ಮೂರ್ಖ ಟ್ರಂಪ್‌ಗೊಬ್ಬ ಅವಿವೇಕಿ ಸಲಹೆಗಾರ; ಶ್ವೇತಭವನದಲ್ಲಿ ಕುಳಿತು ಮಸಿ ಬಳಿದುಕೊಂಡವನು

Upayuktha
0

 



ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಹೀನ ಮನಸ್ಥಿತಿಯ ಕುತ್ಸಿತ ಹೀನ ಮನೋಭಾವದ ಜಾತಿಯವರನ್ನು ಬಿಟ್ಟರೆ, ಉಳಿದಂತೆ ಸಮಸ್ತ ಭಾರತೀಯರೂ ಬ್ರಾಹ್ಮಣರೆ.


ನಿನ್ನೆ ರಾತ್ರಿ ಅಮೇರಿಕದ ಶ್ವೇತ ಭವನದ ಬ್ರೇಕಿಂಗ್ ನ್ಯೂಸ್ ಟಿವಿಯಲ್ಲಿ ಬರುವಾಗ, ಜಾತಿಯ ಹೆಸರಲ್ಲಿ ದೇಶ ಒಡೆಯುವ ಹೇಳಿಕೆ, ಟ್ರಂಪ್‌ರವರ ಮತ್ತೊಂದು ಮೂರ್ಖತನದ ಹೇಳಿಕೆಯಾಗಿ ಕಾಣಿಸಿತು (ಟ್ರಂಪ್ ಅವರ ಆಪ್ತ ಸಲಹೆಗಾರನ ಹೇಳಿಕೆ, ಟ್ರಂಪ್ ಅವರ ಹೇಳಿಕೆಯೇ ಆಗಿರುತ್ತದೆ).


ಬ್ರಾಹ್ಮಣ ವಿಚಾರದಲ್ಲಿ ಮೂರ್ಖತನದ ಹೇಳಿಕೆ ಕೊಡುವ ಟಾಪ್ ಟೆನ್ ಮೂರ್ಖರ ಪಟ್ಟಿಯೇ ಬದಲಾಗಿ ಹೋಯಿತು!!.


ಹೊಸ ಪಟ್ಟಿ ಬಹುಶಃ ಹೀಗಿರಬಹುದು


೧) ಅಮೇರಿಕಾದ ಟ್ರಂಪ್/ಪೀಟರ್ (ನಿನ್ನೆ ಅಮೇರಿಕದ 'ಅರ್ಥ'ವಿಲ್ಲದ ಸುಂಕದ ಹೇಳಿಕೆ!!)


೨) ಭಾರತದ ಬಾವಿ ಯುವರಾಜ (ಎರಡು ದಿನ ಕೌಲು ಬ್ರಾಹ್ಮಣ ಆಗಿದ್ದವ!!)


೩) 

೪) 

೫)

೬)

೭)

೮)

೯)

೧೦)


ಇನ್ನೊಂದೆರಡು ದಿನ ಸಂಚಲನ ಉಂಟುಮಾಡುತ್ತ, ಪತ್ರಿಕೆ, ಜಾಲತಾಣ, ದೃಶ್ಯ ಮಾಧ್ಯಮಗಳಲ್ಲಿ ಬರುವ ಚರ್ಚೆಗಳನ್ನು ಗಮನಿಸಿ ಪರಿಷ್ಕೃತ ಪಟ್ಟಿ ತಯಾರು ಮಾಡಬಹುದು!!


ಹಿಂಸಾ ನವಚೇತನ (ಬ್ರಾಹ್ಮಣ ಶಬ್ದಕ್ಕೆ ಹೊಸ ಬಾಷ್ಯ ಬರೆಯಲು ಹೋಗಿ ನೆಗೆಪಾಟಿಲಿಗೆ ತುತ್ತಾಗಿ ಕೇಸ್ ಹಾಕಿಸಿಕೊಂಡವರು!)


ನಿರ್ದೇಶಕ ಅನುರಾಗ್‌ ಕಶ್ಯಪ್‌ (ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆʼ ಎಂದು ಹೇಳಿಕೆ ಕೊಟ್ಟು ವಿದ್ಯುತ್ ಕಂಬದ ಬಳಿ ಕಾಲೆತ್ತುವ ಪ್ರಾಣಿಯಂತೆ ಕಂಡವರು!) ಇವರೆಲ್ಲ ಪಟ್ಟಿಯಲ್ಲಿ ಯಾವ ಸ್ಥಾನವನ್ನು ಪಡೆಯುತ್ತಾರೆ!!? 


