ಅರಣ್ಯ ಇಲಾಖೆಯ ಅಂಬುಲೆನ್ಸ್ (ambulance-ecnalubma) ಶಬ್ದ ಕೇಳಿ, ಅಂಗಳಕ್ಕೆ ಇಳಿಯೋಕು ಹೆದರಿಕೆ ಆಗ್ತಾ ಇದೆ.
ಮಲೆನಾಡಿನಲ್ಲಿ ನಿತ್ಯ ಭಯ ಹುಟ್ಟಿಸುತ್ತಿರುವ ಆನೆಗಳಿಗೆಲ್ಲ ಯಾವುದಾದರೂ ಕ್ರಮ ಕೈಗೊಳ್ಳುವ ಯೋಜನೆಗಳು ಅರಣ್ಯ ಇಲಾಖೆಯಲ್ಲಿ ಇವೆಯಾ? ಇದ್ದರೆ ಏನು ಯೋಜನೆಗಳು?
ಕಾರ್ಯಗತಗೊಳ್ಳದ ಕೆಲವು ಯೋಜನೆಗಳು ಪತ್ರಿಕೆಗಳಲ್ಲಿ ಪ್ರಿಂಟ್ ಆಗ್ತಾ ಇವೆ!
ಇವುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು!
a) ಆನೆಗಳನ್ನು ಹಿಡಿದು ಸ್ಥಳಾಂತರಿಸುವುದು?
b) ಆನೆಗಳನ್ನು ಓಡಿಸಿ ಸ್ಥಳಾಂತರಿಸುವುದು?
c) ಅವುಗಳನ್ನು ಎಲ್ಲಿಗೆ ಸ್ಥಳಾಂತರಿಸುವುದು?
ಇದರ ಬಗ್ಗೆ ಫರ್ದರ್ ಮಾಹಿತಿಗಳು ಎಲ್ಲೂಲಭ್ಯವಿಲ್ಲ!
ಆನೆಗಳನ್ನು ಹೇಗೇ ಸ್ಥಳಾಂತರ ಮಾಡುವುದಾದರೂ ಅರಣ್ಯ ಸಚಿವರಿಂದ ಒಂದೊಂದೇ ಆನೆಗೆ ಆದೇಶ ಬರಬೇಕಾ?
ಹಾಗೆ ಆದೇಶ ಹೊರಡಿಸಲು ನಗರ ಪರಿಸರವಾದಿಗಳ ಒಪ್ಪಿಗೆಯ ಅಭಿಪ್ರಾಯ ಬೇಕಾ?
ಅದಕ್ಕೆ ಮೊದಲು ಸ್ಥಳಿಯರ ಪ್ರತಿಭಟನೆಗಳು ದೊಡ್ಡ ಮಟ್ಟದಲ್ಲಿ ಆಗಬೇಕಾ?
ಒಂದು ಅನೆ ಹಿಡಿದು ಸ್ಥಳಾಂತರಿಸುವುದೋ, ಓಡಿಸಿ, ಓಡಿಸಿ, ಓಡಿಸಿ ಸ್ಥಳಾಂತರಿಸುವುದೋ ಮಾಡುವುದಕ್ಕೆ ಆ ಆನೆಯಿಂದ ಮಾನವ ಜೀವಗಳು ಕನಿಷ್ಟಪಕ್ಷ 5 ಬಲಿ ಆಗಬೇಕಾ?
ಅಥವಾ ನಿರಂತರ ಆನೆ ತಿರುಗಾಡುತ್ತಿರುವ ಪ್ರದೇಶಗಳಲ್ಲಿ ವಾಹನಕ್ಕೆ ಮೈಕ್ ಕಟ್ಟಿ, ಎಚ್ಚರಿಕೆ ಮಾಹಿತಿ ಕೊಡುವುದು ಮಾತ್ರವೆ ಅರಣ್ಯ ಇಲಾಖೆಯ ಮುಂದಿರುವ ಏಕೈಕ ಯೋಜನೆಯಾ?
