ಮಾತೃಭಾಷೆಗೆ ಪರ್ಯಾಯ ಇಲ್ಲ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಅಮ್ಮನ ಸಂಬಂಧ ಮತ್ತು ಉಪ್ಪಿನ ರುಚಿಗೆ ಪರ್ಯಾಯ ಇಲ್ಲ; ಅಂತೆಯೇ ಎಷ್ಟೇ ಭಾಷೆಗಳಿದ್ದರೂ ಮಾತೃಭಾಷೆಗೆ ಪರ್ಯಾಯವಾಗಲಾರದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 44ನೇ ದಿನವಾದ ಶುಕ್ರವಾರ ಉಪ್ಪಿನಂಗಡಿ ಮಂಡಲದ ಪುತ್ತೂರು, ಬೆಟ್ಟಂಪಾಡಿ, ಪಂಜ, ಚೊಕ್ಕಾಡಿ, ಬೆಳ್ಳಾರೆ ಮತ್ತು ಧರ್ಬೆ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.


ವಿಶ್ವದ ಯಾವುದೇ ಭಾಷೆಗಳಿಗಿಂತ ಸಮೃದ್ಧ ಭಾಷೆ ಕನ್ನಡ. ಕನ್ನಡದಲ್ಲಿ ಶಬ್ದ ದಾರಿದ್ರ್ಯ ಅಥವಾ ಶಬ್ದಗಳಿಗೆ ಬಡತನ ಇಲ್ಲ. ಆದಾಗ್ಯೂ ಪರಕೀಯ ಶಬ್ದಗಳಿಂದ ನಮ್ಮ ತಾಯ್ನುಡಿಯನ್ನು ಕಲುಷಿತಗೊಳಿಸದೇ ಭಾಷೆಯ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಭಾರತೀಯ ಭಾಷೆಗಳು ವಾಗ್ದೇವತೆ ಸರಸ್ವತಿಯ ಪ್ರೇರಣೆಯಿಂದ ಬಂದದ್ದು. ತಾಯಿ, ತಾಯ್ನಾಡು ಮತ್ತು ವಾಗ್ದೇವತೆಗೆ ಗೌರವ ನೀಡುವುದು ನಮ್ಮ ಕರ್ತವ್ಯ. ನಮ್ಮ ಭಾಷೆಯ ಪಾವಿತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಆದ್ದರಿಂದ ಇದೇ ಪರಕೀಯ ಶಬ್ದಗಳನ್ನು ವಿಸರ್ಜಿಸುವ ಪ್ರತಿಜ್ಞೆ ಕೈಗೊಂಡು ಭಾಷೆಯ ಶುದ್ಧತೆಗೆ ಗಮನ ಹರಿಸೋಣ ಎಂದು ಕರೆ ನೀಡಿದರು.


ಶಂಕರರು ಸಹಸ್ರ ವರ್ಷಗಳ ಹಿಂದೆ ಬೆಳಗಿದ ದೀಪದ ಬೆಳಕಿನಲ್ಲಿ ನಮ್ಮತನದತ್ತ ಮರಳೋಣ. ಪರಕೀಯತೆ ಬಿಟ್ಟು ಸ್ವಂತಿಕೆಯತ್ತ ನಡೆಯೋಣ ಎಂದು ಆಶಿಸಿದರು.


ದಿನಕ್ಕೊಂದು ಆಂಗ್ಲಪದ ತ್ಯಾಗ ಅಭಿಯಾನದಲ್ಲಿ ಇಂದು ವ್ಯಾಪಕವಾಗಿ ಬಳಕೆಯಲ್ಲಿರುವ ಸರ್, ಮೇಡಂ ಪದಗಳನ್ನು ಬಿಡೋಣ. ಇದು ಗುಲಾಮಗಿರಿಯ ಸಂಕೇತ. ಕನ್ನಡದಲ್ಲಿ ಗೌರವಸೂಚಕ, ಸಂಬಂಧ ಸೂಚಕ ಪದಗಳು ಹೇರಳವಾಗಿದ್ದು, ಅದನ್ನು ಮತ್ತೆ ಚಾಲ್ತಿಗೆ ತರೋಣ ಎಂದರು.


ಗೌರವಾನ್ವಿತರನ್ನು ಮಹೋದಯ, ಮಹಾನುಭಾವ ಎಂದು ಸಂಬೋಧಿಸಬೇಕು. ಅಂತೆಯೇ ನಮ್ಮ ಆಡು ಭಾಷೆಯಲ್ಲಿ ಬಂದ ಅತಿಥಿಗಳ ವಯಸ್ಸನ್ನು ನೋಡಿಕೊಂಡು ಅಣ್ಣ, ಅಕ್ಕ, ತಮ್ಮ, ತಂಗಿ, ಅಜ್ಜ, ಮಾವ, ಭಾವ ಹೀಗೆ ಆತ್ಮೀಯತೆಯನ್ನು ಸೂಚಿಸುವ ಹಲವು ಪದಗಳನ್ನು ಬಳಸುತ್ತೇವೆ. ಮಕ್ಕಳನ್ನು ಕೂಡಾ ಪುಟ್ಟ, ಪುಟ್ಟಿ, ಮಗ, ಮಗಳು ಎಂದು ಸಂಬೋಧಿಸುವ ಕ್ರಮ ಇದೆ. ಆದರೆ ಇಂಗ್ಲಿಷ್‍ನ ಅಂಕಲ್, ಆಂಟಿ ಎಂಬ ಪದಗಳು ಎಲ್ಲ ಸಂಬಂಧಗಳನ್ನು ನುಂಗಿಹಾಕುವಂಥವು. ಸಂಬಂಧ ಸೂಚಕ, ವೈವಿಧ್ಯಮಯ ಪದಗಳನ್ನು ಬಳಸುವ ಮೂಲಕ ಸಂಬಂಧ ಬೆಸೆಯುವ ಕಾರ್ಯ ಮಾಡೋಣ ಎಂದು ಸೂಚಿಸಿದರು.


ದಕ್ಷಿಣ ಕನ್ನಡ ಬಿಜೆಪಿಯ ಹಿರಿಯ ಮುಖಂಡರಾದ ಮುರಳಿ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ ಶ್ರೀಗಳಿಂದ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ಧರ್ಬೆ, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ, ಎನ್.ಆರ್.ರಾಘವೇಂದ್ರ, ಎಂಜಿನಿಯರ್ ವಿಷ್ಣು ಬನಾರಿ, ವೇದಮೂರ್ತಿ ಗುರು ಭಟ್ಟರು, ಜಿ.ಎಲ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ವೇದಮೂರ್ತಿ ಪರಮೇಶ್ವರ ಮಾರ್ಕಂಡೆಯವರ ಅಧ್ವರ್ಯದಲ್ಲಿ ಗೋಕರ್ಣದ ಭದ್ರಕಾಳಿ ಮಂದಿರದಲ್ಲಿ ಚಂಡಿಕಾ ಹವನ ನಡೆಯಿತು. ಬಳಿಕ ಶ್ರೀಗಳು ಭದ್ರಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top