ಹುಬ್ಬಳ್ಳಿ: ಹುಬ್ಬಳ್ಳಿಯ ವಿಜಯನಗರದ ಕೆಂಪಣ್ಣವರ್ ಕಲ್ಯಾಣಮಂಟಪದಲ್ಲಿ ಭಾನುವಾರ (ಆ.10) 'ಸಂಸ್ಕೃತ ಭಾರತಿ'ಯಿಂದ ವಿಶ್ವ ಸಂಸ್ಕೃತ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಜೃಂಭಣೆಯ ಶೋಭಾಯಾತ್ರೆಯ ಮೂಲಕ ಚಾಲನೆಯನ್ನು ನೀಡಲಾಯಿತು.
ಹುಬ್ಬಳ್ಳಿಯ ಸಂಸ್ಕೃತ ಭಾರತಿಯ ಬಾಲ ಕೇಂದ್ರದ ಮಕ್ಕಳು, ಪೋಷಕರು, ಸಂಸ್ಕೃತ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಅಲ್ಲದೇ ಹಲವಾರು ಸಂಸ್ಕೃತಾನುರಾಗಿಗಳು ಸಂಸ್ಕೃತದ ಕುರಿತಾದ ಘೋಷಣೆಗಳನ್ನು ಕೂಗುತ್ತ, ಸಂಸ್ಕೃತ ಹಾಡುಗಳನ್ನು ಹಾಡುತ್ತ, ಕುಣಿಯುತ್ತ ಅತ್ಯಂತ ಉತ್ಸಾಹದಿಂದ ಈ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ವೇದಿಕೆಯಲ್ಲಿ ವೇದಿಕಾ ಕಾರ್ಯಕ್ರಮ ಹಾಗೂ ವಿವಿಧ ಬಾಲಕೇಂದ್ರಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಈ ವೇದಿಕೆಯ ಮುಖ್ಯ ವಕ್ತಾರರಾಗಿ ಡಾ. ಚಂದ್ರಮೌಳಿ ಶಿವಶಂಕರಪ್ಪ ನಾಯ್ಕರ್, ಪ್ರಥಮ ಕುಲಸಚಿವ (ವಿಶ್ರಾಂತ), ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಬೆಂಗಳೂರು ಇವರು ಆಗಮಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಡಾ.ವಿ.ಎಸ್.ವಿ. ಪ್ರಸಾದ (ವ್ಯವಸ್ಥಾಪಕ ನಿರ್ದೇಶಕರು, ಸ್ವರ್ಣ ಸಮೂಹ ಸಂಸ್ಥೆ ಹಾಗೂ 'ಬಸವ ಪ್ರಶಸ್ತಿ' ಪುರಸ್ಕೃತರು) ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ಭಾರತಿ'ಯ ಹುಬ್ಬಳ್ಳಿಯ ಅಧ್ಯಕ್ಷ ರಾಜಶೇಖರ ಪಾಟೀಲರು ವಹಿಸಿದ್ದರು. ಇವರು ಉದ್ಯಮಿದಾರರು ಹಾಗೂ ಮನೋ ತರಬೇತುದಾರರಾಗಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಶ್ರೀ ನಾಯ್ಕರ್ ಮಹೋದಯರು 'ಶಿವಸಂಹಿತಾ' ಎಂಬ ಕಾವ್ಯದ ಆಧಾರವಾಗಿ ಸಂಸ್ಕೃತ ಭಾಷೆಯು ಹೇಗೆ ಕಾವ್ಯಾತ್ಮಕ ಹಾಗೂ ವೈಜ್ಞಾನಿಕ ಎಂಬುದನ್ನು ಪ್ರತಿಪಾದಿಸಿದರು.
ಸಂಸ್ಕೃತ ಭಾಷೆಯ ಜಾಗೃತಿಗಾಗಿ ಸರ್ಕಾರವು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದರ ಕುರಿತು ವಿವರಿಸುತ್ತ, ಈ ಭಾಷೆಯನ್ನು ಕಲಿಯುವುದರಿಂದ ಮಕ್ಕಳಲ್ಲಿ ಮತ್ತು ನಾಗರಿಕರಲ್ಲಿ ಉತ್ತಮ ಸಂಸ್ಕೃತಿಯನ್ನು ಮತ್ತು ಸಂಬಂಧವನ್ನು ಬೆಸೆಯಲು ಸಾಧ್ಯವಾಗುತ್ತದೆ, ಆದ್ದರಿಂದ ಸಂಸ್ಕೃತವನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ಭಾಷೆಯಾಗಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ ವಿ.ಎಸ್.ವಿ ಪ್ರಸಾದ ಮಹೋದಯರು ಕೂಡ ಸಂಸ್ಕೃತ ಭಾಷೆ ದೇವಭಾಷೆಯಾಗಿದೆ, ನಮ್ಮ ಎಲ್ಲ ಶ್ಲೋಕಗಳು, ಮಂತ್ರಗಳು ಸಂಸ್ಕೃತದಲ್ಲೇ ರಚಿತವಾಗಿದೆ. ಸಂಸ್ಕೃತದ ಅಧ್ಯಯನದಿಂದ ಈ ಶ್ಲೋಕಗಳನ್ನು ಅರ್ಥಸಹಿತ ತಿಳಿಯಬಹುದಾಗಿದೆ, ಆದ್ದರಿಂದ ಸಂಸ್ಕೃತದ ಕಲಿಕೆ ಅನಿವಾರ್ಯವೆಂದರು. ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಈ ಸಂದರ್ಭದಲ್ಲಿ ನೆನೆಯುತ್ತ, ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿರುವ ಪ್ರಧಾನಿಗಳನ್ನು ನಾವು ಪಡೆದಿರುವಾಗ ಸಂಸ್ಕೃತವನ್ನು ಕಲಿಯದೇ ಇರುವುದು ದುರ್ದೈವ ಎಂದರು.
