ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಆಯ್ಕೆ

Upayuktha
0


ಮಂಗಳೂರು:  ವಿಶ್ವ ಬಂಟ ಪ್ರತಿಷ್ಠಾನವು ಡಾ. ಡಿ.ಕೆ. ಚೌಟ ದತ್ತಿನಿಧಿಯಿಂದ ಪ್ರತಿವರ್ಷವೂ ನೀಡುವ ಯಕ್ಷಗಾನ ಪ್ರಶಸ್ತಿಗೆ ತೆಂಕು ಅಥವಾ ಬಡಗು ತಿಟ್ಟಿನ ಹಿರಿಯ ಸಾಧಕ ಯಕ್ಷ ಕಲಾವಿದರೋರ್ವರನ್ನು ಆಯ್ದು ಅನುಕ್ರಮವಾಗಿ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ಈ ಬಾರಿ ಹಿರಿಯ ಸ್ತ್ರೀವೇಷಧಾರಿ ಯಕ್ಷರಂಗದ ಚಿರ ಕನ್ನಿಕೆ ಸಂಜಯ ಕುಮಾರ್  ಶೆಟ್ಟಿ ಗೋಣಿಬೀಡು ಪ್ರಶಸ್ತಿ ಭಾಜನರಾಗಿದ್ದಾರೆ.


ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಬಡಗುತಿಟ್ಟಿನ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಸಲಹಾ ಸಮಿತಿಯು ಈ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಪ್ರಮಾಣ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ವೈ. ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.


ಆ.23- ಪ್ರಶಸ್ತಿ ಪ್ರದಾನ: 


ಇದೇ ಆಗಸ್ಟ್ 23ರಂದು ಭಾನುವಾರ ಮಂಗಳೂರಿನ ಕರಂಗಲಪಾಡಿ ಎ.ಜೆ. ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುವ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 29ನೇ ವಾರ್ಷಿಕ ಮಹಾಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಗೋಣಿಬೀಡಿನಲ್ಲಿ ದಿ. ಐತಪ್ಪ ಶೆಟ್ಟಿ ಮತ್ತು ಸುಂದರಿ ಶೆಟ್ಟಿ ದಂಪತಿಗೆ 1960 ಜೂನ್ 1ರಂದು ಜನಿಸಿದ ಸಂಜಯ ಕುಮಾರ್ ಶೆಟ್ಟಿ ಅವರು ತನ್ನ ಪ್ರೌಢಶಾಲಾ ವ್ಯಾಸಂಗ ಪೂರೈಸಿ ಯಕ್ಷಗಾನದ ಕಡೆಗೆ ಆಕರ್ಷಿತರಾದವರು. ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ದಿ.ಪಡ್ರೆ ಚಂದು ಅವರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿದ ಅವರು ಕೋಳ್ಯೂರು ರಾಮಚಂದ್ರರಾವ್ ಮತ್ತು ಎಂ.ಕೆ. ರಮೇಶಾಚಾರ್ಯರ ಮಾರ್ಗದರ್ಶನದಲ್ಲಿ ಉತ್ತಮ ಸ್ತ್ರೀ ಪಾತ್ರಧಾರಿಯಾಗಿ ರೂಪುಗೊಂಡರು.


