ಹಬ್ಬವಾದ ಆಯುಧ ಪೂಜೆ

Upayuktha
0


ಭಾರತದಾದ್ಯಂತ ನವರಾತ್ರಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ. ನವರಾತ್ರಿಯ 9 ದಿನಗಳಲ್ಲೂ ಆದಿಶಕ್ತಿಯ ಒಂಬತ್ತು ರೂಪಗಳನ್ನು ಕ್ರಮವಾಗಿ ಆರಾಧಿಸಲಾಗುವುದು. 10ನೆಯ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾರೆ. ಈ ನವರಾತ್ರಿಯದೇ ಒಂದು ಭಾಗವಾದ 'ಆಯುಧ ಪೂಜೆ'ಯನ್ನು ವಿಜಯದಶಮಿಯ ಹಿಂದಿನ ದಿನ ಮಾಡಲಾಗುತ್ತದೆ. ಇದನ್ನು 'ಅಸ್ತ್ರ ಪೂಜೆ' ಎಂದೂ ಕರೆಯಲಾಗುತ್ತದೆ. ದೇಶಾದ್ಯಂತ ಸಂಭ್ರಮದಿಂದ ಅಸ್ತ್ರ ಪೂಜೆಯನ್ನು ಮಾಡುತ್ತಾರೆಯಾದರೂ ವಿಧಿ ವಿಧಾನಗಳಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನು ಅಲ್ಲಲ್ಲಿ ಕಾಣಬಹುದು.


ಆಯುಧ ಪೂಜೆಗೆ ಪೌರಾಣಿಕವಾಗಿ ಎರಡು ಹಿನ್ನೆಲೆಗಳಿವೆ. ಒಂದು ದೇವಿ ಚಾಮುಂಡಿಗೆ ಸಂಬಂಧಿಸಿದ ದಂತ ಕಥೆಯಾದರೆ ಇನ್ನೊಂದು ಮಹಾಭಾರತಕ್ಕೆ ಸಂಬಂಧಿಸಿದ ಕಥೆಯಾಗಿದೆ. ವಿಶೇಷವಾದ ವರವನ್ನು ಪಡೆದು ಎಲ್ಲರಿಗೂ ಉಪಟಳ ನೀಡುತ್ತಿದ್ದ ಮಹಿಶಾಸುರನನ್ನು ಸಂಹರಿಸಲೆಂದು ದೇವಿ ದುರ್ಗೆಯು ಚಾಮುಂಡಿಯಾಗಿ ಬರುತ್ತಾಳೆ. ಆತನೊಂದಿಗೆ ಸಮರವನ್ನು ಸಾರುತ್ತಾಳೆ. ಮಹಿಶಾಸುರನ ಅಂತ್ಯವಾದ ನಂತರ ತಾಯಿಯು ತಾನು ಆತನ ಸಂಹಾರಕೆಂದು  ಬಳಸಿದ ಆಯುಧಗಳನ್ನು ಭೂಮಿಯಲ್ಲಿಯೇ ಬಿಟ್ಟು ಹೋಗುತ್ತಾಳೆ. ನಂತರ ಭಕ್ತರು ಆ ಶಸ್ತ್ರಗಳನ್ನೆಲ್ಲ ಶುದ್ಧೀಕರಿಸಿ ಭಕ್ತಿ ಭಾವದಿಂದ ಪೂಜಿಸುತ್ತಾರೆ. ಇದೆ ಪರಂಪರಾನು ಗತವಾಗಿ ಬಂತು ಎಂದು ನಂಬಲಾಗಿದೆ.


ಇನ್ನೊಂದು ಕಥೆಯ ಪ್ರಕಾರ, ಕೌರವರ ಪಗಡೆಯಾಟದಲ್ಲಿ ಸೋತ ಪಾಂಡವರಿಗೆ 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಎಂದು ತೀರ್ಮಾನವಾಗುವುದು. 12 ವರ್ಷದ ವನವಾಸವನ್ನು ಮುಗಿಸುವ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ತಮ್ಮ ಯುದ್ಧ ಸಾಮಗ್ರಿಗಳನ್ನು ಬನ್ನಿ ಮರದಲ್ಲಿ ಬಚ್ಚಿಡುತ್ತಾರೆ. ಅಜ್ಞಾತ ವಾಸವು ಯಶಸ್ವಿಯಾದ ಬಳಿಕ ರಣರಂಗದಲ್ಲಿ ಹೋರಾಡಬೇಕೆಂದಾಗ ಅವುಗಳನ್ನು ತೆಗೆದು ಶುದ್ಧೀಕರಿಸಿ ಪೂಜಿಸುತ್ತಾರೆ. ಮಹಾಭಾರತದ ಹೋರಾಟದಲ್ಲಿ ಅಂತಿಮವಾಗಿ ಪಾಂಡವರೇ ವಿಜಯಶಾಲಿಯಾಗುತ್ತಾರೆ. ಪಾಂಡವರು ಅಸ್ತ್ರಗಳನ್ನು ತೆಗೆದು ಪೂಜಿಸಿದ ಈ ದಿನವನ್ನು ಅಸ್ತ್ರ ಪೂಜೆ ಎಂದು ಪ್ರತಿ ವರ್ಷ ಆಚರಿಸಲಾಗುತ್ತದೆ.


ಈ ದಿನದಂದು ಎಲ್ಲರೂ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವ ಆಯುಧಗಳನ್ನು, ವಾಹನಗಳನ್ನು, ಸಲಕರಣೆಗಳನ್ನು,  ಉಪಕರಣಗಳನ್ನು ಶುದ್ಧೀಕರಿಸಿ, ಅಲಂಕರಿಸಿ, ವಿಧಿ ವಿಧಾನದ ಪ್ರಕಾರ ಪೂಜಿಸುತ್ತಾರೆ. ಈ ಮೂಲಕ ತಮ್ಮ ಕಾರ್ಯ ಸಾಧನೆಗೆ ಜೊತೆಯಾಗಿ ನಿಲ್ಲುವ ಸಲಕರಣೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿ ಗೌರವಿಸುತ್ತಾರೆ. ಕರ್ಮವೇ ಮಾನವನ ಮೂಲ ಕರ್ತವ್ಯವಾಗಿರಲು ತನ್ನ ಕರ್ಮಗಳಿಗೆ ಜೊತೆಯಾಗಿ ನಿಲ್ಲುವ ಪ್ರತಿಯೊಂದು ಉಪಕರಣಗಳನ್ನು ಮನಸಾರೆ ಅರ್ಚಿಸಿ ಅವುಗಳ ಮಹತ್ವವನ್ನು ಸಾರುವ ದಿನ ಇದೆಂದು ಪರಿಗಣಿಸಬಹುದಾಗಿದೆ. ಹಬ್ಬದ ರೂಪದಲ್ಲಿ ದಿನನಿತ್ಯ ಬಳಸುವ ಸರಳ ಸಲಕರಣೆಗಳನ್ನು ಗೌರವಿಸುವ ಒಂದು ಪರಿಕಲ್ಪನೆ ನಿಜಕ್ಕೂ ಅರ್ಥಪೂರ್ಣವಾಗಿದೆ.

       

- ಪ್ರಿಯಾ ಶ್ರೀವಿಧಿ

ದ್ವಿತೀಯ ಪತ್ರಿಕೋದ್ಯಮ ವಿಭಾಗ 

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top