ಮಂಗಳೂರಲ್ಲಿ ಚಾತುರ್ಮಾಸ್ಯ ವ್ರತ: ವಿನೂತನ ದಾಖಲೆ ಬರೆದ ಶ್ರೀ ಭಂಡಾರಕೇರಿ ಮಠಾಧೀಶರು

Upayuktha
0




ಮಂಗಳೂರು: ಬಹುತೇಕ ಎಲ್ಲ ಮಠಾಧೀಶರುಗಳ ಈ ಬಾರಿಯ ಚಾತುರ್ಮಾಸ್ಯ ವ್ರತ ಭಾನುವಾರ ಸಂಪನ್ನಗೊಂಡಿದೆ. ವ್ರತ ನಿಮಿತ್ತ ಆರಂಭದ ದಿನ ತಾವು ಸ್ಥಾಪಿಸಿಕೊಂಡಿದ್ದ ಪವಿತ್ರ ಮೃತ್ತಿಕೆಯನ್ನು ನೀರಿನಲ್ಲಿ ವಿಸರ್ಜಿಸುವುದರೊಂದಿಗೆ ವ್ರತವನ್ನು ಸಮಾಪ್ತಿಗೊಳಿಸಿದ್ದಾರೆ.


ಕರಾವಳಿ ಜಿಲ್ಲೆಗಳ ಮಟ್ಟಿಗೆ ಈ ಬಾರಿಯ ಚಾತುರ್ಮಾಸ್ಯ ವ್ರತದ ವಿಷಯದಲ್ಲಿ ಬಹಳ ಉಲ್ಲೇಖನೀಯ ಸಂಗತಿ ಎಂದರೆ ಉಡುಪಿಯ ಮಾಧ್ವ ಮಠಾಧೀಶರೊಬ್ಬರು ಇತ್ತೀಚಿನ ಒಂದು ಶತಮಾನಗಳಿಗೂ ಅಧಿಕ ಅಥವಾ ಹೆಚ್ಚು ವರ್ಷಗಳಲ್ಲೇ ಮೊದಲಬಾರಿಗೆ ಮಂಗಳೂರು ಮಹಾನಗರದಲ್ಲಿ ತಮ್ಮ ಚಾತುರ್ಮಾಸ್ಯ ವ್ರತ ನಡೆಸಿದ್ದು.‌ ಅಷ್ಟ ಮಠಾಧೀಶರೂ ಸೇರಿದಂತೆ ಅನೇಕ ಮಾಧ್ವ ಮಠಾಧೀಶರುಗಳು ಮಂಗಳೂರು ಮಹಾನಗರದೊಂದಿಗೆ ವಿಶೇಷ ಸಂಪರ್ಕ ಒಡನಾಟ ಬಾಂಧವ್ಯ ಹೊಂದಿದ್ದರೂ ಅಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕರಿಸಿದ ದಾಖಲೆಗಳಿರಲಿಲ್ಲ. ವಯಸ್ಸು ಮತ್ತು ಅನುಭವದಲ್ಲಿ ಹಿರಿಯರಾದ 93 ವರ್ಷ ವಯಸ್ಸಿನ ಮಂಗಳೂರಿನ ಪ್ರಸಿದ್ಧ ಉದ್ಯಮಿ ಶಿಕ್ಷಣ ತಜ್ಞ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಡಾ ಎ ಶ್ರೀನಿವಾಸ ರಾವ್ ಅವರೇ ಹೇಳುವಂತೆ ನನಗೆ ಬುದ್ಧಿ ತಿಳಿದಲ್ಲಿಂದ ಇಲ್ಲಿ ವರೆಗೆ ಉಡುಪಿಯ ಯಾವುದೆ ಮಾಧ್ವ ಮಠಾಧೀಶರು ಇಲ್ಲಿ ಚಾತುರ್ಮಾಸ್ಯ ವ್ರತ ನಡೆಸಿಲ್ಲ.‌ ಏನಿದ್ದರೂ ಆಗಾಗ್ಗೆ ಕೆಲವರು ಮೂರು ನಾಲ್ಕು ದಿನಗಳ ಕಾಲ ಮಂಗಳೂರಿನಲ್ಲಿ ತಂಗಿದ್ದು ಪಟ್ಟದ ದೇವರ ಪೂಜೆ ಮಾಡಿಕೊಂಡು ಭಕ್ತರ ಸಂಪರ್ಕ ಮಾಡಿಕೊಂಡು ಹೋಗಿದ್ದಾರಷ್ಟೆ.‌


