ಬಾಳಿಗೊಂದು ಬೆಳಕು: ಭಗವದ್ಗೀತಾ ಸರಣಿ- ಅಧ್ಯಾಯ-1 (ಶ್ಲೋಕ-1, 2)

Upayuktha
0


ಧೃತರಾಷ್ಟ್ರ ಉವಾಚ |

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||೧||


ಧೃತರಾಷ್ಟ್ರ ಉವಾಚ- ಧೃತರಾಷ್ಟ್ರ ಕೇಳಿದನು:

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ

ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ - 


ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ?

ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ 'ಜೀವದ' ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ! ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ.

ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋವರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ 'ಕುರು' ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ "ಧರ್ಮಕ್ಷೇತ್ರೇ ಕುರುಕ್ಷೇತ್ರೇ" ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ.

ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಾನೆ "ಹೋರಾಟ ಬಯಸಿ ಎದುರುಬದುರಾದ 'ನನ್ನವರು' ಮತ್ತು 'ಪಾಂಡವರು' ಏನು ಮಾಡಿದರು?" ಎಂದು. ಇಲ್ಲಿ 'ನನ್ನವರು ಮತ್ತು ಪಾಂಡವರು' ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.


ಸಂಜಯ ಉವಾಚ ।

ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।

ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥೨॥


ಸಂಜಯ ಉವಾಚ- ಸಂಜಯ ಹೇಳುತ್ತಾನೆ:

ದೃಷ್ಟ್ವಾ ತು ಪಾಂಡವ ಅನೀಕಮ್ ವ್ಯೂಢಮ್ ದುರ್ಯೋಧನಃ ತದಾ |ಆಚಾರ್ಯಮ್ ಉಪಸಂಗಮ್ಯ ರಾಜಾ ವಚನಮ್ ಅಬ್ರವೀತ್- 


ಆಗ ದೊರೆಯಾದ ದುರ್ಯೋಧನ ಸಜ್ಜುಗೊಂಡ ಪಾಂಡವ ಪಡೆಯನ್ನು ಕಂಡು, ಆಚಾರ್ಯರತ್ತ ನಡೆದು ಮಾತನಾಡಿದನು.

ಈ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಇಲ್ಲಿ ಬಂದಿರುವ 'ಅನೀಕ' ಎನ್ನುವ ಪದದ ಅರ್ಥವನ್ನು ಸ್ವಲ್ಪ ತಿಳಿದುಕೊಳ್ಳೋಣ. ನಿಮಗೆ ತಿಳಿದಂತೆ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ. ಅದರಲ್ಲಿ ಏಳು ಅಕ್ಷೋಹಿಣಿ ಪಾಂಡವರ ಕಡೆ ಹೋರಾಟ ಮಾಡಿದರೆ ಉಳಿದ ಸೈನ್ಯ ಕೌರವನ ಕಡೆಯದು. ಇಲ್ಲಿ ಅಕ್ಷೋಹಿಣಿ ಎನ್ನುವುದು ಸೇನೆಯ ಅತಿದೊಡ್ಡ ವಿಭಾಗ. ಹಿಂದಿನ ಕಾಲದಲ್ಲಿ ಸೇನೆಯನ್ನು ಒಂಬತ್ತು ವಿಭಾಗಗಳಾಗಿ ವಿಂಗಡಿಸುತ್ತಿದ್ದರು.

ಅವುಗಳೆಂದರೆ:

(೧) ಪತ್ತಿ: ಒಂದು ಆನೆ; ಒಂದು ರಥ; ಮೂರು ಕುದುರೆ ಹಾಗು ಐದು ಕಾಲಾಳುಗಳ ಒಂದು ತುಕಡಿ.

(೨) ಸೇನಾಮುಖ: ಮೂರು ಪತ್ತಿ 

(೩) ಗುಲ್ಮ: ಮೂರು ಸೇನಾ ಮುಖ 

(೪) ಗಣ : ಮೂರು ಗುಲ್ಮ 

(೫) ವಾಹಿನಿ : ಮೂರು ಗಣ 

(೬) ಪೃತನಾ: ಮೂರು ವಾಹಿನಿ 

(೭) ಚಮೂ: ಮೂರು ಪೃತನಾ 

(೮) ಅನೀಕಿನಿ: ಮೂರು ಚಮೂ 

(೯) ಅಕ್ಷೋಹಿಣಿ: ಹತ್ತು ಅನೀಕಿನಿ- ಅಂದರೆ 21870 ಆನೆಗಳು, 21870 ರಥ, 65610 ಕುದುರೆಗಳು, 1,09,350 ಕಾಲಾಳುಗಳು. (ಇಲ್ಲಿರುವ ಸಂಖ್ಯಾ ಚಮತ್ಕಾರವನ್ನು ಗಮನಿಸಿ: 2+1+8+7+0=18; 6+5+6+1+0=18; 1+0+9+3+5+0=18).

