ಡಿ. ವೀರೇಂದ್ರ ಹೆಗ್ಗಡೆಯವರಿಗೆ “ಶ್ರಾವಕೋತ್ತಮ ಚಿಂತಾಮಣಿ” ಉಪಾಧಿ ಪ್ರದಾನ

Upayuktha
0

ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘ, ಮೈಸೂರು ಇವರಿಂದ ಧರ್ಮಸ್ಥಳ ಭೇಟಿ 




ಉಜಿರೆ: ಮೈಸೂರಿನಲ್ಲಿರುವ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ನೇತೃತ್ವದಲ್ಲಿ 25 ಮಂದಿ ಅರ್ಚಕರು, ಶಾಸ್ತ್ರಿಗಳು ಮತ್ತು ಉಪಾಧ್ಯಾಯರುಗಳು ಗುರುವಾರ ಧರ್ಮಸ್ಥಳಕ್ಕೆ ಬಂದು ಸಾಮೂಹಿಕವಾಗಿ ಮಂಗಲಾಷ್ಟಕ, ಪಂಚನಮಸ್ಕಾರ ಮಂತ್ರ ಪಠಣ, ಭಕ್ತಾಮರ ಸ್ತೋತ್ರ ಪಠಣದೊಂದಿಗೆ ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ಬಂದ ಉಪಸರ್ಗಗಳೆಲ್ಲ ನಿವಾರಣೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ದೇವಸ್ಥಾನ, ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ನಡೆದ ಸರಳ ಸಮಾರಂಭದಲ್ಲಿ ಅರ್ಚಕರು ಅವರವರ ಊರಿನ ಬಸದಿಯಲ್ಲಿ ಪೂಜೆ ಮಾಡಿ ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ನೀಡಿದರು.


ಮೈಸೂರಿನ ಮೋಹನಕುಮಾರ ಶಾಸ್ತ್ರಿ, ಶಾಂತಿನಾಥ ಉಪಾಧ್ಯಾಯ ಮತ್ತು ಹೇಮಾ ಉಪಾಧ್ಯಾಯ ಮಂಗಲಾಷ್ಟಕ ಹಾಗೂ ಜಿನಗೀತೆಗಳನ್ನು ಹಾಡಿ ಕೊನೆಗೆ ಶಾಂತಿಮಂತ್ರ ಪಠಣ ಮಾಡಿದರು. ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ವತಿಯಿಂದ ಹೆಗ್ಗಡೆಯವರಿಗೆ “ಶ್ರಾವಕೋತ್ತಮ ಚಿಂತಾಮಣಿ” ಉಪಾಧಿ ನೀಡಿ ಗೌರವಿಸಲಾಯಿತು.


ಬಳಿಕ ಹೇಮಾವತಿ ವೀ. ಹೆಗ್ಗಡೆಯವರನ್ನೂ ಗೌರವಿಸಿ ಅಭಿನಂದಿಸಿದರು. ಡಿ. ಹರ್ಷೇಂದ್ರ ಕುಮಾರ್ ಜೈನ ಅರ್ಚಕರ ಸಂಘದ ಸರ್ವಸದಸ್ಯರನ್ನೂ ಸ್ವಾಗತಿಸಿ, ಧರ್ಮಸ್ಥಳದ ಸೇವಾ ಕಾರ್ಯಗಳ ಬಗ್ಯೆ ಮಾಹಿತಿ ನೀಡಿದರು. ಅರ್ಚಕರ ಸಂಘದ ವತಿಯಿಂದ ಡಿ. ಹರ್ಷೇಂದ್ರ ಕುಮಾರ್ ಅವರನ್ನೂ ಗೌರವಿಸಿದರು.


ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ, ಶ್ರದ್ಧಾ-ಭಕ್ತಿಯ ಗೌರವಕ್ಕೆ ಸಂತೋಷ ಮತ್ತು ಮೆಚ್ಚುಗೆ ವ್ಯಕ್ತಪಡಿಸಿ ಹೆಗ್ಗಡೆಯವರು ಮಂಜುನಾಥ ಸ್ವಾಮಿ, ಭಗವಾನ್ ಚಂದ್ರನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮದೇವತೆಗಳ ಅಭಯ ಮತ್ತು ಅನುಗ್ರಹದೊಂದಿಗೆ ನಮ್ಮ ಕರ್ತವ್ಯ ದೊಂದಿಗೆ ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ಸತ್ಕಾರ್ಯಗಳನ್ನು ಪರಿಶುದ್ಧ ಮನಸ್ಸಿನಿಂದ ಮಾಡುತ್ತಿದ್ದೇವೆ. ನಾನು ಮಾಡುವ ಎಲ್ಲಾ ಸೇವಾ ಕಾರ್ಯಗಳಿಗೂ ಕುಟುಂಬದ ಎಲ್ಲಾ ಸದಸ್ಯರ ಸಕ್ರಿಯ ಸಹಕಾರವಿದೆ ಎಂದು ಅವರು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top