ಯಕ್ಷಗಾನದ ಸಿಡಿಲಮರಿ ಕ್ರಿಶ್ಚಿಯನ್ ಬಾಬು ಮತ್ತು ತನ್ನ ಸೋದರ ಸಂಬಂಧಿ, ಪುಂಡು ವೇಷದ ಗಂಡುಗಲಿ ಪುತ್ತೂರು ಶ್ರೀಧರ ಭಂಡಾರಿಯವರಿಂದ ಸ್ಫೂರ್ತಿ ಪಡೆದು 16ನೇ ವಯಸ್ಸಿನಲ್ಲಿ ಪುತ್ತೂರು ಶೀನಪ್ಪ ಭಂಡಾರಿಯವರ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಕಳೆದ ಐದು ದಶಕಗಳಿಂದ ಪುತ್ತೂರು, ಸುರತ್ಕಲ್, ಕರ್ನಾಟಕ, ಗಣೇಶಪುರ, ಮಂಗಳಾದೇವಿ, ಕುಂಟಾರು, ಎಡನೀರು, ಹೊಸನಗರ, ಬಪ್ಪನಾಡು, ಕೊಲ್ಲಂಗಾನ, ಮಲ್ಲ, ಬಾಚಕೆರೆ ಮುಂತಾದ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾ ಸೇವೆ ಮಾಡಿದ್ದಾರೆ. ಮೂರು ವರ್ಷ ಶ್ರೀ ಗಣೇಶಪುರ ಮೇಳವನ್ನು ನಡೆಸಿದ್ದಾರೆ. ಶ್ರೀದೇವಿ, ದ್ರೌಪದಿ, ದಮಯಂತಿ, ಸುಭದ್ರೆ, ಸೀತೆ, ದಾಕ್ಷಾಯಿಣಿ, ಅಂಬೆ, ಚಿತ್ರಾಂಗದೆ, ಕಯಾದು, ಮೋಹಿನಿ, ಮೇನಕೆ, ತ್ರಿಲೋಕ ಸುಂದರಿ, ಸ್ವೈರಿಣಿ ಮೊದಲಾದವು ಅವರಿಗೆ ಹೆಸರು ತಂದ ಸ್ತ್ರೀಪಾತ್ರಗಳು.


ತುಳು ಪ್ರಸಂಗಗಳಲ್ಲಿ ಕಿನ್ನಿದಾರು, ಸಿರಿ, ಸೋಮಲಾದೇವಿ, ಕಚ್ಚೂರ ಮಾಲ್ದಿ, ಗೆಜ್ಜೆ ಪೂಜೆಯ ತುಳಸಿ, ಎಲ್ಲೂರ ಮಲ್ಲಿ, ಕಾಡಮಲ್ಲಿಗೆಯ ತುಂಗೆ, ನಾಡ ಕೇದಗೆ, ನೀಲಾಂಬರಿ, ಸಿರಿ ಬಾಲೆ, ಪಲ್ಲವಿ, ಶ್ರೀಮತಿ ... ಇತ್ಯಾದಿ ಪಾತ್ರಗಳಲ್ಲಿ ಸಂಜಯ ಕುಮಾರ್ ಶೆಟ್ಟಿ ಅವರು ತಮ್ಮ ಸ್ತ್ರೀ ವೇಷದ ಛಾಪನ್ನು ಮೂಡಿಸಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಲಕ್ಷ್ಮಣ, ಅಯ್ಯಪ್ಪ, ಪರಶುರಾಮ, ಮನ್ಮಥ, ಲವ - ಕುಶ ಮುಂತಾದ ಪುಂಡುವೇಷಗಳಲ್ಲೂ ಅವರು ಪ್ರಸಿದ್ಧರು. ಎಲ್ಲೂರ್ದ ಮಲ್ಲಿ ಮತ್ತು ಸಿರಿ ಸಿಂಗಾರಿ ಅವರದೇ ಪರಿಕಲ್ಪನೆಯಲ್ಲಿ ರಚಿಸಲ್ಪಟ್ಟ ತುಳು ಪ್ರಸಂಗಗಳು. 'ಭುವನ ಜ್ಯೋತಿ' ಎಂಬ ಚಲನಚಿತ್ರದಲ್ಲೂ ನಟಿಸಿರುವ ಸಂಜಯರು ಹಲವು ಪೌರಾಣಿಕ ಮತ್ತು ಚಾರಿತ್ರಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ, ಉಡುಪಿ ಯಕ್ಷಗಾನ ಕಲಾರಂಗ, ಸ್ವಸ್ತಿಸಿರಿ, ರೋಟರಿ, ಅರುವ ಪ್ರತಿಷ್ಠಾನ, ಕದ್ರಿ ಹವ್ಯಾಸಿ ಬಳಗ, ಒಡಿಯೂರು ಗುರುದೇವಾನಂದ ಪ್ರಶಸ್ತಿಗಳಲ್ಲದೆ, ಬೋಳಾರ, ಪುಳಿಂಚ, ಶೇಣಿ ಜನ್ಮ ಶತಮಾನೋತ್ಸವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪಾತಾಳ- ಯಕ್ಷ ಮಂಗಳ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಮುಂಬೈ, ಮಸ್ಕತ್, ಬೆಹರಿನ್, ದುಬೈ ಮೊದಲಾದ ಹೊರನಾಡುಗಳಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವ ಗೋಣಿಬೀಡು ಅವರಿಗೆ ಯಕ್ಷರಂಗದ ಚಿರಕನ್ನಿಕೆ, ಯಕ್ಷ ಮಿನುಗುತಾರೆ, ಯಕ್ಷ ಮಣಿಮೇಖಲಾ, ಯಕ್ಷ ಮಯೂರಿ, ಯಕ್ಷ ನಂದಿನಿ, ಯಕ್ಷ ನಾಟ್ಯ ಲಲಿತೆ ಮೊದಲಾದ ಬಿರುದುಗಳು ಅವರಿಗೆ ಸಂದಿವೆ.