**


ಭಾರತದಲ್ಲಿ ಜಾತಿ ವೈಷಮ್ಯ ಬೀಜ ಬಿತ್ತಿ,  ವಾಣಿಜ್ಯ ಕ್ಷೇತ್ರವನ್ನು ಒಡೆದು ಆಳುವ ಪ್ರಯತ್ನಕ್ಕೆ ಟ್ರಂಪ್ ಟೀಮ್ ಕಾಲಿಟ್ಟಿದೆ. ಹಾಗೆ ವೈಷಮ್ಯ ಬಿತ್ತಲು ಮೂರ್ಖರಿಗೆ ಸಿಕ್ಕುವ ಮೊದಲ ಜಾತಿ ಬೀಜ 5% ಗಿಂತ ಕಡಿಮೆ ಇರುವ ಬ್ರಾಹ್ಮಣರು!, (ಬ್ರಾಹ್ಮಣ ಎನ್ನುವ ಜಾತಿಯ ಕಾಲಂ‌ನಲ್ಲಿ ಬರುವವರು!) 


ಏನೇ ಮಾಡಿದರೂ ಸೈಲಂಟ್ ಆಗಿರುವ ಬ್ರಾಹ್ಮಣರು. ಓವರ್‌ಟೇಕ್ ಮಾಡ್ತಿನಿ ಅಂತ ಹಾರನ್ ಮಾಡಿದರೆ ಸೈಲಂಟಾಗಿ ಸೈಡಿಗೆ ಗೋಗಿ ದಾರಿ ಬಿಟ್ಟುಕೊಡುವ ಬ್ರಾಹ್ಮಣರು.


ವಾಸ್ತವವಾಗಿ ಬ್ರಾಹ್ಮಣರ ಸಂಖ್ಯೆ ದೊಡ್ಡದಿದೆ. ಭಾರತದಲ್ಲಿ ಬಹು ಸಂಖ್ಯಾತರು ಬ್ರಾಹ್ಮಣರೆ 


ಜನ್ಮನಾ ಜಯತೇ ಶೂದ್ರಃ, ಸಂಸ್ಕಾರಾತ್ ದ್ವಿಜ ಉಚ್ಚತೇ||'


ಹುಟ್ಟಿನಿಂದ ಎಲ್ಲರೂ ಶೂದ್ರರೆ. ಪಡೆಯುವ ಸಂಸ್ಕಾರ, ಶಿಕ್ಷಣ, ಜ್ಞಾನ, ಆಚಾರ, ವಿಚಾರ, ನಡೆ-ನುಡಿಗಳಿಂದ ವ್ಯಕ್ತಿ ಶೂದ್ರ, ಕ್ಷತ್ರಿಯ, ವೈಶ್ಯ ಅಥವಾ ಬ್ರಾಹ್ಮಣನಾಗುತ್ತಾನೆ. 

 

ದ್ವಿಜ ಎಂದರೆ ಮತ್ತೆ ಹುಟ್ಟುವುದು ಆದರೆ ಈ ಎರಡನೇ ಜನ್ಮ ಭೌತಿಕವಲ್ಲ, ಬದಲಿಗೆ ಅದು ಒಬ್ಬರ ಮನಸ್ಸು ಮತ್ತು ಆತ್ಮದಲ್ಲಿನ ಬದಲಾವಣೆ, ಆಂತರಿಕ ಬದಲಾವಣೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂಸ್ಕಾರ ಎಂದರೆ ಶಿಕ್ಷಣದಿಂದ ಶುದ್ಧೀಕರಿಸಲ್ಪಡುವುದು. ಭಗವದ್ಗೀತೆಯಲ್ಲಿ ಹೇಳುವ ಬ್ರಾಹ್ಮಣ ಶಬ್ದದ ಅರ್ಥವೂ ಇದೆ. ನಿಜವಾಗಿ ಬ್ರಾಹ್ಮಣ ಜಾತಿಯಲ್ಲ.  


