ಉಜಿರೆ: ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ ಉನ್ನತ ಶಿಕ್ಷಣವನ್ನು ವೃತ್ತಿಪರಗೊಳಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶಕ್ಕೆ ಪೂರಕವಾಗಿ ಇಂಟರ್ನ್‌ಷಿಪ್ ಉಪಕ್ರಮದ ಭಾಗವಾಗಿ ಉಜಿರೆಯ ಧ.ಮಂ. ಕಾಲೇಜಿನ 600ಕ್ಕೂ ಅಧಿಕ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ವಿವಿಧ ಔದ್ಯಮಿಕ ಸಂಸ್ಥೆಗಳಲ್ಲಿ ಒಂದು ತಿಂಗಳ ಕಾಲ ಔದ್ಯೋಗಿಕ ತರಬೇತಿ ಪಡೆದಿದ್ದಾರೆ.
ಕಾಲೇಜಿನ ಕಲೆ, ವಿಜ್ಞಾನ, ವಾಣಿಜ್ಯ, ಬಿ.ಬಿ.ಎ. ಮತ್ತು ಬಿ.ಸಿ.ಎ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ನಂತರ ರಜೆಯ ಅವಧಿಯಲ್ಲಿ ಇಂಟರ್ನ್‌ಷಿಪ್ ಪೂರೈಸಿದ್ದಾರೆ. ಕಲೆ, ವಿಜ್ಞಾನ ಮತ್ತು ಬಿ.ಬಿ.ಎ. ನಿಕಾಯಗಳ 80 ವಿದ್ಯಾರ್ಥಿಗಳು, ವಾಣಿಜ್ಯ ನಿಕಾಯದ 400 ಮತ್ತು ಬಿ.ಸಿ.ಎ. ವಿಭಾಗದ 90 ವಿದ್ಯಾರ್ಥಿಗಳು ಇಂಟರ್ನ್‌ಷಿಪ್ ಅವಧಿಯಲ್ಲಿ ತರಬೇತಿ ಪಡೆದು ತರಗತಿಗೆ ಮರಳಿದ್ದಾರೆ.
ರಜೆಯ ಅವಧಿಯನ್ನು ಶೈಕ್ಷಣಿಕ ಮತ್ತು ವೃತ್ತಿಪರ ಉದ್ದೇಶಕ್ಕಾಗಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳನ್ನು ಇಂಟರ್ನ್‌ಷಿಪ್‌ಗಾಗಿ ಉತ್ತೇಜಿಸಲಾಗಿತ್ತು. ಇದಕ್ಕನುಗುಣವಾಗಿ ಔದ್ಯಮಿಕ ಸಂಸ್ಥೆಗಳು ಸ್ಪಂದಿಸಿ ಇಂಟರ್ನ್‌ಷಿಪ್ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದವು. ಆಯಾ ನಿಕಾಯಗಳ ಶೈಕ್ಷಣಿಕ ಕಲಿಕೆಯ ಪ್ರಾಯೋಗಿಕತೆಗೆ ಪೂಕರವಾಗಿ ಸಂಬಂಧಿತ ಔದ್ಯಮಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಇಂಟರ್ನ್‌ಷಿಪ್ ತರಬೇತಿ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ತಿಳಿಸಿದ್ದಾರೆ.