ಆ ನಿಟ್ಟಿನಲ್ಲಿ ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಒಂದು ಉಲ್ಲೇಖನೀಯ ದಾಖಲೆ ಬರೆದಿದ್ಧಾರೆ.‌ ಪ್ರಸ್ತುತ ಮಾಧ್ವ ಯತಿಗಳಲ್ಲೂ ವಯಸ್ಸು ವಿದ್ವತ್ತುಗಳಲ್ಲೂ ಹಿರಿತನ ಹೊಂದಿರುವ ನಾಡಿನ ಅತಿವಿರಳ ಕವಿಮನಸ್ಸಿನ ಯತಿಗಳಾದ 71 ವರ್ಷ ವಯಸ್ಸಿನ ಶ್ರೀಗಳು ತಮ್ಮ‌46 ನೇ ಚಾತುರ್ಮಾಸ್ಯ ವ್ರತವನ್ನು ಮಂಗಳೂರು ನಗರದ ಕಾರಣಿಕದ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಕೈಗೊಂಡರು. 


ಇನ್ನೂ ವಿಶೇಷ ಸಂಗತಿ ಎಂದರೆ ಈ ಸಂದರ್ಭದಲ್ಲಿ ನಿತ್ಯ ತಮ್ಮ ಪಟ್ಟದ ದೇವರಾದ ಶ್ರೀ ಮಧ್ವಾಚಾರ್ಯ ಕರಾರ್ಚಿತ ಶ್ರೀಸೀತಾ ಲಕ್ಷ್ಮಣ ಆಂಜನೇಯ ಸಹಿತ ಕೋದಂಡರಾಮರ ಪೂಜಾದಿ ಕೈಂಕರ್ಯಗಳ‌ಜೊತೆಗೇ ನಡೆಸಿದ ಮನೆಮನೆ ಶ್ರೀ ಭಾಗವತ ನೀರಾಜನೋತ್ಸವ ಅಭಿಯಾನ. ಇದೂ ಒಂದು ದಾಖಲೆಯಾಗಿಯೇ ಮೂಡಿಬಂದಿದೆ. ಎರಡು ತಿಂಗಳ ಪರ್ಯಂತ ನಗರಭಾಗದ ಸುಮಾರು 450 ಮನೆಗಳಿಗೆ ಪಟ್ಟದ ದೇವರ ಸಹಿತ ತೆರಳಿ ಅವರು ನಡೆಸಿದ ಮ್ಯಾರಥಾನ್ ಶ್ರೀ ಮಧ್ಭಾಗವತ ಚಿಂತನಾ ಅಭಿಯಾನ ನಿಸ್ಸಂಶಯವಾಗಿ ಆ ಮನೆಗಳಿಗೆ ಮಾತ್ರವಲ್ಲ; ಮಂಗಳೂರು ನಗರಕ್ಕೂ  ವಿಶೇಷ ಶ್ರೇಯಸ್ಸನ್ನುಂಟುಮಾಡ್ತದೆ ಅನ್ನೋದು ಸಮಸ್ತ ಶ್ರದ್ಧಾಳುಗಳ ಸ್ಪಷ್ಟ ವಿಶ್ವಾಸ. ವಸ್ತುತಃ ಯಾವುದೇ ಒಂದು ಸ್ಥಳದಲ್ಲಿ ಒಬ್ಬ ತೇಜಸ್ವೀ ವರ್ಚಸ್ವಿ ಹಾಗೂ ತಪಸ್ವೀ ಯತಿಗಳು ಈ ವ್ರತ ಕೈಗೊಂಡರೆ  ಅದರಲ್ಲಿ ಭಾಗಿಗಳಾದ ಮತ್ತು ಆ ಪ್ರದೇಶದ ಸುಭಿಕ್ಷೆ ಸಮೃದ್ಧಿಗೆ ಕಾರಣವಾಗ್ತದೆ ಅನ್ನೋದು ಚಾತುರ್ಮಾಸ್ಯ ವ್ರತಕ್ಕಿರುವ ವಿಶೇಷ ಫಲಶ್ರುತಿ. ಅದರ ಜೊತೆಗೆ ಪ್ರತೀ ಮನೆಗಳಲ್ಲಿ ಶ್ರೀ ಮದ್ಭಾಗವತ ಪ್ರವಚನ ಪಾರಾಯಣ, ಚಿಂತನ ಮಂಥನಗಳು ನಿರಂತರ ನಡೆದರೆ ಅದು ಆ ಮನೆಗೆ ರಕ್ಷೋಘ್ನವಾಗಿ ದೋಷಗಳನ್ನೆಲ್ಲ ದೂರ ಮಾಡಿ ರಕ್ಷೆಯನ್ನು ನೀಡುತ್ತದೆ ಅನ್ನುತ್ತದೆ ಭಾಗವತ ಫಲಶ್ರುತಿ.


