ಧರ್ಮಸ್ಥಳ ಕ್ಷೇತ್ರ, ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ, ಅವಮಾನದ ಷಡ್ಯಂತ್ರ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಂದ ತೀವ್ರ ಖಂಡನೆ

Upayuktha
0


ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವಿರುವ ಪುಣ್ಯ ಕ್ಷೇತ್ರ ನಮ್ಮ ಧರ್ಮಸ್ಥಳ. ಪರಂಪರೆಯಿಂದ ಬಂದ 'ಚತುರ್ವಿಧ ದಾನ’ಗಳು ಮತ್ತು ನಾಡು ನುಡಿ ಸಾಹಿತ್ಯ ಕಲೆ ಸಂಸ್ಕೃತಿಗಳ ಪೋಷಣೆ ಮತ್ತು ಸಂರಕ್ಷಣೆಗೆ ಹಾಗೂ ಸಾಮಾಜಿಕ ಅಭಿವೃದ್ಧಿ ಮತ್ತು ಪರಿಸರ ಸಂವರ್ಧನೆಗೆ ಶ್ರೀ ಕ್ಷೇತ್ರವು ಕೊಡುತ್ತಿರುವ ಕೊಡುಗೆ ಮೌಲಿಕವಾದುದು. ಆರೋಗ್ಯ, ವಿದ್ಯೆ ಮತ್ತು ಉದ್ಯೋಗ ವಲಯದಲ್ಲೂ ಜನಪರ ಕಾಳಜಿಯಿಂದ ಉನ್ನತ ಸಾಧನೆ ಮಾಡಿರುವ ಧರ್ಮಸ್ಥಳ ಇಂದು ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ, ಸಮಾಜಮುಖೀ ಅಭಿವೃದ್ಧಿ ಯೋಜನೆಗಳಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.


ವಿದ್ಯಾದಾನಕ್ಕೆ ಸಂಬಂಧಿಸಿದಂತೆ ಡಿ. ವೀರೇಂದ್ರ ಹೆಗ್ಗಡೆಯವರ ಸಮರ್ಥ ನಾಯಕತ್ವದಲ್ಲಿ ಪ್ರಸ್ತುತ ಎಲ್‌ಕೆಜಿಯಿಂದ ಪಿಜಿಯವರೆಗೆ ವಿವಿಧ ವಿಷಯಗಳ 56 ಶಿಕ್ಷಣ ಸಂಸ್ಥೆಗಳು Adding Value in to Education ಎಂಬ ಉತ್ಕೃಷ್ಟ ಧ್ಯೇಯದೊಂದಿಗೆ ಉಜಿರೆ, ಮಂಗಳೂರು, ಉಡುಪಿ, ಸಂಸೆ, ಹಾಸನ, ಬೆಂಗಳೂರು, ಮೈಸೂರು ಮತ್ತು ಧಾರವಾಡಗಳಲ್ಲಿ ಪ್ರಾಥಮಿಕ, ಪ್ರೌಢ, ಪಿಯುಸಿ ಮತ್ತು ಪದವಿ, ಐಟಿಐ, ಡಿಪ್ಲೊಮಾ, ಕಾನೂನು, ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್, ಎಂಬಿಎ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಆಯುರ್ವೇದ ಮೊದಲಾದ ಕೋರ್ಸುಗಳ ಮೂಲಕ ಗುಣ ಮಟ್ಟದ ಶಿಕ್ಷಣ ನೀಡುತ್ತಿವೆ. 2019ರಲ್ಲಿ ಧಾರವಾಡದಲ್ಲಿ ಎಸ್‌ಡಿಎಂ ಯೂನಿವರ್ಸಿಟಿಯೂ ಆರಂಭವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ದೇಶದ ಅಗ್ರ ಉದಯೋನ್ಮುಖ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಉನ್ನತ ಶಿಕ್ಷಣದ ಕೆಲವು ಸಂಸ್ಥೆಗಳು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ (ನ್ಯಾಕ್)ಯಿಂದ ಉನ್ನತ ಗ್ರೇಡಿಂಗ್‌ಗಳನ್ನು ಪಡೆದಿವೆ. ಪ್ರಸ್ತುತ ಎಲ್ಲ ಎಸ್‌ಡಿಎಂ ವಿದ್ಯಾಸಂಸ್ಥೆಗಳಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 8 ಸಾವಿರ ಉದ್ಯೋಗಿಗಳು ಸೇವೆಯಲ್ಲಿ ನಿರತರಾಗಿದ್ದಾರೆ.


