* ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಕಛೇರಿ
* ಜೆ ಎಸ್ ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ
ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ‘ಉಡುಪ ಸಂಗೀತೋತ್ಸವ’ ಸಂಭ್ರಮ ಮುದ ನೀಡಲು ಅಣಿಯಾಗಿದೆ.
ಉದ್ಯಾನ ನಗರಿಯ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಆಗಸ್ಟ್ 24 ರಂದು ದಿನಪೂರ್ಣ ಸಂಗೀತ- ನೃತ್ಯ ಸಮಾರಾಧನೆ ನೆರವೇರಲಿದೆ.
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ವಾದನ- ಗಾಯನ ಮತ್ತು ನರ್ತನದ ಮೂಲಕ ಸಂಗೀತ ರಸಿಕರ ಮನ ತಣಿಸಲಿದ್ದಾರೆ. ಪ್ರವೇಶ ಉಚಿತವಾಗಿದೆ. ಅಂದು ಬೆಳಗ್ಗೆ 10ಕ್ಕೆ ತಾಳವಾದ್ಯ- ಕಛೇರಿ ಆಯೋಜನೆಗೊಂಡಿದೆ.
ಹೆಸರಾಂತ ವಿದ್ವಾಂಸರಾದ ಅದಮ್ಯ ರಮಾನಂದ, ಅನಿರುದ್ಧ ಎಸ್. ಭಟ್, ಸೋಮಶೇಖರ ಜೋಯಿಸ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ 22 ಕಲಾವಿದರು ತಾಳವಾದ್ಯದ ಹೊಸ ರಂಗುಗಳನ್ನು ಕಲಾರಸಿಕರಿಗೆ ಸಮರ್ಪಿಸಲಿದ್ದಾರೆ. ಮೃದಂಗ, ಖಂಜಿರ, ಘಟ, ಕೊನ್ನಕೋಲ್ ಮತ್ತು ಮೊರ್ಸಿಂಗ್ ವಾದ್ಯಗಳು ಅನುರಣಿಸಲಿವೆ. ಕಣ್ಮನಗಳನ್ನು ತಣಿಸುವ ಈ ಕಾರ್ಯಕ್ರಮವನ್ನು ನೋಡುವುದೇ ಒಂದು ಸೊಗಸಾಗಲಿದೆ.
ಬೆಳಗ್ಗೆ 11ಕ್ಕೆ ವಿಶೇಷ ಗಾಯನ ಕಛೇರಿ ಸಂಪನ್ನಗೊಳ್ಳಲಿದೆ. ಪ್ರಖ್ಯಾತ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಂದ ಶಾಸ್ತ್ರೀಯ ಸಂಗೀತ ಗಾಯನವಿದೆ. ಪಕ್ಕವಾದ್ಯದಲ್ಲಿ ಪ್ರಖ್ಯಾತ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರ ಮೃದಂಗ, ಚಾರುಲತಾ ರಾಮಾನುಜಂ (ಪಿಟೀಲು), ಓಂಕಾರ್ (ಘಟಂ) ಮತ್ತು ವಿದ್ವಾನ್ ಎಸ್.ವಿ. ಗಿರಿಧರ ಮೋರ್ಸಿಂಗ್ ಸಹಕಾರ ನೀಡಲಿದ್ದಾರೆ.
ಭರತನಾಟ್ಯ ಪ್ರಸ್ತುತಿ:
ಭಾನುವಾರ ಸಂಜೆ 5 ಗಂಟೆಗೆ ಹಿರಿಯ ಭರತನಾಟ್ಯ ವಿದ್ವಾಂಸ ವಿದ್ವಾನ್ ಸತ್ಯನಾರಾಯಣ ರಾಜು, ವಿದುಷಿ ಮೀರಾ ಶ್ರೀ ನಾರಾಯಣನ್ ಹಾಗೂ ಉದಯೋನ್ಮುಖ ಕಲಾವಿದೆ ಯುಕ್ತಿ ಉಡುಪ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಗೊಳ್ಳಲಿದೆ. ತಂಜಾವೂರು ಸಹೋದರರ ರಚನೆಯ ಅಷ್ಟರಾಗ ಮಾಲಿಕಾ ವರ್ಣವನ್ನು ಈ ಕಲಾವಿದರು ಪಡಮೂಡಿಸಲಿದ್ದಾರೆ.
ಖ್ಯಾತ ವಿದುಷಿ ನರ್ಮದಾ ನೃತ್ಯ ಸಂಯೋಜನೆಯನ್ನು ಒಂದು ಗಂಟೆ ಅವಧಿಯಲ್ಲಿ ರಂಗಕ್ಕೆ ಅಳವಡಿಸಿರುವುದು ಗಮನಾರ್ಹವಾಗಿದೆ.