ಹಾಗಿರುವಾಗ ಯತಿವಿಹಿತ ಕರ್ಮಾನುಷ್ಠಾನಗಳಲ್ಲಿ ಆತ್ಯಂತಿಕ ನಿಷ್ಠೆಹೊಂದಿರುವ ಶ್ರೀ ವಿದ್ಯೇಶ ತೀರ್ಥರು ವ್ರತದೊಂದಿಗೆ ನಡೆಸಿದ ವ್ರತ ಶ್ರೀ ಭಾಗವತ ನೀರಾಜನ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ. ಶ್ರೀಗಳು ಭೇಟಿ ನೀಡಿದ ಬಹುತೇಕ ಎಲ್ಲ ಮನೆಗಳ ಭಕ್ತರಿಗೆ ಈ ಕಾರ್ಯಕ್ರಮದಿಂದ ಅಪೂರ್ವ ಆನಂದವನ್ನು ಹಾಗೂ ಸದ್ಭಾವಜಾಗೃತಿಯನ್ನು ತಂದಿದೆ ಅನ್ನೋದು ಅವರ ಭಾವುಕ ಪ್ರತಿಕ್ರಿಯೆಗಳೇ ಹೇಳುತ್ತವೆ. ಈ ಬಹುತೇಕ ಮನೆಗಳಿಗೆ ಈ ತನಕ ಯಾವ ಮಠಾಧೀಶರೂ ಭೇಟಿ ನೀಡಿಲ್ಲ. ಹಾಗಿರುವಾಗ ಶತಮಾನಗಳ ಇತಿಹಾಸವಿರುವ ಓರ್ವ ಸ್ವಾಮೀಜಿಯವರು ಬಂದು ತಮ್ಮ ದೇವರೊಂದಿಗೆ ಮನೆದೇವರಿಗೂ ಮಂಗಳಾರತಿ ಬೆಳಗಿ, ಒಂದಷ್ಟು ಹೊತ್ತು ಭಾಗವತ ಚಿಂತನ ಸಿಂಚನಗೈದು ಫಲಪುಷ್ಪ ಸಹಿತ ಯಥಾಶಕ್ತಿ ನೀಡಿದ ಭಕ್ತಿ ಗೌರವ ಸ್ವೀಕರಿಸಿ ಅನುಗ್ರಹಿಸಿದ್ದು ಅತ್ಯಪೂರ್ವ ಕ್ಷಣವೆಂದೇ ಮನೆಮಂದಿ ಹೇಳುತ್ತಿದ್ದಾರೆ.‌ ಸ್ವಾಭಾವಿಕವಾಗಿಯೇ ಕಾರ್ಪೋರೇಟ್ ಗುಂಗಿನಲ್ಲಿರುವ ಒಂದು ಮಹಾನಗರದಲ್ಲಿ ಈ ಅಭಿಯಾನದ ಮೂಲಕ 450 ಮನೆಗಳಿಗೆ ಸನಾತನ ಧರ್ಮಸಂದೇಶವನ್ನು ಹೊತ್ತೊಯ್ದಿರುವುದು ಅತಿಶಯವೇ ಸರಿ.