ಇಂಟರ್ನ್‌ಷಿಪ್ ಕಾರಣಕ್ಕಾಗಿ ಬಹುತೇಕ ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಬದಲಾವಣೆ ಕಂಡುಬಂದಿದ್ದು, ಅವರ ಭವಿಷ್ಯದ ವೃತ್ತಿಪರ ಬದುಕಿಗೆ ವಿಶೇಷ ನೆರವು ಸಿಕ್ಕಂತಾಗಿದೆ. ವ್ಯಾಸಂಗ ಪೂರೈಸುವ ಹೊತ್ತಿಗೆ ಯಾವ ಕ್ಷೇತ್ರದಲ್ಲಿ ವೃತ್ತಿಪರ ಅವಕಾಶಗಳನ್ನು ಪಡೆಯಬೇಕು ಎನ್ನುವುದರ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಸಿಕ್ಕಿದೆ. ವಿದ್ಯಾರ್ಥಿಗಳು ಇಂಟರ್ನ್‌ಷಿಪ್ ಮೂಲಕ ವೃತ್ತಿಪರ ಬದುಕಿಗೆ ಪೂರಕವಾಗುವ ಪ್ರಾಯೋಗಿಕ ಮಾರ್ಗದರ್ಶನ ಪಡೆದುಕೊಂಡ ಖುಷಿಯೊಂದಿಗೆ ತರಗತಿಗಳಿಗೆ ಹಿಂದಿರುಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಂಟರ್ನ್‌ಷಿಪ್ ಕಾರಣದಿಂದಾಗಿ ಹೊರಜಗತ್ತಿನ ಪರಿಚಯ, ಇಂಡಸ್ಟ್ರಿಯ ಬೇಡಿಕೆಯ ಪರಿಚಯವಾಯಿತು. ನಮ್ಮ ಶಕ್ತಿ ಮತ್ತು ದೌರ್ಬಲ್ಯದ ಅರಿವು ಉಂಟಾಯಿತು. ಕಲಿಕೆಯಲ್ಲಿ ವೃತ್ತಿಗೆ ಬೇಕಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ಉದ್ಯೋಗ ಕ್ಷೇತ್ರ ಪ್ರವೇಶಿಸಲು ಇಂಟರ್ನ್‌ಷಿಪ್ ನೆರವಾಗುತ್ತದೆ. ತರಗತಿಯಲ್ಲಿ ಕಲಿತ ಥಿಯರಿಯನ್ನು ಇಂಟರ್ನ್‌ಷಿಪ್ ನಲ್ಲಿ ಅನ್ವಯಿಸಿ ನೋಡಿದಾಗ ಹೊಸ ಕಲಿಕೆ ಲಭಿಸಿತು. ಈ ನಿಟ್ಟಿನಲ್ಲಿ ಬದುಕಿನಲ್ಲಿ ಒಂದು ತಿರುವು ಆಗಿ ಇಂಟರ್ನ್‌ಷಿಪ್ ಪರಿಣಮಿಸಿತು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮುಂಚೆ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನನಿರತ ವಿದ್ಯಾರ್ಥಿಗಳಿಗೆ 45 ದಿನಗಳ ಇಂಟರ್ನ್‌ಷಿಪ್ ತರಬೇತಿ ಕಡ್ಡಾಯವಾಗಿಸಲಾಗಿತ್ತು. ಇದರಿಂದ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಿಗೆ ಔದ್ಯೋಗಿಕ ವಲಯದಲ್ಲಿ ವಿಶೇಷ ಪ್ರಯೋಜನ ಲಭ್ಯವಾಗಿತ್ತು. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಪದವಿ ಅಧ್ಯಯನ ನಿರತ ವಿದ್ಯಾರ್ಥಿಗಳನ್ನೂ ಇಂಟರ್ನ್‌ಷಿಪ್‌ಗೆ ಕಳುಹಿಸಿಕೊಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕನುಗುಣವಾಗಿ ಇದೇ ಮೊದಲ ಬಾರಿಗೆ ಪದವಿ ವಿದ್ಯಾರ್ಥಿಗಳು ಬೃಹತ್ ಪ್ರಮಾಣದಲ್ಲಿ ಇಂಟರ್ನ್‌ಷಿಪ್ ತರಬೇತಿ ಪಡೆದಿರುವುದು ವಿಶೇಷ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದಕ್ಕೆ ಕಾಲೇಜಿನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ನೇಮಕಾತಿಗೆ ಅನುಕೂಲವಾಗುವಂತೆ ತಜ್ಞರ ಮೂಲಕ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಉಪಕ್ರಮಗಳ ಮುಂದುವರಿದ ಭಾಗವಾಗಿ ಇದೇ ಮೊದಲ ಬಾರಿಗೆ ಪದವಿ ವಿದ್ಯಾರ್ಥಿಗಳನ್ನು ಇಂಟರ್ನ್‌ಷಿಪ್‌ಗೆ ಕಳುಹಿಸುವ ಮೂಲಕ ಹೊಸ ಹೆಜ್ಜೆ ಇರಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