ಒಟ್ಟಿನಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂಬ ಉನ್ನತ ಧ್ಯೇಯದೊಂದಿಗೆ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಆರಂಭಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ ನಾಡಿನ, ಹೊರನಾಡಿನ ಮತ್ತು ವಿದೇಶಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಯಾವುದೇ ಆತಂಕವಿಲ್ಲದೆ ವ್ಯಾಸಂಗ ಮಾಡುತ್ತಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸಾವಿರಾರು ಹಿರಿಯ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನದ ಉದ್ಯೋಗದಲ್ಲಿದ್ದಾರೆ. ಇಷ್ಥೇ ಅಲ್ಲದೇ  ಸರ್ಕಾರೀ ಮತ್ತು ಅನುದಾನಿತ ಶಾಲೆಗಳಿಗೆ ಪ್ರತಿವರ್ಷ ಕಲಿಕೋಪಕರಣಗಳು ಮತ್ತು ಸಾವಿರಾರು ಶಿಕ್ಷಕರನ್ನು ನಿಯೋಜಿಸಿ ಬಡ ವಿದ್ಯಾರ್ಥಿಗಳ ಕಲಿಕೆಗೆ ದೊಡ್ಡ ಕೊಡುಗೆಯನ್ನು ನೀಡಲಾಗುತ್ತಿದೆ. ಜೊತೆಗೆ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.


ಹೀಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆ ನೀಡುತ್ತಲೇ ಧರ್ಮಸ್ಥಳ ಮಾದರಿಯನ್ನು ಜಗತ್ತಿಗೇ ಪರಿಚಯಿಸಿದ ಕ್ಷೇತ್ರ ಧರ್ಮಸ್ಥಳ. ಈ ಎಲ್ಲ ಹಿನ್ನೆಲೆಯಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ, ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕೆಲವು ಸ್ಥಾಪಿತ ಹಿತಾಸಕ್ತಿಯ ವಿರೋಧಿಗಳು ಷಡ್ಯಂತ್ರ ರೂಪಿಸಿ ಹಲವು ವರ್ಷಗಳಿಂದ ನಿರಂತರ ಅಪಪ್ರಚಾರ ಮತ್ತು ಅವಮಾನ ಮಾಡುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ, ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿರುವುದು ನಮಗೆ ತೀವ್ರ ನೋವನ್ನುಂಟು ಮಾಡಿದೆ.


ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಬಹುಸಂಖ್ಯೆಯ ಮಹಿಳಾ ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರೂ ಇದ್ದು ನಮಗೆ ಯಾರಿಗೂ ಕ್ಷೇತ್ರದಿಂದಾಗಲೀ, ಕ್ಷೇತ್ರದ ಆಡಳಿತ ವರ್ಗದಿಂದಾಗಲೀ ಯಾವುದೇ ರೀತಿಯ ತೊಂದರೆ ಆಗಿಲ್ಲ. ನಮ್ಮೆಲ್ಲರ ಶ್ರೇಯೋಭಿವೃದ್ಧಿಯನ್ನೇ ಬಯಸುವ ಪೂಜ್ಯ ಹೆಗ್ಗಡೆಯವರ ಮತ್ತು ಅವರ ಕುಟುಂಬವರ್ಗದವರ ಬಗ್ಗೆ ಅವಮಾನಕರ ಮಾತುಗಳನ್ನಾಡುವವರ ಅನಪೇಕ್ಷಿತ ಚಟುವಟಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಜಾತಿ ಮತ ದೇಶ ಭಾಷೆಗಳ ತಾರತಮ್ಯವಿಲ್ಲದೆ ಸರ್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವತಾವಾದಿ, ನಮ್ಮ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ಆರೋಪಗಳನ್ನು ನಾವು ಖಡಾ ಖಂಡಿತವಾಗಿ ತಿರಸ್ಕರಿಸುತ್ತೇವೆ.


 

ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಐಟಿ ಮತ್ತು ಹಾಸ್ಟೆಲ್), ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಉಜಿರೆ

ಮತ್ತು

ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು, ಎಸ್ ಡಿ ಎಮ್ ಶಾಲಾ ಕಾಲೇಜುಗಳು,. ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top