ಅದರ ಜೊತೆಗೆ ವ್ರತದ ಕೊನೆಯಲ್ಲಿ ಭಾಗವತ ಪ್ರೋಷ್ಠಪದಿ ಪ್ರವಚನೋತ್ಸವ, ವಿದ್ಯೇಶ ವಿಠಲ ಅಂಕಿತದೊಂದಿಗೆ ತಾವೇ ರಚಿಸಿದ ಹತ್ತಾರು ಕೀರ್ತನೆಗಳ ಗೋಷ್ಠಿಗಾಯನ, ತಮ್ಮನಿರ್ದೇಶನದಲ್ಲಿ ಮೂಡಿಬಂದ ಶ್ರೀ ಮಧ್ವಾಚಾರ್ಯರ ಜೀವನಾಧಾರಿತ ಗುರು ವಿಜಯ ಗೀತೆ ಚಲನಚಿತ್ರ ಪ್ರದರ್ಶನ‌, ಅನೇಕ ಭಜನಾ ಮಂಡಳಿಗಳಿಂದ ಭಜನೋತ್ಸವ ಅನೇಕ ದೇವಸ್ಥಾನಗಳು ಭಜನಾಮಂಡಳಿಗಳು, ಸಾರ್ವಜನಿಕ ಶ್ರೀ ಗಣೇಶೋತ್ಸವಗಳಿಗೆ ಭೇಟಿ, ಇವೆಲ್ಲವುಗಳಿಂದ ಶ್ರೀಗಳ ವ್ರತವು ಮತ್ತಷ್ಟು ಸಾತ್ವಿಕ ಕಾರ್ಯಕ್ರಮವಾಗಿ ಮೂಡಿಬಂದಿದೆ.


ಶ್ರೀ ಪೇಜಾವರ ಮಠದ ಪರಂಪರೆಯಲ್ಲಿ ಬರುವ ದೇವಾಂಶ ಸಂಭೂತರೆಂದೇ ಐತಿಹ್ಯವಿರುವ ಶ್ರೀ ವಿಜಯಧ್ವಜ ತೀರ್ಥರು ಶ್ರೀ ಮದ್ಬಾಗವತಕ್ಕೆ ವಿಶೇಷ ವ್ಯಾಖ್ಯಾನ ಗ್ರಂಥ ರಚಿಸಿದ ಮಹಾನುಭಾವರು. ಅವರ ಮೂಲ ವೃಂದಾವನ ಮಂಗಳೂರು ಕೇರಳ ಗಡಿಭಾಗದಲ್ಲಿರುವ ತಲಪಾಡಿ‌ ಸಮೀಪದ  ದಿವ್ಯ ಕ್ಷೇತ್ರ ಕಣ್ವತೀರ್ಥದಲ್ಲಿದೆ. ಅರ್ಥಪೂರ್ಣ ಸಂಗತಿಯೆಂದರೆ ನಿನ್ನೆ ಭಾನುವಾರ ಶ್ರೀ ವಿದ್ಯೇಶತೀರ್ಥರು ತಮ್ಮ ಈ ಬಾರಿಯ ವ್ರತವನ್ನು ಸಂಪನ್ನಗೊಳಿಸಿದ ನಂತರ ಕಣ್ವತೀರ್ಥ ಕ್ಷೇತ್ರಕ್ಕೆ ಸೀಮೋಲ್ಲಂಘನಗೈದು ಶ್ರೀ ವಿಜಯಧ್ವಜತೀರ್ಥರ ವೃಂದಾವನ ಸನ್ನಿಧಿಯಲ್ಲೇ ಈ ಶ್ರೀ ಭಾಗವತ ನೀರಾಜನ ಅಭಿಯಾನವನ್ನು ಭಗವಂತನಿಗೆ ಅರ್ಪಿಸಿದರು.