ಇನ್ನು ಆನೆ ಮಾಡುತ್ತಿರುವ ಧಾಳಿಯಿಂದ, ಅವುಗಳ ವಾಯುವಿಹಾರ ಸಂಚಾರದಿಂದ ಆಗುತ್ತಿರುವ ಬೆಳೆ ನಾಶ, ಗಿಡ ಮರಗಳ ನಾಶ, ಬೇಲಿ ನಾಶ... ನಷ್ಟಗಳಿಗೆ ಯಾವುದಾದರೂ ಪರಿಹಾರ ಕೊಡುವ ಯೋಜನೆಗಳು ಅರಣ್ಯ ಇಲಾಖೆಯಲ್ಲಿ ಇವೆಯಾ!? ಎಷ್ಟು? ಯಾವುದಕ್ಕೆ ಎಷ್ಟು? ಹೇಗೆ? ಕೆಲವು ಸ್ಥಳಗಳಲ್ಲಿ ಆನೆ ಈ ಮಳೆಗಾಲದಲ್ಲಿ ತಿರುಗಾಡಿದರೆ ಧರ್ಮಸ್ಥಳದಲ್ಲಿ ಉತ್ಖನನ ಮಾಡಿದ ಗುಂಡಿಗಳಂತೆ ಖಾಸಗಿ ಕೃಷಿ ಭೂಮಿಯಲ್ಲಿ ಗುಂಡಿಗಳು ಬಿದ್ದು ಡ್ಯಾಮೇಜ್ ಆದರೆ ಅದಕ್ಕೆ ಯಾವ ರೀತಿಯ ಸ್ಪಂದನೆ ಅರಣ್ಯ ಇಲಾಖೆಯಿಂದ- ಸರಕಾರದಿಂದ ಭರಿಸಲಾಗುತ್ತದೆ? ಇವಕ್ಕೆಲ್ಲ ಯೋಜನೆ, ನಿಯಮಾವಳಿಗಳು ಇವೆಯಾ?
**
ಎರಡು ಭಯೋತ್ಪಾದಕ-ನರ ಹಂತಕ-ಉಗ್ರಗಾಮಿ- ಪುಂಡ ಆನೆಗಳನ್ನು ಹಿಡಿಯಲಾಗಿದೆ ಎಂದು ವರದಿಯಾಗಿವೆ.
ಸರಿ. ಆದರೆ ಈಗ ನಿತ್ಯ ಅಲ್ಲಲ್ಲಿ ಪಾದ ಯಾತ್ರೆ ಮಾಡಿ ಭಯ ಹುಟ್ಟಿಸುತ್ತಿರುವ (ಹೊರಗೆ ತಿರುಗಾಡಬೇಡಿ ಎಂದು ಇಲಾಖೆಯೂ ಎಚ್ಚರಿಸುವಂತೆ ಮಾಡುತ್ತಿರುವ) ಆನೆಗಳಿಂದ ಜೀವ ಹಾನಿ ಆಗುವುದಿಲ್ವಾ? ಅವೇನು ಸಾತ್ವಿಕ ಆನೆಗಳಾ? ಅವುಗಳು ಸಾಕಿ-ಪಳಗಿಸಿ-ಬಿಟ್ಟ ಆನೆಗಳಾ? ಅವುಗಳ ಬಗ್ಗೆ ಹೆಚ್ಚು ಹೆದರುವ ಅಗತ್ಯ ಇಲ್ವಾ? ಅಕಸ್ಮಾತ್ ಎದುರು ಬಂದರೆ 'ಆಗಾಗ ಶೃಂಗೇರಿ ಮಠದಲ್ಲಿ, ಮೈಸೂರು ದಸರಾದಲ್ಲಿ ಭಕ್ತಾದಿಗಳು ಮಾಡುವ ಹಾಗೆ' ಐದು ರುಪಾಯಿ ಕಾಯಿನ್‌ನ್ನು ಆನೆಯ ಸೊಂಡಲಿನ ತುದಿಯಲ್ಲಿ ಇಟ್ಟರೆ, ಆನೆಗಳು ನಮ್ಮ ತಲೆಯ ಮೇಲೆ ಸೊಂಡಿಲನ್ನು ಇಟ್ಟು 'ಆಶೀರ್ವಾದ' ಮಾಡಿ ಹೋಗುವಂತಹ ಆನೆಗಳಾ? ಯಾವ ಭಯವೂ ಇಲ್ಲದೆ ಇನ್ನು ಮುಂದೆ ನಾವು ಅವುಗಳ ಸಹಯೋಗದಲ್ಲಿ ಬದುಕಬೇಕಾ?
