ಜೈನ್ ಇವರಿಗೆ ಗುರುನಮನ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top