**


ಹಾಗೆ ನೋಡಿದರೆ, ಜಾತಿಯ ಕಾಲಂ‌ನಲ್ಲಿ ಬ್ರಾಹ್ಮಣ ಅಂತ ನಮೂದಿಸಿ 5% ಪಟ್ಟಿಗೆ ಬಂದವರೆಲ್ಲ ಬ್ರಾಹ್ಮಣರಲ್ಲ. ಅದೇ ರೀತಿ ಇವತ್ತಿನ ಜಾತಿ ಗಣತಿಯ ಪಟ್ಟಿಯಲ್ಲಿ ಬೇರೆ ಜಾತಿ ಅಂತ ನಮೂದಾಗಿರುವವರು ಬ್ರಾಹ್ಮಣರಾಗಿದ್ದಾರೆ!!


ಪುರಾಣಕ್ಕೆ ಹೋದರೆ, ರಾಮ, ಕೃಷ್ಣ, ಭೀಷ್ಮ, ವಾಲ್ಮೀಕಿ, ಧರ್ಮರಾಯ, ಹನುಮಂತ, ವಿಶ್ವಾಮಿತ್ರ... ಇವರ್ಯಾರು ಇವತ್ತಿನ ಜಾತಿ ಗಣತಿಯಲ್ಲಿ ಬ್ರಾಹ್ಮಣರಲ್ಲ!! ಆದರೆ, ವಾಸ್ತವವಾಗಿ ನಿಜವಾದ ಮಹಾ ಬ್ರಾಹ್ಮಣರು, ಬ್ರಾಹ್ಮಣ ಶ್ರೇಷ್ಟರು ಇವರೆ.


ಇತಿಹಾಸಕ್ಕೆ ಬಂದರೆ, ಕವಿ ಕಾಳಿದಾಸ ಬ್ರಾಹ್ಮಣ, ರಾಜ ಪರಂಪರೆಯ ಬಹುತೇಕ ಸದ್ಗುಣ ಶ್ರೇಷ್ಠರೆಲ್ಲ ಬ್ರಾಹ್ಮಣರು. ಶಿವಾಜಿ ಬ್ರಾಹ್ಮಣ.  ಕನಕದಾಸ, ಸಂತ ಶಿಶುನಾಳ ಷರೀಫರು ಬ್ರಾಹ್ಮಣರು. 


ವರ್ತಮಾನಕ್ಕೆ ಬಂದರೆ ಡಾ.ರಾಜ್‌ಕುಮಾರ್, ವೀರೇಂದ್ರ ಹೆಗ್ಗಡೆ, ಅಬ್ದುಲ್ ಕಲಾಂ... ಎಲ್ಲರೂ ಬ್ರಾಹ್ಮಣರೆ.


ಸಧ್ಯದಲ್ಲಿ ಭಾರತವನ್ನು ಸುಂಕದ ಹೆಸರಿನಲ್ಲಿ ಭೀಕರವಾದ ಆರ್ಥಿಕ ಶೋಷಣೆಗೆ ಗುರಿ ಮಾಡುತ್ತಿರುವ ಅಮೇರಿಕವನ್ನು ಸಮಸ್ತ ಭಾರತೀಯರ ಪರವಾಗಿ, ಚಾಣಕ್ಯನಂತೆ ಚಾಣಕ್ಷತನದಲ್ಲಿ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಬ್ರಾಹ್ಮಣ.


ವಿದೇಶಿ ಅಮೇರಿಕಾದ ಶಕುನಿ ಕುತಂತ್ರವನ್ನು, ದೇಶೀಯ ಸನಾತನ ವಿರೋಧಿಗಳ ಕುತಂತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಮೋದಿ ಬರಿ ಬ್ರಾಹ್ಮಣ ಅಲ್ಲ, ಮಹಾಬ್ರಾಹ್ಮಣರೇ ಸರಿ. ಭಾರತದ ಸಮಸ್ತ ಭಾರತೀಯರು ಬ್ರಾಹ್ಮಣರೆ.  


**


ಇತ್ತೀಚೆಗೆ ಶೃಂಗೇರಿ ಮೂಲದ ನಿವೃತ್ತ DYSP ರಮೇಶ್‌ರವರು (ಇವರ ನೇರ ಪರಿಚಯ ಇಲ್ಲ. ವಾಟ್ಸಪ್ ಬಳಗ ಒಂದರ ಮೂಲಕ ಪರಿಚಯ) ಹೇಳಿದ ಒಂದು ಸ್ವಾರಸ್ಯಕರ ಕತೆ ಹೇಳಿದ್ದರು. ಈಗ ಪ್ರತೀ ಮನೆಯಲ್ಲೂ ಆರೋಗ್ಯಕರ ಚಾತರ್ವರ್ಣ ವ್ಯವಸ್ಥೆ ಇದೆ ಎಂದು ಹೇಳುವಾಗ ಅವರು ಕೊಟ್ಟ ಕತೆ ಇದು.  