ತೋಟದ ಮಾಲಿಕರೇ ತೋಟಕ್ಕೆ ಹೋಗಲು ಹೆದರುವಾಗ, ಕೃಷಿ ಕಾರ್ಮಿಕರು ಕೃಷಿ ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ. ಆನೆಗಳಿಂದ ಈ ರೀತಿ ಅಘೋಷಿತ ಲಾಕ್‌ಡೌನ್ ಆದರೆ, ನೆಟ್ಟಿಗೆ ಜನ ಬರೊಲ್ಲ. ಅಡಿಕೆ ಉದುರು ಹೆರಕಲು ಆಳುಗಳು ಸಿಗೊಲ್ಲ, ಕಾಫಿ, ಮೆಣಸು ಕುಯ್ಯುವುದಕ್ಕೆ ಕಾರ್ಮಿಕರು ಆನೆ ಭಯದಿಂದ ನಿರಾಕರಿಸಿದರೆ ಕೃಷಿ ಕೆಲಸಗಳ ಕತೆ ಏನು?
ವಾಟ್ಸಪ್‌ನಲ್ಲಿ ಗಂಟೆಗೊಂದೊಂದು ವೀಡಿಯೋ ಬರ್ತಾ ಇರೋದ್ ನೋಡಿದರೆ ಮಲೆನಾಡ ನೆಲವಾಸಿಗಳು ತೋಟ, ಗದ್ದೆಗೆ ಹೋಗೋಕೂ ಹೆದರಿಕೆ ಆಗ್ತಿದೆ, ಪ್ಯಾಟೆಗೆ ಹೋಗಿ ಬರೋಕು ಹೆದರಿಕೆ ಆಗ್ತಿದೆ. ಹಬ್ಬಗಳು ಶುರುವಾಗಿವೆ, ಅಕ್ಕ ತಂಗಿಯರ ಮನೆಗೆ ಅರಿಶಿನ-ಕುಂಕುಮ ಕೊಡಲು ಹೋಗಿ ಬರುವುದು ಹೇಗೆ? ಗಣಪತಿ-ನವರಾತ್ರಿ ಹಬ್ಬಗಳಲ್ಲಿ ದಿನಾ ಅಲ್ಲಲ್ಲಿ ಸಂಜೆ ನೆಡೆಯುವ ಪೂಜಾ ಕಾರ್ಯಕ್ರಮ, ಪ್ರಸಾದ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಯಾರು ಎಷ್ಟೇ ಧೈರ್ಯ ಹೇಳಿದರೂ ಜೀವ ಇಟ್ಕೊಂಡು ಹೋಗಿ ಬರುವುದು ಹೇಗೆ?
ದೀಪಾವಳಿ, ಅಂಟಿಗೆ ಪೆಂಟಿಗೆ, ಜಾನಪದ, ಕೋಲು ಹಚ್ಚುವುದು, ನವರಾತ್ರಿ ತೆಪ್ಪೋತ್ಸವ, ಜಾತ್ರೆಗಳು, ಯಕ್ಷಗಾನ, ತಾಳಮದ್ದಳೆ, ಆರ್ಕೇಷ್ಟ್ರಾ, ಕಾವ್ಯವಾಚನ, ಹರಿಕತೆ, ಸಂಗೀತ, ಭರತನಾಟ್ಯ, ನಾಟಕ, ಫಸ್ಟ್&ಸೆಕೆಂಡ್ ಷೋ ಸಿನಿಮಾಗಳನ್ನೆಲ್ಲ ಇನ್ಮುಂದೆ ನಾವು ಅಂದರೆ ಮಲೆನಾಡ ನೆಲವಾಸಿಗಳು ಬರಿ ಟಿವಿಯಲ್ಲಿ ನೋಡಬೇಕಾ?
ಸಂಜೆ ಹೊತ್ತಿನ ದೇವಸ್ಥಾನದ ಗಂಟೆ, ಮಸೀದಿಯ ಆಜಾನ್, ಚರ್ಚ್‌ನ ಬೆಲ್ ಎಲ್ಲವುದೂ ಅಪಾಯದ ಧ್ವನಿಗಳಾಗಿ, ಅರಣ್ಯ ಇಲಾಖೆಯ ಎಚ್ಚರಿಕೆಯ ಮೈಕಿನ ಧ್ವನಿಗಳಂತೆ ಕೇಳ್ತಾ ಇದೆ.
ಮುಂದೇನು ಗತಿ?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