ಯಾವುದೇ ಭಾಷೆ, ಜಾತಿ, ಧರ್ಮದವರಾದರೂ ಕೂಡ ಎಲ್ಲರ ಭಾಷೆ ಒಂದೇ, ಅದು ಸಂಸ್ಕೃತವಾಗಬೇಕೆಂಬ ಮನದಾಸೆಯನ್ನು, ಈ ಸಮಯದಲ್ಲಿ ಸಂಸ್ಕೃತ ಭಾರತಿ'ಯವರು ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿ, ದೇಶದ ಪ್ರಥಮ ಭಾಷೆಯನ್ನಾಗಿಸಬೇಕೆಂಬ ತಮ್ಮ ಕಳಿಕಳಿ ವ್ಯಕ್ತಪಡಿಸಿದರು.
ಅಲ್ಲದೇ ಸಂಸ್ಕೃತ ಭಾರತಿ'ಯ ಸಂಘಟನೆಯ ಜೊತೆಗೆ ಕೈಜೋಡಿಸುವ ತಮ್ಮ ಧೃಡ ಆಶ್ವಾಸನೆಯನ್ನು ಕೊಟ್ಟು ಧೈರ್ಯ ತುಂಬಿದರು.ಇದರಿಂದ ಭಾರತವನ್ನು ವಿಶ್ವ ಗುರುವನ್ನಾಗಿಸೋಣ ಎಂದು ಹುರಿದುಂಬಿಸಿದರು ಮತ್ತು ಅವರ ಸಹಧರ್ಮಿಣಿಯವರು ಕೂಡ ಸಂಸ್ಕೃತ ಭಾರತಿಯಿಂದ ಪ್ರೇರಿತರಾಗಿ ಸಂಸ್ಕೃತವನ್ನು ಮಾತನಾಡುತ್ತಿರುವ ಹಾಗೂ ಸಂಸ್ಕೃತಾಧ್ಯಯನವನ್ನು ಮಾಡುತ್ತಿರುವ ವಿಷಯವನ್ನು ಈ ಸಮಯದಲ್ಲಿ ಉಲ್ಲೇಖಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜಶೇಖರ ಪಾಟೀಲ ಮಹೋದಯರು ತಮ್ಮ ಸಂಸ್ಕೃತ ಪರವಾದ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಮಹಾವಿದ್ಯಾಲಯಗಳಲ್ಲಿ IIT, GIT ಸಂಸ್ಥೆಗಳಲ್ಲೂ ಕೂಡ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುತ್ತಿದ್ದಾರೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದೆಹಲಿ, ಇವರ ಸಹಾಯದಿಂದ 'ಸಂಸ್ಕೃತ ಭಾರತಿ'ಯ ಅನೇಕ ಪ್ರಕಲ್ಪಗಳಲ್ಲಿ ಶ್ಲೋಕ ಪಠಣವೂ ಕೂಡ ಹೊಸದಾದ ಪ್ರಕಲ್ಪವಾಗಿದೆ. ಶ್ಲೋಕಗಳ ಮೂಲಕ ಸಂಸ್ಕೃತವನ್ನು, ಸಂಸ್ಕೃತಿಯನ್ನು, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ.
ಈ ರೀತಿಯಾಗಿ ಸಂಸ್ಕೃತ ಭಾರತಿ'ಯ ಎಲ್ಲ ಕಾರ್ಯಕರ್ತರು ಒಂದಾಗಿ ಸೇರಿ ಉತ್ತಮ ಸಂಘಟನಾ ಭಾವದಿಂದ, ಪರಸ್ಪರ ಆತ್ಮೀಯತೆಯಿಂದ ರಕ್ಷಾಬಂಧನದೊಂದಿಗೆ 'ವಿಶ್ವ ಸಂಸ್ಕೃತ ದಿನ' ವನ್ನು ಸಂಭ್ರಮದಿಂದ ಆಚರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

