ಇನ್ನು ಕೆಲವು ವರ್ಷಗಳು ಜಪಾನ ವಾಸ ಎಂದು ಅರಿವಾದ ದಿನದಿಂದಲೇ ಮನಸಲ್ಲೆಲ್ಲಾ ಮೌಂಟ್ ಫೂಜಿ ಚಾರಣದ ಕನಸು ಮನೆ ಮಾಡಿತ್ತು. ನಾವು ನೆಲೆಸಿರುವ ಕ್ಯೋಟೊ ದಲ್ಲಿ ಭಾರತೀಯರನ್ನು ಕಾಣಸಿಗುವುದು ಅಪುರೂಪ. ಸಿಕ್ಕಿ ಮಾತನಾಡಲು ಪ್ರಾರಂಭಿಸಿದಾಗಲೇ ಇವರ ಬಳಿ ಮೌಂಟ್ ಫೂಜಿ ಚಾರಣದ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು ಎಂಬ ಪ್ರಶ್ನೆ ಮೊದಲೇ ಮನಸ್ಸಿಗೆ ಬರುತ್ತಿತ್ತು.
ಸುಂದರವಾಗಿ ಹಿಮಾವೃತವಾಗಿ ನಿಂತ ಫೂಜಿ ಬೆಟ್ಟವನ್ನು ಮನಸ್ಸು ಬಂದಾಗಲೆಲ್ಲಾ ಹತ್ತಲು ಸಾಧ್ಯವಿಲ್ಲ. ಜುಲೈ ಮೊದಲನೇ ವಾರದಿಂದ ಸೆಪ್ಟೆಂಬರ್ ತಿಂಗಳಿನ ಮಧ್ಯದವರೆಗೆ ಮಾತ್ರ ಚಾರಣ ಮಾಡಬಹುದು. ಈ ಸಮಯ ಜಪಾನಿನಲ್ಲಿ ಸುಡುವ ಬೇಸಿಗೆ ಕಾಲ. ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಗೆ ಹೋದರೂ ಸೂರ್ಯದೇವನಿಗೆ ಮಹಾ ಕೋಪ ಎಂಬಂತೆ ಸುಡುತ್ತಾನೆ. ಇಂತಹ ಬೇಸಿಗೆಯಲ್ಲಿ, ಫೂಜಿಯ ತಪ್ಪಲಿನಲ್ಲಿ 2-3 ಡಿಗ್ರೀ ಇರುತ್ತದೆ. ಇದಲ್ಲದೆ ಬೇರೆ ಸಮಯದಲ್ಲಿ ನೆಗೇಟಿವ್ ತಾಪಮಾನ ಇರುವ ಕಾರಣ ಹತ್ತಲು ಅವಕಾಶ ಇರುವುದಿಲ್ಲ.
ಚಾರಣಕ್ಕೆ ಬೇಕಾದ ಮಾಹಿತಿಗಳನ್ನು ಕಲೆ ಹಾಕಿದ ನಂತರ ನಮ್ಮ 4 ವರ್ಷದ ಮಗಳೊಂದಿಗೆ ಮೂವರೂ ಬೆಟ್ಟ ಹತ್ತುವುದು ಎಂದು ನಿರ್ಧಾರ ಮಾಡಿದೆವು.
ಗೆಳೆಯರ ಬಳಗದಲ್ಲಿ ನಮ್ಮ ಚಾರಣದ ವಿಷಯ ಹೇಳಿದಾಗ ಎಲ್ಲರೂ ಮಗಳನ್ನು ಕರೆದುಕೊಂಡು ಹೋಗುವುದು ತುಂಬಾ ರಿಸ್ಕ್, ಬೆಟ್ಟದ ತಪ್ಪಲಿನಲ್ಲಿ ಉಸಿರಾಟದ ಸಮಸ್ಯೆ ಬರಬಹುದು ಎಂದೆಲ್ಲಾ ಕೇಳಿದಾಗ ಇದೊಂದು ಹುಚ್ಚು ನಿರ್ಧಾರವಾಯಿತೆ ಎಂದು ಹೆದರಿದ್ದಿದೆ. ಆದರೆ ಮಗಳು ಭಾರೀ ಉತ್ಸಾಹದಲ್ಲಿ ಬೆಟ್ಟದ ತುದಿಯ ವರೆಗೆ ನಾನೇ ಹತ್ತುತ್ತೇನೆ ಎಂದು ಕನಸು ಕಾಣುತ್ತಿದ್ದಳು. ಮತ್ತೆ ನನಗೆ ತುಂಬಾ ಆಸೆ ಇದ್ದ ಕಾರಣ ದೇವರ ಮೇಲೆ ಭಾರ ಹಾಕಿ ಹತ್ತೋಣಾ ಎಂದು ರಿಸ್ಕ್ ನ ಹೆದರಿಕೆ ಎಲ್ಲಾ ದೇವರ ಮೇಲೆ ಹಾಕಿದ್ದಾಯಿತು.
ಯೂ- ಟ್ಯೂಬ್ ನಲ್ಲಿ ವೀಡಿಯೋ ಗಳನ್ನೆಲ್ಲಾ ನೋಡಿ, ಶಾಲೆಗೆ ಹೋಗುವಾಗ ಕಂಚಿನಕಟ್ಟೆ ಗುಡ್ಡೆ ಹತ್ತಿದವಳಿಗೆ ಇದೊಂದು ಲೆಕ್ಕವಾ ಎಂದೆಲ್ಲಾ ಬೆನ್ನು ತಟ್ಟಿಕೊಂಡಿದ್ದಾಯಿತು. ಯಾವುದಕ್ಕೂ ಬೆಟ್ಟ ಹತ್ತುವಾಗ ಕೈಕಾಲು ನೋಯುವುದು ಬೇಡ ಎಂದು ದಿನವೂ ಹೆಚ್ಚೇ ತುಪ್ಪ ಹಾಲು ಸೇವನೆ ಎಲ್ಲಾ ಆಯಿತು.
ಅಂತೂ ಚಾರಣದ ದಿನ ಬಂದೇ ಬಿಟ್ಟಿತು. ಮೌಂಟ್ ಫೂಜಿ ಅನ್ನು ಬೇರೆ ಬೇರೆ ಟ್ರೇಲ್ ಗಳಲ್ಲಿ ಹತ್ತಬಹುದು. ನಾವು ಆರಿಸಿ ಕೊಂಡಿದ್ದು ಯೊಶಿಡ ಟ್ರೇಲ್. ನಾವು ಹೊರಟ ಬಸ್ಸು ಮೊದಲೇ ನಿಗದಿ ಮಾಡಿದಂತೆ, ಒಂದು ನಿಮಿಷವೂ ಆಚೆ ಈಚೆ ಆಗದೆ ಮಧ್ಯಾಹ್ನ 2.30 ಗೆ 5 ನೇ ಸ್ಟೇಶನ್ ಅನ್ನು ತಲುಪಿತು. ಇನ್ನೂ 5 ನೇ ಸ್ಟೇಶನ್ ನಿಂದ ತಪ್ಪಲು ಅಂದರೆ 10 ನೇ ಸ್ಟೇಶನ್ ವರೆಗೆ ಚಾರಣ. ದಿನಕ್ಕೆ ಸುಮಾರು ೪೦೦೦ ದಷ್ಟು ಜನ ಇಲ್ಲಿ ಚಾರಣ ಮಾಡುತ್ತಾರೆ.
ದೊಡ್ಡ ಗೇಟ್ ಅನ್ನು ದಾಟಿ ಒಳ ಹೋಗುತ್ತಿದ್ದಂತೆಯೇ ಸುಂದರ ಹಸಿರು ಪ್ರಪಂಚ ತೆರೆದುಕೊಳ್ಳುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲ ಕಾಣ ಸಿಗುವ ನಯನ ಮನೋಹರ ವನ್ಯ ರಾಶಿ. ರಥವೇರಿ ಹೊರಟ ರಾಣಿಯರಂತೆ ಬೆಳ್ಳಿ ಮೋಡಗಳು. ಹುಮ್ಮಸ್ಸಿನಿಂದ ಹತ್ತುವ ಚಾರಣಿಗರ ಸಾಲು ಸಾಲು. ಪರಸ್ಪರ ಪ್ರೋತ್ಸಾಹಿಸಿ ಕೊಳ್ಳುತ್ತಾ "ಗನ್ಬತ್ತೆ (ಗುಡ್ ಲಕ್)" ಎಂದು ಹೇಳಿಕೊಳ್ಳುತ್ತಾ ಮುಂದೆ ಮುಂದೆ ನಡೆಯುತ್ತಿದ್ದರು. ನಮ್ಮ ಮಗಳು ಎರಡು ಕೋಲುಗಳನ್ನು ಹಿಡಿದು ನಡೆಯುತ್ತಿರುವುದನ್ನು ನೋಡಿ ಎಲ್ಲರೂ ಖುಷಿ ಪಟ್ಟರು. "ಫೈಟರ್, ಫೈಟರ್" ಎಂದು ಹೊಗಳಿದರು. "ಕವಾಯಿ ನೇ (ಕ್ಯೂಟ್)" ಎಂದು ಪ್ರಶಂಸಿಸಿದರು. ಅವಳು ಬಲು ಉತ್ಸಾಹದಿಂದ "ಫೂಜಿ ಸಾನ್‌ಗೆ ಜೈ" ಎಂದು ಜಯಕಾರ ಹಾಕುತ್ತಾ ನಡೆದಳು. ದಾರಿಯಲ್ಲಿ ಕಾಣಸಿಗುವವರಿಗೆಲ್ಲ "ಗನ್ಬತ್ತೆ (ಗುಡ್ ಲಕ್)" ಎಂದು ಹೇಳುತ್ತಾ ತಾನು ಕಲಿತ ಹೊಸ ಪದವನ್ನು ಉರು ಹಾಕುತ್ತಿದ್ದಳು.