ಹಳ್ಳಿಯ ಹಿರಿಯರೊಬ್ಬರಿಗೆ ನಾಲ್ಕು ಜನ ಗಂಡು ಮಕ್ಕಳು.  ಆ ಹಿರಿಯರು ಹೇಳ್ತಾ ಇದ್ರಂತೆ "ನನಗೆ ನಾಲ್ಕು ಜನ ಮಕ್ಕಳು ಒಬ್ಬ ಬ್ರಾಹ್ಮಣ, ಒಬ್ಬ ಕ್ಷತ್ರಿಯ, ಒಬ್ಬ ವೈಶ್ಯ, ಒಬ್ಬ ಶೂದ್ರ" ಅಂತ. ಅದು ಹೇಗೆ ಅಂತ ಕೇಳಿದರೆ "ನನ್ನ ಮೊದಲ ಮಗ 'ನಾನು ಸೈನ್ಯಕ್ಕೆ ಸೇರುತ್ತೇನೆ ಅಂದ.  ಅದ್ಯಾವುದೋ ತರಬೇತಿಗಳನ್ನೆಲ್ಲ ಪಡೆದು, ಪಾಸಾಗಿ ಈಗ ಸೈನ್ಯದಲ್ಲಿದ್ದಾನೆ, ರಕ್ಷಣೆ ಕೊಡುವ ಕ್ಷತ್ರಿಯ ಅವನು. ಎರಡನೆಯವ ಮಾಸ್ಟರ್ ಡಿಗ್ರಿ ಮಾಡಿ ಲೆಚ್ಚರ್ ಆಗಿದಾನೆ, ಜ್ಞಾನ ದಾಸೋಹ ನೀಡುವ ಬ್ರಾಹ್ಮಣ.  ಮೂರನೆಯವ PUC ಮುಗಿಸಿ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದು, ಈಗ ತಾನೇ ಒಂದು ದಿನಸಿ ಅಂಗಡಿ ಇಟ್ಕೊಂಡು ವೈಶ್ಯನಾಗಿದ್ದಾನೆ. ಕೊನೆಯವನಿಗೆ ಶಾಲಾ ವಿದ್ಯೆ ಹೆಚ್ಚು ಹತ್ತಲಿಲ್ಲ, ಅರ್ಧಕ್ಕೆ ಶಾಲೆ ಬಿಟ್ಟ ಅವನಿಗೆ 'ಪಿತ್ರಾರ್ಜಿತವಾಗಿ ಬಂದಿದ್ದ ಮೂರುಕಾಲೆಕರೆ ಜಮೀನನ್ನು ನೋಡಿಕೊಳ್ಳುತ್ತ, ಮನೆಯ ನಿರ್ವಹಣೆ ಮಾಡುತ್ತ, ನೀನು ಬೆಳದ ಅನ್ನದಿಂದ ಮನೆಯ ಎಲ್ಲರು ಉಣ್ಣವಂತೆ ಮಾಡು ಎಂದಿದ್ದೆ. ಅದನ್ನು ನಿರ್ವಹಣೆ ಮಾಡ್ತಾ ಇದ್ದಾನೆ. ಕೂಡು ಕುಟುಂಬ. ಎಲ್ಲರಿಗೂ ಮದುವೆ ಆಗಿದೆ.  ಎಲ್ಲರೂ ಒಟ್ಟಿಗೆ ಇದ್ದಾರೆ. ಶೂದ್ರ ಮಗ ಬೆಳದಿದ್ದನ್ನು ಎಲ್ಲರೂ ಉಣ್ಣುತ್ತಾರೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಇದು ನಮ್ಮ ಮನೆಯ ವರ್ಣಾಶ್ರಮ ಕತೆ" ಅಂತ.


