ಶ್ರೀ ಕೃಷ್ಣಂ ವಂದೇ ಜಗದ್ಗುರುಂ

Upayuktha
0


 

ಮ್ಮ ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ಬರುವ ಶ್ರೀಹರಿಯ ದಶಾವತಾರಗಳಲ್ಲಿ ಎಂಟನೆಯ ಅವತಾರವೇ ಶ್ರೀಕೃಷ್ಣನ ಅವತಾರವಾಗಿದೆ. ಈ ಅವತಾರವು ಉಳಿದೆಲ್ಲ ಅವತಾರಗಳಿಗಿಂತ ಬಹಳ ರೋಚಕ, ಪರಿಪೂರ್ಣ ಮತ್ತು ಪ್ರತಿ ಭಾರತೀಯರಿಗೆ ಅತೀ ಪ್ರೀಯವಾಗಲು ಕಾರಣ, ಕೃಷ್ಣನು ಜನಸಾಮಾನ್ಯರಂತೆ ಬಾಳಿ ಬದುಕಿ ನಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಹೇಗೆ ನಿರ್ವಹಿಸಬೇಕು ಎಂದು ಅತ್ಯಂತ ಸಮರ್ಥ ರೀತಿಯಿಂದ ಮಾರ್ಗದರ್ಶನ ಮಾಡುತ್ತಾನೆ.


ಇಡೀ ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಪರಮ ಪುರುಷನಾದ ಶ್ರೀಕೃಷ್ಣ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ದೇವಕಿ- ವಸುದೇವರ ಎಂಟನೇಯ ಮಗುವಾಗಿ ಜನಿಸಿದ. ಮಥುರೆಯ ದುಷ್ಟ ರಾಜ ಕಂಸ, ತನ್ನ ಸಹೋದರಿ ದೇವಕಿಯ ಗರ್ಭದಿಂದ ಜನಿಸುವ ಎಂಟನೆಯ ಮಗುವಿನಿಂದ ಮರಣವಿದೆ ಎಂಬ ವಿಷಯ ತಿಳಿದು  ದೇವಕಿ- ವಸುದೇವರನ್ನು ಸೆರೆಮನೆಯಲ್ಲಿ ಬಂಧಿಸಿಡುತ್ತಾನೆ. ಹೀಗಾಗಿ ಶ್ರೀಕೃಷ್ಣ ಆ ಕಾರಾಗೃಹದಲ್ಲೇ ಸರ್ವಾಭರಣಗಳಿಂದ ಅಲಂಕೃತ ಶಿಶುವಾಗಿ ಜನಿಸುತ್ತಾನೆ. ಎಲ್ಲರನ್ನೂ ಆಕರ್ಷಿಸುವ ಮನಮೋಹಕ ರೂಪದ ಶ್ರೀಕೃಷ್ಣನ ಜನನ ಈ ರೀತಿಯಿಂದ ಆದರೆ ಅವನು ಬೆಳೆಯುವ ಪ್ರತಿಹಂತದಲ್ಲೂ ಮರಣದ ಭೀತಿಯನ್ನು ಎದುರಿಸುತ್ತಾನೆ. ತನ್ನ ಲೀಲೆಗಳ ಮೂಲಕ ದುರುಳರ ಸಂಹಾರಗೈಯುತ್ತಾನೆ.


ಕೃಷ್ಣ ಹುಟ್ಟಿದ್ದು ದೇವಕಿಯ ಗರ್ಭದಲ್ಲಿಯಾದರೂ ಬೆಳೆದಿದ್ದು ಗೋಕುಲದ ಯಶೋದೆಯ ಮಡಿಲಲ್ಲಿ. ಹೀಗಾಗಿ ಕೃಷ್ಣನ ತಾಯಿಯಾಗಿ ಯಶೋದೆಯೇ ಗುರುತಿಸಲ್ಪಡುತ್ತಾಳೆ. ಕೃಷ್ಣನ ಬಾಲಲೀಲೆಗಳೆಲ್ಲ ವನ್ನೂ ಸಹಿಸಿಕೊಂಡವಳು ಯಶೋದೆ, ಇಂತಹ ಪುಂಡಲೀಕ ಪೋಕರಿ ಪೋರನನ್ನು, ಜಗದೋದ್ಧಾರನನ್ನು ಸಹಿಸಿಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಯಾಕೆಂದರೆ ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ವಾದ ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಬಲವಾದ ಉದ್ದೇಶವಂತೂ ಇರುತ್ತಿತ್ತು, ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ.


ಇನ್ನು 'ಮಹಾಭಾರತ'ದಲ್ಲಿ ಶ್ರೀಕೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ. ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ, ನಂತರ ಅವನು ಯಾದವರೊಡನೆ ದ್ರೌಪದಿ & ಪಾಂಡವರ ವಿವಾಹದಲ್ಲಿ ಭಾಗವಹಿಸುತ್ತಾನೆ. ಕೌರವರೊಂದಿಗೆ ಜೂಜಾಡುವ ಸಂದರ್ಭದಲ್ಲಿ ಪಾಂಡವರು ಸೋತಾಗ, ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸಿದಾಗ, ದ್ರೌಪದಿಗೆ ಅಕ್ಷಯ ವಸ್ತ್ರವನ್ನು ಕೊಡುವ ಮೂಲಕ ಅವಳ ಮಾನರಕ್ಷಣೆಯನ್ನು ಮಾಡುತ್ತಾನೆ. ಮುಂದೆ ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ, ಯಾವ ಆಯುಧಗಳನ್ನು ಬಳಸದೇ ಈ ಯುದ್ಧದಲ್ಲಿ ಪಾಂಡವರಿಗೆ ಜಯ ತಂದು ಕೊಡುತ್ತಾನೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ತನ್ನ ಗುರು- ಬಂಧು- ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಶ್ರೀಕೃಷ್ಣ ಮಾಡುವ ಉಪದೇಶವೇ ಹಿಂದೂ ಧರ್ಮೀಯರ ಪವಿತ್ರ ಗ್ರಂಥವಾದ "ಭಗವದ್ಗೀತೆ"ಯೆಂದು ಜಗತ್ಪ್ರಸಿದ್ಧವಾಯಿತು, ಶ್ರೀಕೃಷ್ಣನನ್ನು 'ಗೀತಾಚಾರ್ಯ' ಎಂದು ಸಂಬೋಧಿಸುವಂತಾಯಿತು.


- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top