ಭಾದ್ರಪದ ಮಾಸದ ಶುಕ್ಲಪಕ್ಷ 14 ನೇ ದಿನ ಬರುವ ಹಬ್ಬವೇ ಅನಂತವೃತ,ಅಥವಾ ಅನಂತಚತುರ್ದಶಿ. ಭಗವಾನ್ ವಿಷ್ಣು ಸಾವಿರ ಹೆಡೆಯ ಅನಂತಶೇಷನ ಮೇಲೆ ಶಯನಿಸಿರುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಭಕ್ತರು ತಮ್ಮ ಇಸ್ಟಾರ್ಥಸಿದ್ಧಿಗೆ ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನಪ್ರಾಪ್ತಿಗಾಗಿ ಕೈಗೊಳ್ಳುವ ವ್ರತ ಅನಂತನ ವ್ರತವಾಗಿದೆ. ಹೀಗಾಗಿ ಈ ವ್ರತವನ್ನು ಅನಂತ ಪದ್ಮನಾಭ ವ್ರತವೆಂದು ಕರೆಯುತ್ತಾರೆ. ಈ ವ್ರತ ಹಿಡಿದವರು 14 ವರ್ಷ ಮಾಡಬೇಕೆಂಬ ನಿಯಮವಿದೆ.
ಪೌರಾಣಿಕ ಹಿನ್ನೆಲೆ- ಕೃತಯುಗದಲ್ಲಿ ಸುಮಂತ ಎಂಬ ಬ್ರಾಹ್ಮಣನಿದ್ದನಂತೆ. ಆತನ ಪತ್ನಿ ದೀಕ್ಷಾ. ಮಗಳು ಸುಶೀಲಾ. ದೀಕ್ಷಾ ಚಿಕ್ಕವಯಸ್ಸಿನಲ್ಲಿ ತೀರಿಕೊಂಡಾಗ ಸುಮಂತನು ಕರ್ಕಶ ಎಂಬವಳನ್ನು ಮದುವೆಯಾಗುತ್ತಾಳೆ. ಮಲತಾಯಿ ಧೋರಣೆ ತೋರುವುದಲ್ಲದೇ ಸುಶೀಲೆಗೆ ಬಹಳ ತೊಂದರೆ, ಹಿಂಸೆ ಮಾಡುತ್ತಾಳೆ. ಮುಂದೆ ಸುಶೀಲೆ ಕೌಂಡಿನ್ಯ ಎನ್ನುವವನನ್ನು ಮದುವೆಯಾಗುತ್ತಾಳೆ. ಇವರಿಬ್ಬರೂ ಮಲತಾಯಿಯ ದೌರ್ಜನದಿಂದ ಮನೆಯಿಂದ ಹೊರಬರುತ್ತಾರೆ. ಹಾಗೆಯೇ ಹೋಗುವಾಗ ಯಮುನೆ ನದಿ ತಟದಲ್ಲಿ ಮಹಿಳೆಯರ ಗುಂಪೊಂದು ಪೂಜೆ ಮಾಡುವುದನ್ನು ನೋಡಿ ಸುಶೀಲೆ ಎನೆಂದು ಕೇಳಿದಾಗ ಅವರು ಪೂಜೆಯ ಬಗ್ಗೆ ವಿವರಿಸುತ್ತಾರೆ. ಆಗ ಸುಶೀಲೆಯು ಗಂಡನ ಯಶಸ್ಸು, ಮಕ್ಕಳ ಸಲುವಾಗಿ ವ್ರತಾಚರಣೆಯಲ್ಲಿ ತೊಡಗುತ್ತಾಳೆ. ಸ್ವಲ್ಪ ದಿನದಲ್ಲೇ ಮಕ್ಕಳು, ಪತಿಯ ಕೆಲಸದಲ್ಲಿ ವೃದ್ದಿಸಿ ಇಸ್ಟಾರ್ಥ ನೆರವೇರುತ್ತದೆ. ಆದರೆ ಕೌಂಡಿನ್ಯನಿಗೆ ವ್ರತದ ಮೇಲೆ ನಂಬಿಕೆ ಇಲ್ಲದೇ ಅನಂತನ ದಾರವನ್ನು ಬೆಂಕಿಗೆ ಎಸೆಯುತ್ತಾನೆ. ಅದರಿಂದ ಅವನ ಸಂಪತ್ತು ನಶಿಸಿದಾಗ ಬೇಸತ್ತು ಅನಂತನನ್ನು ಹುಡುಕಲು ಕಾಡು, ಮೇಡನ್ನು ಅಲೆದು ಪ್ರಾಣಿಗಳನ್ನೆಲ್ಲ ನೋಡಿರುವಿರಾ ಎಂದು ಕೇಳುತ್ತ ಅಲೆಯುತ್ತಾನೆ. ಆಗ ಭಗವಂತ ಬ್ರಾಹ್ಮಣನ ವೇಷದಲ್ಲಿ ಬಂದು ನೀನು ಹಿಂದೆ ನೋಡಿದ ಮರ, ಗಿಡ, ಪ್ರಾಣಿಗಳೆಲ್ಲ ನಾನೇ ಆಗಿದ್ದೆ ಎಂದು ಹೇಳುತ್ತಾನೆ. ಮುಂದೆ ದೇವರ ಬಗ್ಗೆ ನಂಬಿಕೆ ಬಂದು ಅನಂತವ್ರತ 14 ವರ್ಷ ನೇಮ ನಿಷ್ಟೆಯಿಂದ ಮಾಡಿ ಸಕಲ ಸುಖ ಸಂಪತ್ತನ್ನು ಪಡೆಯುತ್ತಾರೆ. ಆಗಿನಿಂದ ಅನಂತಪದ್ಮನಾಭವ್ರತ ಆಚರಣೆಗೆ ಬಂದಿತು ಎಂಬ ಕಥೆ ಇದೆ.
ಅನಂತಪದ್ಮನಾಭವ್ರತ ನಮ್ಮ ರಾಜ್ಯದಲ್ಲಲ್ಲದೇ ಆಂದ್ರಪ್ರದೇಶ, ಗುಜರಾತ, ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರ, ಆಂಧ್ರದಲ್ಲಿ ಚೌತಿಯಂದು ಗಣೇಶನನ್ನು ಪ್ರತಿಷ್ಠಾಪಿಸಿ ಅನಂತನ ಹಬ್ಬದಂದು ವಿಸರ್ಜಿಸುತ್ತಾರೆ.ಈ ಪದ್ಧತಿ ಉತ್ತರ ಕರ್ನಾಟಕದ ಕೆಲವು ಮನೆಗಳಲ್ಲೂ ಇದೆ. ಹೀಗಾಗಿ ಈ ದಿನವನ್ನು ಗಣೇಶ ವಿಸರ್ಜಿಸುವ ದಿವಸ ಎಂದೂ ಕರೆಯುವ ರೂಢಿಯಲ್ಲಿದೆ.
ದ್ವಾಪರ ಯುಗದಲ್ಲಿ ಪಾಂಡವರು ಕೌರವರೊಂದಿಗೆ ಮೋಸದ ಜೂಜಿನಲ್ಲಿ ಸೋತು 14 ವರ್ಷಕಾಲ ವನವಾಸವನ್ನು 1 ವರ್ಷ ಅಜ್ಞಾತವಾಸವನ್ನು ಅನುಭವಿಸ ಬೇಕಾಗುತ್ತದೆ. ಕೃಷ್ಣ ಪರಮಾತ್ಮನು ಪಾಂಡವರ ಕೈಯಿಂದ ಈ ಅನಂತವ್ರತವನ್ನು ಆಚರಿಸಿದ ಫಲವಾಗಿ ಅವರಿಗೆ ಮರಳಿ ರಾಜ್ಯಭಾಗ್ಯ ದೊರೆಯಿತು. ಕೃಷ್ಣಪರಮಾತ್ಮ ಅನಂತವೃತ ಪಾಂಡವರಿಂದ ಮಾಡಿಸಿದ್ದರಿಂದ ಅವರಿಗೆ ಮರಳಿ ರಾಜ್ಯಭಾರ ದೊರೆಯಿತು ಎಂದು ಪುರಾಣದಲ್ಲಿ ಉಲ್ಲೇಖವಿದೆ.