ಹಾಗೆ ನೋಡಿದರೆ, ಪ್ರತೀ ಮನುಷ್ಯನೂ ಒಂದಲ್ಲಾ ಒಂದು ರೀತಿಯಿಂದ ನಾಲ್ಕು ವರ್ಣದಲ್ಲೇ ಇದ್ದಾನೆ. ಕೃಷಿಕನಾದವನು ತೋಟದ ಕೆಲಸ ಮಾಡುವಾಗ ಶೂದ್ರ, ಅದನ್ನು ವ್ಯಾಪಾರ ಮಾಡುವಾಗ ವೈಶ್ಯ, ಆನೆ ಧಾಳಿಯನ್ನು ಎದುರಿಸುವಾಗ ಕ್ಷತ್ರಿಯ, ಸತ್ ಚಿಂತನೆಯ ಜ್ಞಾನ ವೃದ್ಧಿಯ ಪುಸ್ತಕ ಓದುವಾಗ ಬ್ರಾಹ್ಮಣ!! ಕವಿ ಸಿದ್ಧಯ್ಯ ಪುರಾಣಿಕರು ಹೇಳುವಂತೆ 'ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು, ಶೂದ್ರ ವೈಶ್ಯನೆ ಆಗು, ದುಡಿದು ಗಳಿಸಿ ಏನಾದರೂ ಆಗು, ನಿನ್ನೊಲವಿನಂತಾಗು, ಏನಾದರೂ ಸರಿಯೇ– ಮೊದಲು ಮಾನವನಾಗು" ಎಂಬ ಮಾತಿನಂತೆ ಭಾರತೀಯರೆಲ್ಲರು ನಾಲ್ಕು ವರ್ಣದವರೇ ಆಗಿದ್ದೇವೆ. ಇದು ಭಾರತೀಯರ ಮನೋಭಾವ. ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರ ಮನೋಭಾವ.


**


ಹಿಂದೂ ಧರ್ಮವನ್ನು ಜಾತಿಯ ಹೆಸರಿನಲ್ಲಿ ಒಡೆಯುವ, ಧರ್ಮ ದ್ರೋಹಿಗಳನ್ನು ತುಷ್ಟೀಕರಿಸುವ, ಧರ್ಮಕ್ಷೇತ್ರಗಳಿಗೆ ಮಸಿ ಬಳಿಯುವ ಹೀನ ಮನಸ್ಥಿತಿಯೇ ಒಂದು ಹೀನ ಜಾತಿ. ಬೆರಳೆಣಿಕೆಯ ಈ ಹೀನ ಮನಸ್ಥಿತಿಯ ಕುತ್ಸಿತ ಹೀನ ಜಾತಿಯವರನ್ನು ಬಿಟ್ಟರೆ, ಉಳಿದಂತೆ ಸಮಸ್ತ ಭಾರತೀಯರೂ ಬ್ರಾಹ್ಮಣರೆ. 


ನಿಷ್ಕಲ್ಮಷ ಸೈನಿಕರು, ಬೆವರು ಸುರಿಸಿ ಅನ್ನ ನೀಡುವ ರೈತರೂ ಬ್ರಾಹ್ಮಣರೆ.


ಭಾರತೀಯರೆಲ್ಲರೂ ಬ್ರಾಹ್ಮಣ-ವೈಶ್ಯ-ಕ್ಷತ್ರಿಯ-ಶೂದ್ರರೇ ಆಗಿರುವಾಗ, ಬ್ರಾಹ್ಮಣರು ಬೇರೆ ಭಾರತೀಯ ಜನರು ಬೇರೆ ಎಂಬ ಧ್ವನಿ ವೈಷಮ್ಯ ಬಿತ್ತಿ, ಹೀನ ಮನಸ್ಥಿತಿಯ ಜಾತಿಗೆ ಸೇರಿ, 50% ಅಧಿಕ ಸುಂಕ ವಿಧಿಸಿ, ಯಾರು ಯಾರಿಂದ ಲಾಭ ಗಳಿಸುತ್ತಿದ್ದಾರೆ ಎಂಬ ಸ್ಪಷ್ಟವಾದ ಸಾಮಾನ್ಯ ಜ್ಞಾನ ಹೊಂದಿದ ಸಮಸ್ತ ಭಾರತೀಯರು ಜ್ಞಾನಿ ಬ್ರಾಹ್ಮಣರೇ ಆಗಿದ್ದಾರೆ.  


"ಬ್ರಾಹ್ಮಣರು ಭಾರತೀಯ ಜನರಿಂದ ಲಾಭ ಗಳಿಸುತ್ತಿದ್ದಾರೆ" ಎಂಬ ಅಮೇರಿಕದ ಶ್ವೇತಭವನದ ಕರಾಳ ಅರ್ಥ ರಹಿತ ಅಥವಾ ಒಡಕು ಸೃಷ್ಟಿಸುವ ಮೂರ್ಖ ಹೇಳಿಕೆಗೆ ಧಿಕ್ಕಾರವಿರಲಿ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top