ಉಳ್ಳಾಲ: ಸಮಾಜದ ಉನ್ನತಿ ಸಾಧ್ಯವಾಗಬೇಕಾದರೆ ನಾವೆಲ್ಲರೂ ಒಮ್ಮತದಿಂದ ಹಾಗೂ ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಇದರ ಜಿಲ್ಲಾಧ್ಯಕ್ಷ ಲಯನ್ ಅನಿಲ್‌ದಾಸ್ ಅಂಬಿಕಾರೋಡ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಸೈಗೋಳಿ ಶ್ರೀ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ ರವಿವಾರ ಏರ್ಪಡಿಸಿದ್ದ ಕುಲಾಲ ಕುಂಬಾರರ ವಿಶೇಷ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕುಲಾಲ ಸಮಾಜದ ಸಂಘಟನೆ ಹಾಗೂ ಜವಾಬ್ದಾರಿ ಮತ್ತು ಸರಕಾರದ ಯೋಜನೆಗಳನ್ನು ಸಮಾಜ ಬಂಧುಗಳಿಗೆ ತಲುಪಿಸುವಲ್ಲಿ ಶ್ರಮಿಸಬೇಕಾದ ಅಗತ್ಯವಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಮಾಜ ಬಂಧುಗಳು ಎಲ್ಲರೂ ಒಟ್ಟು ಸೇರಿ ಕೆಲಸ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದವರು ಸಲಹೆಯಿತ್ತರು. ಕುಲಾಲ ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕು, ಬಡತನದಿಂದ ಬಳಲುತ್ತಿರುವವರನ್ನು ಗುರುತಿಸಿ ಸಹಾಯಹಸ್ತ ನೀಡುವ ಕಾರ್ಯ ನಡೆಯಬೇಕಾಗಿದೆ. ಮಾತ್ರವಲ್ಲದೆ ಸರಕಾರದ ವಿಮೆ, ಆರೋಗ್ಯ, ಆರ್ಥಿಕ ನೆರವಿನ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಅರಿವು ಮೂಡಿಸಬೇಕಾಗಿದೆ ಎಂದವರು ಹೇಳಿದರು.
ಯುವ ಸಾಹಿತಿ ಹಾಗೂ ಸಂಶೋಧಕರಾದ ಮಹೇಶ್ ಕುಲಾಲ್ ಅರ್ತಿಮೂಲೆ ಪಾಲ್ಗೊಂಡಿದ್ದರು. ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.
ಯುವವೇದಿಕೆ ಉಳ್ಳಾಲ ಸಮಿತಿಯ ಅಧ್ಯಕ್ಷರಾದ ನವೀನ್ ಕುಲಾಲ್ ಪಿದಮಲೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಮನಸ್ಸುಗಳು ಒಗ್ಗೂಡಿ ಸಮಾಜದ ಏಳಿಗೆಗಾಗಿ ದುಡಿಯಬೇಕಾಗಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಮಾಜದ ಹಿನ್ನಡೆಗೆ ಅವಕಾಶ ನೀಡುವಂತಾಗಬಾರದು. ಸಮಾಜದ ಏಳಿಗೆಯೇ ನಮ್ಮ ಧ್ಯೇಯವಾಗಿರಬೇಕು. ಸಮಾಜದ ಸಂಘಟನೆಗಳು ಒಂದಕ್ಕೊಂದು ಪೂರಕವಾಗಿ ಸಮುದಾಯದ ಉನ್ನತಿ ಸಾಧನೆಯ ಕಾರ್ಯದಲ್ಲಿ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವಾ ಮನೋಭಾವ ನಮ್ಮೆಲ್ಲರದಾಗಬೇಕು ಎಂದರು.
ಹಿರಿಯರಾದ ಸುಂದರ ಕುಲಾಲ್ ಕೊಡಕಲ್ಲು, ಜಯ ಕುಲಾಲ್ ಪಾದಲ್ಪಾಡಿ, ಕೊಲ್ಯ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿತ್ ಉಚ್ಚಿಲ್, ಕುಲಾಲ ಸಂಘ ಕೊಲ್ಯದ ಸೇವಾ ದಳಪತಿ ಹಾಗೂ ಯುವವೇದಿಕೆಯ ಉಪಾಧ್ಯಕ್ಷ ಪ್ರವೀಣ್ ಕೊಲ್ಯ, ಯುವವೇದಿಕೆಯ (ಉಳ್ಳಾಲ) ಉಪಾಧ್ಯಕ್ಷ ಹರೀಶ್ ಕುಲಾಲ್ ಮೂಳೂರು, ಕೇಂದ್ರ ಸಮಿತಿ ಉಸ್ತುವಾರಿ ಜಯಂತ ಸಂಕೋಳಿಗೆ, ವಿನೋದ್ ಪಾದಲ್ಪಾಡಿ, ಚಿಂತನ್ ಮಜಲು ಕುರ್ನಾಡು, ವಿಶ್ವತ್ ಕೊಲ್ಯ, ಪುಟಾಣಿ ಶಾಸ್ತಾ ಉಪಸ್ಥಿತರಿದ್ದರು.
ಶ್ರೀ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಸೈಗೋಳಿ ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ ದಯಾನಂದ ಅಸೈಗೋಳಿ ಮತ್ತು ಹಿರಿಯ ವಕೀಲ ಉದಯಾನಂದ ಅಸೈಗೋಳಿ ಸ್ಥಳಾವಕಾಶ ಒದಗಿಸಿ ಸಹಕರಿಸಿದರು. ಹೇಮಚಂದ್ರ ಕೈರಂಗಳ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