(ಕಲಾವಿದರ ಚಿತ್ರಗಳನ್ನು ಬಳಸಿ)
ವಿದ್ವಾಂಸರಾದ ಆರ್. ಕೆ. ಪದ್ಮನಾಭ, ಎಚ್. ಎಸ್. ಸುಧೀಂದ್ರ, ಸತ್ಯನಾರಾಯಣರಾಜು ಅದಮ್ಯ ರಮಾನಂದ ಹಾಗೂ ಕಾರ್ಯಕ್ರಮದ ಪ್ರಮುಖ ರೂವಾರಿ ವಿದ್ವಾನ್ ಗಿರಿಧರ ಉಡುಪ)
ನಾಡಿನ ಪ್ರತಿಷ್ಠಿತ ಸಂಸ್ಥೆ:
ವಿಶ್ವ ಖ್ಯಾತಿಯ ಘಟಂ ವಿದ್ವಾಂಸ ಗಿರಿಧರ ಉಡುಪ ರವರಿಂದ 2015ರಲ್ಲಿ ಸ್ಥಾಪನೆಗೊಂಡ ಉಡುಪ ಪ್ರತಿಷ್ಠಾನವು ಶಾಸ್ತ್ರೀಯ ಸಂಗೀತ, ಪ್ರದರ್ಶನ ಕಲೆ ಮತ್ತು ಸಂಸ್ಕೃತಿಗಳನ್ನು ಉತ್ತೇಜಿಸುವ ಮೂಲಕ ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿದೆ. ಪ್ರತಿಷ್ಠಾನವು ಪ್ರತಿ ತಿಂಗಳೂ ಗ್ರಾಮೀಣ ಭಾಗದ ಸರ್ಕಾರಿಶಾಲೆ, ವೃದ್ಧಾಶ್ರಮ, ಕ್ಯಾನ್ಸರ್ ಪುನರ್ವಸತಿ ಕೇಂದ್ರ ಮತ್ತು ಆಟಿಸಂ ಕೇಂದ್ರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಅಲ್ಲಿನವರಿಗೆ ಮನೋಲ್ಲಾಸ ನೀಡುವ ಸೇವೆ ಮಾಡುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಾನವು ಈವರೆಗೆ ದೇಶ- ವಿದೇಶಗಳ 300ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಿ 150ಕ್ಕೂ ಅಧಿಕ ಸಂಗೀತ ಕಛೇರಿಗಳನ್ನು ಆಯೋಜನೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ. ಇದೀಗ ಆಗಸ್ಟ್ 24ರ ಭಾನುವಾರದಂದು ಸಂಗೀತ ನೃತ್ಯ ಉತ್ಸವದ ಮೂಲಕ ಕಲರಸಿಕರಿಗೆ ಮುದ ನೀಡುವ ಸೇವೆಯನ್ನು ಮಾಡಲಾಗುತ್ತಿದೆ ಎಂದು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ವಿವರಿಸಿದ್ದಾರೆ.
ವಿದ್ವಾನ್ ಗಿರಿಧರ ಉಡುಪರ ಮಾದರಿ ಕಾರ್ಯ:
ತಂದೆ ಮತ್ತು ಗುರುವೂ ಆದ ಮೃದಂಗ ವಿದ್ವಾನ್ ಉಳ್ಳೂರು ನಾಗೇಂದ್ರ ಉಡುಪ ಅವರ ಹೆಮ್ಮೆಯ ಪುತ್ರ ಗಿರಿಧರ ಉಡುಪ ಅವರು ದಿ ಕಿಂಗ್ ಆಫ್ ಪಾಟ್ ಮ್ಯೂಸಿಕ್- ಎಂದೇ ಖ್ಯಾತರು. ದೇಶ- ವಿದೇಶದಲ್ಲಿ ವಿಖ್ಯಾತರು. ಇವರು ನುಡಿಸದೇ ಇರುವ ವಿಶ್ವ ಮಟ್ಟದ ವೇದಿಕೆಗಳೇ ಇಲ್ಲ ಎಂದರೆ ಅದು ಅತಿಶಯೋಕ್ತಿ ಆಗಲಾರದು. ಘಟಂ ಎಂದರೆ ವಿಶ್ವ ಮಟ್ಟದಲ್ಲಿ ಗಿರಿಧರ ಉಡುಪ ಎಂದೇ ವಿಖ್ಯಾತಿ ಎಂಬುದನ್ನು ಸಂಗೀತ ಪ್ರಪಂಚವೇ ಅನುಮೋದಿಸಿದೆ. ಅಷ್ಟರ ಮಟ್ಟಿಗೆ ವಿಶ್ವ ಮಟ್ಟದ ತಾಳವಾದ್ಯ ವಿದ್ಮನ್ಮಣಿಗಳ ಸಾಲಿನಲ್ಲಿ ಇವರು ಮೇರು ‘ಗಿರಿ’ಯೇ ಆಗಿರುವುದು ನಾಡಿನ ಸುಕೃತವಾಗಿದೆ. ಅವರು ಬೆಳಗುವುದು ಮಾತ್ರವಲ್ಲ, ಇತರ ಕಲಾವಿದರನ್ನೂ ಬೆಳೆಯಲು ಪ್ರೋತ್ಸಾಹ, ವೇದಿಕೆಗಳನ್ನು ತಾವೇ ಕಲ್ಪಿಸಿ ಕೊಡುತ್ತ ಇರುವುದು ಮಾದರಿ ಎನಿಸಿದೆ.
- ಶಿವಮೊಗ್ಗ ರಾಮ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