ಜಪಾನಿನ ಚಾರಣ ಪ್ರದೇಶಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಸುಮಾರು 85 ವರ್ಷ ಪ್ರಾಯದ ಜನರನ್ನೂ ನೋಡಬಹುದು. ನಮ್ಮ ಹಿಂದೆಯೇ ಸುಮಾರು 40 ಜನರಿದ್ದ ಚಾರಣಿಗರ ತಂಡವೊಂದು ಇತ್ತು. ತಿರುವು ಮುರುವು ಇದ್ದ ದಾರಿಯಲ್ಲಿ ಇಣುಕಿ ಇಣುಕಿ ಅವರಿಗೆಲ್ಲಾ ಟಾಟಾ ಮಾಡುವುದು ಮಗಳ ಕೆಲಸವಾಯಿತು.
ದಾರಿಯುದ್ದಕ್ಕು ನೋಡಿದಷ್ಟೂ ಮುಗಿಯದ ಪ್ರಕೃತಿ ಸೌಂದರ್ಯ. ಸಾಲು ಸಾಲು ಮೋಡಗಳನ್ನು ನೋಡಿ ಕಳೆದು ಹೋಗುವ ಭಾವ. ನಾವು ಎತ್ತರದಲ್ಲಿ ಇದ್ದ ಕಾರಣ ಮೋಡಗಳೆಲ್ಲಾ ನಮಗಿಂತ ಕೆಳಗೆ ಇರುವಂತೆ ಕಾಣುತ್ತಿತ್ತು. ನೆಲದಲ್ಲಿ ನಿಂತು ಕತ್ತೆತ್ತಿ ಮೋಡ ನೋಡಿದ್ದವಳಿಗೆ ಹೇಗೆ ಮೋಡಗಳೆಲ್ಲಾ ಕೆಳಗೆ ಹೋಯಿತು ಎನ್ನುವ ವಿಷಯ ಮಾತ್ರ ಪುಟಾಣಿ ತಲೆಗೆ ಅರ್ಥವಾಗಲೇ ಇಲ್ಲ. ನಮ್ಮದೇ ನಿಧಾನ ಗತಿಯಲ್ಲಿ ನಡೆದು 6.30 ಗಂಟೆಗೆ 7ನೇ ಸ್ಟೇಶನ್ ಅಲ್ಲಿ ನಾವು ಉಳಿದುಕೊಳ್ಳುವ ಜಾಗವನ್ನು ತಲುಪಿದೆವು. ಸಣ್ಣ ವಸತಿ ಪ್ರದೇಶದಲ್ಲಿ ಎಲ್ಲರಿಗೂ ಮಲಗುವ ವ್ಯವಸ್ಥೆ. ಅಲ್ಲಿ ಎಲ್ಲರೂ ಬೇಗ ಊಟ ಮುಗಿಸಿ ಮಲಗಿ ಬಿಡುತ್ತಾರೆ.
