ಉಡುಪಿ: ಸಂಸ್ಕೃತ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಅದ್ಭುತ ಕಲೆಯಾದ ಅಷ್ಟಾವಧಾನವನ್ನು ಭಾನುವಾರ ಕೃಷ್ಣಮಠ ರಾಜಾಂಗಣದಲ್ಲಿ ನಡೆಸಲಾಯಿತು.
ಮನಸ್ಸಿನ ಏಕಾಗ್ರತೆಗೆ ಆದ್ಯತೆ ನೀಡುವ ಅಪೂರ್ವವಾದ ಈ ಕಾರ್ಯಕ್ರಮವನ್ನು ಮಹಾಮಹೋಪಾಧ್ಯಾಯ ಶತಾವಧಾನಿ ಡಾ.ರಾಮನಾಥ ಆಚಾರ್ಯ ನಡೆಸಿಕೊಟ್ಟರು.
ಕವಿ ಅಥವಾ ಪಂಡಿತರು ಒಟ್ಟಿಗೇ ಅನೇಕ ಪ್ರಶ್ನೆಗಳು, ಸವಾಲುಗಳು, ಪದ್ಯ ರಚನೆ, ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸುವ ಶೈಲಿ ಅವಧಾನ ಎಂದು ಕರೆಯಲ್ಪಡುತ್ತದೆ. ಒಬ್ಬ ವ್ಯಕ್ತಿ ಎಂಟು ಮಂದಿಯಿಂದ ಬೇರೆ ಬೇರೆ ಕಾರ್ಯಗಳನ್ನು ಏಕಕಾಲದಲ್ಲಿ ನೆನಪಿನಲ್ಲಿಟ್ಟುಕೊಂಡು ಸರಿಯಾಗಿ ಪ್ರತಿಕ್ರಿಯಿಸುವುದು ಅಷ್ಟಾವಧಾನದ ಗಮನೀಯ ಅಂಶ.
ಸುಮಾರು 2 ಗಂಟೆಗಳ ಕಾಲಾವಧಿಯಲ್ಲಿ 8 ವಿಭಾಗಗಳ ಎಲ್ಲಾ ಪ್ರಕಾರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ ಅತ್ಯಲ್ಪ ಕಾಲದಲ್ಲಿ ಕಠಿಣವಾದ ಸವಾಲುಗಳನ್ನು ಲೀಲಾಜಾಲವಾಗಿ ಭೇದಿಸಿದರು. ಜೊತೆಗೆ ವೇದಪೂರಣ ಎಂಬ ಹೊಸ ಪ್ರಕಾರದಿಂದ ಅವಧಾನ ಕಾರ್ಯಕ್ರಮವನ್ನು ಡಾ.ರಾಮನಾಥ ಆಚಾರ್ಯ ನೆರವೇರಿಸಿ, ಐದು ಶ್ಲೋಕಗಳನ್ನು ರಚಿಸಿದರು.
ಈ ಸಂದರ್ಭದಲ್ಲಿ ಶಾಸ್ತ್ರೀಯ ವಿಚಾರಗಳು, ತಾತ್ವಿಕ ಸಂಗತಿಗಳು, ಜನತೆಗೆ ಸಂದೇಶಾತ್ಮಕವಾದ ಅನೇಕ ವಿಷಯಗಳು ಪ್ರಸ್ತುತಗೊಂಡಿತು. ಸಭಾಂಗಣದಲ್ಲಿ ಜನತೆ ಕಿಕ್ಕಿರಿದು ನೆರೆದಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದೆನಿಸಿತು.
ಪೃಚ್ಛಕರಾಗಿ ಭಾಗವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಶ್ನಪ್ರಹಸನ, ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಗೀತಾಲೋಕನ ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಚಿತ್ರಕವನ ವಿಭಾಗದ ಪೃಚ್ಛಕರಾಗಿದ್ದರು.
ವಿರುದ್ಧವರ್ಣ ವಿಭಾಗದಲ್ಲಿ ಡಾ.ಮಧುಸೂದನ ಭಟ್, ಪದಪ್ರಧಾನ ವಿಭಾಗದಲ್ಲಿ ವಿದ್ವಾನ್ ಮುರಾರಿ ತಂತ್ರಿ ಬೈಲೂರು, ಸಮಸ್ಯಾವಸಾನ ವಿಭಾಗದಲ್ಲಿ ವಿದ್ವಾನ್ ಕೃಷ್ಣ ನೂರಿತ್ತಾಯ ಧರ್ಮಸ್ಥಳ, ವೇದಪೂರಣ ವಿಭಾಗದಲ್ಲಿ ಅಡ್ವೆ ಲಕ್ಷ್ಮೀಶ ಭಟ್ ಭಾಗವಹಿಸಿದ್ದರು.
ಡಾ. ಷಣ್ಮುಖ ಹೆಬ್ಬಾರ್ ನಿರ್ವಹಿಸಿದರು. ಸಂಖ್ಯಾಬಂಧವನ್ನು ಅಭ್ಯಾಗತರಿಂದಲೇ ಸಂಖ್ಯೆಯನ್ನು ಕೇಳಿ ಪಡೆಯಲಾಯಿತು. ಮಹಿತೋಷ ಆಚಾರ್ಯ ವಂದಿಸಿದರು.
ಪ್ರಮೋದಾಚಾರ್ಯ ಮತ್ತು ರಮೇಶ ಭಟ್ ಸಹಕರಿಸಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ವಿದ್ವಾನ್ ಪ್ರಸನ್ನಾಚಾರ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