ಸುಮಾರು 48 ವರ್ಷಗಳ ಸುದೀರ್ಘ ತಿರುಗಾಟದ ಅನುಭವ ಹೊಂದಿರುವ ಸಂಜಯ ಕುಮಾರ್ ಶೆಟ್ಟರು 500ಕ್ಕೂ ಮಿಕ್ಕಿ ಯಕ್ಷಗಾನದ ದೃಶ್ಯ ಹಾಗೂ ಶ್ರಾವ್ಯ ಧ್ವನಿ ಕರಂಡಿಕೆ (ಸೀಡಿ) ಗಳಲ್ಲಿ ಪಾತ್ರವಹಿಸಿದ್ದಾರೆ. ತಮ್ಮ 'ಯಕ್ಷಪ್ರತಿಭೆ' ಎಂಬ ಕಲಾತಂಡದ ಮೂಲಕ ನಾಡು ಹೊರನಾಡುಗಳಲ್ಲಿ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವರ್ಷಂಪ್ರತಿ ವಿವಿಧ ರಂಗದ ಸಾಧಕರನ್ನು ಗುರುತಿಸಿ 'ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ' ನೀಡುತ್ತಿದ್ದಾರೆ. ಪ್ರಸ್ತುತ ವೃತ್ತಿ ಬದುಕಿನ ಅರ್ಧ ಶತಮಾನವನ್ನು ಪೂರೈಸಿರುವ ಅವರು ಈ ವರ್ಷ ತನ್ನ ಯಕ್ಷ ಯಾನದ ಸುವರ್ಣ ಸಂಭ್ರಮದಲ್ಲಿದ್ದಾರೆ.


ಪತ್ನಿ ಪ್ರಫುಲ್ಲ ಸಂಜಯ್, ಪುತ್ರಿ ದೀಕ್ಷಾ, ಪುತ್ರರಾದ ದರ್ಶನ್ ಮತ್ತು ದಕ್ಷಿಣ್ ಅವರೊಂದಿಗೆ ಸುಖೀ ಜೀವನ ನಡೆಸುತ್ತಿರುವ ಯಕ್ಷ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರು ಮಂಗಳೂರಿನ ಬೆಂದೂರು ಬಳಿ 'ಯಕ್ಷ ಭ್ರಮರ' ನಿವಾಸದಲ್ಲಿ ನೆಲೆಸಿದ್ದಾರೆ.


ಇದೇ ಆ.23ರಂದು ಮಂಗಳೂರಿನಲ್ಲಿ ನಡೆಯುವ ವಿಶ್ವ ಬಂಟ ಪ್ರತಿಷ್ಠಾನದ ಮಹಾಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.



- ಭಾಸ್ಕರ ರೈ ಕುಕ್ಕುವಳ್ಳಿ,

'ವಿದ್ಯಾ' ಕದ್ರಿ ಕಂಬಳ ರಸ್ತೆ, (ಅಂಚೆ: ಬಿಜೈ) ಮಂಗಳೂರು- 575004

Mail: kukkuvallibr@gmail.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top