ಈ ಎಲ್ಲ ಕಾರಣಗಳಿಗಾಗಿ ಶ್ರೀಗಳ ಮಂಗಳೂರು ಚಾತುರ್ಮಾಸ್ಯ ವ್ರತ ಸ್ವತಃ ಅವರಿಗೆ ಮಾತ್ರವಲ್ಲದೇ ಈ ಅವಧಿಯಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಅವರ ದರ್ಶನ, ಅನುಗ್ರಹ ಪಡೆದ ಪ್ರತಿಯೊಬ್ಬರಿಗೂ ಸಾರ್ಥಕ ಆನಂದಾನುಭೂತಿಯನ್ನು ನೀಡಿದೆ.


ಈ ವ್ರತದ ಸಂದರ್ಭ ಶ್ರೀ ಕಾರಣಿಕ ಮುಖ್ಯಪ್ರಾಣ ದೇವಸ್ಥಾನದ ಮುಖ್ಯಸ್ಥ ಶ್ರೀ ಗುರುರಾಜಾಚಾರ್ಯರು ಅವರ ಪತ್ನಿ ಮನೆ ಮಂದಿ ಹಾಗೂ ದೇವಳದ ಸಿಬಂದಿಗಳು ನೀಡಿದ ಸಹಕಾರ ಹಾಗೂ ಚಾತುರ್ಮಾಸ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಧುರೀಣ ಸುಧಾಕರ ರಾವ್ ಪೇಜಾವರ, ಅವರ ಸಹೋದರ ಪ್ರಭಾಕರ ರಾವ್ ಪೇಜಾವರ, ಪ್ರೊ  ಎಂ ಬಿ ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಭಾಗವತ ನೀರಾಜನ ಅಭಿಯಾನದ ಪ್ರಧಾನ‌ ಸಂಚಾಲಕರಾಗಿ ಕಾರ್ಯನಿರ್ವಹಿಸಿದ, ಯಾವ ವೇದಿಕೆಗಳಲ್ಲೂ ಕಾಣಿಸಿಕೊಳ್ಳದೇ ತೆರೆಮರೆಯಲ್ಲೇ ಕೆಲಸ ಮಾಡುವ ಗುರುಪ್ರಸಾದ್ ಕಡಂಬಾರ್, ಯೋಗೀಶ್ ಮುಚ್ಚಿನ್ನಾಯ ಮೊದಲಾದವರುಗಳ ನಿಶಿಹಗಲು ಪರಿಶ್ರಮ ನಿಸ್ಪೃಹ ಸೇವೆಗಳು ಹಾಗೂ ಇತರೆ ಪದಾಧಿಕಾರಿಗಳ ಸಹಕಾರವೂ  ಅಭಿನಂದನೀಯ.


ಅಭಿಯಾನದ ಯಶಸ್ಸಿಗೆ ಸಹಕರಿಸಿದ ಸ್ಥಳೀಯ ವಿವಿಧ ಬ್ರಾಹ್ಮಣ ಸಂಘಟನೆಗಳು, ವೈಶ್ಯವಾಣಿ ಸಂಘಟನೆ, ನೂರಾರು ಮನೆಗಳ ಭಕ್ತರೂ ಈ ಅಪೂರ್ವ ಸತ್ಕರ್ಮದ ಯಶಸ್ಸಿನ ಸಹಭಾಗಿಗಳು.‌ ಇದರ ಅಮೃತಫಲ ಅವರೆಲ್ಲರಿಗೂ ‌ಸಮಸ್ತ ಮಂಗಳೂರಿಗೆ ನಾಡಿಗೆ ದೇಶಕ್ಕೂ ದೊರೆಯಲಿ ಎಂದು ಪ್ರಾರ್ಥನೆ.


- ಜಿ ವಾಸುದೇವ ಭಟ್ ಪೆರಂಪಳ್ಳಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top