ಈ ಮೇಲಿನ ಲೆಕ್ಕಾಚಾರದಂತೆ ಒಂದು ಅನೀಕಿನಿ ಎಂದರೆ ಹತ್ತನೇ ಒಂದು ಅಕ್ಷೋಹಿಣಿ. ಅಂದರೆ 2187 ಆನೆಗಳು, 2187 ರಥ, 6561 ಕುದುರೆಗಳು, 1,09,35 ಕಾಲಾಳುಗಳು. ಇದು ಪಾಂಡವ ಸೇನೆಯ ಎಪ್ಪತ್ತನೇ ಒಂದು ಭಾಗ. ಯುದ್ಧ ಮಾಡುವಾಗ ಎಲ್ಲಾ ಹದಿನೆಂಟು ಅಕ್ಷೋಹಿಣಿ ಒಮ್ಮೆಗೆ ಸೇರಿ ಯುದ್ಧ ಮಾಡುವುದಿಲ್ಲ. ಒಂದು ತುಕಡಿ ಒಮ್ಮೆಗೆ ಒಂದು ನಿರ್ಧಿಷ್ಟ ವ್ಯೂಹ ರಚಿಸಿ ಹೋರಾಟ ಮಾಡುತ್ತಾರೆ. ವಿಶಿಷ್ಟವಾದ ವಿನ್ಯಾಸದಿಂದ( ವ್ಯೂಢಂ) ಶಿಸ್ತುಬದ್ಧವಾಗಿ ಸಜ್ಜಾಗಿ ನಿಂತ ಪಾಂಡವ ಸೇನೆಯ ಒಂದು 'ಅನೀಕ' ವನ್ನು ಕಂಡಾಗ ದುರ್ಯೋಧನನ ದುಗುಡ ಹೆಚ್ಚುತ್ತದೆ. ಇದು ಮಾನಸಿಕವಾಗಿ ಆತನಿಗಾಗುತ್ತಿರುವ ಮೊದಲ ಆಘಾತ. ಈ ಮಾನಸಿಕ ಸ್ಥಿತಿಯಲ್ಲಿ ಆತ ಆಚಾರ್ಯನ ಬಳಿ ಹೋಗುತ್ತಾನೆ. ಇಲ್ಲಿ ಆಚಾರ್ಯ ಅಂದರೆ ಗುರುಗಳಲ್ಲಿ ಹಿರಿಯರಾದ ದ್ರೋಣಾಚಾರ್ಯರು. ಅವರ ಬಳಿಗೆ ಹೋಗಿ ನಮಸ್ಕರಿಸಿ; ಶಿಷ್ಯನ ರೀತಿ ವರ್ತಿಸದೆ, ತಾನು ರಾಜ ಎನ್ನುವಂತೆ ಅಹಂಕಾರದಿಂದ ಆಡಬಾರದ ರೀತಿ ಮಾತನಾಡುತ್ತಾನೆ.

ಈ ಶ್ಲೋಕದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ. ಯುದ್ಧ ಭೂಮಿಗೆ "ತಾನು ಗೆದ್ದೇ ಗೆಲ್ಲುತ್ತೇನೆ” ಎಂದು ಬಂದಿದ್ದ ದುರ್ಯೋಧನ, ಪಾಂಡವರ ಒಂದು ಅನೀಕವನ್ನು ನೋಡಿದಾಕ್ಷಣ ಮಾನಸಿಕ ಅಸಮತೋಲನ ಹೊಂದುತ್ತಾನೆ. ಅದರಿಂದ ಆತ ಹೇಗೆ ತಳಮಳಗೊಂಡ ಎನ್ನುವುದನ್ನು ಈ ಶ್ಲೋಕದಲ್ಲಿ 'ದೃಷ್ಟ್ವಾತು(ಮೇಲಂತೂ)' ಎನ್ನುವಲ್ಲಿ ಒತ್ತಿ ಹೇಳಿದ್ದಾರೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಇದ್ದಾಗ್ಯೂ, ಪಾಂಡವರ ಒಂದು ಪುಟ್ಟ ಅನೀಕವನ್ನು ಕಂಡು ಮಾನಸಿಕವಾಗಿ ವಿಪ್ಲವನಾದ ದುರ್ಯೋಧನ, ಆಚಾರ್ಯ ದ್ರೋಣರಲ್ಲಿ ಹೋಗಿ ಹೇಗೆ ಅಹಂಕಾರದಿಂದ ಮಾತನಾಡಿದ ಎನ್ನುವುದು ಮುಂದಿನ ಶ್ಲೋಕ.


ಮುಂದುವರೆಯುವುದು...

ಶ್ರೀ ಕೃಷ್ಣಾರ್ಪಣಮಸ್ತು 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top