ಅನಂತ ವ್ರತಾಚರಣೆಯ ವಿಧಿವಿಧಾನಗಳು- ಅಂದು ಮನೆಯವರೆಲ್ಲರೂ ಶುಚಿರ್ಭೂತರಾಗಿ ಹೆಂಗಳೆಯರು ಮುಂಬಾಗಿಲು ಗೂಡಿಸಿ ರಂಗವಲ್ಲಿ ಇಡಿಸಿ ಹೊಸಲಿಗೆ ಅರಿಷಿಣ ಕುಂಕುಮ ಏರಿಸಿ ಮನೆಯ ಮುಂದಿನ ತುಳಸಿಗೆ ರಂಗೋಲಿ ಹಾಕಿ, ಮನೆಯಲ್ಲಿ ದೇವರ ಮುಂದೆ ಮಣೆಹಾಕಿ ಅದರ ಮೇಲೆ ತಟ್ಟೆಯಲ್ಲಿ ಗೋದಿ ಹಾಕಿ ಅದರ ಮೇಲೆ ಎರಡು ಕಲಶ ಇಡಬೇಕು. ಮೊದಲನೆಯದು ಅನಂತದೇವರ ಕಲಶವಾದರೆ ಎರಡನೇಯದು ಯಮುನಾದೇವಿಯ ಕಲಶವಾಗಿರುತ್ತದೆ. ಮನೆಯ ಬಾಗಿಲಿಗೆ ಗಂಡಸರು ಮಾವಿನ ತೋರಣ ಕಟ್ಟಿ ಸಿದ್ಧಪಡಿಸಿದರೆ ಮನೆಯ ಹಿರಿಯರು ಮಡಿನೀರು ತಂದು ಎರಡು ಕಲಶಗಳಿಗೆ ಹಾಕಿ ಅದರ ಮೇಲೆ ದರ್ಭೆಯನ್ನು ಹಾವಿನ ಹೆಡೆಯಂತೆ ಇಟ್ಟು ಶೋಡಷೋಪಚಾರಗಳಿಂದ ಪೂಜೆ ಮಾಡಿ 14 ಬಗೆಯ ಭಕ್ಷ್ಯ ಮಾಡಿ ಅನ್ನ, ಪಾಯಸ, ಕಡಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಅನಂತಪದ್ಮನಾಭನ ಕಥೆ ಓದಿ ಮಹಾಮಂಗಳಾರತಿ ಮಾಡಿ ಮನೆಯ ಮಂದಿಯೆಲ್ಲ ಭಕ್ತಿಯಿಂದ ಇಸ್ಟಾರ್ಥ ನೆರವೇರಿಸಲು ಭಗವಂತನನ್ನು ಕೋರುತ್ತಾರೆ. ಮನೆಯ ಗಂಡಸರು ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಕೆಂಪುಬಣ್ಣದ ದಾರ ಹೆಂಗಳೆಯರು ಎಡ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದನ್ನು ಅನಂತನ ದಾರ ನೊಂಬು ಎಂದು ಕರೆಯುತ್ತಾರೆ.
ಈ ವ್ರತ ಆಚರಿಸುವವರ ಮನೆ ಅಥವಾ ದೇವಸ್ಥಾನಗಳಿಗೆ ಭೇಟಿ ನೀಡಿ ಆ ಪೂಜೆಯ ಕಲಶವನ್ನು ಯಾರೇ ದರ್ಶನ ಮಾಡಿದರೂ ಅವರ ಇಷ್ಟಾರ್ಥಗಳು ಫಲಿಸುತ್ತವೆ. ಕೆಲವರಿಗೆ ಸಂತಾನ ಪ್ರಾಪ್ತಿ, ಧನಪ್ರಾಪ್ತಿ ಯಾಗುತ್ತದೆ ಎಂಬ ನಂಬಿಕೆ ಇದೆ. ಅನಂತಪದ್ಮನಾಭನ ವ್ರತಮಾಡಿ ಭಗವಂತನ ಕೃಪೆಗೆ ಪಾತ್ರರಾಗೋಣ.
- ಗಿರಿಜಾ ಎಸ್.ದೇಶಪಾಂಡೆ ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