ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾದರಸದ ಚುರುಕುತನ, ಅನ್ವೇಷಣಾ ಗುಣ ಅಗತ್ಯ: ಡಾ. ಭಾಸ್ಕರ ಹೆಗಡೆ

Upayuktha
0




ಉಜಿರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾದರಸದಂತೆ ಚುರುಕುತನ ಮತ್ತು ಅನ್ವೇಷಣಾ ಗುಣ ದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಹೇಳಿದರು.

ಕಾಲೇಜಿನಲ್ಲಿ ಜು.23ರಂದು ವಿಭಾಗದ ವಾರ್ಷಿಕ ಚಟುವಟಿಕೆ ಗಳಿಗೆ ಚಾಲನೆ ಮತ್ತು ಪರಿಚಯ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.


ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳಿಗೆ ತರಗತಿ ಬೋಧನೆ ಜೊತೆಗೆ ವೃತ್ತಿಪರ ಅನುಭವಗಳನ್ನೂ ಒದಗಿಸುತ್ತದೆ. ಕಾಲೇಜಿನ ಕಾರ್ಯಕ್ರಮಗಳ ವರದಿಗಾರಿಕೆ, ಕಿರುಚಿತ್ರ ನಿರ್ಮಾಣ, ರೇಡಿಯೋ ಕಾರ್ಯಕ್ರಮ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವ ಅವಕಾಶವಿದೆ. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಮುಂದುವರಿಯುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಅವರು ತಿಳಿಸಿದರು.


ವೃತ್ತಿ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆಯುವುದಕ್ಕೆ ಪೂರಕವಾಗಿ ವಿಭಾಗದಲ್ಲಿ ವಿವಿಧ ಚಟುವಟಿಕೆಗಳು ಹಿಂದಿನಿಂದಲೂ ಅನೂಚಾನವಾಗಿ ನಡೆದು ಬಂದಿವೆ. ಅದಕ್ಕೆ ಪೂರಕವಾಗಿ ಬೋಧಕ-ಬೋಧಕೇತರ ಸಿಬ್ಬಂದಿಯ ಮಾರ್ಗದರ್ಶನವಿದೆ. ಹಿರಿಯ-ಕಿರಿಯ ವಿದ್ಯಾರ್ಥಿಗಳು ಜೊತೆಗೂಡಿ ಈ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯವಾಗಿ ಮುನ್ನಡೆಸುವ ಸಂಕಲ್ಪ ಮಾಡಬೇಕು. ವ್ಯವಸ್ಥೆಗಳನ್ನು ಸಮರ್ಪಕವಾಗಿ ಜಬಾಬ್ದಾರಿಯುತವಾಗಿ ಬಳಸಿಕೊಂಡು ಸಾಧಕರಾಗಬೇಕು ಎಂದು ಅವರು ಸಲಹೆ ನೀಡಿದರು.


ವಿಭಾಗದ ಚಟುವಟಿಕೆಗಳಾದ ಫಸ್ಟ್ ಸ್ಪೀಚ್, ವೀಕ್ಲಿ ರೌಂಡ್ ಅಪ್, ‘ಚಿಗುರು’ ಭಿತ್ತಿಪತ್ರಿಕೆ, ವರದಿಗಾರಿಕೆ ಹಾಗೂ ‘ರೇಡಿಯೋ ನಿನಾದ 90.4 ಎಫ್ಎಂ’ ಸಮುದಾಯ ಬಾನುಲಿ ಕೇಂದ್ರ, ‘ನಮ್ಮೂರ ವಾರ್ತೆ’ ಟಿವಿ ವಾರ್ತಾ ಸಂಚಿಕೆ, ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋ ಕುರಿತಾಗಿ ವಿದ್ಯಾರ್ಥಿಗಳಾದ ತನುಶ್ರೀ ಸಿ.ಕೆ., ಕನ್ನಿಕಾ, ಪವನ್, ವಂಶಿ, ತನುಶ್ರೀ ಮತ್ತು ರಂಗಸ್ವಾಮಿ ಮಾಹಿತಿ ನೀಡಿದರು.


ತೃತೀಯ ವರ್ಷದ ವಿದ್ಯಾರ್ಥಿನಿ ಶ್ರೇಯಾ ಮಿಂಚಿನಡ್ಕ ಇಂಟರ್ನ್‌ಶಿಪ್ ಅನುಭವ ಹಂಚಿಕೊಂಡರು. ನೂತನ ವಿದ್ಯಾರ್ಥಿಗಳು ತಮ್ಮನ್ನು ಪರಿಚಯಿಸಿಕೊಂಡರು. ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳ ಪರಿಚಯ ನೀಡುವ ವಿಡಿಯೋ ಪ್ರದರ್ಶಿಸಲಾಯಿತು. ‘ಚಿಗುರು’ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಅನಾವರಣಗೊಳಿಸಲಾಯಿತು.


ಇತ್ತೀಚೆಗೆ ಬಿಡುಗಡೆಗೊಂಡಿರುವ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ಕೈತವ’ ಕನ್ನಡ ಕಿರುಚಿತ್ರದ ಟ್ರೈಲರ್ ಪ್ರದರ್ಶಿಸಲಾಯಿತು. ಕಾಲೇಜಿನ ತಾಂತ್ರಿಕ ಸಿಬ್ಬಂದಿ ಸುರೇಂದ್ರ ಜೈನ್ ನಾರಾವಿ ತಯಾರಿಸಿದ ಕೃಷಿ ಚಟುವಟಿಕೆ ಕುರಿತ ರೀಲ್ಸ್ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ಸಲುವಾಗಿ ಅವರನ್ನು ಅಭಿನಂದಿಸಲಾಯಿತು. ಪ್ರಥಮ, ದ್ವಿತೀಯ ಮತ್ತು ತೃತೀಯ ಪತ್ರಿಕೋದ್ಯಮ ತರಗತಿ ಪ್ರತಿನಿಧಿಗಳಾದ ಸಂಜನಾ, ತನುಶ್ರೀ ಸಿ.ಕೆ. ಮತ್ತು ಚೇತನ್ ಹಾಗೂ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಮಾನ್ಯ ಸ್ವಾಗತಿಸಿ, ಸಂಕೇತ್ ವಂದಿಸಿದರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಕವನಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top