ಹಸಿದ ಹೊಟ್ಟೆಗೆ ಅವರು ನೀಡಿದ ಬೀನ್ ಕರೀ ಮತ್ತು ಅನ್ನ, ಹೊಟ್ಟೆಯ ಯಾವ ಮೂಲೆಗೂ ಸಾಕಾಗಲಿಲ್ಲ. ಮನೆಯಿಂದ ತೆಗೆದುಕೊಂಡ ಹೋದ ಚಪಾತಿಯೇ ಪರಮಾನ್ನವಾದಾಗ ನನಗೊಂದು ಕೊಂಬು ಬಂದಿದ್ದು ನಿಜ. ಸುಮಾರು 7 ಗಂಟೆಯಿಂದ 50-60 ಜನರಿದ್ದ ಕೋಣೆಯಲ್ಲಿ ನೀರವ ಮೌನ. ನಮ್ಮ ಮಾತಿನ ಪಟಾಕಿ ಹೇಗೆ ಮಲಗುತ್ತಾಳೋ ಎಂದು ಚಿಂತಿಸುತ್ತಿದ್ದವಳಿಗೆ ಕ್ಷಣ ಮಾತ್ರದಲ್ಲಿ ಸ್ಲೀಪಿಂಗ್ ಬ್ಯಾಗ್ ನಲ್ಲಿ ನಿದ್ದೆ ಮಾಡಿ ಶಾಕ್ ಕೊಟ್ಟಳು. ಬೆಳಗಿನ ಸೂರ್ಯೋದಯವನ್ನು ಬೆಟ್ಟದ ತುದಿಯಲ್ಲಿ ನೋಡಬೇಕೆಂದರೆ ಮಧ್ಯರಾತ್ರಿ 11 ಗಂಟೆಗೆ ಪುನಹ ಬೆಟ್ಟ ಹತ್ತಲು ಪ್ರಾರಂಭಿಸಬೇಕು ಎಂದು ತಿಳಿದು ಅಲಾರಾಂ ಇಟ್ಟು ಮಲಗಿದರೆ ನಿದ್ರೆ ಪರಾರಿ. ಅಲಾರಾಂ ಗೆ ಎಚ್ಚರವಾಗದಿದ್ದರೆ, ಮಗಳು ಸರಿಯಾಗಿ ನಿದ್ರಿಸದಿದ್ದರೆ,ಮಗಳು ಹಾಸಿಗೆಯಲ್ಲಿ ಉಚ್ಚಿ ಹೊಯ್ದರೆ, ಬೆಟ್ಟ ಹತ್ತುವಾಗ ನಮ್ಮ ಬ್ಯಾಟರಿ ಕೈ ಕೊಟ್ಟರೆ! ಅಬ್ಬಬ್ಬಾ ಈ ಯೋಚನೆಗಳೆಲ್ಲಾ ಈಗ ಯಾಕೆ ಎಂದು ಹಿಡಿ ಶಾಪ ಹಾಕಿ ಕಷ್ಟದಲ್ಲಿ ನಿದ್ರಿಸಿದೆ.
ಅಂತೂ 11.30 ಗೆ ನಕ್ಷತ್ರಗಳಿಂದ ಹೊಳೆಯುತ್ತಿದ್ದ ಆಕಾಶದಡಿಯಲ್ಲಿ ಪ್ರಕೃತಿಯ ಮೌನದ ಸಂಗೀತದಲ್ಲಿ, ದೊಡ್ಡ ದೊಡ್ಡ ಬಂಡೆಗಳ ದಾರಿಯಲ್ಲಿ ನಮ್ಮ ಪ್ರಯಾಣ ಮತ್ತೆ ಶುರುವಾಯಿತು. ದೊಡ್ಡ ದೊಡ್ಡ ಕಲ್ಲು ಬಂಡೆಗಳ ಸಾಹಸದ ದಾರಿ. ಯಾವ ಯೂ- ಟ್ಯೂಬ್ ವೀಡಿಯೋ ಗಳಲ್ಲಿಯೂ ಈ ದಾರಿಯ ಬಗ್ಗೆ ತೋರಿಸಿರಲಿಲ್ಲವಲ್ಲಾ ಎಂದು ಕೋಪಿಸಿಕೊಂಡ ಮರು ಕ್ಷಣವೇ, ಈ ದಾರಿಯಲ್ಲಿ ನಡೆಯುವಾಗ ವೀಡಿಯೋ ಮಾಡಿಕೊಂಡು ನಡೆದರೆ ಶಿವನ ಪಾದವೇ ಗತಿ ಎಂದು ನನ್ನನ್ನು ನಾನೇ ಸಮಾಧಾನ ಮಾಡಿಕೊಂಡೆ. ಕೈ ಅಲ್ಲಿ ಡಿಜಿಟಲ್ ವಾಚ್ ಇದ್ದ ಕಾರಣ ಚಾರಣದ ಮೋಡ್‌ಗೆ ಹಾಕಿ ನಡೆಯಲು ಶುರು ಮಾಡಿದ್ದರಿಂದ, ಆಗಾಗ ಹೃದಯ ಬಡಿತ 180 ತಲುಪಿದಾಗ ನಿಂತು ಸುಧಾರಿಸಿಕೊಂಡು ನಡೆಯಲು ಶುರು ಮಾಡಿದೆ. 8 ನೇ ಸ್ಟೇಶನ್ ನಿಂದ ಮುಂದಿನ ದಾರಿ ಸ್ವಲ್ಪ ಸುಲಭವಾಯಿತು. ಜಪಾನಿಯರು ಮಾತ್ರವಲ್ಲದೇ ಹಲವು ವಿದೇಶೀಯರೂ ಈ ಚಾರಣದ ಸೊಬಗನ್ನು ಅನುಭವಿಸಲು ಬಂದಿದ್ದರು. ಆ ದಿನದ ಚಾರಣದಲ್ಲಿ ಬಹುಶಃ ನಮ್ಮ ಮಗಳೇ ಅತ್ಯಂತ ಕಿರಿಯಳು. ಹಲವು ಜನರು ಅವಳ ಫೋಟೋವನ್ನೂ, ಆಗಾಗ ಅವಳನ್ನು ಹೆಗಲಲ್ಲಿ ಹೊತ್ತಿದ್ದ ನನ್ನ ಗಂಡನ ಫೋಟೋವನ್ನೂ ಕ್ಲಿಕ್ಕಿಸಿದಾಗ 'ಛೇ! ಎಲ್ಲರ ಲಗೇಜ್ ಹೊತ್ತ ನನ್ನನ್ನು ಯಾರೂ ನೋಡಲಿಲ್ಲವಲ್ಲಾ' ಎಂದು ಒಂದು ಗಳಿಗೆ ಪಿಚ್ಚೆನಿಸಿತು.
9 ನೇ ಸ್ಟೇಶನ್ ತಲುಪುತ್ತಿದ್ದಂತೆ ಬೆಟ್ಟದ ತುದಿ ಕಾಣಿಸುತ್ತಿತ್ತು. ಮತ್ತೊಂದು ಕಡೆ ಸೂರ್ಯನ ಸ್ವಾಗತಕ್ಕೆ ರಂಗೇರಿದ ಆಕಾಶ. ಅಲ್ಲಲ್ಲಿ ಹಾಲು ಚೆಲ್ಲಿದಂತೆ ಮೋಡಗಳ ರಾಶಿ. ಈ ಧೀಮಂತ ನಿಷ್ಕಲ್ಮಶ ಲೋಕದೆದುರು ತಾನು, ತನ್ನಿಂದ ಎಂಬ ಭಾವವೆಲ್ಲಾನಿಸರ್ಗದ ಕಾವ್ಯದಲ್ಲಿ ಕರಗಿ ಹೋಯಿತು. ಕಣ್ಣೆದುರಲ್ಲಿಯೇ ಕೆಂಪು ಚೆಂಡಿನಂತೆ ಹುಟ್ಟಿ ಬರುತ್ತಿದ್ದ ಅರುಣನ ನವ ಕಿರಣ ಹೊಸ ಭಾವ ಬರೆದಿತ್ತು. ಅಪರೂಪದ ಕ್ಷಣ ಅಂತರಂಗದಲ್ಲಿ ಮೆಲ್ಲಗೆ ಇಳಿಯತೊಡಗಿತು. ಅಲ್ಲಿ ಒಂದು ಜೋಡಿ ಪ್ರೇಮ ನಿವೇದನೆ ಮಾಡಿಕೊಂಡು ತಬ್ಬಿಕೊಂಡು ಅಳುತ್ತಿದ್ದರು. ಹಾಗೇ ನನ್ನವನ ಮುಖ ನೋಡಿದೆ. ಮಗಳನ್ನು ಎತ್ತಿಕೊಂಡು ಹೊರಟವನು ಹುಬ್ಬಿನ ಸನ್ನೆಯಲ್ಲಿಯೇ ಏನೇ ಎಂದು ಕೇಳಿದ. ಏನಿಲ್ಲ ಎಂದು ಗರ್ವ ತೋರಿ, ಬೆಟ್ಟದ ತುದಿ ನೋಡಿ ಆಯಾಸದ ಹೆಜ್ಜೆಯನ್ನು ಲೆಕ್ಕ ಹಾಕುತ್ತಾ ನಡೆಯತೊಡಗಿದೆ. ದೇಹ ದಣಿದಿತ್ತು, ಕನಸು ನನಸಾದ ಕ್ಷಣಕ್ಕೆ ಮನಸ್ಸು ನವಿಲಿನಂತೆ ಕುಣಿಯುತ್ತಿತ್ತು.
- ವಾರಿಜಾ ಹೆಬ್ಬಾರ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